ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕಾಂತಾರ’ ಮುಂದಿನ ಭಾಗದ ಕಥೆಯೇನು? ರಿಷಬ್‌ ಶೆಟ್ಟಿ ಹೇಳಿದ್ದು ಹೀಗೆ...

ಮುಖಾಮುಖಿ ಕಾರ್ಯಕ್ರಮ
Last Updated 16 ಫೆಬ್ರುವರಿ 2023, 19:30 IST
ಅಕ್ಷರ ಗಾತ್ರ

‘ಕಾಂತಾರ’ದ ಯಶಸ್ಸಿನ ಬಳಿಕ ಕಾಲಿಗೆ ಚಕ್ರಕಟ್ಟಿಕೊಂಡವರಂತೆ ತಿರುಗಾಡುತ್ತಿರುವ ನಟ ರಿಷಬ್‌ ಶೆಟ್ಟಿ, ಇತ್ತೀಚೆಗೆ ಕರ್ನಾಟಕ ಚಲನಚಿತ್ರ ಪತ್ರಕರ್ತರ ಸಂಘ ಆಯೋಜಿಸಿದ್ದ ಮುಖಾಮುಖಿ ಕಾರ್ಯಕ್ರಮದಲ್ಲಿ ಕೆಲ ಮುಖ್ಯ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ.

* ‘ಕಾಂತಾರ’ ಮುಂದಿನ ಭಾಗದ ಕಥೆಯೇನು?
‘ಕಾಂತಾರ’ ಭಾಗ–2 ಬಂದಿದೆ, ಭಾಗ–1 ಬರಬೇಕಿದೆ ಎಂದಿದ್ದೆ. ಇದಾದ ಬಳಿಕ ಹಲವು ಕಲ್ಪನೆಗಳು, ಊಹೆಗಳ ಹರಿವು ಈಗಾಗಲೇ ಹರಿದಾಡತೊಡಗಿದೆ. ‘ಶಿವ’ನ ಅಪ್ಪನ ಪಾತ್ರವೇ ಇಲ್ಲಿ ಮುಖ್ಯವಾಗಿರಬಹುದೇ ಎಂಬ ಪ್ರಶ್ನೆ ಮುಖ್ಯವಾಗಿ ಎದ್ದಿದೆ. ಈ ಎಲ್ಲ ಊಹೆಗಳನ್ನು ಮೀರಿ ಬೇರೆಯದೊಂದು ವಿಚಾರವನ್ನು ಹೇಳುವ ಪ್ರಯತ್ನವನ್ನು ಮಾಡುತ್ತಿದ್ದೇನೆ. ಪ್ರೀಕ್ವೆಲ್‌ನಲ್ಲಿ(ಹಿಂದಿನ ಕಥೆ) ಕೆಲವು ಪ್ರಶ್ನೆಗಳಿಗೆ ಉತ್ತರ ಸಿಗಬಹುದು, ಮತ್ತಷ್ಟು ಪ್ರಶ್ನೆಗಳು ಉದ್ಭವಿಸಬಹುದು. ಇದಕ್ಕೆ ಉತ್ತರಗಳನ್ನು ವೀಕ್ಷಕರು ಅವರವರ ದೃಷ್ಟಿಕೋನದಲ್ಲಿ ಕಂಡುಕೊಳ್ಳಬೇಕು. ‘ಕಾಂತಾರ’ ಹೊಸ ಭಾಗ ಹೊಸ ಪ್ರಶ್ನೆಗಳನ್ನು ಹುಟ್ಟುಹಾಕಲಿ ಎನ್ನುವುದೇ ನನ್ನ ಅಭಿಲಾಷೆ.

‘ಕಾಂತಾರ’ ಸಿನಿಮಾದ ಯಶಸ್ಸಿನ ಕಾರಣಕ್ಕೆ ಎರಡನೇ ಭಾಗ ಮಾಡುತ್ತಿಲ್ಲ. ಕಥೆಯು ತಲೆಯಲ್ಲಿದ್ದ ಕಾರಣ ಸಿನಿಮಾ ಮಾಡುತ್ತಿದ್ದೇನೆ. ಈ ಸಿನಿಮಾದ ಚಿತ್ರೀಕರಣ ‘ಕೆರಾಡಿ ಫಿಲಂ ಸಿಟಿ’ಯಲ್ಲೇ ನಡೆಯಲಿದೆ.

* ‘ಬ್ಯಾಚುಲರ್‌ ಪಾರ್ಟಿ’ಯಿಂದ ಹೊರಬಂದಿದ್ದೇಕೆ?
‘ಕಾಂತಾರ’ದ ಇನ್ನೊಂದು ಭಾಗದ ಕಥೆಯನ್ನು ಹೇಳಬೇಕು ಎನ್ನುವ ಯೋಚನೆ ಬಂದಾಗ, ಇದನ್ನು ಸ್ನೇಹಿತರ ಜೊತೆ ಚರ್ಚಿಸಿದ್ದೆ. ಮುಖ್ಯವಾಗಿ ರಕ್ಷಿತ್‌ ಶೆಟ್ಟಿ ಜೊತೆ ಮಾತುಕತೆ ನಡೆಸಿದೆ. ‘ಈ ಕಥೆಯನ್ನು ಭವಿಷ್ಯದಲ್ಲಿ ಹೇಳುತ್ತೇನೆ ಎಂದು ಕಾದರೆ ಆಗುವುದಿಲ್ಲ. ಒಬ್ಬ ನಿರ್ದೇಶಕನಾಗಿ ಈಗಲೇ ಈ ಕಥೆಯನ್ನು ಹೇಳಬೇಕು ಎನಿಸುತ್ತಿದೆ. ಈ ಹಂತದಲ್ಲಿ ನನ್ನ ತಲೆಯಲ್ಲಿ ಅದೇ ವಿಷಯವಿದೆ. ಈ ಸಂದರ್ಭದಲ್ಲಿ ಕಮಿಟ್‌ಮೆಂಟ್‌ ಕಾರಣಕ್ಕೆ ಇನ್ನೊಂದು ಸಿನಿಮಾದಲ್ಲಿ ತೊಡಗಿಸಿಕೊಂಡರೆ, ಆ ಸಿನಿಮಾಗೆ ನಾನು ಅನ್ಯಾಯ ಮಾಡಿದಂತಾಗುತ್ತದೆ’ ಎಂಬ ವಿಷಯ ಹಂಚಿಕೊಂಡೆ. ನನ್ನ ಮಾತಿಗೆ ಅವರ ಸಹಮತವಿತ್ತು. ಈ ರೀತಿ ಸ್ನೇಹಿತರು ಇರುವ ಕಾರಣ ಗಟ್ಟಿಯಾದ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಾಗಿದೆ.

* ರಿಷಬ್‌ ಎಲೆಕ್ಷನ್‌ಗೆ ನಿಲ್ತಿದ್ದಾರಾ?
(ನಗುತ್ತಾ) ಒಂದು ಮಾಧ್ಯಮದವರಂತೂ ನನಗೆ ಮೂರು ಕ್ಷೇತ್ರದ ಟಿಕೆಟ್‌ ಕೊಟ್ಟರು! ವ್ಯವಸ್ಥೆಯ ಬದಲಾವಣೆ ಎನ್ನುವುದು ರಾಜಕಾರಣಿಗಳಿಂದ, ಸರ್ಕಾರದಿಂದಲೇ ಆಗಬೇಕೆಂದಿಲ್ಲ. ಪ್ರಜೆಯಿಂದಲೂ ಇದು ಆಗಬೇಕು. ಎಲ್ಲರೂ ಸೇರಿ
ಸಮಾಜವನ್ನು ಸರಿದಾರಿಯಲ್ಲಿ ತೆಗೆದುಕೊಂಡು ಹೋಗಬೇಕು. ಸರಿ–ತಪ್ಪು ಎಲ್ಲ ಹಂತದಲ್ಲೂ ಇದೆ. ಚುನಾವಣೆ ಸಂದರ್ಭದಲ್ಲಿ ನಾನು ಮೊಬೈಲ್‌ ಸ್ವಿಚ್‌ ಆಫ್‌ ಮಾಡಿಕೊಂಡು ಕಾಡು ಸೇರುತ್ತೇನೆ. ಬರಿಯಬೇಕು, ಸಂಶೋಧನೆ ನಡೆಸಬೇಕು. ಸಿನಿಮಾ ಮಾಡಬೇಕು, ಅದೇ ನಮ್ಮ ಕೆಲಸ. ಜನ ‘ಕಾಂತಾರ’ವನ್ನು ಇಷ್ಟು ಯಶಸ್ಸು ಮಾಡಿರುವುದು ‘ನೆಟ್ಟಗೆ ಇನ್ನೊಂದು ಸಿನಿಮಾ ಮಾಡು’ ಎಂಬುವುದಕ್ಕಲ್ಲವೇ. ಚುನಾವಣೆಯಲ್ಲಿ ಖಂಡಿತಾ ಭಾಗವಹಿಸುತ್ತೇನೆ! ಮತ ಹಾಕಬೇಕಲ್ಲವೇ? ಅದು ನನ್ನ ಹಕ್ಕು.

* ರಿಷಬ್‌ ಸಂಭಾವನೆ ಹೆಚ್ಚಿದೆಯಂತೆ?
ಹೌದಾ ಸರ್‌! ಸಿನಿಮಾ ಯಶಸ್ಸಿನ ಮೇಲೆ ನಿರ್ಮಾಪಕರು ಎಷ್ಟು ಕೊಡುತ್ತಾರೋ ಅಷ್ಟು. ಮತ್ತೆ ನೋ ಕಮೆಂಟ್ಸ್‌...

* ‘ಪೆದ್ರೊ’ ರಿಲೀಸ್‌ ಯಾವಾಗ?
ನಮ್ಮ ನಿರ್ಮಾಣ ಸಂಸ್ಥೆಯಿಂದ ತಯಾರಾದ ಈ ಸಿನಿಮಾವನ್ನು ನಟೇಶ ಹೆಗಡೆ ನಿರ್ದೇಶನ ಮಾಡಿದ್ದಾರೆ. ನಮ್ಮ ಸಂಸ್ಥೆಯ ಮುಂದಿನ ಬಿಡುಗಡೆಯೇ ಈ ಸಿನಿಮಾ. ಇದು ಕಮರ್ಷಿಯಲ್‌ ಸಿನಿಮಾವಲ್ಲ. ಹೀಗಾಗಿ ರಾಜ್ಯದ ಕೆಲವು ಚಿತ್ರಮಂದಿರಗಳಲ್ಲಷ್ಟೇ ಇದು ತೆರೆಕಾಣಲಿದೆ. ಒಟಿಟಿಯಲ್ಲೂ ರಿಲೀಸ್‌ ಮಾಡುತ್ತೇವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT