ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂದರ್ಶನ | ‘ವಿರಾಗಿ’ಗಳೊಡನೆ ಲೋಕಾಭಿರಾಮ

Last Updated 12 ಜನವರಿ 2023, 19:30 IST
ಅಕ್ಷರ ಗಾತ್ರ

ವಿರಾಟಪುರ ವಿರಾಗಿ – ಹಾನಗಲ್‌ ಕುಮಾರ ಶಿವಯೋಗಿಯವರ ಜೀವನಗಾಥೆ ಆಧರಿತ ಚಿತ್ರ ಇಂದು ತೆರೆ ಕಂಡಿದೆ. ಆ ನೆಪದಲ್ಲಿ ಅಪರೂಪ‍ದ ಸದಬಿರುಚಿಯ ಚಿತ್ರ ನಿರ್ಮಾಣದ ಬದುಕಿನ ನೆನಪುಗಳನ್ನು ಈ ಚಿತ್ರದ ನಿರ್ದೇಶಕ ಬಿ.ಎಸ್‌. ಲಿಂಗದೇವರು ಮತ್ತು ನಟ ನಿರ್ದೇಶಕ ಸುಚ್ಚೇಂದ್ರಪ್ರಸಾದ್‌ ಸಿನಿಮಾ ಪುರವಣಿ ಜೊತೆ ಹಂಚಿಕೊಂಡಿದ್ದಾರೆ.

***

ಸುಚ್ಚೇಂದ್ರ ಪ್ರಸಾದ್‌ ‘ವಿರಾಗಿ’ಯ ದೀಕ್ಷೆ ತೊಟ್ಟದ್ದು ಹೇಗೆ?
ಈ ಚಿತ್ರಕ್ಕೆ ಆಯ್ಕೆಯಾದ ಮಾನದಂಡ ನನಗೆ ಗೊತ್ತಿಲ್ಲ. ಆದರೆ, ಅಂಥ ಮಹಾನ್‌ ವ್ಯಕ್ತಿಯ ಪಾತ್ರವನ್ನು ನಿರ್ವಹಿಸುವಾಗ ಮನಸ್ಸು, ಹೃದಯ ಬುದ್ಧಿಯನ್ನು ಧಾರೆಯೆರೆಯಬೇಕು ಎಂಬುದು ನಾವು ಕಲಿತ ಪಾಠ. ಸಹಜವಾಗಿ ನನ್ನಲ್ಲಿ ಅಧ್ಯಾತ್ಮದ ಜಾಗೃತಿ ನನ್ನಲ್ಲಿ ಉಂಟಾಗಿದ್ದು ನಿಜ. ಶಿವಯೋಗಿಗಳು ಸಮಾಜಮುಖಿ ಕೆಲಸಗಳನ್ನು ಮಾಡಿದ ಆಧುನಿಕ ಬಸವಣ್ಣ. ಆಯಾ ಕಾಲಕ್ಕೆ ಸಂವಾದಿಯಾಗಿ ನಡೆಸಿದ ಅನೇಕ ಕೆಲಸಗಳನ್ನು ಮಾಡಿದ್ದನ್ನು ನಾನು ಬಲ್ಲೆ. ಹಾಗಾಗಿ ಈ ಪಾತ್ರ ನನಗೆ ತುಂಬಾ ಖುಷಿ ಕೊಟ್ಟಿದೆ. ಸ್ವಾಮೀಜಿಯವರನ್ನು ನಾವು ಕಂಡಿಲ್ಲ. ಆದರೆ, ಕೇಳಿಬಲ್ಲೆವು ಅಷ್ಟೇ. ಅವುಗಳನ್ನು ಮರು ಸೃಷ್ಟಿ ಮಾಡಬೇಕಿತ್ತು. ನಿರ್ದೇಶಕರ ಸರಿಯಾದ ಪೂರ್ವತಯಾರಿ ಮತ್ತು ಅಧ್ಯಯನದಿಂದ ಅಪೂರ್ವ ಕೃತಿಯೊಂದನ್ನು ಸಿದ್ಧಪಡಿಸಲು ಸಾಧ್ಯವಾಯಿತು.

ಚಿತ್ರ ನಿರ್ಮಾಣ ವ್ಯವಸ್ಥೆಯ ಪರಿಭಾಷೆಯನ್ನೇ ಬದಲಿಸಲು ಯತ್ನಿಸಿದಿರಿ?
ಹೌದು ಇದೊಂದು ಅಭಿವ್ಯಕ್ತಿ ಸಂವಹನದ ಪರಿಣಾಮಕಾರಿ ವೇದಿಕೆ ಅಲ್ಲವೇ. ಇದನ್ನೇಕೆ ತೀರಾ ಉದ್ಯಮಕ್ಕೆ ಸೀಮಿತ ಮಾಡಿಬಿಟ್ಟಿದ್ದೇವೆ. ಹಣವೊಂದನ್ನು ಮುಂದಿಟ್ಟುಕೊಂಡು ಇಂಥ ಪ್ರಬಲ ಮಾಧ್ಯಮವನ್ನು ಕಡೆಗಣಿಸಬೇಕೇ ಎಂದು ಯೋಚಿಸಿದೆ. ಈ ಸಂದರ್ಭದಲ್ಲಿ ಸುಮಾರು 45 ರಾಷ್ಟ್ರಗಳ ಸಂಪರ್ಕ ಜಾಲ ಬೆಸೆದು ಸಮಾನ ಆಸಕ್ತರು, ಮನಸ್ಕರು ಸೇರಿಕೊಂಡು ಮೌನ ಮುರಿದು ಮಾತನಾಡಲು ಮುಂದಾದೆವು. ಆ ವೇದಿಕೆಯೇ ‘ವಾಯ್ಸಿಂಗ್‌ ಸೈಲೆನ್ಸ್‌’. ಈ ವೇದಿಕೆ ಮೂಲಕ ಅನೇಕ ಹಿರಿಯ ಕಲಾವಿದರ, ಮಹಾನ್‌ ವ್ಯಕ್ತಿಗಳ ಬಗೆಗೆ ಚಿತ್ರಗಳು, ದಾಖಲೆಗಳನ್ನು ಮಾಡುತ್ತಲೇ ಹೋದೆವು. ಹೀಗೆ ಪ್ರಯತ್ನ ಸಾಗಿದೆ.

ಬದುಕಿನ ಏರಿಳಿತಗಳು ಏನೇನು?
ಏರಿಳಿತಗಳಿಲ್ಲದಿದ್ದರೆ ಅದು ಬದುಕೇ ಅಲ್ಲ. ಒಂದು ಸುಂದರವಾದ ಚಿತ್ರ ಮೂಡಬೇಕಾದರೆ ಅಲ್ಲಲ್ಲಿ ಗೆರೆಗಳು, ಉಬ್ಬು– ತಗ್ಗುಗಳು ಇರಲೇಬೇಕು. ಅದೆಲ್ಲಾ ಇದ್ದೇ ಇದೆ. ಇನ್ನೂ ಇರುತ್ತವೆ.

ವಿರಾಗಿಯಾಗಿ ಹಲವು ಷೇಡ್‌ಗಳಲ್ಲಿ ಕಾಣಿಸಿಕೊಂಡಿದ್ದೀರಿ ಆ ಅನುಭವ ಹೇಗೆ?
ಈ ಪಾತ್ರವನ್ನು ಮಾಡಬೇಕಾದರೆ ಒಂದು ಶೇಡ್‌ನಿಂದ ಇನ್ನೊಂದು ಷೇಡ್‌ಗೆ ಬಹಳ ವಯಸ್ಸಿನ ಅಂತರವೇನೂ ಇರಲಿಲ್ಲ. ಮಧ್ಯವಯಸ್ಸು ಮತ್ತು ವೃದ್ಧಾಪ್ಯ ಅಷ್ಟೆ. ತುಂಬಾ ಸಮಚಿತ್ತದಿಂದ ನಿರ್ವಹಿಸಿದ್ದೇವೆ. ಗುರುಗಳ ಕೆಲಸವನ್ನು ದೃಶ್ಯ ರೂಪದಲ್ಲಿ ದಾಖಲಿಸಬೇಕು ಎಂಬ ಒಂದೇ ಗುರಿ ಇಟ್ಟುಕೊಂಡು ಹೊರಟವರು ನಾವು. ಆ ಚಿತ್ರಣವನ್ನು ಪರಿಣಾಮಕಾರಿಯಾಗಿ ಕಟ್ಟಿಕೊಟ್ಟ ಶ್ರೇಯ ನಿರ್ದೇಶಕರಿಗೆ ಸಲ್ಲಬೇಕು. ನಾವು ಹೇಳುವ ಧ್ವನಿ, ಏರಿಳಿತಗಳನ್ನು ಯಥಾ ಪ್ರಕಾರ ಗಮನಿಸಿ ಅದನ್ನು ಬಳಸಿದ್ದಾರೆ. ಒಂದು ವೇಳೆ ಅವರೇನಾದರೂ ಆಕ್ಷೇಪಿಸಿದ್ದರೆ ನಾವು ಆತಂಕಕ್ಕೊಳಗಾಗುತ್ತಿದ್ದೆವೋ ಏನೋ. ಡಬ್ಬಿಂಗ್‌ ಹಂತದಲ್ಲೂ ಪೂರ್ಣ ಸ್ವಾತಂತ್ರ್ಯ ನಮಗಿತ್ತು. ಹಾಗಾಗಿ ಕಷ್ಟವೆನಿಸಲಿಲ್ಲ.

‘ಏಕಚಕ್ರ’ ಮತ್ತು ‘ಮಾವು ಬೇವು’ ಜೊತೆಗೆ ಸುಚ್ಚೇಂದ್ರ ಪ್ರಸಾದ್‌?
ನನಗೆ ಸಿಕ್ಕ ಸಂಸ್ಕಾರ ಗಂಧದ್ದು. ಗಂಧ ತೇಯುವಲ್ಲಿ ನೊಣ ಬರುವುದಿಲ್ಲ ಅಲ್ಲವೇ. ಹಾಗಾಗಿ ಎಲ್ಲವನ್ನು ಅಧ್ಯಯನ ಮಾಡುತ್ತಾ ಬಂದವನು. ರಂಗಭೂಮಿಯ ಅಸ್ತಿವಾರ ಇಟ್ಟುಕೊಂಡು ಕೆಲಸ ಮಾಡುತ್ತಲೇ ಬಂದವನು. ಬೌದ್ಧಿಕ ಅಧಃಪಾತದ ಸನ್ನಿವೇಶವನ್ನೊಳಗೊಂಡ ‘ಪ್ರಪಾತ’ ಚಿತ್ರ ಮಾಡಿದೆವು. ಮಕ್ಕಳ ಹಕ್ಕು ಉಲ್ಲಂಘನೆಯಾಗುತ್ತಿರುವ ಕುರಿತು ‘ಸಂದಿಗ್ಧ’ ಚಿತ್ರ ಮಾಡಿದೆವು. ಈಗಿನ ಕಾಲಘಟ್ಟಕ್ಕೆ ಹೊಂದಿಕೊಳ್ಳುವಂತೆ ಇಂದೂ ಬಕಾಸುರರು ಇಲ್ಲವೇ? ಅಂಥ ಎಳೆಯನ್ನಿಟ್ಟುಕೊಂಡೇ ಪುರಾಣದ ಹಿನ್ನೆಲೆಯಲ್ಲಿ ‘ಏಕಚಕ್ರ’ ಸಿನಿಮಾ ಮಾಡಿದೆವು. ನಮ್ಮ ಸಾಂಸ್ಕೃತಿಕ ಲೋಕದ ಮೇರು ಶಿಖರಗಳು ಬರೆದ, ಹಾಡಿದ ಗೀತೆಗಳ ಧ್ವನ್ಯರ್ಥವನ್ನು ಇಟ್ಟುಕೊಂಡು ಚಿತ್ರ ‘ಮಾವು ಬೇವು’ ಚಿತ್ರ ಮಾಡಿದೆವು. ಹೀಗೆ ತೃಪ್ತಿಯೇನೋ ಇದೆ. ಸಮಾಧಾನ ಇನ್ನೂ ಆಗಿಲ್ಲ.

***

‘ಸವಾಲು, ಸೂಕ್ಷ್ಮತೆಯ ಕೆಲಸ’
‘ವಿರಾಟಪುರ ವಿರಾಗಿ’ ಬಹಳ ಸೂಕ್ಷ್ಮತೆಯಿಂದ ನಿರ್ಮಿಸಲಾದ ಚಿತ್ರ. ಇಲ್ಲಿ ಧರ್ಮಸೂಕ್ಷ್ಮ, ಸಾಹಿತ್ಯ, ಮಾತುಗಳು ದೃಶ್ಯ ರೂಪಾಂತರ ಮಾಡಿದ್ದು, ಎಲ್ಲವನ್ನೂ ಬಹಳ ಎಚ್ಚರಿಕೆಯಿಂದ ನಿಭಾಯಿಸಿದ್ದೇವೆ. ಎಲ್ಲೂ ಮೂಢನಂಬಿಕೆ, ಪವಾಡಗಳಂತಹ ಅವಾಸ್ತವ ವಿಷಯಗಳು ಬರಬಾರದು ಎಂಬ ಪ್ರಜ್ಞೆಯೂ ಇತ್ತು. 63 ವರ್ಷಗಳ ಬದುಕನ್ನು ಮೂರು ಗಂಟೆಯಲ್ಲಿ ತೋರಿಸುವುದು ಅಷ್ಟು ಸರಳವಲ್ಲ. ಹೀಗಾಗಿ ಪ್ರತಿ ಹಂತದಲ್ಲೂ ತಯಾರಿ ನಡೆಸಿದ್ದೇವೆ. ಜಡೆಯ ಶಾಂತಲಿಂಗ ಸ್ವಾಮಿ ಅವರ ಕನಸು ಇದು. ಇದನ್ನೊಂದು ಸಾಕ್ಷ್ಯಚಿತ್ರವನ್ನಾಗಿ ತರಬೇಕು ಎಂಬ ಚಿಂತನೆಯನ್ನು ಅವರು ಹೊಂದಿದ್ದರು. ಹೀಗೆ ಹಲವು ಸುತ್ತಿನ ಮಾತುಕತೆ, ಸಾಹಿತ್ಯ ಅಧ್ಯಯನ, ಚರ್ಚೆಗಳು ನಡೆದ ನಂತರ ಈ ಅಪೂರ್ವ ವಿಷಯವನ್ನು ಪೂರ್ಣರೂಪದ ಚಿತ್ರವನ್ನಾಗಿ ತರಲು ಸ್ವಾಮೀಜಿ ಮುಂದಾದರು. ಚಿತ್ರಕ್ಕೆ ವಚನಗಳನ್ನೇ ಹಾಡಾಗಿ ಬಳಸಿದ್ದೇವೆ. ಎಷ್ಟೋ ವಿಷಯಗಳನ್ನು ಸಾಂಕೇತಿಕವಾಗಿ ವಚನಗಳ ಹಿನ್ನೆಲೆಯಲ್ಲೇ ತೋರಿಸಿದ್ದೇವೆ. ಮಣಿಕಾಂತ್‌ ಕದ್ರಿ ಅವರ ಸಂಗೀತವೂ ಅಷ್ಟೇ ಚೆನ್ನಾಗಿ ಮೂಡಿಬಂದಿದೆ. ಮೂರು ಗಂಟೆ ಕಾಲ ಪ್ರೇಕ್ಷಕನನ್ನು ಕೂರಿಸುತ್ತದೆ ಎಂಬ ವಿಶ್ವಾಸ ನಮ್ಮದು.

ಸರಳ, ವಾಸ್ತವ ವಿಷಯಗಳನ್ನೇ ಆಧರಿಸಿದ ಚಿತ್ರ ನಿರ್ದೇಶನ ನನ್ನ ಆಸಕ್ತಿ. ಇದಕ್ಕಾಗಿಯೇ ನನಗೆ ಸಮಾನ ಆಸಕ್ತ ನಿರ್ಮಾಪಕರು ಸಿಕ್ಕಿದ್ದಾರೆ. ಆಯಾ ಇತಿಮಿತಿಗಳಲ್ಲಿ ಗಾಢವಾದ ವಿಷಯವೊಂದನ್ನು ಅಧ್ಯಯನಪೂರ್ಣವಾಗಿ ಕಟ್ಟಿಕೊಡಲು ಪ್ರಯತ್ನಿಸುತ್ತೇನೆ. ಹಾಗಾಗಿ ನನ್ನ ಇದುವರೆಗಿನ ಚಿತ್ರಗಳಲ್ಲಿ ನಿರ್ಮಾಪಕರು ಸೋತಿಲ್ಲ. ಬಾಲ್ಯದ ದಿನಗಳಲ್ಲಿ ಅನುಭವಿಸಿದ ಸೋಲಿನ ಪಾಠ ನನ್ನನ್ನು ಈವರೆಗೆ ತಂದು ನಿಲ್ಲಿಸಿದೆ. ನಟನಾಗುವ ಆಸೆ ಇತ್ತು. ಆದರೆ ಅದ್ಯಾಕೋ ನನಗೆ ಸರಿಹೊಂದಲಿಲ್ಲ. ಟಿವಿ ಧಾರಾವಾಹಿ ನಿರ್ಮಾಪಕನಾಗಿದ್ದಾಗ ನಿರ್ದೇಶಕರೊಬ್ಬರು ಕೈಕೊಟ್ಟರು. ಅಂದು ನಟ ಲೋಕನಾಥ್‌ ಅವರು ನಾನೇ ನಿರ್ದೇಶನ ಮಾಡುವಂತೆ ಹುರಿದುಂಬಿಸಿದರು. ಹೀಗೆ ನಿರ್ದೇಶಕನಾದದ್ದೂ ಆಕಸ್ಮಿಕವೇ. ಪಯಣ ಇಲ್ಲಿವರೆಗೆ ಬಂದು ನಿಂತಿದೆ. ಜೊತೆಗೆ ರೋಟರಿಯಲ್ಲಿ ಸಕ್ರಿಯನಾಗಿದ್ದೇನೆ. ಒಂದಿಷ್ಟು ಸಮಾಜ ಸೇವಾ ಕಾರ್ಯಗಳು ಸಾಗಿವೆ.
– ಬಿ.ಎಸ್‌.ಲಿಂಗದೇವರು, ನಿರ್ದೇಶಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT