ನಟ ಶಶಿಕುಮಾರ್ ಪುತ್ರ ಆದಿತ್ಯ ಶಶಿಕುಮಾರ್ ನಾಯಕನಾಗಿ ನಟಿಸುತ್ತಿರುವ ಮೂರನೇ ಚಿತ್ರದ ಶೀರ್ಷಿಕೆ ಇತ್ತೀಚೆಗೆಷ್ಟೇ ಅನಾವರಣಗೊಂಡಿದೆ. ಚಿತ್ರಕ್ಕೆ ‘ರಾಶಿ’ ಎಂದು ಹೆಸರಿಡಲಾಗಿದ್ದು, ಕಿರುತೆರೆ ನಟಿ ಸಮೀಕ್ಷಾ ಆದಿತ್ಯಗೆ ಜೋಡಿಯಾಗಿದ್ದಾರೆ. ಧುವನ್ ಫಿಲಂಸ್ ಲಾಂಛನದಲ್ಲಿ ನಿರ್ಮಾಣವಾಗುತ್ತಿರುವ ಚಿತ್ರಕ್ಕೆ ವಿಜಯ್ ಪಾಳೇಗಾರ್ ನಿರ್ದೇಶನವಿದೆ.
‘ಇಷ್ಟು ದಿನ ಅಕ್ಷಿತ್ ಶಶಿಕುಮಾರ್ ಆಗಿದ್ದ ನಾನು, ಈಗ ಆದಿತ್ಯ ಶಶಿಕುಮಾರ್ ಎಂದು ಹೆಸರು ಬದಲಿಸಿಕೊಂಡಿದ್ದೇನೆ. ಒಂದು ಪ್ರೇಮಕಥೆಯನ್ನು ಹೊಂದಿರುವ ಚಿತ್ರ. ಜನ್ಮರಾಶಿಗೆ ಸಂಬಂಧಿಸಿದ ಕಥೆಯಲ್ಲ’ ಎಂದರು ಆದಿತ್ಯ
‘ನಿರ್ಮಾಪಕ ಅಖಿಲೇಶ್ ಅವರೆ ಈ ಚಿತ್ರದ ಕಥೆ ಬರೆದಿದ್ದಾರೆ. ನಾನು ಚಿತ್ರಕಥೆ ಬರೆದು, ಸಂಗೀತ ನಿರ್ದೇಶನದೊಂದಿಗೆ ನಿರ್ದೇಶನವನ್ನು ಮಾಡುತ್ತಿದ್ದೇನೆ. ‘ಟ್ರಿಗರ್’ ಚಿತ್ರದ ನಂತರ ನಾನು ನಿರ್ದೇಶಿಸುತ್ತಿರುವ ಎರಡನೇ ಚಿತ್ರವಿದು. ಈ ಚಿತ್ರಕ್ಕೆ ನವೀನ್ ಸೂರ್ಯ ಛಾಯಾಚಿತ್ರಗ್ರಹಣ, ಕೆ.ಎಂ.ಪ್ರಕಾಶ್ ಸಂಕಲನ, ಮಂಜು ಮಹದೇವ್ ಹಿನ್ನೆಲೆ ಸಂಗೀತವಿದೆ. ಸದ್ಯದಲ್ಲೇ ಚಿತ್ರೀಕರಣ ಆರಂಭವಾಗಲಿದೆ’ ಎಂದು ನಿರ್ದೇಶಕ ವಿಜಯ್ ಪಾಳೇಗಾರ್ ತಿಳಿಸಿದರು. ಕರಿಸುಬ್ಬು, ಉಗ್ರಂ ರವಿ, ಹುಲಿ ಕಾರ್ತಿಕ್ ಮುಂತಾದವರು ಚಿತ್ರದಲ್ಲಿದ್ದಾರೆ.
v