ಮಂಗಳವಾರ, ಮಾರ್ಚ್ 21, 2023
23 °C
ಈ ರೀತಿ ಪ್ರತಿಕ್ರಿಯೆಯನ್ನು ಸ್ವತಃ ಪುನೀತ್‌ ಒಪ್ಪಿಕೊಳ್ಳುತ್ತಿದ್ದರೇ?

ದರ್ಶನ್‌ ವಿವಾದ, ಆಕ್ರೋಶ ಎಲ್ಲದಕ್ಕೂ ಉತ್ತರವಲ್ಲ: ಸುದೀಪ್‌ ಟ್ವೀಟ್‌

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

ಹೊಸಪೇಟೆಯಲ್ಲಿ ನಟ ದರ್ಶನ್‌ ಮೇಲೆ ಅಪ್ಪು ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿರುವುದಕ್ಕೆ ಪ್ರತಿಕ್ರಿಯಿಸಿರುವ ಕಿಚ್ಚ ಸುದೀಪ್‌, ಆಕ್ರೋಶ ಎಲ್ಲದಕ್ಕೂ ಉತ್ತರವಲ್ಲ ಎಂದಿದ್ದಾರೆ.

ಈ ಬಗ್ಗೆ ಟ್ವೀಟರ್‌ನಲ್ಲಿ ಸುದೀರ್ಘ ಪತ್ರ ಹಂಚಿಕೊಂಡಿರುವ ಸುದೀಪ್‌, ನಮ್ಮ ಭೂಮಿ, ಭಾಷೆ, ಸಂಸ್ಕೃತಿ ಎಲ್ಲವೂ ಪ್ರೀತಿ ಮತ್ತು ಗೌರವವನ್ನು ಕಲಿಸುತ್ತವೆ. ಪ್ರತಿ ಸಮಸ್ಯೆಗೆ ಉತ್ತರವಿದೆ. ಪ್ರತಿ ಸಮಸ್ಯೆಯನ್ನು ಹಲವು ವಿಧದಲ್ಲಿ ಬಗೆಹರಿಸಬಹುದು. ಪ್ರತಿ ವ್ಯಕ್ತಿಯನ್ನು ಗೌರವದಿಂದ ಕಾಣಬೇಕು. ಯಾವುದೇ ವಿವಾದವನ್ನು ಶಾಂತಿಯುತವಾಗಿ ಬಗೆಹರಿಸಿಕೊಳ್ಳಬೇಕು ಎಂದಿದ್ದಾರೆ.

ದರ್ಶನ್‌ ಕ್ರಾಂತಿ ಸಿನಿಮಾ ಪ್ರಚಾರ ಕಾರ್ಯಕ್ರಮದ ವಿಡಿಯೊ ನೋಡಿದೆ. ಅಲ್ಲಿ ನಡೆದ ಘಟನೆ ಮನಸ್ಸಿಗೆ ನೋವುಂಟು ಮಾಡಿದೆ. ಚಿತ್ರದ ಪ್ರಮುಖ ನಟಿ ಸೇರಿದಂತೆ ಇಡೀ ಚಿತ್ರ ತಂಡ ಅಸಹಾಯಕವಾಗಿ ನಿಂತಿತ್ತು. ಸಮರ್ಥಿಸಿಕೊಳ್ಳಲಾಗದ ಅಮಾನವೀಯ ಘಟನೆಯಿದು ಎಂದು ಸುದೀಪ್‌ ಬೇಸರ ತೋಡಿಕೊಂಡಿದ್ದಾರೆ.

ದರ್ಶನ್‌ ಹಾಗೂ ಪುನೀತ್‌ ಅಭಿಮಾನಿಗಳ ನಡುವೆ ಮನಸ್ತಾಪ ಇತ್ತು ಎಂಬುದನ್ನು ಒಪ್ಪಿಕೊಳ್ಳುತ್ತೇನೆ. ಆದರೆ ಈ ರೀತಿ ಪ್ರತಿಕ್ರಿಯೆಯನ್ನು ಸ್ವತಃ ಪುನೀತ್‌ ಒಪ್ಪಿಕೊಳ್ಳುತ್ತಿದ್ದರೇ? ಬೆಂಬಲಿಸುತ್ತಿದ್ದರೇ? ಎಂಬುದನ್ನು ಪ್ರಶ್ನಿಸಿಕೊಳ್ಳಿ. ಬಹುಶಃ ಅವರ ಪ್ರತಿಯೊಬ್ಬ ಅಭಿಮಾನಿ ಇದಕ್ಕೆ ಉತ್ತರವನ್ನು ತಿಳಿದುಕೊಳ್ಳಬೇಕು ಎಂದು ಸುದೀಪ್‌ ಹೇಳಿದ್ದಾರೆ.
 
ದರ್ಶನ್‌ ನಮ್ಮ ಭಾಷೆಗೆ, ನಾಡಿಗೆ ಸಾಕಷ್ಟು ಕಾಣಿಕೆ ನೀಡಿದ್ದಾರೆ. ಅವರಿಗೆ ಈ ರೀತಿ ಅವಮಾನಿಸಿರುವುದು ಸರಿಯಲ್ಲ. ಇದು ನಿಜಕ್ಕೂ ನನಗೆ ನೋವುಂಟು ಮಾಡಿದೆ ಎಂದು ಸುಮಾರು 3 ಪುಟಗಳಷ್ಟು ಸುದೀರ್ಘ ಪತ್ರದಲ್ಲಿ ಸುದೀಪ್‌ ಬೇಸರ ತೋಡಿಕೊಂಡಿದ್ದಾರೆ. ಸುದೀಪ್‌ ಈ ಟ್ವೀಟ್‌ಗೆ ಅಂತರ್ಜಾಲ ಜಗತ್ತಿನಲ್ಲಿ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು