ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರಾಮೀಣರ ‘ಲಸಿಕೆ ಸೇವೆ'ಗೆ ಸೋನು ಸೂದ್‌ ‘ಕೋವರ್ಗ್‌‘ ಮಾರ್ಗ !

ಸ್ಪೈಸ್ ಮನಿ ಸಂಸ್ಥೆಯ ನೆರವಿನೊಂದಿಗೆ, ‘ಸ್ವಯಂ ಸೇವಾ ಕಾರ್ಯಕ್ರಮ‘ ಆರಂಭ
Last Updated 28 ಜೂನ್ 2021, 6:43 IST
ಅಕ್ಷರ ಗಾತ್ರ

ಮುಂಬೈ: ಭಾರತದ ಗ್ರಾಮೀಣ ಭಾಗದ ಜನರಿಗೆ ಕೋವಿಡ್‌ ಲಸಿಕೆ ನೋಂದಣಿಗೆ ನೆರವಾಗುವ ಉದ್ದೇಶದೊಂದಿಗೆ ನಟ ಮತ್ತು ಸಾಮಾಜಿಕ ಕಾರ್ಯಕರ್ತ ಸೋನು ಸೂದ್ ಅವರು ‘ಕೋವರ್ಗ್‌’ (COVERG) ಎಂಬ ಬೃಹತ್‌ ಸ್ವಯಂ ಸೇವಾ ಕಾರ್ಯಕ್ರಮವೊಂದನ್ನು ಆರಂಭಿಸಿದ್ದಾರೆ.

ಗ್ರಾಮೀಣ ಪ್ರದೇಶಗಳಲ್ಲಿ ಡಿಜಿಟಲ್, ಹಣಕಾಸು ಮತ್ತು ಇ-ರಿಟೇಲ್‌ ಸೇವಾ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಕಂಪನಿ (ರೂರಲ್ ಫಿನ್‌ಟೆಕ್‌ ಲೀಡರ್‌) ಸ್ಪೈಸ್‌ ಮನಿ ನೆರವಿನೊಂದಿಗೆ ಈ ಸ್ವಯಂ ಸೇವಾ ಕಾರ್ಯಕ್ರಮವನ್ನು ಆರಂಭಿಸಿದ್ದಾರೆ. ಸ್ಮಾರ್ಟ್‌ ಫೋನ್‌ ಇದ್ದು, 4ಜಿ ಇಂಟರ್ನೆಟ್‌ ಸೌಲಭ್ಯವಿರುವ ಆಸಕ್ತರು www.covreg.in ಜಾಲತಾಣದಲ್ಲಿ ಹೆಸರು ನೋಂದಾಯಿಸಿಕೊಳ್ಳುವ ಮೂಲಕ ಈ ಕಾರ್ಯಕ್ರಮದ ಸ್ವಯಂ ಸೇವಕರಾಗಬಹುದು.

ದೇಶದದ ಗ್ರಾಮೀಣ ಭಾಗದಲ್ಲಿರುವ 95 ಕೋಟಿ ಜನರಿಗೆ ಲಸಿಕೆ ಪಡೆಯುವುದಕ್ಕೆ ನೆರವಾಗಲು, ಸ್ಪೈಸ್ ಮನಿ ಕಂಪನಿಯ ತಾಂತ್ರಿಕ ಪರಿಣತಿಯೊಂದಿಗೆ ಮೊಬೈಲ್ ಅಪ್ಲಿಕೇಷನ್‌ ಅಭಿವೃದ್ಧಿಪಡಿಸಲಾಗಿದೆ. ಜಾಲತಾಣದಲ್ಲಿ ಸ್ವಯಂ ಸೇವಕರು ಹೆಸರು ನೋಂದಾಯಿಸಿಕೊಂಡ ನಂತರ ಅವರಿಗೆ, ಈ ಮೊಬೈಲ್‌ ಅಪ್ಲಿಕೇಷನ್‌ ಒದಗಿಸಲಾಗುತ್ತದೆ. ಇದನ್ನು ಬಳಸಿಕೊಂಡು, ಗ್ರಾಮೀಣ ಜನರಿಗೆ ಲಸಿಕೆ ಪಡೆಯಲು ಅವರು ನೆರವಾಗಬಹುದು.

ಪ್ರಸ್ತುತ, ಸ್ಪೈಸ್ ಮನಿ ಕಂಪನಿ, ತನ್ನ ‘ಅಧಿಕಾರಿ ಅಪ್ಲಿಕೇಷನ್‘ ಮತ್ತು ‘ವೆಬ್‌ಪೋರ್ಟ್‌ಲ್‌‘ ಮೂಲಕ ಗ್ರಾಮೀಣ ಜನರು ಕೋವಿಡ್‌ ಲಸಿಕೆ ಪಡೆಯಲು ಕೋವಿನ್‌ ಡಿಜಿಟಲ್‌ ವೇದಿಕೆಗೆ ಮರು ನಿರ್ದೇಶನ ನೀಡುತ್ತದೆ, ಈ ಅಪ್ಲಿಕೇಷನ್‌ನಲ್ಲಿ ಈಗಾಗಲೇ 2 ಲಕ್ಷಕ್ಕೂ ಹೆಚ್ಚು ಗ್ರಾಮೀಣ ಜನರು ಹೆಸರು ನೋಂದಾಯಿಸಿಕೊಂಡಿದ್ದು ಇವರಗೆ ನೆರವು ನೀಡಲಾಗುತ್ತಿದೆ.

‘ಕೋವಿನ್‌ – ಅಪ್ಲಿಕೇಷನ್‌ ಸರ್ವೀಸ್ ಪ್ರೊವೈಡರ್‌(ಎಎಸ್‌ಪಿ)‘ ಅಡಿಯಲ್ಲಿ, ಕಾರ್ಯನಿರ್ವಹಿಸಲು ‘ಕೋವರ್ಗ್‌– ಸ್ವಯಂ ಸೇವಾ ಕಾರ್ಯಕ್ರಮ‘ಕ್ಕೆ ಕೇಂದ್ರ ಸರ್ಕಾರದ ಆರೋಗ್ಯ ಸಚಿವಾಲಯ ಅನುಮೋದನೆ ನೀಡಿದೆ.

ದೇಶದ ಗ್ರಾಮೀಣ ಜನರಲ್ಲಿ ಅನೇಕರಿಗೆ ಡಿಜಿಟಲ್‌ ವೇದಿಕೆ ಮೂಲಕ ಸ್ವಯಂ ಹೆಸರು ನೋಂದಾಯಿಸಿಕೊಂಡು, ಲಸಿಕೆ ಪಡೆಯಲು ಸಾಧ್ಯವಾಗುತ್ತಿಲ್ಲ. ‘ಕೋವರ್ಗ್‌‘ ಕಾರ್ಯಕ್ರಮ, ಗ್ರಾಮೀಣ ಪ್ರದೇಶದ ಲ್ಲಿರುವ ಡಿಜಿಟಲ್ ಕೊರತೆ ಹಾಗೂ ಮೂಲಸೌಲಭ್ಯಗಳಿಂದ ಉಂಟಾಗುತ್ತಿರುವ ಇಂಥ ಸವಾಲುಗಳನ್ನು ಎದುರಿಸಲು ಗ್ರಾಮೀಣ ಜನರಿಗೆ ನೆರವಾಗಿದೆ.

ಕೋವರ್ಗ್‌ ಕಾರ್ಯಕ್ರಮದ ಸ್ವಯಂ ಸೇವಕರು, ಗ್ರಾಮೀಣರಿಗೆ ಲಸಿಕೆ ಪಡೆಯಲು ನೋಂದಣಿಗೆ ನೆರವಾಗುವ ಜತೆಗೆ, ಲಸಿಕೆ ಕುರಿತು ಜನರಿಗೆ ಅರಿವು ಮೂಡಿಸುತ್ತಾ, ಲಸಿಕೆ ಬಗ್ಗೆ ಅವರಲ್ಲಿರುವ ತಪ್ಪು ಕಲ್ಪನೆ ಹಾಗೂ ಹಿಂಜರಿಕೆಯನ್ನು ನಿವಾರಿಸುತ್ತಾರೆ. ಇದರ ಜತೆಗೆ, ಲಸಿಕೆ ಪಡೆಯುವುದಕ್ಕೆ ಬೇಕಾಗುವ ಗುರುತಿನ ಚೀಟಿ (ಐಡಿ ಪ್ರೂಫ್) ಕೊರತೆಯಂತಹ ಸಮಸ್ಯೆಗಳನ್ನು ಪರಿಹರಿಸಲು ಕೋವರ್ಗ್‌ ಸ್ವಯಂಸೇವಕರಿಗೆ ತರಬೇತಿ ನೀಡಲಾಗುತ್ತಿದೆ. ಸ್ವಯಂ ಸೇವಕರು ಆನ್‌ಲೈನ್‌ನಲ್ಲಿ ಪ್ಯಾನ್‌ ಕಾರ್ಡ್‌ಗೆ ಅರ್ಜಿ ಸಲ್ಲಿಸಲು ಫಲಾನುಭವಿಗಳಿಗೆ ಸಹಾಯ ಮಾಡುತ್ತಾರೆ.

ಸ್ವಯಂ ಸೇವಕರು ಕೋವಿಡ್ ಲಸಿಕೆಯ ಎರಡೂ ಡೋಸ್‌ಗಳಿಗೂ ದಿನಾಂಕ ನೋಂದಣಿ ಮಾಡಿಸಿ, ಒಂದು ಡೋಸ್ ಪಡೆದ ನಂತರ, ಎರಡನೇ ಡೋಸ್‌ ಪಡೆಯಲು ಅವರಿಗೆ ನೆರವಾಗುತ್ತಾರೆ. ಅಷ್ಟೇ ಅಲ್ಲ, ಹೆಸರು ನೋಂದಾಯಿಸಿ ಕೊಂಡವರು, ನಿಗದಿತ ದಿನಾಂಕದೊಂದು ಲಸಿಕಾ ಕೇಂದ್ರಕ್ಕೆ ಹೋಗಿ, ಲಸಿಕೆ ಪಡೆದಿರುವುದನ್ನು ಖಚಿತಪಡಿಸಿಕೊಳ್ಳುತ್ತಾರೆ. ಎರಡನೇ ಡೋಸ್ ಪಡೆದ ಮೇಲೆ ಪ್ರಮಾಣ ಪತ್ರವನ್ನೂ ಸಂಬಂಧಿಸಿದವರಿಗೆ ತಲುಪಿಸುವ ಕೆಲಸ ಮಾಡುತ್ತಾರೆ.

‘ಕೋವಿಡ್ 19 ವಿರುದ್ಧ ಗೆಲುವು ಸಾಧಿಸಲು ನಮಗಿರುವ ಏಕೈಕ ದಾರಿ ಎಂದರೆ ಅದು ಲಸಿಕೆ ಹಾಕಿಸಿಕೊಳ್ಳುವುದು. ದೇಶದಲ್ಲಿ ಗ್ರಾಮೀಣ ಭಾಗದ ಜನರು, ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಟ ನಡೆಸುವ ಜತೆಗೆ, ಲಸಿಕೆ ಪಡೆಯಲು ನೋಂದಣಿ ಮಾಡಿಕೊಳ್ಳಲು ಪರದಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಗ್ರಾಮೀಣ ಭಾಗದವರು ಎದುರಿಸುತ್ತಿರುವ ಸಮಸ್ಯೆ ಗಳನ್ನು ತಳಮಟ್ಟದಲ್ಲಿ ತಿಂಗಳ ಕಾಲ ಅಧ್ಯಯನ ಮಾಡಿ, ‘ಕೋವರ್ಗ್‌– ಸ್ವಯಂ ಸೇವಾ ಕಾರ್ಯಕ್ರಮ‘ವನ್ನು ರೂಪಿಸಿದ್ದೇವೆ‘ ಎಂದು ಸೋನುಸೂದ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸ್ಪೈಸ್ ಮನಿ ಕಂಪನಿಯ ಸಂಸ್ಥಾಪಕ ದಿಲೀಪ್ ಮೋದಿ, ‘ಲಸಿಕೆ ನೀಡುವ ಮೂಲಕ ಗ್ರಾಮೀಣ ಜನರನ್ನು ಕೊರೊನಾ ವಿರುದ್ಧ ಹೋರಾಡಲು ಅಣಿಗೊಳಿಸಬೇಕಿದೆ. ಈ ಮೂಲಕ ಅವರು ತಮ್ಮ ಜೀವನವನ್ನು ಮರು ನಿರ್ಮಿಸಿಕೊಳ್ಳಲು ನೆರವಾಗಬೇಕಾಗಿದೆ. ಈ ಹಿನ್ನೆಲೆಯಲ್ಲಿ ಗ್ರಾಮೀಣ ಜನರು ಕೋವಿಡ್ ಲಸಿಕೆ ನೋಂದಣಿಗೆ ನೆರವಾಗುವುದಕ್ಕಾಗಿ ಈ ಕಾರ್ಯಕ್ರಮವನ್ನು ರೂಪಿಸಲಾಗಿದೆ‘ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT