ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Pv Web Exclusive| ಜನ್ಮ ನೀಡಿದ ಭೂತಾಯಿಯ ನಾ ಹೇಗೆತಾನೆ ಮರೆಯಲಿ...

ಬಾಲು ಸರ್‌ ಗಾಯನ ಪಯಣದಲ್ಲಿ ಸಮಾಜ ಸೇವೆಯ ಹೆಜ್ಜೆಗಳು..
Last Updated 26 ಸೆಪ್ಟೆಂಬರ್ 2020, 7:53 IST
ಅಕ್ಷರ ಗಾತ್ರ

‘ಎಡಗೈನಲ್ಲಿ ಮಾಡಿದ್ದ ಸೇವೆ ಬಲಗೈಗೆ ತಿಳಿಯಬಾರದು‘ ಎನ್ನುವ ಮಾತಿದೆ. ಹಾಗೆಯೇ ಬಾಲು ಸರ್, ತಮ್ಮ ಗೀತ ಗಾಯನದ ಸಮಾಜ ಸೇವೆಯನ್ನೂ ಪ್ರಚಾರಕ್ಕೆ ಎಂದೂ ಬಳಸಿಕೊಳ್ಳಲಿಲ್ಲ. ಅಪ್ರತಿಮ ಗಾಯಕನ ಮನಸ್ಸು ಎಷ್ಟು ವಿಶಾಲವಾಗಿತ್ತು, ಸೇವೆಗಾಗಿ ಹೇಗೆ ತುಡಿಯುತ್ತಿತ್ತು ಎಂಬುದರ ಇಣುಕುನೋಟ ಇಲ್ಲಿದೆ.

‘ನನ್ನ ಕಂಠ ಇರುವವರೆಗೂ ಹಿಮೋಫೀಲಿಯಾ ರೋಗಿಗಳ ನೆರವಿಗಾಗಿ ಹಾಡುತ್ತೇನೆ. ಇಂಥವರಿಗಾಗಿಯಾರೇ ಕಾರ್ಯಕ್ರಮ ಕೇಳಿದರೂ ನಡೆಸಿಕೊಡುತ್ತೇನೆ. ಇಂಥ ರೋಗಿಗಳಿಗಾಗಿ ಒಬ್ಬ ಸ್ವಯಂ ಸೇವಕನಂತೆ ದುಡಿಯುತ್ತೇನೆ...‘

ಐದು ವರ್ಷಗಳ ಆ ಇಳಿಸಂಜೆಯಲ್ಲಿ ಚಿತ್ರದುರ್ಗದ ಮುರುಘಾಮಠದ ಸಭಾಂಗಣದಲ್ಲಿ ಗಾನಗಾರುಡಿಗ ಎಸ್‌.ಪಿ. ಬಾಲಸುಬ್ರಹ್ಮಣ್ಯಂ ಅವರು ಹೀಗೆ ವಿನಮ್ರವಾಗಿ ಮಾತನಾಡುತ್ತಿದ್ದಾಗ, ಸಭಾಂಗಣದಲ್ಲಿದ್ದವರೆಲ್ಲ ಮುಗಿಲುಮುಟ್ಟುವಂತೆ ಕರತಾಡನ ಮಾಡಿದರು.

ಎಸ್‌.ಪಿ.ಬಾಲಸುಬ್ರಹ್ಮಣ್ಯಂ ಅವರು ಕರ್ನಾಟಕ ಹಿಮೊಫೀಲಿಯಾ ಸೊಸೈಟಿಯ ಮಹಾ ಪೋಷಕರು. ಈ ಸೊಸೈಟಿಯವರು ಹಿಮೋಫೀಲಿಯಾ ಪೀಡಿತರು ಮತ್ತು ಕುಟುಂಬದವರ ಸಹಾಯಾರ್ಥ ಚಿತ್ರದುರ್ಗದಲ್ಲಿ ಆಯೋಜಿಸಿದ್ದ ಸಂಗೀತ ಕಾರ್ಯಕ್ರಮದಲ್ಲಿ ಹಾಡುವುದಕ್ಕಾಗಿ ಬಂದಿದ್ದರು. ಸಂಜೆ ಅವರು ‘ಎದೆ ತುಂಬಿ ಹಾಡುವ‘ ಕಾರ್ಯಕ್ರಮವಿತ್ತು. ಅದಕ್ಕೂ ಮುನ್ನ ಬಾಲು ಸರ್, ಹಿಮೋಫೀಲಿಯಾ ಪೀಡಿತರು ಮತ್ತು ಅವರ ಕುಟುಂಬದವರೊಂದಿಗಿನ ಸಂವಾದದಲ್ಲಿ ಮನತುಂಬಿ ಮಾತಾಡಿದರು. ಭಾವುಕರಾಗಿ ಅನುಭವ ಹಂಚಿಕೊಳ್ಳುತ್ತಿದ್ದ ಹಿಮೋಫೀಲಿಯಾ ಪೀಡಿತ ಮಕ್ಕಳನ್ನು ಸಮಾಧಾನಪಡಿಸಿ, ನಿಧಾನವಾಗಿ ಅನುಭವ ಹಂಚಿಕೊಳ್ಳಿ ಎಂದರು. ಅವರ ಮೆಲುದನಿಯ ಭರವಸೆಯ ನುಡಿಗಳು, ಅವರ ಹಾಡಿನಷ್ಟೇ ಮಧುರವಾಗಿದ್ದವು, ನೊಂದ ಮನಗಳಿಗೆ ಸಾಂತ್ವನ ಹೇಳುವಂತಿದ್ದವು.

‘ನಾನು ಉದರ ಪೋಷಣೆಗಾಗಿಯಷ್ಟೇ ಹಾಡುತ್ತಿಲ್ಲ. ಇಂಥ ಸಂಕಷ್ಟದಲ್ಲಿರುವವರ ಸಹಾಯಾರ್ಥದ ಸೇವೆಗಾಗಿಯೂ ಹಾಡುತ್ತೇನೆ‘ ಎಂದರು. ಇಂಥ ಸೇವೆಗಾಗಿಯೇ ನಮ್ಮ ತಂದೆ ಹೆಸರಲ್ಲಿ ಪ್ರತಿಷ್ಠಾನವೊಂದನ್ನು ಆರಂಭಿಸಿದ್ದೇನೆ ಎಂದೂ ಹೇಳಿದರು.

ನಿಜ, ಬಾಲಸುಬ್ರಹ್ಮಣ್ಯಂ ಖ್ಯಾತ ಗಾಯಕರಷ್ಟೇ ಅಲ್ಲ, ಅವರು ನೊಂದವರಿಗೆ, ಸಂಕಷ್ಟದಲ್ಲಿರುವವರಿಗೆ ನೆರವಾಗುವ ಸಮಾಜ ಸೇವಕರು. ಅವರು ತಮ್ಮ ಗಾಯನ ಕೇವಲ ಅಭಿಮಾನಿಗಳ ಮನತಣಿಸುವುದಕ್ಕಷ್ಟೇ ಅಲ್ಲದೇ, ಸಮಾಜದಲ್ಲಿ ಸಂಕಷ್ಟದಲ್ಲಿರುವ ವರಿಗೂ ನೆರವಾಗಬೇಕೆಂದು ಬಯಸಿದ್ದರು. ಇಂಥ ಸೇವಾ ಕಾರ್ಯಕ್ಕಾಗಿಯೇ ಅವರ ತಂದೆ ಎಸ್‌.ಪಿ.ಸಾಂಬಮೂರ್ತಿ ಸ್ಮರಣಾರ್ಥ ‘ಎಸ್‌ಪಿಎಸ್‌ ಚಾರಿಟಬಲ್ ಫೌಂಡೇಷನ್‘‌ ಆರಂಭ ಮಾಡಿದ್ದರು. ಈ ಫೌಂಡೇಶನ್ ಮೂಲಕ ಇಂಥ ಹಲವು ಸೇವಾ ಕಾರ್ಯಗಳು ನಡೆಯತ್ತಿವೆ.

ಸಮಾಜ ಸೇವೆಗಾಗಿ ನೆರವು

ಅನೇಕ ಸ್ಟೇಜ್‌ ಶೋ, ದತ್ತಿ ಕಾರ್ಯಕ್ರಮಗಳನ್ನು ನೀಡಿ, ಟಿಕೆಟ್‌ ಮಾರಾಟ ಅಥವಾ ಇನ್ನಾವುದೂ ಪ್ರಾಯೋಜನೆಯಿಂದ ಬಂದ ಹಣವನ್ನು ಇಂಥ ಸಮಾಜ ಸೇವಾ ಕಾರ್ಯಗಳಿಗೆ ನೀಡಿದ್ದಾರೆ.ಸಂಕಷ್ಟದಲ್ಲಿರುವವರಿಗೆ ನೆರವಾಗಲು ಅನೇಕ ಸಂಗೀತ ಕಾರ್ಯಕ್ರಮಗಳನ್ನು ನಡೆಸಿಕೊಟ್ಟಿದ್ದಾರೆ. ಮೈಸೂರಿನಲ್ಲಿ ಬಡರೋಗಿಗಳ ಸಹಾಯಾರ್ಥ ಸ್ವಾಮಿ ವಿವೇಕಾನಂದ ಯೂತ್‌ ಮೂವ್‌ಮೆಂಟ್‌ ಆಯೋಜಿಸಿದ್ದ‘ಸ್ವರಾನುಭೂತಿ–2018‘ ಕಾರ್ಯಕ್ರಮದ ಮೂಲಕ ಬಾಲು ಸರ್ ಹಣ ಸಂಗ್ರಹಿಸಿಕೊಟ್ಟಿದ್ದಾರೆ. ಅಷ್ಟೇ ಅಲ್ಲ, ಬೆಂಗಳೂರಿನ ಲಿಟ್ಲ್‌ ಸಿಸ್ಟರ್ಸ್‌, ಗಾಂಧೀಜಿ ರೀ ಹ್ಯಾಬಿಲಿಟೇಷನ್ ಸೆಂಟರ್, ಕಲೈಸೆಲ್ವಿ ಕರುಣಾಲಯ ವೆಲ್‌ಫೇರ್‌ ಸೊಸೈಟಿ, ಚಂಗಲಪಟ್ಟುವಿನ ಜೀವನ್ ಜ್ಞಾನೋದಯ ಚಾರಿಟೆಬಲ್ ಟ್ರಸ್ಟ್‌ ಸೇರಿದಂತೆ ಹಲವು ಸೇವಾ ಸಂಸ್ಥೆಗಳಿಗೆ ನೆರವಾಗಿದ್ದಾರೆ.

‘ದುರ್ಬಲರು, ದೀನದಲಿತರ ಜೀವನವನ್ನು ಉತ್ತಮವಾಗಿಸಲು ಪ್ರಯತ್ನಿಸಬೇಕು. ಅಂಥ ಪ್ರಯತ್ನಗಳು ಎಷ್ಟೇ ಚಿಕ್ಕವಾಗಿದ್ದರೂ, ಸಮಾಜದ ಸುಧಾರಣೆಗೆ ಕಾರಣವಾಗುತ್ತವೆ‘ ಎಂಬ ತತ್ವದ ಮೇಲೆ ಬಾಲು ಸರ್ ನಂಬಿಕೆ ಇಟ್ಟವರು. ಅವರನ್ನು ಪ್ರೀತಿಸುವ, ಅವರ ತತ್ವ ಸಿದ್ಧಾಂತಗಳನ್ನು ಗೌರವಿಸುವ ನೂರಾರು ಕಟ್ಟಾ ಅಭಿಮಾನಿಗಳು ಸೇರಿ 2006ರಲ್ಲಿ ‘ಎಸ್‌ಪಿಬಿ ಚಾರಿಟಬಲ್ ಫೌಂಡೇಷನ್‘ ಆರಂಭಿಸಿದ್ದರು. ನಂತರದಲ್ಲಿ ಅದು ‘ಎಸ್‌ಪಿಬಿ ಫ್ಯಾನ್ಸ್ ಚಾರಿಟಬಲ್ ಫೌಂಡೇಷನ್‌‘ ಆಗಿದೆ. ಈ ಪ್ರತಿಷ್ಠಾನ ವರ್ಷಪೂರ್ತಿ ಕರ್ನಾಟಕ, ತಮಿಳುನಾಡು, ಮಹಾರಾಷ್ಟ್ರ ಮತ್ತು ಆಂಧ್ರಪ್ರದೇಶದಲ್ಲಿರುವ ಸಮಾಜದ ದುರ್ಬಲ ವರ್ಗ, ಬಡವರು, ನಿರ್ಗತಿಕರು, ಅನಾಥರಿಗೆ ನೆರವು ನೀಡುವ ಸಂಸ್ಥೆಗಳಿಗೆ ಸಹಾಯ ಮಾಡುತ್ತಿದೆ.

ಕೊರೊನಾ ಸಂಕಷ್ಟದಲ್ಲಿ ನೆರವು

ಇದೇ ಏಪ್ರಿಲ್ – ಮೇ ತಿಂಗಳಲ್ಲಿ ಕೊರೊನಾ ಸಾಂಕ್ರಾಮಿಕ ರೋಗದ ಅವಧಿಯಲ್ಲಿ ಭಾರತೀಯ ಗಾಯಕರ ಹಕ್ಕುಗಳ ಸಂಘ–ಇಸ್ರಾ ಆಯೋಜಿಸಿದ್ದ ‘ಕೋವಿಡ್ –19 ಯೋಧರಿಗಾಗಿ 100 ಗಾಯಕರಿಂದ ಗೀತನಮನ‘ಕ್ಕೆ ಬಾಲು ಸರ್ ಧ್ವನಿಯಾಗಿದ್ದರು. ತಮಗೆ ಕೊರೊನಾ ಸೋಂಕು ತಗಲುವ ತಿಂಗಳ ಮುಂಚೆಯಷ್ಟೇ, ಕೊರೊನಾ ಸೋಂಕಿನಿಂದ ಬಳುತ್ತಿದ್ದ ಸಾಮಾನ್ಯ ಜನರಿಗೆ ನೆರವಾಗುವುದ ಕ್ಕಾಗಿ ತಮ್ಮ ಅಭಿಮಾನಿ ಬಳಗದಿಂದ ಫೇಸ್‌ಬುಕ್‌ ಮೂಲಕ ಒಂದಷ್ಟು ಹಣ ಸಂಗ್ರಹಿಸಿ ನೀಡಿದ್ದರು.ಆದರೆ, ಇಂಥ ಸೇವಾ ಕಾರ್ಯವನ್ನು ಅವರು ಎಲ್ಲೂ ಪ್ರಚಾರಕ್ಕೆ ಬಳಸಿಕೊಂಡಿರಲಿಲ್ಲ.

‘ಎಡಗೈನಲ್ಲಿ ಮಾಡಿದ್ದ ಸೇವೆ ಬಲಗೈಗೆ ತಿಳಿಯಬಾರದು‘ ಎನ್ನುವ ಮಾತಿದೆ. ಹಾಗೆಯೇ ಬಾಲು ಸರ್, ತಮ್ಮ ಗೀತ ಗಾಯನದ ಸಮಾಜ ಸೇವೆಯನ್ನೂ ಪ್ರಚಾರಕ್ಕೆ ಎಂದೂ ಬಳಸಿಕೊಂಡಿಲ್ಲ. ಅದಕ್ಕೆ ಹೇಳುವುದು ‘ತುಂಬಿದ ಕೊಡ ಎಂದೂ ತುಳುಕುವುದಿಲ್ಲ‘ ಎಂದು...!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT