ಮಂಗಳವಾರ, ಮಾರ್ಚ್ 21, 2023
21 °C

‘ನಾಟು ನಾಟು’ಹಾಡಿಗೆ ಹೆಜ್ಜೆ ಹಾಕಿ ಸಂಭ್ರಮ ಆಚರಿಸಿದ ರಾಜಮೌಳಿ–ಕೀರವಾಣಿ

ಪ್ರಜಾವಾಣಿ ವೆಬ್ ಡೆಸ್ಕ್‌ Updated:

ಅಕ್ಷರ ಗಾತ್ರ : | |

ಹೈದರಾಬಾದ್: ತೆಲುಗಿನ ಸೂಪರ್ ಹಿಟ್ ಚಿತ್ರ ‘ಆರ್‌ಆರ್‌ಆರ್‌’ನ ‘ನಾಟು ನಾಟು’ಹಾಡು ಗೋಲ್ಡನ್ ಗ್ಲೋಬ್ ಅಂತರರಾಷ್ಟ್ರೀಯ ಪ್ರಶಸ್ತಿ ಗೆದ್ದಿದ್ದು, ಈ ಸಂಭ್ರಮವನ್ನು ಚಿತ್ರದ ನಿರ್ದೇಶಕ ಎಸ್‌.ಎಸ್. ರಾಜಮೌಳಿ ಮತ್ತು ಸಂಗೀತ ನಿರ್ದೇಶಕ ಎಂ.ಎಂ. ಕೀರವಾಣಿ ವಿಶಿಷ್ಟವಾಗಿ ಆಚರಿಸಿದ್ದಾರೆ.

ಹೌದು, ವಿಶಿಷ್ಟ ಶೈಲಿಯ ಈ ಹಾಡಿನ ನೃತ್ಯವನ್ನು ಅನುಕರಿಸಿರುವ ರಾಜಮೌಳಿ ಮತ್ತು ಕೀರವಾಣಿ, ಪರಸ್ಪರ ಹೆಗಲ ಮೇಲೆ ಕೈಹಾಕಿಕೊಂಡು ನಾಟು ನಾಟು ಹಾಡಿಗೆ ಕುಣಿದು ಸಂಭ್ರಮ ತೋರ್ಪಡಿಸಿದ್ದಾರೆ. ಗೋಲ್ಡನ್ ಗ್ಲೋಬ್ ಟ್ರೋಫಿಯನ್ನು ಹಿಡಿದೇ ಸಂಗೀತ ನಿರ್ದೇಶಕ ಕೀರವಾಣಿ ರಾಜಮಾಳಿ ಜೊತೆ ಹೆಜ್ಜೆ ಹಾಕಿದ್ದಾರೆ. ಗೋಲ್ಡನ್ ಗ್ಲೋಬ್ ಒರಿಜನಲ್ ಸಾಂಗ್ ವಿಭಾಗದಲ್ಲಿ ‘ನಾಟು ನಾಟು’ ಹಾಡಿಗೆ ಪ್ರಶಸ್ತಿ ಲಭಿಸಿದೆ.

ರಾಹುಲ್ ಸಿಪ್ಲಿಗಂಜ್ ಮತ್ತು ಕಾಲ ಭೈರವ ಈ ಹಾಡನ್ನು ಹಾಡಿದ್ದಾರೆ. ಖ್ಯಾತ ನಟರಾದ ಜೂನಿಯರ್ ಎನ್‌ಟಿಆರ್ ಮತ್ತು ರಾಮ್ ಚರಣ್ ಚಿತ್ರದಲ್ಲಿ ಹಾಡಿಗೆ ಹೆಜ್ಜೆ ಹಾಕಿದ್ದು, ಪ್ರೇಮ್ ರಕ್ಷಿತ್ ನೃತ್ಯ ಸಂಯೋಜನೆ ಮಾಡಿದ್ದಾರೆ. ದೇಶ ವಿದೇಶಗಳಲ್ಲೂ ಈ ನೃತ್ಯ ಭಾರಿ ಮೆಚ್ಚುಗೆ ಗಳಿಸಿದೆ.

ಬುಡಕಟ್ಟು ನಾಯಕ ಕೊಮರಂ ಭೀಮನ ಪಾತ್ರದಲ್ಲಿ ಜೂನಿಯರ್ ಎನ್‌ಟಿಆರ್ ಮತ್ತು ಅಲ್ಲೂರಿ ಸೀತಾರಾಮರಾಜು ಪಾತ್ರದಲ್ಲಿ ರಾಮ್ ಚರಣ್ ಕಾಣಿಸಿಕೊಂಡಿದ್ದರು. ಬ್ರಿಟೀಷರ ವಿರುದ್ಧ ಹೋರಾಡುವ ಕಥಾಹಂದರ ಚಿತ್ರದಲ್ಲಿದೆ. ಬಾಲಿವುಡ್ ನಟಿ ಆಲಿಯಾ ಭಟ್ ಸಹ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಬಾಕ್ಸ್ ಆಫೀಸ್‌ನಲ್ಲಿ ₹1200 ಕೋಟಿ ಗುಡ್ಡೆ ಹಾಕುವ ಮೂಲಕ ಚಿತ್ರ ದಾಖಲೆ ಬರೆದಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು