ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನ್ನಡ ಚಿತ್ರರಂಗದ ಹಿರಿಯ ನಿರ್ದೇಶಕ ಎಸ್. ಕೆ. ಭಗವಾನ್ ಇನ್ನಿಲ್ಲ

Last Updated 20 ಫೆಬ್ರುವರಿ 2023, 4:22 IST
ಅಕ್ಷರ ಗಾತ್ರ

ಬೆಂಗಳೂರು: ಕನ್ನಡ ಚಿತ್ರರಂಗದ ಹಿರಿಯ ನಿರ್ದೇಶಕ ಎಸ್ ಕೆ ಭಗವಾನ್ (95) ಸೋಮವಾರ ಬೆಳಗ್ಗೆ ನಿಧನರಾಗಿದ್ದಾರೆ.

ಸುಮಾರು 20 ವರ್ಷದಿಂದ ಹೃದಯದ ಸಂಬಂಧಿ ಸಮಸ್ಯೆಯಿಂದ ಬಳಲುತ್ತಿದ್ದ ಅವರು, ಜಯದೇವ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ, ಸೋಮವಾರ ಬೆಳಗ್ಗೆ 6.10ರಲ್ಲಿ ಅವರು ಇಹಲೋಕ ತ್ಯಜಿಸಿದರು.

ಭಗವಾನ್‌ ಅವರ ಪಾರ್ಥಿವ ಶರೀರವನ್ನು ಸಹಕಾರನಗರದಲ್ಲಿರುವ ಅವರ ನಿವಾಸದಲ್ಲಿ ಮಧ್ಯಾಹ್ನ 12ರ ವರೆಗೆ ಸಾರ್ವಜನಿಕರ ದರ್ಶನಕ್ಕೆ ಇರಿಸಲಾಗಿದೆ. ಮಧ್ಯಾಹ್ನ 12.30ರ ನಂತರ ರವೀಂದ್ರ ಕಲಾಕ್ಷೇತ್ರದಲ್ಲಿ ಅಂತಿಮದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ ಎಂದು ಅವರ ಕುಟುಂಬಸ್ಥರು ತಿಳಿಸಿದ್ದಾರೆ.

ಭಗವಾನ್‌ ಅವರ ನಿಧನಕ್ಕೆ ಕನ್ನಡ ಚಿತ್ರರಂಗ, ಗಣ್ಯರು, ಅಭಿಮಾನಿಗಳು ಕಂಬನಿ ಮಿಡಿದಿದ್ದಾರೆ.

ಮೈಸೂರಿನಲ್ಲಿ ಜನಿಸಿದ್ದ ಎಸ್‌.ಕೆ.ಭಗವಾನ್‌ ಬೆಂಗಳೂರಿನಲ್ಲಿ ಶಿಕ್ಷಣ ಪಡೆದರು. ಹಿರಣ್ಣಯ್ಯ ಮಿತ್ರ ಮಂಡಳಿ ನಾಟಕಗಳ ಮೂಲಕ ಬಣ್ಣದ ಬದುಕನ್ನು ಆರಂಭಿಸಿದ್ದ ಭಗವಾನ್‌, ‘ಭಾಗ್ಯೋದಯ’ ಸಿನಿಮಾ ಮೂಲಕ ನಟನಾಗಿ ಚಿತ್ರರಂಗಕ್ಕೆ ಹೆಜ್ಜೆ ಇಟ್ಟರು. ಕ್ಯಾಮೆರಾಮೆನ್‌ ಆಗಿದ್ದ ದೊರೆರಾಜ್‌ ಜೊತೆಗೆ ಮದ್ರಾಸ್‌ನಲ್ಲಿದ್ದುಕೊಂಡು, ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿ, ವರನಟ ಡಾ.ರಾಜ್‌ಕುಮಾರ್‌ ಅವರ ಹಲವು ಸಿನಿಮಾಗಳಿಗೆ ಸಂಭಾಷಣೆಕಾರರಾಗಿಯೂ ಅವರು ಕಾರ್ಯನಿರ್ವಹಿಸಿದ್ದರು. ದೊರೆ–ಭಗವಾನ್‌ ಅವರ ಜೋಡಿ ಕನ್ನಡ ಚಿತ್ರರಂಗದಲ್ಲಿ ಖ್ಯಾತಿ ಗಳಿಸಿತ್ತು.

‘ಜೇಡರ ಬಲೆ’ ದೊರೆ–ಭಗವಾನ್‌ ಜೋಡಿಯ ನಿರ್ದೇಶನದ ಮೊದಲ ಸಿನಿಮಾ. ‘ಗೋವಾದಲ್ಲಿ ಸಿ.ಐ.ಡಿ 99’, ‘ಆಪರೇಷನ್‌ ಡೈಮಂಡ್‌ ರಾಕೆಟ್‌’,‘ಆಪರೇಷನ್‌ ಜಾಕ್‌ಪಾಟ್‌ನಲ್ಲಿ ಸಿ.ಐ.ಡಿ 999’, ‘ಗಿರಿಕನ್ಯೆ’, ‘ಎರಡು ಕನಸು’, ‘ನಾನೊಬ್ಬ ಕಳ್ಳ’ ಹೀಗೆ ರಾಜ್‌ಕುಮಾರ್‌ ಅವರ 32 ಚಿತ್ರಗಳಿಗೆ ನಿರ್ದೇಶಕರಾಗಿ ಭಗವಾನ್‌ ಕಾರ್ಯನಿರ್ವಹಿಸಿದ್ದರು. ‘ಚಂದನದ ಗೊಂಬೆ’, ‘ಮುನಿಯನ ಮಾದರಿ’, ‘ಗಾಳಿ ಮಾತು’, ‘ಕಸ್ತೂರಿ ನಿವಾಸ’, ಹೊಸ ಬೆಳಕು ಮುಂತಾದುವುಗಳು ಅವರ ಇತರೆ ಸಿನಿಮಾಗಳು.

ಸಿಎಂ ಸಂತಾಪ

’ಕನ್ನಡ ಚಲನಚಿತ್ರರಂಗದ ಖ್ಯಾತ ನಿರ್ದೇಶಕ ಎಸ್. ಕೆ. ಭಗವಾನ್ ರವರ ನಿಧನದ ಸುದ್ದಿ ತಿಳಿದು ಮನಸ್ಸಿಗೆ ಅತ್ಯಂತ ಬೇಸರವಾಯಿತು. ಅವರ ಆತ್ಮಕ್ಕೆ ಸದ್ಗತಿ ಕೋರುತ್ತೇನೆ. ಅವರ ಕುಟುಂಬವರ್ಗದವರಿಗೆ ಈ ನೋವನ್ನು ಸಹಿಸುವ ಶಕ್ತಿಯನ್ನು ಭಗವಂತ ನೀಡಲಿ ಎಂದು ಪ್ರಾರ್ಥಿಸುತ್ತೇನೆ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಂತಾಪ ಸೂಚಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT