ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೀತಾರಾಮ ಕಲ್ಯಾಣದಲ್ಲಿ ನೇಟಿವಿಟಿಯ ಸೊಗಸು

Last Updated 19 ಜುಲೈ 2018, 19:30 IST
ಅಕ್ಷರ ಗಾತ್ರ

‘ಸೀ ತಾರಾಮ ಕಲ್ಯಾಣ’ ಚಿತ್ರದ ಬಗ್ಗೆ ಸುದ್ದಿಗಾರರಿಗೆ ಒಂದಿಷ್ಟು ಮಾಹಿತಿ ನೀಡಬೇಕು ಎಂದು ನಿರ್ದೇಶಕ ಎ. ಹರ್ಷ ಅವರು ಒಂದು ಸುದ್ದಿಗೋಷ್ಠಿ ಕರೆದಿದ್ದರು. ಚಿತ್ರದ ನಾಯಕ ನಿಖಿಲ್ ಕುಮಾರ್, ನಾಯಕಿ ರಚಿತಾ ರಾಮ್‌ ಸೇರಿದಂತೆ ಎಲ್ಲರೂ ಅಲ್ಲಿದ್ದರು. ಆದರೂ, ಚಿತ್ರತಂಡಕ್ಕೆ ಇನ್ಯಾರದೋ ಬರುವಿಕೆಯ ನಿರೀಕ್ಷೆ ಇತ್ತು. ಕೆಲವೇ ನಿಮಿಷಗಳಲ್ಲಿ ಅವರ ನಿರೀಕ್ಷೆ ನಿಜವಾಯಿತು. ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ತಮ್ಮ ಮಗನ ಚಿತ್ರದ ಈ ಕಾರ್ಯಕ್ರಮಕ್ಕೆ ಬಂದರು.

ಬರುತ್ತಲೇ, ‘ನಾನು ಮುಖ್ಯಮಂತ್ರಿಯಾಗಿ ಇಲ್ಲಿಗೆ ಬಂದಿಲ್ಲ’ ಎಂಬುದನ್ನು ಸ್ಪಷ್ಟಪಡಿಸಿದರು. ಈ ಸ್ಪಷ್ಟನೆಯ ನಂತರ ಸುದ್ದಿಗೋಷ್ಠಿ ಅಧಿಕೃತವಾಗಿ ಆರಂಭವಾಯಿತು. ಸಿನಿಮಾಕ್ಕೆ ಈ ಹೆಸರು ಇಟ್ಟಿದ್ದೇಕೆ ಎಂಬುದನ್ನು ವಿವರಿಸಿದ ಹರ್ಷ, ‘ಸಾಫ್ಟ್ ಆಗಿರುವ, ಕೌಟುಂಬಿಕ ಕಥಾಹಂದರ ಇರುವ ಸಿನಿಮಾ ಎಂಬ ಸಂದೇಶವನ್ನು ಈ ಶೀರ್ಷಿಕೆ ವೀಕ್ಷಕರಿಗೆ ರವಾನಿಸುತ್ತದೆ’ ಎಂದರು. ಪಕ್ಕಾ ಫ್ಯಾಮಿಲಿ ಸಿನಿಮಾ ಆದರೂ, ಇದರಲ್ಲಿ ಆ್ಯಕ್ಷನ್ ಕೂಡ ಇದೆ ಎಂಬುದನ್ನು ಖಚಿತಪಡಿಸಿದರು.

‘ಚಿತ್ರದ ಮುಕ್ಕಾಲು ಪಾಲು ಕೆಲಸ ಆಗಿದೆ. ದಸರಾ ಹಬ್ಬದ ಸಂದರ್ಭದಲ್ಲಿ ಚಿತ್ರವನ್ನು ತೆರೆಗೆ ತರುವ ಉದ್ದೇಶ ಇದೆ’ ಎಂದರು ಹರ್ಷ. ನಿಖಿಲ್ ಬಗ್ಗೆ ಪ್ರಶಂಸೆಯ ಮಾತುಗಳನ್ನಾಡಿದ ಹರ್ಷ, ‘ಇದು ನಾಯಕ ನಟನಾಗಿ ನಿಖಿಲ್‌ ಅವರ ಎರಡನೆಯ ಸಿನಿಮಾ ಅಂತ ಯಾರೂ ಹೇಳುವಂತಿಲ್ಲ. ತಮ್ಮ ಅಭಿನಯ ಅತ್ಯುತ್ತಮವಾಗಿ ಇರಬೇಕು ಎಂದು ನಿಖಿಲ್‌ ಹಂಬಲಿಸುತ್ತ ಇರುತ್ತಾರೆ’ ಎಂದರು.

ನಾಯಕಿ ರಚಿತಾ ಅವರು ಇದರಲ್ಲಿ ಟ್ರೆಡಿಷನಲ್‌ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅವರು ಹರ್ಷ ನಿರ್ದೇಶನದ ಚಿತ್ರದಲ್ಲಿ ಅಭಿನಯಿಸುತ್ತಿರುವುದು ಇದೇ ಮೊದಲು. ಹಾಗೆಯೇ ನಿಖಿಲ್ ಜೊತೆ ಅಭಿನಯ ಕೂಡ ಇದೇ ಮೊದಲು.

‘ಈ ಚಿತ್ರ ರಿಮೇಕ್‌ ಅಲ್ಲ’ ಎಂಬುದನ್ನು ಸ್ಪಷ್ಟಪಡಿಸಿದ ನಿಖಿಲ್ ನಂತರ ಮಾತನಾಡಿದ್ದು, ತಾವು ಹರ್ಷ ಅವರನ್ನು ಭೇಟಿ ಮಾಡಿದ ಸಂದರ್ಭದ ಬಗ್ಗೆ. ‘ಜಾಗ್ವಾರ್ ಸಿನಿಮಾ ಮಾಡುವಾಗ ನಾನು ಹರ್ಷ ಅವರನ್ನು ಭೇಟಿಯಾಗಿದ್ದೆ. ನಿಮ್ಮ ಜೊತೆ ಸಿನಿಮಾ ಮಾಡಬೇಕು ಎಂದು ಆಗಲೇ ಅವರಲ್ಲಿ ಹೇಳಿದ್ದೆ’ ಎಂದರು. ಚಿತ್ರದ ಟೀಸರ್‌ಅನ್ನು ರಾಮನಗರದ ಜನರ ಎದುರು ಈ ತಿಂಗಳ 31ಕ್ಕೆ ಬಿಡುಗಡೆ ಮಾಡಬೇಕು ಎಂದು ನಿಖಿಲ್ ತೀರ್ಮಾನಿಸಿದ್ದಾರಂತೆ. ಅಷ್ಟೇ ಅಲ್ಲ, ಈ ಟೀಸರ್‌ನಲ್ಲಿ ಸಿಕ್ಕಾಪಟ್ಟೆ ಆ್ಯಕ್ಷನ್‌ ಕೂಡ ಇರಲಿದೆಯಂತೆ.

‘ಹರ್ಷ ಜೊತೆ ಇನ್ನೂ ಒಂದು ಸಿನಿಮಾ ಖಂಡಿತ ಮಾಡುವೆ. ಅವರ ಜೊತೆ ಕೆಲಸ ಮಾಡುವುದು ಖುಷಿ ಕೊಡುತ್ತದೆ’ ಎಂದರು ನಿಖಿಲ್.

ಈ ಚಿತ್ರದಲ್ಲಿ ತಾರೆಯರ ದಂಡು ದೊಡ್ಡದಾಗಿಯೇ ಇದೆಯಂತೆ. ‘ಪ್ರಿಯಾಂಕಾ ಉಪೇಂದ್ರ ಅವರೂ ಮುಖ್ಯ ಪಾತ್ರವೊಂದರಲ್ಲಿ ಇದ್ದಾರೆ’ ಎಂದರು ಹರ್ಷ. ಇದು ಎರಡು ಕುಟುಂಬಗಳ ಹಾಗೂ ಒಂದು ಪ್ರೀತಿಯ ಕಥೆ. ಚಿತ್ರದಲ್ಲಿ ಮುಖ್ಯವಾದ ಮೂರು ಎಳೆಗಳು ಇವೆ. ಆದರೆ ಅವನ್ನು ಈಗಲೇ ಬಹಿರಂಗಪಡಿಸಲಾಗದು ಎನ್ನುತ್ತಿದ್ದಾರೆ ಹರ್ಷ.

ಕುಮಾರಸ್ವಾಮಿಗೆ ಕಷ್ಟದ ಕೆಲಸ ಯಾವುದು?!
‘ಮಗನನ್ನು ಒಪ್ಪಿಸುವುದು ಕಷ್ಟ‌ದ ಕೆಲಸ. ಯಾರೋ ಒತ್ತಾಯಿಸಿದರು ಎಂಬ ಮಾತ್ರಕ್ಕೇ ಒಪ್ಪಿಕೊಳ್ಳುವವ ಅಲ್ಲ ನಿಖಿಲ್’ ಎನ್ನುತ್ತ ಮಾತು ಆರಂಭಿಸಿದರು ಕುಮಾರಸ್ವಾಮಿ.

ಜಾಗ್ವಾರ್‌ ಚಿತ್ರವನ್ನು ಹಲವರು ಮೆಚ್ಚಿಕೊಂಡಿದ್ದರೂ, ನೇಟಿವಿಟಿ ಕಡಿಮೆ ಇದೆ ಎಂದು ಹಳ್ಳಿಗಳಿಂದ ಕರೆ ಮಾಡಿದ್ದ ಕೆಲವರು ಹೇಳಿದ್ದರು. ಹಾಗಾಗಿ, ಹಳ್ಳಿಯ ಸೊಗಡು ಇರುವ, ನಗರ ಪ್ರದೇಶದವರಿಗೂ ಇಷ್ಟವಾಗುವ ಚಿತ್ರ ಮಾಡಬೇಕು ಎಂದು ಕುಮಾರಸ್ವಾಮಿ ತಮ್ಮ ಮಗನ ಜೊತೆ ಚರ್ಚಿಸಿದ್ದರಂತೆ. ಅಷ್ಟೇ ಅಲ್ಲ, ತಮ್ಮೆಲ್ಲ ಕೆಲಸಗಳ ನಡುವೆಯೂ ಮಗನ ಸಿನಿಮಾದ ಶೂಟಿಂಗ್‌ ವಿವರಗಳನ್ನು ಪ್ರತಿದಿನ ತರಿಸಿಕೊಳ್ಳುತ್ತಿದ್ದರಂತೆ.

‘ಹಳ್ಳಿಯ ಸೊಗಡು ಹಾಗೂ ನಗರ ಜೀವನದ ಮಿಶ್ರಣ ಇದರಲ್ಲಿ ಇದೆ. ಭಾವುಕ ಸನ್ನಿವೇಶಗಳು ಅದ್ಭುತವಾಗಿ ಮೂಡಿಬಂದಿವೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು ಸಿಎಂ. ಚಿತ್ರದಲ್ಲಿನ ದೃಶ್ಯ ಶ್ರೀಮಂತಿಕೆಯು ‘ಜಾಗ್ವಾರ್‌’ ಚಿತ್ರಕ್ಕಿಂತ ಹೆಚ್ಚಿದೆ ಎಂಬ ಪ್ರಶಂಸೆಯನ್ನೂ ವ್ಯಕ್ತಪಡಿಸಿದರು.

*


–ಎ. ಹರ್ಷ

*


–ರವಿಶಂಕರ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT