ಸೋಮವಾರ, ಜೂನ್ 14, 2021
22 °C

ಎಸ್‌ಪಿಬಿ ಆರೋಗ್ಯದಲ್ಲಿ ಸುಧಾರಣೆ: ಈಗ ವೆಂಟಿಲೇಟರ್‌ ತೆಗೆದು ಚಿಕಿತ್ಸೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಗಾಯಕ ಎಸ್‌.ಪಿ. ಬಾಲಸುಬ್ರಹ್ಮಣ್ಯಂ ಅವರಿಗೆ ಅಳವಡಿಸಿದ್ದ ವೆಂಟಿಲೇಟರ್‌ ಸಾಧನ ತೆಗೆದು ಚಿಕಿತ್ಸೆ ಮುಂದುವರಿಸಿದ್ದು, ಅವರ ಆರೋಗ್ಯದಲ್ಲಿ ಸಾಕಷ್ಟು ಸುಧಾರಣೆ ಕಂಡುಬಂದಿರುವುದಕ್ಕೆ ವೈದ್ಯರು ಸಂತಸ ವ್ಯಕ್ತಪಡಿಸಿದ್ದಾರೆ.

ಕೋವಿಡ್‌–19 ದೃಢಪಟ್ಟ ಹಿನ್ನೆಲೆಯಲ್ಲಿ ಎಸ್‌ಪಿಬಿ ಅವರನ್ನು ಆಗಸ್ಟ್ 5ರಂದು ಚೆನ್ನೈನ ಎಂಜಿಎಂ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕಳೆದ ಆಗಸ್ಟ್‌ 13ರಂದು ಅವರನ್ನು ಐಸಿಯುಗೆ ಸ್ಥಳಾಂತರಿಸಲಾಗಿತ್ತು. ಈಗ ಅವರ ಆರೋಗ್ಯದಲ್ಲಿ ಸುಧಾರಣೆ ಕಂಡುಬಂದಿದೆ ಎಂದು ಅವರ ಸಹೋದರಿ ಎಸ್‌.‍ಪಿ. ಶೈಲಜಾ ವಾಯ್ಸ್‌ ನೋಟ್‌ನಲ್ಲಿ ತಿಳಿಸಿದ್ದಾರೆ.

‘ಪ್ರತಿದಿನವೂ ಅವರ ಆರೋಗ್ಯದಲ್ಲಿ ಸುಧಾರಣೆ ಕಂಡುಬರುತ್ತಿದೆ. ವೈದ್ಯರು ಕೂಡ ಸಂತಸಗೊಂಡಿದ್ದಾರೆ. ವೆಂಟಿಲೇಟರ್‌ ತೆಗೆದಿದ್ದರೂ ಅವರ ಆರೋಗ್ಯದ ಮೇಲೆ ತೀವ್ರ ನಿಗಾವಹಿಸಲಾಗಿದೆ. ಮೂತ್ರ ವಿಸರ್ಜನೆಯಲ್ಲಿ ಯಾವುದೇ ತೊಂದರೆ ಕಾಣಿಸಿಕೊಂಡಿಲ್ಲ. ಇಡೀ ವಿಶ್ವವೇ ಎಸ್‌ಪಿಬಿ ಅವರು ಚೇತರಿಸಿಕೊಂಡು ಮನೆಗೆ ಮರಳುವಂತೆ ಪ್ರಾರ್ಥಿಸುತ್ತಿದೆ. ಈ ಪ್ರಾರ್ಥನೆ ಫಲ ನೀಡಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಎಸ್‌ಪಿಬಿ ಆರೋಗ್ಯದಲ್ಲಿ ತೀವ್ರ ಏರುಪೇರು ಕಾಣಿಸಿಕೊಂಡಿದ್ದ ಪರಿಣಾಮ ಅವರನ್ನು ಐಸಿಯುಗೆ ದಾಖಲಿಸಲಾಗಿತ್ತು. ಅವರು ಶೀಘ್ರ ಗುಣಗುಖರಾಗಲೆಂದು ನಟರಾದ ರಜನಿಕಾಂತ್‌, ಕಮಲಹಾಸನ್‌, ಧನುಷ್‌, ಮಹೇಶ್‌ ಬಾಬು, ಸಂಗೀತ ನಿರ್ದೇಶಕ ಇಳೆಯ ರಾಜ ಸೇರಿದಂತೆ ಹಲವರು ಸಾಮಾಜಿಕ ಜಾಲತಾಣದಲ್ಲಿ ಪ್ರಾರ್ಥಿಸಿದ್ದರು.

ನಿನ್ನೆ ವಿಡಿಯೊ ಬಿಡುಗಡೆ ಮಾಡಿದ್ದ ರಜನಿಕಾಂತ್‌, ‘ಐವತ್ತು ವರ್ಷಗಳ ಕಾಲ ಎಸ್‌ಪಿಬಿ ಹಲವು ಭಾಷೆಯ ಸಿನಿಮಾಗಳಲ್ಲಿ ಹಾಡಿದ್ದಾರೆ. ತಮ್ಮ ಧ್ವನಿಯ ಮೂಲಕ ಕೇಳುಗರನ್ನು ಮಂತ್ರಮುಗ್ಧಗೊಳಿಸಿದ್ದಾರೆ. ಅವರು ಚೇತರಿಕೆಯ ಹಾದಿಯಲ್ಲಿರುವುದು ನನಗೆ ಖುಷಿ ತಂದಿದೆ. ಅವರು ಶೀಘ್ರ ಗುಣಮುಖರಾಗಲೆಂದು ನಾನು ದೇವರಲ್ಲಿ ಪ್ರಾರ್ಥಿಸುತ್ತೇನೆ’ ಎಂದು ತಿಳಿಸಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು