ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿವಣ್ಣನ ‘ಗ್ರಾಮಾಯಣ’

ಗ್ರಾಮಾಯಣ ಸಿನಿಮಾ ಟ್ರೇಲರ್ ಲಾಂಚ್‌ನಲ್ಲಿ ಬಾಲ್ಯದ ನೆನಪು ಹಂಚಿಕೊಂಡ ಶಿವಣ್ಣ
Last Updated 8 ಸೆಪ್ಟೆಂಬರ್ 2018, 2:30 IST
ಅಕ್ಷರ ಗಾತ್ರ

ಅದು ವಿನಯ್ ರಾಜ್‌ಕುಮಾರ್ ಅವರ ‘ಗ್ರಾಮಾಯಣ’ ಸಿನಿಮಾದ ಟ್ರೇಲರ್ ಬಿಡುಗಡೆ ಕಾರ್ಯಕ್ರಮ. ಟ್ರೇಲರ್‌ನಲ್ಲಿ ಒಂದಿಷ್ಟು ಜನ ತಮ್ಮ ಊರಿನ ಬಗ್ಗೆ, ಕಾಡುವ ನೆನಪುಗಳ ಬಗ್ಗೆ ಮಾತಾಡಿದ್ದನ್ನು ಪ್ರದರ್ಶಿಸಲಾಯ್ತು. ಇದನ್ನು ನೋಡಿಯೋ ಅಥವಾ ಸಿನಿಮಾ ಶೀರ್ಷಿಯೆಯಲ್ಲಿಯೇ ಇರುವ ಸೊಗಡಿನ ಪರಿಣಾಮವೋ, ವೇದಿಕೆಯ ಮೇಲಿದ್ದ ಶಿವರಾಜ್‌ಕುಮಾರ್ ನಾಸ್ಟಾಲ್ಜಿಕ್ ಮೂಡಿಗೆ ಹೋಗಿದ್ದರು. ಮೈಕ್ ಕೈಗೆತ್ತಿಕೊಂಡವರೇ ಅವರು ತಮ್ಮೆಲ್ಲ ಸ್ಟಾರ್‌ಗಿರಿ, ಜನಪ್ರಿಯತೆ, ವಯಸ್ಸು ಎಲ್ಲವನ್ನೂ ಮರೆತು ಬಾಲ್ಯದ ಓಣಿಗೆ ಜಾರಿದರು. ಸಭಿಕರನ್ನೂ ತಮ್ಮ ಬಾಲ್ಯದ ಜಗತ್ತಿಗೆ ತಾಕಿ ಬರುವಷ್ಟು ಭಾವಪೂರ್ಣ ಗುಣ ಅವರ ಮಾತಿನಲ್ಲಿತ್ತು. ಗಾಜನೂರಿನ ನೆನಪುಗಳು, ಮೀನು ಹಿಡಿದಿದ್ದು, ಈಜು ಕಲಿತಿದ್ದು ಎಲ್ಲವನ್ಣೂ ಶಿವಣ್ಣ ಹಂಚಿಕೊಂಡ ಬಗೆಯನ್ನು ಅವರ ಮಾತಿನಲ್ಲಿಯೇ ಕೇಳಿದರೆ ಚೆನ್ನ:

ಅದು ಎಪ್ಪತ್ತರ ದಶಕದ ಕತೆ. ಅಪ್ಪು ಇನ್ನೂ ಹುಟ್ಟಿರಲಿಲ್ಲ. ನಾವು ಎಕ್ಸಾಮು ಯಾವಾಗ ಮುಗಿಯುತ್ತದೆಯೋ ಎಂದು ಕಾಯುತ್ತಿದ್ದೆವು. ಫೈನಲ್ ಎಕ್ಸಾಮ್ ಮುಗಿದಿದ್ದೇ ತಡ, ನಾನು ರಾಘು (ರಾಘವೇಂದ್ರ ರಾಜ್‌ಕುಮಾರ್) ಮತ್ತು ಲಕ್ಷ್ಮಿ ಜತೆಗೆ ಸುಮಾರು ಇಪ್ಪತ್ತೈದು ಜನ ಕೂತ್ಕೊಂಡು ಅಂಬಾಸಿಡರ್ ಕಾರ್‌ನಲ್ಲಿ ಗಾಜನೂರಿಗೆ ಹೋಗ್ತಾ ಇದ್ವಿ. ನನ್ನ ಊರಿನ ನೆನಪು ಆ ಜರ್ನಿಯಿಂದಲೇ ಶುರುವಾಗುತ್ತದೆ. ಬೆಳಿಗ್ಗೆ ಹೊರಟು ಅಪ್ಪಾಜಿ ಶೂಟಿಂಗ್ ನಡೀತಿದ್ದ ಜಾಗಕ್ಕೆ ಹೋಗಿ ಅಲ್ಲಿಂದ ಗಾಜನೂರಿಗೆ ಹೋಗೋದು. ದಾರಿಯಲ್ಲಿ ಮೈಸೂರಿನಲ್ಲಿ ಬಿರಿಯಾನಿ ಪ್ಯಾಕ್ ಮಾಡಿಕೊಳ್ತಿದ್ವಿ. ನಂಜನಗೂಡಿನ ಬಳಿ ಒಂದು ನದಿ ಇದೆ. ಅಲ್ಲಿ ಕೂತು ಎಲ್ಲರೂ ಬಿರಿಯಾನಿ ತಿಂದು, ಕೈ ಮುಖ ತೊಳೆದುಕೊಂಡು ಗಾಜನೂರಿಗೆ ಹೊರಡೋದು. ಆವಾಗಿನ್ನೂ ಊರಿಗೆ ಹೋಗುವಾಗ ಸಿಗುವ ನದಿಗೆ ಬ್ರಿಡ್ಜ್‌ ಕಟ್ಟಿರಲಿಲ್ಲ. ನದಿಯವರೆಗೆ ಕಾರ್‌ ಹೋಗಿ, ಅಲ್ಲಿ ನಿಲ್ಲಿಸಿ ನಡೆದುಕೊಂಡು ಹೋಗಬೇಕು. ಆ ಹೊಳೆ ದಾಟಿಕೊಂಡು ಹೋಗುವುದೇ ಒಂದು ಖುಷಿ.

ಯಾವಾಗ ಊರಿಗೆ ಹೋಗಿ ತಲುಪುತ್ತಿದ್ದೆವೋ ಅಲ್ಲಿಂದ ಆಟ ಶುರು ನಮ್ದು. ಇಂದು ಶಿವಣ್ಣನಿಗೆ ಈ ವಯಸ್ಸಿನಲ್ಲೂ ಇಷ್ಟು ಎನರ್ಜಿ ಹೇಗಿದೆ ಅಂತ ಕೇಳ್ತಿರ್ತೀರಲ್ವಾ? ಅಂದು ನಾವು ಅಷ್ಟು ಓಡಾಡಿದ್ದೇ ನನ್ನ ಈಗಿನ ಎನರ್ಜಿಯ ಸೀಕ್ರೆಟ್.

ಅಲ್ಲಿ ಹಿರಿಯರೆಲ್ಲ ಬೈಯೋರು. ಆದರೆ ನಾವು ಕೇಳದೆ ಬೆಟ್ಟದಲ್ಲೆಲ್ಲ ಅಡ್ಡಾಡ್ತಿದ್ವಿ. ಗಂಡು ಮಕ್ಕಳೆಲ್ಲ ಹೊಳೆಯಲ್ಲಿ ಮೀನು ಹಿಡಿಯಲಿಕ್ಕೆ ಹೋಗ್ತಿದ್ವಿ. ಗಾಳ ಹಾಕ್ಕೊಂಡು ಅದರ ತುದಿಗೆ ಥೂ ಎಂದು ಎಂಜಲು ಉಗಿದು ನೀರಲ್ಲಿ ಬಿಟ್ಟು ಮೀನು ಹಿಡಿತಿದ್ವಿ. ಮೀನು ಹಿಡ್ಕೊಂಡು ಮನೆಗೆ ಬಂದು ಅಡುಗೆ ಮಾಡಿ ಊಟ ಮಾಡ್ತಿದ್ವಿ.

ನಾನು ಈಜಲು ಕಲಿತಿದ್ದೇ ಗಾಜನೂರಲ್ಲಿ. ಅಲ್ಲಿ ಸಿಕ್ಕಾಪಟ್ಟೆ ಜನ ಸ್ನೇಹಿತರಿದ್ದಾರೆ ನಂಗೆ. ಸುಮಾರು ಜನರ ಹೆಸರು ಮರೆತುಬಿಟ್ಟಿದೀನಿ. ಒಂದಿನ ನದಿ ದಡದಲ್ಲಿ ನಿಂತಿದ್ದೆ. ಒಬ್ಬ ‘ಇಲ್ಲ ಕಣಣ್ಣ.. ಹಿಂಗೆ ಬಿದ್ಬಿಡಿ ಅಣ್ಣಾ.. ಬಿದ್ಬಿಡಿ ಅಣ್ಣಾ...’ ಅನ್ನುತ್ತಾ ನದಿಗೆ ತಳ್ಳಿಬಿಟ್ಟ. ನಾನು ‘ಏ.. ಏ.. ಏ.. ಹಿಡ್ಕಳ್ರೋ ಹಿಡ್ಕಳ್ರೋ.. ಎನ್ನುತ್ತಾ ಕೂಗ್ತಿದ್ದೆ. ಅವನು ‘ಹಂಗೆ ಕಾಲಾಡ್ಸಿ, ಕಾಲಾಡ್ಸಿ’ ಅಂತ ಹೇಳ್ತಾ ಹಿಂಡ್ಕೊಂಡ. ಕಾಲು ಆಡಿಸ್ತಾ ಆಡಿಸ್ತಾ ಈಜು ಬಂದೇ ಬಿಡ್ತು. ಯಾವ ಕೋಚೂ ಇಲ್ಲ ಬೋಚೂ ಇಲ್ಲ.

ಗಾಜನೂರಿಗೆ ಹೋದಾಗ ನಾವು ಆಡ್ತಿದ್ದ ಆಟಗಳು ಒಂದೆರಡಲ್ಲ. ಮಾವಿನ ಕಾಯಿ ಕದಿಯೂದು! ಅದೂ ನಮ್ಮ ಸಂಬಂಧಿಕರ ತೋಟದಿಂದಲೇ ಕದಿಯೂದು. ಅದ್ಕೆ ಅಪ್ಪಾಜಿ ಕೈಲಿ ಏಟು ತಿನ್ನಿಸ್ಕೊಂಡಿದೀನಿ.

ಇಂಥ ಸಾಕಷ್ಟು ನೆನಪುಗಳಿವೆ. ಮತ್ತು ಆ ಸಂಬಂಧಗಳು... ಜಾತಿ ಗೀತಿ ಎಲ್ಲ ಏನೂ ಇರ್ಲಿಲ್ಲ ಆವಾಗ. ಅಲ್ಲಿ ಯಾರ ಮನೆಗೆ ಹೋದ್ರೂ ಊಟ ಮಾಡ್ತಿದ್ದೆ. ಹುರುಳಿಕಟ್ಟು ತಿಂತಿದ್ದೆ. ಯಾವ ಮನೆಯಲ್ಲಿ ಹೋಗಿ ಮಲಗಿದರೂ ನನಗೆ ನಿದ್ದೆ ಬರ್ತಿತ್ತು. ಅದ್ಕೆ ಇಂದು ಯಾವ ಊರಿಗೇ ಹೋಗ್ಲಿ, ನೆಮ್ಮದಿಯಾಗಿ ನಿದ್ದೆ ಮಾಡ್ತೀನಿ. ಸಮಸ್ಯೆಗಳು ಸಾವಿರ ಇರತ್ವೆ. ಆ ಸಾವಿರ ಸಮಸ್ಯೆಗಳ ಮಧ್ಯೆನೇ ನಾನು ಚೆನ್ನಾಗಿ ನಿದ್ದೆ ಮಾಡ್ತೀನಿ. ಯಾಕೆಂದ್ರೆ ಬಾಲ್ಯದ ಅಭ್ಯಾಸ ಅದು.

ರಜ ಮುಗಿಸಿ ಊರಿಂದ ಮರಳುವ ದಿನ ಎಲ್ಲರೂ ಅಳೋದು. ಅವತ್ತು ಎಲ್ಲರೂ ಒಂದೊಂದು ಮೂಲೆಯಲ್ಲಿ ಬಿದ್ದಿರ್ತಿದ್ವಿ. ಊರು ಬಿಟ್ಟೊಗೋಕೆ ಮನಸ್ಸು ಆಗ್ತಿರ್ಲಿಲ್ಲ.

ಆದರೆ ಈ ಎಲ್ಲ ಅನುಭವ ಕೊಟ್ಟಿದ್ದು, ಕಲಿಸಿದ್ದು ಯಾರು? ಅಪ್ಪಾಜಿ ಮತ್ತು ಅಮ್ಮ. ಅವರು ಹೇಳಿಕೊಟ್ಟಿದ್ದಷ್ಟೆ. ಅದನ್ನು ನಾವು ಪಾಲಿಸ್ತಾ ಇದ್ದೀವಿ. ಈವತ್ತಿಗೂ ನಂಗೆ ಗಾಜನೂರಿಗೆ ಹೋಗೋದು ಅಂದ್ರೆಇಷ್ಟ.

ಅಲ್ಲಿನ ನಾಗತ್ತೆ, ಅಪ್ಪಣ್ಣ ನಮ್ಮ ಕುಟುಂಬ ಎಷ್ಟು ಆಪ್ತರು ಎಂದರೆ ಅವರ ಮಕ್ಕಳ ಜತೆಗೇ ನಾವು ಬೆಳೆದಿದ್ದು. ಆಮೇಲೆ ಅಪ್ಪು ಹುಟ್ಟಿದ. ಅಪ್ಪೂ ಮತ್ತು ನನಗೂ ಹದಿಮೂರು ವರ್ಷ ಅಂತರ. ಅಪ್ಪು ಚಿಕ್ಕ ವಯಸ್ಸಿಂದಲೂ ಬೆಳವಣಿಗೆಯನ್ನು ನೋಡಿದ್ದೀನಿ. ಅವನು ಇಂದು ಇಷ್ಟು ದೊಡ್ಡ ಸ್ಟಾರ್ ಆಗಿದ್ದಾನೆ ಅಂದ್ರೆ ಮೊದಲು ಹೆಮ್ಮೆ ಪಡೋವ್ರು ನಾವು. ನಾವು ಒಬ್ಬರಿಗೊಬ್ಬರು ಯಾವತ್ತೂ ಹೊಟ್ಟೆಕಿಚ್ಚು ಪಟ್ಟವರಲ್ಲ. ನಾವು ಸಹೋದರರು ಬೇರೆ ಬೇರೆ ಮನೆಯಲ್ಲಿ ಇರಬಹುದು. ಆದರೆ ನಮ್ಮ ಮನಸ್ಸು ಮಾತ್ರ ಒಂದೇ.

ಎಲ್ಲ ಕುಟುಂಬದಲ್ಲಿಯೂ ಮನಸ್ತಾಪಗಳು ಬರುತ್ತದೆ. ಬರಬೇಕು, ಹಾಗೆ ಬಂದರೇನೆ ಜೀವನ. ಸ್ವಲ್ಪ ಆದ್ರೂ ಇದ್ದೇ ಇರತ್ತೆ ಅದು. ಆದ್ರೆ ಹೇಳಿಕೊಳ್ಳುವುದಿಲ್ಲ ಅಷ್ಟೆ. ಆದ್ರೆ ನಾವು ಮೂರು ಜನ ಯಾವತ್ತೂ ಯಾವುದಕ್ಕೂ ಕಿತ್ತಾಡಿಲ್ಲ. ಒಳಗೆ ಏನೇ ಮನಸ್ತಾಪ ಇದ್ರೂ ಏನೂ ತೋರಿಸಿಕೊಳ್ಳಲ್ಲ ನಾವು.

ಇಂದು ‘ಗ್ರಾಮಾಯಣ’ ಚಿತ್ರದ ಟ್ರೇಲರ್ ನೋಡಿ ಹಳೆಯದೆಲ್ಲ ನೆನಪಾಯ್ತು.

ಇಷ್ಟು ಬೇಗ ಎಷ್ಟು ದಿನ ಕಳೆದುಹೋಯ್ತಲ್ಲಾ ಅನಿಸುತ್ತದೆ. ನಮ್ಮೆಲ್ಲರನ್ನೂ ಬಾಲ್ಯವನ್ನೂ ನೆನಪಿಸುವ ಶಕ್ತಿ ಈ ಸಿನಿಮಾ ಟ್ರೇಲರ್‌ಗೆ ಇದೆ ಅಂದ್ರೆ ಸಿನಿಮಾದಲ್ಲಿಯೂ ಖಂಡಿತ ಏನೋ ಗಟ್ಟಿ ಅಂಶ ಇದ್ದಿರಲೇಬೇಕು. ವಿನಯ್‌ ಪ್ರತಿಭಾವಂತ ಹುಡುಗ. ಅವನ ಅಪ್ಪ, ತಾತ, ದೊಡ್ಡಪ್ಪ, ಚಿಕ್ಕಪ್ಪ ಎಲ್ಲರೂ ನಟರೇ. ಅವರೆಲ್ಲರಿಂದ ಒಂದೊಂದು ಸಂಗತಿಗಳನ್ನು ಕಲಿತು ಖಂಡಿತ ಮುಂದೆ ಬರುತ್ತಾನೆ ಎಂಬ ನಂಬಿಕೆ ಇದೆ. ಅವನಿಗೆ ಶುಭವಾಗಲಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT