ಧನಂಜಯ್ ನನ್ನ ಗೆಳೆಯ, ಮಾನವೀಯತೆ ಜೊತೆ ನಾನಿದ್ಡೇನೆ: ವೈಷಮ್ಯ ಬಿಡಿ ಎಂದ ಸತೀಶ್

ಬೆಂಗಳೂರು: ಧನಂಜಯ್ ನನ್ನ ಗೆಳೆಯ, ಅವನ ಎಲ್ಲ ವಿಚಾರಗಳ ಜೊತೆ ಮತ್ತು ಮಾನವೀಯತೆ ಜೊತೆ ನಾನಿದ್ಡೇನೆ ಎಂದು ನಟ ಸತೀಶ್ ನೀನಾಸಂ ಹೇಳಿದ್ದಾರೆ.
ನಟ ಧನಂಜಯ್ ಅಭಿನಯದ ‘ಹೆಡ್ ಬುಷ್’ ಚಿತ್ರದಲ್ಲಿ ವೀರಗಾಸೆ ಕಲೆಗೆ ಅಪಮಾನ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದ್ದು, ವಿಚಾರ ಈಗ ವಿವಾದಕ್ಕೀಡಾಗಿದೆ.
ಈ ಬೆಳವಣಿಗೆಗಳ ಕುರಿತು ಟ್ವೀಟ್ ಮಾಡಿರುವ ಸತೀಶ್, ‘ಧನು (ಧನಂಜಯ್) ನನ್ನ ಗೆಳೆಯ. ಅವನ ಎಲ್ಲ ವಿಚಾರಗಳ ಜೊತೆ ಮತ್ತು ಮಾನವೀಯತೆ ಜೊತೆ ನಾನಿದ್ಡೇನೆ. ನನ್ನಂತೆ ಊರು ಬಿಟ್ಟು ಬ್ಯಾಗು ಹಿಡಿದು ಬಂದವನು, ಸುಮ್ಮನೆ ಸಣ್ಣ ಕಾರಣ ಹಿಡಿದು ಅವನನ್ನು ತೇಜೊವಧೆ ಮಾಡುವ ಗೆಳೆಯರೆ, ನೀವು ನಮ್ಮ ಏಳಿಗೆಯನ್ನು ಬಯಸಿದವರೇ. ವೈಷಮ್ಯ ಬಿಡಿ’ ಎಂದು ಬರೆದುಕೊಂಡಿರುವ ಅವರು #WeStandWithDhananjaya ಹ್ಯಾಷ್ ಟ್ಯಾಗ್ ಉಲ್ಲೇಖಿಸಿದ್ದಾರೆ.
ಧನು ನನ್ನ ಗೆಳೆಯ,ಅವನ ಎಲ್ಲ ವಿಚಾರಗಳ ಜೊತೆ ಮತ್ತು ಮಾನವಿಯತೆ ಜೊತೆ ನಾನಿದ್ಡೇನೆ. ನನ್ನಂತೆ ಊರು ಬಿಟ್ಟು ಬ್ಯಾಗು ಹಿಡಿದು ಬಂದವನು,ಸುಮ್ಮನೆ ಸಣ್ಣ ಕಾರಣ ಹಿಡಿದು ಅವನ ತೇಜೊ ವಧೆ ಮಾಡುವ ಗೆಳೆಯರೆ, ನೀವು ನಮ್ಮ ಏಳಿಗೆಯನ್ನು ಬಯಸಿದವರೇ. ವೈಷಮ್ಯ ಬಿಡಿ. @Dhananjayaka #WeStandWithDhananjaya pic.twitter.com/tuR9mko5tF
— Sathish Ninasam (@SathishNinasam) October 27, 2022
ಈ ವಿವಾದದ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಪರ– ವಿರೋಧದ ಚರ್ಚೆಗಳು ನಡೆಯುತ್ತಿವೆ. ಧನಂಜಯ್ ಅವರ ವಿರುದ್ಧ ರೂಪಿಸಲಾದ ಷಡ್ಯಂತ್ರ ಎಂಬ ಅಭಿಪ್ರಾಯವನ್ನು ಸಾಕಷ್ಟು ಮಂದಿ ವ್ಯಕ್ತಪಡಿಸಿದ್ದಾರೆ. ಈ ಪರಿಸ್ಥಿತಿಯಲ್ಲಿ ಅವರ ಪರವಾಗಿ ನಿಲ್ಲುವುದಾಗಿ ಬರೆದುಕೊಂಡಿದ್ದಾರೆ. ‘ಬಡವರ ಮಕ್ಳು ಬೆಳಿಬೇಕು ಕಣ್ರಯ್ಯ’ ಎಂಬ ಧನಂಜಯ್ ಅವರ ಹಿಂದಿನ ಹೇಳಿಕೆಯೊಂದು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ. ಹಲವರ ವಾಟ್ಸಾಪ್ ಸ್ಟೇಟಸ್‌ಗಳಲ್ಲಿ ಈ ವಿಡಿಯೊ, ಫೋಟೊ ಕಾಣಿಸಿಕೊಂಡಿದೆ. ಕನ್ನಡ ಚಿತ್ರರಂಗವು ನಟನ ಪರವಾಗಿ ನಿಲ್ಲಬೇಕೆಂಬ ಆಗ್ರಹಗಳು ಕೇಳಿ ಬಂದಿವೆ.
‘ನಾವು ನಿಮ್ಮೊಂದಿಗಿರುತ್ತೇವೆ’, #westandwithyou, #Wearewithdhananjaya, #WeSupportDhananjaya ಎಂಬ ಹ್ಯಾಷ್ ಟ್ಯಾಗಗಳ ಅಡಿಯಲ್ಲಿ ಹಲವರು ಬೆಂಬಲ ಸೂಚಿಸಿದ್ದಾರೆ.
ಏನಿದು ವಿವಾದ?
ಚಿತ್ರದ ಸನ್ನಿವೇಶವೊಂದರಲ್ಲಿ ನಟ ಡಾಲಿ ಧನಂಜಯ್ ಅವರು ವೀರಗಾಸೆ ವೇಷಧಾರಿಗೆ ಒದ್ದು, ಆತನ ಮೇಲೆ ದಾಳಿ ನಡೆಸುತ್ತಾರೆ. ಈ ನಿರ್ದಿಷ್ಟ ವಿಡಿಯೊವನ್ನು ಮಾತ್ರ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿರುವ ಕೆಲ ಮಂದಿ, ವೀರಗಾಸೆ ಕಲೆಗೆ ಧನಂಜಯ್ ಹಾಗೂ ಚಿತ್ರ ತಂಡ ಅಪಮಾನ ಮಾಡಿದೆ ಎಂದು ವಾದಿಸಿದ್ದಾರೆ. ಆದರೆ, ಸನ್ನಿವೇಶದ ಪೂರ್ವಾಪರಗಳ ಬಗ್ಗೆ ಮಾಹಿತಿ ನೀಡಿಲ್ಲ. ಚಿತ್ರ ತಂಡ ಹಿಂದೂ ಧರ್ಮಕ್ಕೇ ಅಪಮಾನ ಮಾಡಿದೆ ಎಂಬ ವಾದವೂ ಕೇಳಿ ಬಂದಿದೆ.
ಧನಂಜಯ್ ಸ್ಪಷ್ಟನೆ
ವಿವಾದಕ್ಕೆ ಸಂಬಂಧಿಸಿದಂತೆ ಸ್ಪಷ್ಟನೆ ನೀಡಿರುವ ಧನಂಜಯ್ 'ನಾನು ಸ್ವತಃ ವೀರಭದ್ರಸ್ವಾಮಿಯ ಭಕ್ತನಾಗಿದ್ದು, ವೀರಗಾಸೆಗೆ ಅವಮಾನಿಸುವ ಯಾವ ಅಂಶವು ಇಲ್ಲದಂತೆ ನೋಡಿಕೊಂಡಿದ್ದೇನೆ. ದೂಷಿಸುವವರು ದಯವಿಟ್ಟು ಸಿನಿಮಾ ನೋಡಿ, ಕೂಲಂಕಷವಾಗಿ ವಿಮರ್ಶಿಸಬೇಕು’ ಎಂದು ಹೇಳಿದ್ದಾರೆ.
ಮರು ಚಿಂತನೆ ಸೂಕ್ತ ಎಂದ ಸಚಿವ
ಇದೇ ವಿಚಾರವಾಗಿ ಟ್ವೀಟ್ ಮಾಡಿರುವ ಕನ್ನಡ ಮತ್ತು ಸಂಸ್ಕೃತಿ ಸಚಿವ ಸುನಿಲ್ ಕುಮಾರ್, ಒಂದೊಮ್ಮೆ ಹೆಡ್ ಬುಷ್ ಚಿತ್ರದಲ್ಲಿ ವೀರಗಾಸೆಗೆ ಅಪಮಾನವಾದರೆ ನಿರ್ಮಾಪಕರು ಹಾಗೂ ನಿರ್ದೇಶಕರು ಮರು ಚಿಂತನೆ ನಡೆಸುವುದು ಸೂಕ್ತ ಎಂದು ಹೇಳಿದ್ದಾರೆ.
ಇವನ್ನೂ ಓದಿ...
Head Bush| ಧನಂಜಯ್‌ಗೆ ಭಾರಿ ಬೆಂಬಲ: ‘ಬಡವರ ಮಕ್ಳು ಬೆಳಿಬೇಕು’ ಟ್ರೆಂಡ್
ಮರು ಚಿಂತನೆ ಸೂಕ್ತ...: 'ಹೆಡ್ ಬುಷ್' ಬಗ್ಗೆ ಸಚಿವ ಸುನಿಲ್ ಕುಮಾರ್ ಟ್ವೀಟ್
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.