ಗುರುವಾರ , ಮಾರ್ಚ್ 23, 2023
22 °C

ಪಠಾಣ್‌ ₹400 ಕೋಟಿ ಗಳಿಕೆ: ಲೆಕ್ಕ ಸುಳ್ಳು ಎನ್ನುತ್ತಿರುವ ಕೆಲ ನೆಟ್ಟಿಗರು!

ಪ್ರಜಾವಾಣಿ ವೆಬ್‌ಡೆಸ್ಕ್‌‌ Updated:

ಅಕ್ಷರ ಗಾತ್ರ : | |

‘ಬೇಷರಮ್‌ ರಂಗ್‌’ ಹಾಡಿನಿಂದ ವಿವಾದಕ್ಕೆ ಗುರಿಯಾಗಿದ್ದ ಶಾರುಖ್‌, ದೀಪಿಕಾ ಪಡುಕೋಣೆ ಮತ್ತು ಜಾನ್ ಅಬ್ರಹಾಂ ನಟಿಸಿರುವ ‘ಪಠಾಣ್‌’ ಹಲವು ದಾಖಲೆಗಳನ್ನು ಮುರಿದು 4 ದಿನದಲ್ಲಿ ವಿಶ್ವದಾದ್ಯಂತ ₹400 ಕೋಟಿ ಗಳಿಕೆ ಕಂಡಿದೆ.

ಜ.25ರಂದು 8000 ಸ್ಕ್ರೀನ್‌ಗಳಲ್ಲಿ ಸಿದ್ಧಾರ್ಥ್‌ ಆನಂದ್‌ ನಿರ್ದೇಶನದ ಪಠಾಣ್‌ ತೆರೆ ಕಂಡಿತ್ತು. ಹಿಂದಿ ಹೊರತಾಗಿ ತಮಿಳು ಮತ್ತು ತೆಲುಗು ಭಾಷೆಗಳಲ್ಲಿಯೂ ಚಿತ್ರ ತೆರೆ ಕಂಡಿದೆ. ಮೊದಲ ದಿನವೇ ಹಿಂದಿ ಅವತರಣಿಕೆ ₹55 ಕೋಟಿ ಗಳಿಸಿದ್ದು, ಡಬ್ಬಿಂಗ್‌ ಭಾಷೆಗಳಿಂದ ₹2 ಕೋಟಿ ಸಂಗ್ರಹವಾಗಿದೆ ಎಂದು ಚಿತ್ರ ನಿರ್ಮಾಣ ಸಂಸ್ಥೆ ಯಶ್‌ರಾಜ್‌ ಫಿಲಂಸ್‌ ಹೇಳಿತ್ತು.

ಬಾಲಿವುಡ್‌ ಚಿತ್ರ ವಿಮರ್ಶಕ ತರಣ್‌ ಆದರ್ಶ್‌, ಚಿತ್ರವನ್ನು ಒಂದೇ ಸಾಲಿನಲ್ಲಿ ಬ್ಲಾಕ್‌ಬಸ್ಟರ್‌ ಎಂದು ಬಣ್ಣಿಸಿದ್ದು 4ನೇ ದಿನದ ಬಾಕ್ಸ್‌ ಆಫೀಸ್‌ ಲೆಕ್ಕಾಚಾರವನ್ನು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಪಠಾಣ್‌ ಭಾರತದಲ್ಲಿ ₹265 ಕೋಟಿ ಗಳಿಸಿದೆ. ಸಾಗರೋತ್ತರ ವಹಿವಾಟಿನಿಂದ 164 ಕೋಟಿ ಗಳಿಸಿದೆ ಎಂದು ತರಣ್‌ ಹಂಚಿಕೊಂಡಿದ್ದಾರೆ.

ಇದರ ನಡುವೆ ಸಾಮಾಜಿಕ ಮಾಧ್ಯಮಗಳಲ್ಲಿ ಪಠಾಣ್‌ ಚಿತ್ರದ ಕುರಿತಾದ ಅಪಪ್ರಚಾರ ಮಾತ್ರ ಮುಂದುವರಿದಿದೆ. ಪಠಾಣ್‌ ಚಿತ್ರಕ್ಕೆ ಜನವಿಲ್ಲ, ಗಳಿಕೆ ಲೆಕ್ಕ ಸುಳ್ಳು ಎಂಬ ವರದಿಗಳು ಶೇರ್‌ ಆಗುತ್ತಿವೆ. ಬೆಂಗಳೂರಿನ ಚಿತ್ರಮಂದಿರಗಳಲ್ಲಿಯೇ ಗಮನಿಸಿದರೆ ಭಾನುವಾರವು ಪಠಾಣ್‌ ಸಾಕಷ್ಟು ಕಡೆ ಹೌಸ್‌ಫುಲ್‌ ಇದೆ. ‘ಯಶ್‌ ರಾಜ್‌ ಫಿಲಂಸ್‌ ಸಿನಿಮಾಗಳನ್ನು ನಮ್ಮ ರಾಜ್ಯದಲ್ಲಿ ಪಾಲ್‌ ಎಂಟರ್‌ಪ್ರೈಸಸ್‌ ಹಂಚಿಕೆ ಮಾಡುತ್ತದೆ. ಕಳೆದ ನಾಲ್ಕು ದಿನಗಳಲ್ಲಿ ಕಲೆಕ್ಷನ್‌ ಭರ್ಜರಿಯಾಗಿಯೇ ಇತ್ತು. ಸೋಮವಾರದಿಂದ ಗಳಿಕೆ ಸ್ವಲ್ಪ ಇಳಿಮುಖವಾಗುವುದು ಎಲ್ಲ ದೊಡ್ಡ ಸಿನಿಮಾಗಳಲ್ಲಿಯೂ ಸಹಜ’ ಎಂದು ವಿತರಕರೊಬ್ಬರು ತಿಳಿಸಿದ್ದಾರೆ.

ರಜಾ ಇರುವುದರಿಂದ ಮೊದಲ 5 ದಿನ ಪಠಾಣ್‌ ಗಳಿಕೆ ₹200 ಕೋಟಿ ದಾಟಬಹುದು. ಸೋಮವಾರದಿಂದ ಸ್ವಲ್ಪ ತಗ್ಗಬಹುದು ಎಂದು ತರಣ್‌ ಆದರ್ಶ್‌ ಕೂಡ ಮೊದಲ ದಿನವೇ ಟ್ವೀಟ್‌ ಮಾಡಿದ್ದರು. ದೇಶದಲ್ಲಿ ₹250 ಕೋಟಿ ಗಳಿಕೆ ಮೈಲುಗಲ್ಲು ದಾಟಿರುವ ಪಠಾಣ್‌, ಕೆಜಿಎಫ್‌–2, ಬಾಹುಬಲಿ–2 ಗಳಿಗಿಂತ ವೇಗಯುತವಾಗಿ ಈ ಮೈಲುಗಲ್ಲು ತಲುಪಿದೆ ಎಂದು ತರಣ್‌ ಹೇಳಿದ್ದಾರೆ.

ಪಠಾಣ್‌ ಮೊದಲ ದಿನ ಗರಿಷ್ಠ ಗಳಿಕೆ ಕಂಡ ಬಾಲಿವುಡ್‌ ಸಿನಿಮಾ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಅಮೀರ್‌ ಖಾನ್‌ ಅವರ ಹಿಂದೂಸ್ತಾನ್‌ ಮೊದಲ ದಿನ ₹50 ಕೋಟಿ ಗಳಿಸಿ ದಾಖಲೆ ಬರೆದಿತ್ತು.  ಸಾಮಾಜಿಕ ಮಾಧ್ಯಮಗಳಲ್ಲಿ ಪಠಾಣ್‌ ಪರ ಮತ್ತು ವಿರೋಧದ ಪೋಸ್ಟ್‌ಗಳು ಬರುತ್ತಿದ್ದು,  ಮೊದಲ ದಿನ ಪ್ರತಿಭಟನೆ, ಹನುಮಾನ್‌ ಚಾಲೀಸ್‌ ಪಠಣವೆಲ್ಲ ನಡೆದಿತ್ತು.

ಬಹುತೇಕ ನೆಟ್ಟಿಗರು ಚಿತ್ರವನ್ನು ಹಾಡಿ ಹೊಗಳಿದ್ದಾರೆ. ಸುದೀರ್ಘ ವಿರಾಮದ ಬಳಿಕ ಶಾರುಖ್‌ ಖಾನ್‌ ಮತ್ತೆ ತೆರೆ ಮೇಲೆ ಕಾಣಿಸಿಕೊಂಡಿದ್ದು, ಭರ್ಜರಿ ಆ್ಯಕ್ಷನ್‌ನೊಂದಿಗೆ ಅಭಿಮಾನಿಗಳ ಮನ ಗೆದ್ದಿದ್ದಾರೆ ಎಂದು ಬಹುತೇಕ ನೆಟ್ಟಿಗರು ಅಭಿಪ್ರಾಯಪಟ್ಟಿದ್ದಾರೆ.
 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು