ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾನು ಪಿಸಿಒಎಸ್‌ ಆರೋಗ್ಯ ಸಮಸ್ಯೆ ಎದುರಿಸುತ್ತಿದ್ದೇನೆ: ನಟಿ ಶ್ರುತಿ ಹಾಸನ್

ಅಕ್ಷರ ಗಾತ್ರ

ಬೆಂಗಳೂರು: ನಾನು ಪಾಲಿಸಿಸ್ಟಿಕ್ ಓವೇರಿಯನ್ ಸಿಂಡ್ರೋಮ್ (ಪಿಸಿಒಎಸ್‌) ಸಮಸ್ಯೆ ಎದುರಿಸುತ್ತಿದ್ದು, ಚಿಕಿತ್ಸೆ ಪಡೆಯುತ್ತಿದ್ದೇನೆ ಎಂದು ಬಹುಭಾಷಾ ನಟಿ ಶ್ರುತಿ ಹಾಸನ್ ಹೇಳಿಕೊಂಡಿದ್ದಾರೆ.

ಜಿಮ್‌ನಲ್ಲಿ ವರ್ಕೌಟ್‌ ಮಾಡುತ್ತಿರುವ ವಿಡಿಯೊವೊಂದನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್‌ ಮಾಡಿರುವ ಅವರು, ತಮ್ಮ ಆರೋಗ್ಯ ಕುರಿತಾದ ಮಾಹಿತಿ ಹಂಚಿಕೊಂಡಿದ್ದಾರೆ.

‘ನನ್ನೊಂದಿಗೆ ನೀವು ವರ್ಕೌಟ್‌ ಮಾಡಿ... ನಾನು ಎಂಡೋಮೆಟ್ರಿಯೋಸಿಸ್‌ನೊಂದಿಗೆ ಹಾರ್ಮೋನ್ ಸಮಸ್ಯೆಗಳನ್ನು ಎದುರಿಸುತ್ತಿದ್ದೇನೆ. ಇದೊಂದು ನೈಸರ್ಗಿಕ ಕ್ರಿಯೆ ಎಂದು ನನಗೆ ಗೊತ್ತಿದ್ದರೂ, ಅದರೊಂದಿಗೆ ಹೋರಾಟ ಮಾಡಲೇಬೇಕಿದೆ. ಶೂಟಿಂಗ್ ನಡುವೆಯೂ ನಿತ್ಯ ವ್ಯಾಯಾಮ ಮಾಡುತ್ತೇನೆ. ಸರಿಯಾದ ಊಟ ಮತ್ತು ವೇಳೆಗೆ ಸರಿಯಾಗಿ ನಿದ್ದೆ ಮಾಡಬೇಕಿದೆ. ಸದಾ ಸಂತೋಷದಿಂದ ಇರುವುದೇ ಇದಕ್ಕೆ ಪರಿಹಾರ ಎಂದು ಹಲವರು ಸೂಚಿಸಿದ್ದಾರೆ. ಹಾಗಾಗಿ ನಾನು ಸದಾ ಲವಲವಿಕೆಯಿಂದ ಇರುವುದಕ್ಕೆ ಪ್ರಯತ್ನಿಸುತ್ತಿದ್ದೇನೆ’ ಎಂದು ಶ್ರುತಿ ಹಾಸನ್ ಬರೆದುಕೊಂಡಿದ್ದಾರೆ.

ಸದ್ಯ ಪ್ರಶಾಂತ್ ನೀಲ್ ನಿರ್ದೇಶನದಪ್ರಭಾಸ್ ಅಭಿನಯದ ‘ಸಲಾರ್’ ಚಿತ್ರದಲ್ಲಿ ಶ್ರುತಿ ಹಾಸನ್ ಕಾಣಿಸಿಕೊಳ್ಳಲಿದ್ದಾರೆ.

ಪಿಸಿಒಎಸ್‌ ಬಗ್ಗೆ ಇಲ್ಲಿದೆ ಮಾಹಿತಿ...

ವೈದ್ಯಕೀಯ ಸಂಶೋಧನೆಯ ಪ್ರಕಾರ ಶೇ 5-25ರಷ್ಟು ಮಹಿಳೆಯರಲ್ಲಿ ಪಿಸಿಓಎಸ್ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ. ಇದರಿಂದ ಋತುಚಕ್ರ, ಹಾರ್ಮೋನ್‍ಗಳಲ್ಲಿ ಏರುಪೇರಾಗುತ್ತಿದೆ. ಗರ್ಭಧಾರಣೆ ಸಾಮರ್ಥ್ಯದಲ್ಲೂ ಸಮಸ್ಯೆ ಕಾಣಿಸಿಕೊಳ್ಳುತ್ತದೆ.

ಇದ್ದಕ್ಕಿದ್ದಂತೆ ತೂಕ ಹೆಚ್ಚಳ, ಮುಖದ ಮೇಲೆ ಕೂದಲು ಬರುವುದು, ಮೊಡವೆ, ತಲೆ ಕೂದಲು ಉದುರುವುದು ಈ ರೀತಿಯ ಸಮಸ್ಯೆ ಕಾಣಿಸಿಕೊಂಡಲ್ಲಿ ಪಿಸಿಓಎಸ್ ಪರೀಕ್ಷೆ ಮಾಡಿಸುವುದು ಒಳಿತು ಎಂಬುದು ವೈದರ ಸಲಹೆ.

ಈ ಸಮಸ್ಯೆ ಅನುವಂಶೀಯತೆಯಿಂದ ಉಂಟಾಗುವುದು. ತಾಯಿ, ಚಿಕ್ಕಮ್ಮ, ಅಕ್ಕ–ತಂಗಿ ಸೇರಿದಂತೆ ವಿವಿಧ ಸಂಬಂಧಿಗಳಲ್ಲಿ ಈ ಸಮಸ್ಯೆಗಳಿದ್ದಲ್ಲಿ ಪರೀಕ್ಷೆ ಮಾಡಿಕೊಳ್ಳುವುದು ಒಳಿತು. ಪಿಸಿಒಎಸ್ ಸಮಸ್ಯೆ ಇರುವವರಿಗೆ ಅಂಡಾಶಯದಿಂದ ಅಂಡಾಣು ಬಿಡುಗಡೆಯಾಗುವುದಿಲ್ಲ. ಅಪರಿಪಕ್ವತೆ ಇರುವ ಅಂಡಗಳು ನಿರ್ಗುಳ್ಳೆಯಾಗಿ ಅಂಡಾಶಯದ ಗೋಡೆಗಳ ಮೇಲೆ ಉಳಿದುಕೊಳ್ಳುತ್ತವೆ. ಇವುಗಳು ನೋಡುವುದಕ್ಕೆ ಮುತ್ತುಗಳ ತರಹವೇ ಕಾಣಿಸುತ್ತವೆ. ಈ ಕಾರಣದಿಂದಾಗಿ ಗರ್ಭಧಾರಣೆಯಾಗುವುದಿಲ್ಲ.

ವ್ಯಾಯಾಮ ಮಾಡದಿರುವುದು, ಅನಾರೋಗ್ಯಕರ ಜೀವನಶೈಲಿ, ಹಾರ್ಮೋನ್‌ಗಳ ಅಸಮತೋಲನ, ಅತ್ಯಧಿಕ ಮಾನಸಿಕ ಒತ್ತಡ, ಕೊಬ್ಬಿನ ಪದಾರ್ಥಗಳ ಸೇವನೆ ಪಿಸಿಒಎಸ್ ಸಮಸ್ಯೆ ಉಲ್ಬಣ ಗೊಳ್ಳಲು ಪ್ರಮುಖ ಕಾರಣ. ಈ ಸಮಸ್ಯೆ ಬರುವುದನ್ನು ಆರೋಗ್ಯಕರ ಜೀವನಶೈಲಿ ಪಾಲಿಸುವ ಮೂಲಕ ತಡೆಗಟ್ಟಬಹುದು‌‌.

ಚಿಕಿತ್ಸೆ ಲಭ್ಯ: ದೈಹಿಕ ವ್ಯಾಯಾಮ ಮತ್ತು ಆರೋಗ್ಯಕರ ಆಹಾರಕ್ರಮ ಪಾಲಿಸುವ ಮೂಲಕ ಈ ಸಮಸ್ಯೆಯನ್ನು ನಿವಾರಿಸಿಕೊಳ್ಳಬಹುದು. ಇಷ್ಟಾಗಿಯೂ ಸಮಸ್ಯೆ ನಿವಾರಣೆಯಾಗದಿದ್ದಲ್ಲಿ ಅಂಡಾಶಯವನ್ನು ಕೊರೆಯುವ ಮೂಲಕ ಚಿಕಿತ್ಸೆ ನೀಡಲಾಗುತ್ತದೆ. ಇದರಲ್ಲಿ ಸಣ್ಣ ಎಲೆಕ್ಟ್ರಾನಿಕ್ ಸೂಜಿ ಬಳಸಿ, ಅಂಡಾಶಯದಲ್ಲಿ ಚಿಕ್ಕರಂಧ್ರ ಮಾಡಲಾಗುತ್ತದೆ. ಈ ಮೂಲಕ ಟೆಸ್ಟೋಸ್ಟಿರೋನ್ ಉತ್ಪತ್ತಿಯನ್ನು ತಗ್ಗಿಸಿ, ಅಂಡೋತ್ಪತ್ತಿ ಸಾಮರ್ಥ್ಯ ಹೆಚ್ಚಿಸಲಾಗುತ್ತದೆ.

ಓದಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT