ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

3ಡಿಯಲ್ಲಿ ಬರಲಿದೆ ‘ವಿಕ್ರಾಂತ್‌ ರೋಣ’

Last Updated 8 ಫೆಬ್ರುವರಿ 2021, 1:45 IST
ಅಕ್ಷರ ಗಾತ್ರ

ಬೆಂಗಳೂರು: ಕಿಚ್ಚ ಸುದೀಪ್‌ ನಟನೆಯ ‘ವಿಕ್ರಾಂತ್‌ ರೋಣ’ ಚಿತ್ರದ ಟೀಸರ್‌ ಹಾಗೂ ಕಟೌಟ್‌ ದುಬೈನಲ್ಲಿರುವ ವಿಶ್ವದ ಅತ್ಯಂತ ಎತ್ತರದ ಕಟ್ಟಡ ಬುರ್ಜ್‌ ಖಲೀಫಾ ಮೇಲೆ ರಾರಾಜಿಸಿ ವಿಶ್ವದ ಗಮನಸೆಳೆದಿತ್ತು. ಇದರ ಬೆನ್ನಲ್ಲೇ ಹಲವು ಭಾಷೆಗಳಲ್ಲಿ ತೆರೆಯ ಮೇಲೆ ಬರಲಿರುವ ಈ ಚಿತ್ರವು 3ಡಿ ರೂಪದಲ್ಲಿ ಇರಲಿದೆ ಎಂದು ಸುದೀಪ್‌ ತಿಳಿಸಿದ್ದಾರೆ.

ಚಂದನವನದಲ್ಲಿ ಸುದೀಪ್‌ 25 ವಸಂತಗಳನ್ನು ಪೂರೈಸಿದ ಅಂಗವಾಗಿ ವಿಕ್ರಾಂತ್‌ ರೋಣ ಚಿತ್ರತಂಡವು ಆಯೋಜಿಸಿದ್ದ ಸಂಭ್ರಮಾಚರಣೆ ಕಾರ್ಯಕ್ರಮದಲ್ಲಿ ಸುದೀಪ್‌ ಈ ಕುರಿತು ಮಾಹಿತಿ ನೀಡಿದರು. ‘ಈ ಸಿನಿಮಾ ಕಥೆ ಅತ್ಯಂತ ಅದ್ಭುತವಾಗಿದೆ. ಇದನ್ನು ಪ್ಯಾನ್‌ ಇಂಡಿಯಾ ಮಾಡಬೇಕು ಎನ್ನುವ ಆಲೋಚನೆ ಮೊದಲಿನಿಂದಲೂ ಇತ್ತು. ನಿರ್ಮಾಪಕ ಮಂಜು ಅವರು ಈ ಚಿತ್ರವನ್ನು 3ಡಿಯಲ್ಲೂ ತರಲು ಸಿದ್ಧತೆ ನಡೆಸಿದ್ದಾರೆ’ ಎಂದರು.

ಧ್ವಜ ಕಂಡು ಮೂಕವಿಸ್ಮಿತನಾದೆ

1996 ಜನವರಿ 31 ಕಂಠೀರವ ಸ್ಟುಡಿಯೋದಿಂದ ನನ್ನ ಸಿನಿಪಯಣ ಆರಂಭವಾಯಿತು. ಕೆಲವೊಮ್ಮೆ 25 ವರ್ಷ ಆಯಿತು ಎಂದು ಹೇಳುವಾಗ ನಿವೃತ್ತಿಯ ಅನುಭವ ಕೊಡುತ್ತಾರೆ. ನನ್ನ ಸಿನಿಮಾ ಪಯಣವನ್ನು ನಾನು ಇನ್ನೂ ಅಧ್ಯಯನ ನಡೆಸುತ್ತಿರುವಾಗಲೇ ಆರಂಭಿಸಿದ್ದೆ. ಬುರ್ಜ್‌ ಖಲೀಫಾದಲ್ಲಿ ನನ್ನ 25 ವರ್ಷದ ಸಿನಿಮಾ ಪಯಣದ ವಿಡಿಯೊ ಬರುತ್ತದೆ ಎಂದು ತಿಳಿದಿರಲಿಲ್ಲ. ವಿಕ್ರಾಂತ್‌ ರೋಣಾದ 180 ಸೆಕೆಂಡ್‌ಗಳ ಸ್ನೀಕ್‌ಪೀಕ್‌ ಎಂದಷ್ಟೇ ನನಗೆ ಮಾಹಿತಿ ನೀಡಿದ್ದರು. ಆದರೆ, ಆ ಕಟ್ಟಡದ ಮೇಲೆ ಕರ್ನಾಟಕದ ಧ್ವಜ ಬಂದಾಗ ಒಂದು ಕ್ಷಣ ನಾನು ಮೂಕವಿಸ್ಮಿತನಾದೆ. ಆ ಅನುಭವವನ್ನು ಪದಗಳಲ್ಲಿ ಹೇಳಲು ಸಾಧ್ಯವಿಲ್ಲ. ಬುರ್ಜ್ ಖಲೀಫಾ ಮೇಲೆ ನನ್ನ ಚಿತ್ರ ಬೃಹತ್‌ ಗಾತ್ರದಲ್ಲಿ ಕಾಣಿಸಿಕೊಂಡಿರಬಹುದು. ಆದರೆ ನನ್ನಕ್ಕಿಂತ ಎತ್ತರವಾದ ವ್ಯಕ್ತಿಗಳು ಈ ಚಿತ್ರದಲ್ಲಿ ಕೆಲಸ ಮಾಡಿದ್ದಾರೆ. ಅನೂಪ್‌ ಜೊತೆ ಕೆಲಸ ಮಾಡಿರುವುದು ನನಗೆ ಬಹಳ ಇಷ್ಟವಾಯಿತು. ಇಂತಹ ಅವಕಾಶ ಮತ್ತಷ್ಟು ಸಿಗಲಿ ಎಂದು ಆಶಿಸುತ್ತೇನೆ.ಲಂಡನ್‌, ಯುರೋಪ್‌ ಕಲಾವಿದರನ್ನು ಬಳಸಿಕೊಂಡು ಸಂಗೀತ ನಿರ್ದೇಶಕ ಅಜನೀಷ್‌ ಅವರು ನೀಡಿರುವ ಬಿಜಿಎಂ ಅತ್ಯದ್ಭುತ. ಉತ್ತಮವಾದ ತಂಡ ಇದು ಎಂದು ಸುದೀಪ್‌ ಶ್ಲಾಘಿಸಿದರು.

ನಿರ್ದೇಶನ ಸದ್ಯಕ್ಕಿಲ್ಲ

ಸಿನಿಮಾ ನಿರ್ದೇಶನ ಮಾಡುವ ಯೋಚನೆ ಇತ್ತು. ಆದರೆ ಒಳ್ಳೆಯ ಕಥೆಗಳನ್ನು ಇಟ್ಟುಕೊಂಡು ಹಿಂದಿ, ತಮಿಳು, ತೆಲುಗು, ಕನ್ನಡದಿಂದ ನಿರ್ದೇಶಕರ ಸಾಲೇ ಬಂದಿದೆ. ನನ್ನನ್ನು ತಲೆಯಲ್ಲಿ ಇಟ್ಟುಕೊಂಡು ಕಥೆ ಬರೆಯುತ್ತಿದ್ದಾರೆ ಎನ್ನುವುದೇ ನನಗೆ ಖುಷಿ. ನಿರ್ದೇಶನ ಮಾಡಬೇಕೆಂದಿದೆ ಆದರೆ ಸದ್ಯಕ್ಕೆ ನಿರ್ದೇಶಕರ ಕನಸಿನ ಭಾಗವಾಗಿ ಇರುತ್ತೇನೆ. 2005ರಲ್ಲಿ ನನ್ನ ಚಿತ್ರಗಳು ವಿಫಲವಾದವು. ಕೆಲವರು ಸಿನಿಮಾಗಳು ಹಿಟ್ ಆದವು. ಇನ್ನೇನು ಮುಗಿದೇ ಹೋಯಿತು ಎನ್ನುವ ಸಂದರ್ಭದಲ್ಲಿ ನಿರ್ದೇಶನಕ್ಕೆ ಇಳಿದಿದ್ದೆ. ಆಟೋಗ್ರಾಫ್‌ ಮೂಲಕ ಒಂದು ಚಾನ್ಸ್‌ ತೆಗೆದುಕೊಂಡೆ. ಆಗ ನನ್ನ ಮುಂದಿನ ಆಯ್ಕೆ ಅದೊಂದೇ ಆಗಿತ್ತು. ಈಗಿನ ನಟ, ನಿರ್ದೇಶಕರು ಹಾಗಲ್ಲ ಎಲ್ಲರೂ ಪ್ರತಿಭಾವಂತರು ಎನ್ನುತ್ತಾರೆ ಸುದೀಪ್‌.

2020 ಬೆಸ್ಟ್‌ ಇಯರ್‌

‘ಈ 25 ವರ್ಷಗಳ ಸಿನಿಪಯಣದಲ್ಲಿ ನನಗೆ 2020 ಬೆಸ್ಟ್‌ ಇಯರ್‌ ಆಗಿತ್ತು. ಮನೆಯಲ್ಲಿ ಕುಳಿತು ಸಮಯ ಕಳೆಯಲು ಅವಕಾಶ ಸಿಕ್ಕಿತು. ಹೀರೋಗಳು, ಕೋಟ್ಯಾಧಿಪತಿಗಳು ಎಲ್ಲರೂ ಸೇರಿಕೊಂಡು ಚಪ್ಪಾಳೆ ಹೊಡೆಯುವ ಹಾಗಾದ್ವಿ, ದೀಪ ಹಚ್ಚುವ ಹಾಗಾದ್ವಿ. 2020 ಹಲವರಿಗೆ ಕೆಟ್ಟ ವರ್ಷವಾಗಿತ್ತು. ಆದರೆ ನಮಗೆ ಎಲ್ಲದರ ಬೆಲೆ ಗೊತ್ತಾಯಿತು. ಈ ಅವಧಿಯಲ್ಲಿ ಕಲಿತ ಅಂಶಗಳನ್ನು ಶೇ 20 ಮಂದಿ ಜೀವನದಲ್ಲಿ ಅಳವಡಿಸಿಕೊಂಡರೆ ವಿಶ್ವವೇ ಬದಲಾಗುತ್ತದೆ. ಈ ಅವಧಿಯಲ್ಲಿ ನನಗೆ ಯೋಚಿಸಲು ಬಹಳಷ್ಟು ಸಮಯ ದೊರೆಯಿತು. ಅಡುಗೆ ಮಾಡಿದೆ, ಕಥೆ ಬರೆದೆ, ಮಿಮಿಕ್ರಿ ಮಾಡಿದೆವು ಎಂದು ನೆನಪಿಸಿಕೊಂಡರು ಸುದೀಪ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT