ಶುಕ್ರವಾರ, ಸೆಪ್ಟೆಂಬರ್ 25, 2020
22 °C

ಸಂಜಯ್‌ ದತ್‌ಗೆ ಕ್ಯಾನ್ಸರ್‌: ‘ಕೆಜಿಎಫ್‌ ಚಾಪ್ಟರ್‌ 2’ ಸಿನಿಮಾ ಬಿಡುಗಡೆ ವಿಳಂಬ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬಾಲಿವುಡ್‌ ನಟ ಸಂಜಯ್ ದತ್‌ ಬಹುನಿರೀಕ್ಷಿತ ‘ಕೆಜಿಎಫ್‌ ಚಾಪ್ಟರ್‌ 2’ ಚಿತ್ರದಲ್ಲಿ ಅಧೀರನ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಪ್ಯಾನ್‌ ಇಂಡಿಯಾ ಸಿನಿಮಾ ಇದಾಗಿದೆ. ಮೊದಲ ಅಧ್ಯಾಯದಲ್ಲಿ ನಿರ್ದೇಶಕ ಪ್ರಶಾಂತ್‌ ನೀಲ್‌, ಅಧೀರನ ಮುಖ ತೋರಿಸಿರಲಿಲ್ಲ. ಹಾಗಾಗಿ, ಸಂಜು ನಿಭಾಯಿಸುತ್ತಿರುವ ಪಾತ್ರವು ಸಿನಿಪ್ರಿಯರ ಕುತೂಹಲದ ಕೇಂದ್ರಬಿಂದುವಾಗಿರುವುದು ಅಚ್ಚರಿಯೇನಲ್ಲ.

ಕಳೆದ ಜುಲೈ 29ರಂದು ಸಂಜಯ್‌ ದತ್‌ ಅವರ ಜನ್ಮದಿನದಂದು ಹೊಂಬಾಳೆ ಫಿಲ್ಮ್ಸ್‌ ಅಧೀರನ ಹೊಸ ಫಸ್ಟ್‌ಲುಕ್‌ ಪೋಸ್ಟರ್ ಅನ್ನು ಬಿಡುಗಡೆ ಮಾಡಿತ್ತು. ವೈಕಿಂಗ್ಸ್‌ ಯೋಧರ ಭೀಕರ ಲೋಕದಿಂದ ಪ್ರೇರಿತಗೊಂಡು ಅಧೀರನ ಪಾತ್ರ ಸೃಷ್ಟಿಸಲಾಗಿದೆಯಂತೆ. ಈ ಯೋಧರು ಕೊಲೆ, ರಕ್ತಪಾತಕ್ಕೆ ಕುಖ್ಯಾತಿ ಪಡೆದವರು. ಹಾಗಾಗಿ, ಸಂಜು ಈ ಪಾತ್ರವನ್ನು ತೆರೆಯ ಮೇಲೆ ಹೇಗೆ ಕಟ್ಟಿಕೊಡಲಿದ್ದಾರೆ ಎಂಬ ಕುತೂಹಲ ಅವರ ಅಭಿಮಾನಿಗಳಲ್ಲಿರುವುದು ಸಹಜ.

ಚಾಪ್ಟರ್‌ 2ರ ಇನ್ನೂ 25 ದಿನಗಳ ಶೂಟಿಂಗ್‌ ಬಾಕಿಯಿದೆ. ಮುಖ್ಯವಾಗಿ ಅಧೀರ ಮತ್ತು ರಾಕಿ ಬಾಯ್‌(ಯಶ್‌) ನಡುವಿನ ಅಂತಿಮ ಕದನದ ಶೂಟಿಂಗ್‌ ಪೂರ್ಣಗೊಂಡಿಲ್ಲವಂತೆ. ಕೋವಿಡ್‌–19 ಪರಿಣಾಮ ಈ ಚಿತ್ರದ ಶೂಟಿಂಗ್‌ ಸ್ಥಗಿತಗೊಂಡಿತ್ತು. ಆಗಸ್ಟ್ 15ರಿಂದ ಬಾಕಿ ಉಳಿದಿರುವ ಶೂಟಿಂಗ್‌ ಪೂರ್ಣಗೊಳಿಸಲು ಚಿತ್ರತಂಡ ಸಿದ್ಧತೆ ನಡೆಸಿತ್ತು.

ಇದನ್ನೂ ಓದಿ: ಬಾಲಿವುಡ್ ನಟ ಸಂಜಯ್ ದತ್‌ಗೆ ಶ್ವಾಸಕೋಶದ ಕ್ಯಾನ್ಸರ್?

ಈಗ ಸಂಜಯ್‌ ದತ್‌ ಶ್ವಾಸಕೋಶದ ಕ್ಯಾನ್ಸರ್‌ನಿಂದ ಬಳಲುತ್ತಿರುವ ಸುದ್ದಿ ಹೊರಬಿದ್ದಿದೆ. ಮೂರನೇ ಹಂತ ತಲುಪಿರುವ ಈ ರೋಗದ  ಚಿಕಿತ್ಸೆಗಾಗಿ ಅವರು ಅಮೆರಿಕಕ್ಕೆ ತೆರಳಲು ನಿರ್ಧರಿಸಿದ್ದಾರೆ. ವೈದ್ಯಕೀಯ ಚಿಕಿತ್ಸೆಗಾಗಿ ತಾವು ಸಿನಿಮಾ ಚಟುವಟಿಕೆಯಿಂದ ಕೊಂಚ ಬಿಡುವು ಪಡೆಯುವುದಾಗಿ ಅವರು ಈಗಾಗಲೇ ತಿಳಿಸಿದ್ದಾರೆ.

ಚಿಕಿತ್ಸೆಗೆ ಐದಾರು ತಿಂಗಳು ಹಿಡಿಯಬಹುದು ಎನ್ನಲಾಗಿದೆ. ಹಾಗಾಗಿ, ‘ಕೆಜಿಎಫ್‌ ಚಾಪ್ಟರ್‌ 2’ ಚಿತ್ರದ ಶೂಟಿಂಗ್‌ ಕಥೆ ಏನು ಎಂಬ ಪ್ರಶ್ನೆ ಎದುರಾಗಿದೆ. ಈಗಾಗಲೇ, ಹೊಂಬಾಳೆ ಫಿಲ್ಮ್ಸ್‌ ಅಕ್ಟೋಬರ್ 23ರಂದು ಈ ಸಿನಿಮಾ ಬಿಡುಗಡೆಗೆ ದಿನಾಂಕವನ್ನೂ ನಿಗದಿಪಡಿಸಿದೆ.

ಪ್ರಸ್ತುತ ಪೂರ್ಣಗೊಂಡಿರುವ ಶೂಟಿಂಗ್‌ನ ಎಡಿಟಿಂಗ್‌, ಕಲರಿಂಗ್ ಸೇರಿದಂತೆ ಪೋಸ್ಟ್‌ ಪ್ರೊಡಕ್ಷನ್‌ ಕೆಲಸದಲ್ಲಿ ಚಿತ್ರತಂಡ ಮುಳುಗಿದೆ. ಬಾಕಿ ಇರುವ ಶೂಟಿಂಗ್‌ ಮತ್ತಷ್ಟು ವಿಳಂಬವಾದರೆ ಚಾಪ್ಟರ್‌ 2ರ ಬಿಡುಗಡೆಯ ದಿನಾಂಕವೂ ಮುಂದಕ್ಕೆ ಹೋಗುವ ಸಾಧ್ಯತೆಯಿದೆ. ಆದರೆ, ಹೊಂಬಾಳೆ ಫಿಲ್ಮ್ಸ್‌ ಈ ಕುರಿತು ಯಾವುದೇ ಅಧಿಕೃತ ಮಾಹಿತಿಯನ್ನು ನೀಡಿಲ್ಲ.

ಬಾಲಿವುಡ್‌ ನಟಿ ರವೀನಾ ಟಂಡನ್‌, ಟಾಲಿವುಡ್‌ ನಟ ರಾವ್‌ ರಮೇಶ್‌ ಪ್ರಧಾನ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ರವಿ ಬಸ್ರೂರ್‌ ಸಂಗೀತ ಸಂಯೋಜಿಸಿದ್ದಾರೆ. ಶ್ರೀನಿಧಿ ಶೆಟ್ಟಿ ಈ ಚಿತ್ರದ ನಾಯಕಿ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು