ಬುಧವಾರ, ಜೂನ್ 16, 2021
23 °C

ಅಪ್ಪನ ಆರೋಗ್ಯ ಸ್ಥಿರವಾಗಿದೆ: ಎಸ್‌ಪಿಬಿ ಪುತ್ರ ಚರಣ್ ವಿಡಿಯೊ ಸಂದೇಶ ‌

ಏಜೆನ್ಸೀಸ್ Updated:

ಅಕ್ಷರ ಗಾತ್ರ : | |

Prajavani

‘ಅಪ್ಪನಿಗೆ ಇನ್ನೂ ಜೀವರಕ್ಷಕ ಸಾಧನ ಅಳವಡಿಸಲಾಗಿದೆ. ಕಳೆದ ಕೆಲವು ದಿನಗಳಿಗೆ ಹೋಲಿಕೆ ಮಾಡಿದರೆ ಅವರ ಉಸಿರಾಟದಲ್ಲಿ ಸಾಕಷ್ಟು ಸುಧಾರಣೆಯಾಗಿದೆ’ ಎಂದು ಖ್ಯಾತ ಗಾಯಕ ಎಸ್‌.ಪಿ. ಬಾಲಸುಬ್ರಹ್ಮಣ್ಯಂ ಅವರ ಪುತ್ರ ಎಸ್.‍ಪಿ. ಚರಣ್ ತಿಳಿಸಿದ್ದಾರೆ.

ಕಳೆದ ಆಗಸ್ಟ್‌ 5ರಂದು ಎಸ್‌ಪಿಬಿ ಅವರಿಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿದ್ದರಿಂದ ಅವರನ್ನು ಚೆನ್ನೈನ ಎಂಜಿಎಂ ಹೆಲ್ತ್‌ಕೇರ್‌ಗೆ ದಾಖಲಿಸಲಾಗಿತ್ತು. ಆಗಸ್ಟ್‌ 13ರಂದು ಅವರ ಆರೋಗ್ಯದಲ್ಲಿ ತೀವ್ರ ಏರು‍ಪೇರು ಕಾಣಿಸಿಕೊಂಡಿತ್ತು. ಹಾಗಾಗಿ, ಅವರನ್ನು ಐಸಿಯುಗೆ ಸ್ಥಳಾಂತರಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಸೋಮವಾರ ಮಧ್ಯಾಹ್ನ ಇನ್‌ಸ್ಟಾಗ್ರಾಂನಲ್ಲಿ ವಿಡಿಯೊವೊಂದನ್ನು ಪೋಸ್ಟ್ ಮಾಡಿದ ಎಸ್.‍ಪಿ. ಚರಣ್, ಅಪ್ಪನ ಆರೋಗ್ಯ ನಿನ್ನೆ ಇದ್ದಂತೆಯೇ ಇದೆ. ಅಂದರೆ  ಸ್ಥಿರವಾಗಿದೆ. ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂದು ವೈದ್ಯರು ಹೇಳಿದ್ದರೂ ಆರೋಗ್ಯ ಸ್ಥಿರವಾಗಿದೆ.  ಯಾವುದೇ ಸಮಸ್ಯೆಗಳಿಲ್ಲ, ಇದು ಒಳ್ಳೆಯ ಲಕ್ಷಣ ಅಂತಾರೆ ವೈದ್ಯರು. ನಿಮ್ಮ ಪ್ರಾರ್ಥನೆ, ಹಾರೈಕೆ, ಕಾಳಜಿ ಮತ್ತು ಪ್ರೀತಿಗೆ ಮತ್ತೊಮ್ಮೆ ಧನ್ಯವಾದಗಳು ಎಂದಿದ್ದಾರೆ.

 
 
 

 
 
 
 
 
 
 
 
 

#Spb heathupdate 17/8/2020

A post shared by S. P. Charan/Producer/Director (@spbcharan) on

‘ಇಲ್ಲಿಯವರೆಗೂ ಅಪ್ಪ ಆಸ್ಪತ್ರೆಯ ಮೂರನೇ ಮಹಡಿಯಲ್ಲಿದ್ದ ಐಸಿಯುನಲ್ಲಿದ್ದರು. ಈಗ ಅವರನ್ನು ಆರನೇ ಮಹಡಿಯಲ್ಲಿರುವ ವಿಶೇಷ ಐಸಿಯುಗೆ ಸ್ಥಳಾಂತರಿಸಲಾಗಿದೆ. ಇದಕ್ಕೆ ಸಾಕಷ್ಟು ಸಮಯ ಹಿಡಿಯಿತು. ಅವರ ಆರೋಗ್ಯದಲ್ಲಿ ಮೊದಲಿಗಿಂತಲೂ ಈಗ ಸಾಕಷ್ಟು ಸುಧಾರಣೆ ಕಂಡುಬಂದಿದೆ. ವೈದ್ಯರ ಮಾತುಗಳಿಗೆ ಹೆಬ್ಬೆರಳು ತೋರುವ ಮೂಲಕ ಸ್ಪಂದಿಸುತ್ತಿದ್ದಾರೆ’ ಎಂದು ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ವಿಡಿಯೊದಲ್ಲಿ ತಿಳಿಸಿದ್ದಾರೆ.

‘ಅಪ್ಪನ ಆರೋಗ್ಯದಲ್ಲಿ ಸುಧಾರಣೆಯಾಗಿರುವುದು ವೈದ್ಯರ ಗಮನಕ್ಕೂ ಬಂದಿದೆ. ಅವರ ಚಿಕಿತ್ಸೆಗಾಗಿ ವೈದ್ಯಕೀಯ ತಂಡ ಸಾಕಷ್ಟು ಶ್ರಮಿಸುತ್ತಿದೆ. ಒಂದೆರಡು ದಿನಗಳಲ್ಲಿ ಅವರು ಚೇತರಿಸಿಕೊಳ್ಳಲು ಸಾಧ್ಯವಿಲ್ಲ. ಇನ್ನೊಂದು ವಾರದಲ್ಲಿಯೇ ಚೇತರಿಸಿಕೊಳ್ಳುತ್ತಾರೆ ಎಂದು ಹೇಳಲೂ ಆಗುವುದಿಲ್ಲ. ಇದಕ್ಕೆ ದೀರ್ಘ ಸಮಯ ಹಿಡಿಯಲಿದೆ. ಅವರು ಜನರನ್ನು ಗುರುತಿಸುತ್ತಿದ್ದಾರೆ. ಆದರೆ, ಮಾತನಾಡಲು ಆಗುತ್ತಿಲ್ಲ. ಶೀಘ್ರವೇ ಅವರ ಆರೋಗ್ಯ ಸಹಜ ಸ್ಥಿತಿಗೆ ಮರಳಲಿದೆ ಎಂಬ ವಿಶ್ವಾಸವಿದೆ. ಅಪ್ಪನ ಚೇತರಿಕೆಗಾಗಿ ನೀವೆಲ್ಲರೂ ಪಾರ್ಥಿಸುತ್ತಿರುವ ರೀತಿ ಹಾಗೂ ನನ್ನ ಕುಟುಂಬದ ಮೇಲೆ ತೋರುತ್ತಿರುವ ಪ್ರೀತಿಗೆ ನಾನು ಆಭಾರಿಯಾಗಿದ್ದೇನೆ’ ಎಂದು ತಿಳಿಸಿದ್ದಾರೆ.

ಎಸ್‌ಪಿಬಿ ಪತ್ನಿ ಸಾವಿತ್ರಿ ಚೇತರಿಕೆ

ಎಸ್‌ಪಿಬಿ ಅವರ ಪತ್ನಿ ಸಾವಿತ್ರಿ ಅವರಿಗೂ ಕೋವಿಡ್‌–19 ಸೋಂಕು ಇರುವ ಬಗ್ಗೆ ಪ್ರತಿಕ್ರಿಯಿಸಿರುವ ಚರಣ್‌, ‘ಅಮ್ಮನಿಗೂ ಕೋವಿಡ್‌–19 ಸೋಂಕು ತಗುಲಿತ್ತು. ಅವರಿಗೂ ಚಿಕಿತ್ಸೆ ಮುಂದುವರಿಸಲಾಗಿದೆ. ಅವರು ಕೂಡ ಚೇತರಿಸಿಕೊಳ್ಳುತ್ತಿದ್ದಾರೆ. ಮಂಗಳವಾರ ಅಥವಾ ಬುಧವಾರ ಆಸ್ಪತ್ರೆಯಿಂದ ಬಿಡುಗಡೆಯಾಗುವ ನಿರೀಕ್ಷೆಯಿದೆ. ಅಮ್ಮ ಮನೆಗೆ ಬಂದ ಬಳಿಕ ಅಪ್ಪ ಕೂಡ ಸಂಪೂರ್ಣ ಚೇತರಿಸಿಕೊಂಡು ಮನೆಗೆ ಮರಳಲಿದ್ದಾರೆ’ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು