ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನ್ನಡದ ಶೆರ್ಲಾಕ್ ಹೋಮ್ಸ್ ಶಿವಾಜಿ ಸುರತ್ಕಲ್: ರಮೇಶ್ ಅರವಿಂದ್

ಶಿವಾಜಿ ಸುರತ್ಕಲ್
Last Updated 20 ಫೆಬ್ರುವರಿ 2020, 19:45 IST
ಅಕ್ಷರ ಗಾತ್ರ

‘ಸರ್ ಆರ್ಥರ್‌ ಕೊನಾನ್ ಡಾಯಲ್ ಸೃಷ್ಟಿಸಿದ ಪಾತ್ರಶೆರ್ಲಾಕ್ ಹೋಮ್ಸ್‌ ಕರ್ನಾಟಕದಲ್ಲಿ ಜನಿಸಿದ್ದಿದ್ದರೆ, ಅವನ ಮಾತೃಭಾಷೆ ಕನ್ನಡ ಆಗಿದ್ದಿದ್ದರೆ, ಅವನು ಶಿವಾಜಿ ಸುರತ್ಕಲ್ ಆಗಿರುತ್ತಿದ್ದ...’

–ನಟ ರಮೇಶ್ ಅರವಿಂದ್ ಅವರು ತಮ್ಮ ಹೊಸ ಸಿನಿಮಾ ‘ಶಿವಾಜಿ ಸುರತ್ಕಲ್‌’ನ ನಾಯಕನ ಪಾತ್ರದ ಕುರಿತು ಒಂದು ವಾಕ್ಯದಲ್ಲಿ ವಿವರ ನೀಡಿದ್ದು ಹೀಗೆ. ಆಕಾಶ್ ಶ್ರೀವತ್ಸ ನಿರ್ದೇಶನದ ಈ ಚಿತ್ರ ಇದೇ ಶುಕ್ರವಾರ (ಫೆ. 21) ತೆರೆಗೆ ಬರುತ್ತಿದೆ.

‘ಈ ಚಿತ್ರದ ವೈಶಿಷ್ಟ್ಯ ಏನು’ ಎಂದು ರಮೇಶ್ ಅವರನ್ನು ಪ್ರಶ್ನಿಸಿದಾಗ, ‘ವೀಕ್ಷಕರು ಈ ಸಿನಿಮಾ ನೋಡುವಾಗ ತಮ್ಮ ಕಣ್ಣು, ಕಿವಿ ಜೊತೆ ಮಿದುಳನ್ನೂ ತೊಡಗಿಸಿಕೊಳ್ಳಬೇಕು. ಮೂಕಪ್ರೇಕ್ಷಕರ ರೀತಿಯಲ್ಲಿ ಇದನ್ನು ನೋಡಲು ಆಗದು. ನಾಯಕನಷ್ಟೇ ವೀಕ್ಷಕರೂ ಇದರಲ್ಲಿ ತೊಡಗಿಕೊಳ್ಳಬೇಕು’ ಎಂದು ಹೇಳಿದರು.

‘ನಾನು ಹಿಂದೆ ಈ ರೀತಿಯ ಪಾತ್ರ ಮಾಡಿರಲಿಲ್ಲ. ಯಾವುದೇ ನಟನಿಗೆ ಬಹಳ ಖುಷಿ ಕೊಡುವ ಸಂಕೀರ್ಣ ಪಾತ್ರ ಇದು. ಕೊಲೆ ಪ್ರಕರಣವೊಂದನ್ನು ಶಿವಾಜಿ ಭೇದಿಸುತ್ತಾನೆ’ ಎಂದು ತಮ್ಮ ಪಾತ್ರದ ಬಗ್ಗೆಯೂ ಚೂರು ಮಾಹಿತಿ ನೀಡಿದರು.

ಚಿತ್ರದ ಶೀರ್ಷಿಕೆಯಲ್ಲಿ ಇರುವ ‘ಸುರತ್ಕಲ್’ ಹೆಸರಿಗೂ ಮಂಗಳೂರು ಸಮೀಪದ ‘ಸುರತ್ಕಲ್’ಗೂ ಏನು ನಂಟು ಎಂಬ ಪ್ರಶ್ನೆ ಎದುರಾಗುವುದು ಸಹಜ. ಚಿತ್ರದ ಕಥೆ ನಡೆಯುವುದು ರಣಗಿರಿ ಎನ್ನುವ ಕಾಲ್ಪನಿಕ ಊರಿನಲ್ಲಿ. ಸುರತ್ಕಲ್‌ನಲ್ಲಿ ಕಥೆ ನಡೆಯುವುದಿಲ್ಲ. ‘ಆದರೆ, ಶಿವಾಜಿ ಹೆಸರಿಗೆ ಒಂದು ಸರ್‌ನೇಮ್‌ ಬೇಕಿತ್ತು. ಸುರತ್ಕಲ್‌ ಎಂಬ ಸರ್‌ನೇಮ್‌, ಶಿವಾಜಿ ಹೆಸರಿನ ಜೊತೆ ಸೂಕ್ತವಾಗಿ ಹೊಂದಿಕೊಳ್ಳುತ್ತದೆ ಎಂದು ಆ ಹೆಸರು ಇಡಲಾಗಿದೆ. ಸುರತ್ಕಲ್‌ ಹೆಸರಿಗೆ ಬುದ್ಧಿವಂತಿಕೆಯ ಒಂದು ಇಮೇಜ್ ಕೂಡ ಇದೆ. ಚಿತ್ರದ ನಾಯಕ ಸುರತ್ಕಲ್‌ ಊರಿನವನು’ ಎಂದು ವಿವರಿಸಿದರು ರಮೇಶ್.

ಇದು ಒಂದರ್ಥದಲ್ಲಿ ರಮೇಶ್ ಅವರು ಬಯಸಿ ಪಡೆದ ಪಾತ್ರ. ‘ಈ ತರಹದ ಪಾತ್ರ ಮಾಡಬೇಕು ಎಂಬ ಆಸೆ ಬಹಳ ವರ್ಷಗಳಿಂದ ನನ್ನಲ್ಲಿ ಇತ್ತು. ಶೆರ್ಲಾಕ್ ಹೋಮ್ಸ್ ರೀತಿಯ ಪಾತ್ರವನ್ನು ಕನ್ನಡದಲ್ಲಿ ಯಾರೂ ಮಾಡಿಲ್ಲವಲ್ಲಾ ಎಂದು ನನಗೆ ಬಹಳ ಬಾರಿ ಅನಿಸಿತ್ತು. ಈ ಚಿತ್ರದ ಕಥೆ ನನ್ನ ಬಳಿ ಬಂದಾಗ, ಶೆರ್ಲಾಕ್ ಹೋಮ್ಸ್ ಪಾತ್ರವನ್ನು ಇಲ್ಲಿ ತರಬಹುದು ಎಂದು ಅನಿಸಿತು’ ಎಂದು ತಮ್ಮ ಪಾತ್ರ ಸೃಷ್ಟಿಯಾದ ಬಗೆಯನ್ನು ತಿಳಿಸಿದರು.

‘ಶಿವಾಜಿ ಅದಾಗಲೇ ನೂರು ಪ್ರಕರಣಗಳನ್ನು ಭೇದಿಸಿರುತ್ತಾನೆ. ಚಿತ್ರದಲ್ಲಿ ಬರುವುದು ನೂರಾ ಒಂದನೆಯ ಪ್ರಕರಣ. ಆದರೆ, ಆ ನೂರಾ ಒಂದನೆಯ ಪ್ರಕರಣ ಭೇದಿಸುವುದು ಅವನಿಗೆ ಸವಾಲಾಗಿ ಪರಿಣಮಿಸುತ್ತದೆ. ಸವಾಲಿನ ಈ ಕಥೆ ಎರಡು ತಾಸು ಅವಧಿಯ ಈ ಸಿನಿಮಾದಲ್ಲಿ ಇದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT