ಮಂಗಳವಾರ, ಮಾರ್ಚ್ 21, 2023
31 °C
ಮಂಡ್ಯ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ

ಗೆಲ್ಲುತ್ತೇನೆ ಎಂಬ ಅತಿಯಾದ ಆತ್ಮವಿಶ್ವಾಸವಿಲ್ಲ: ಸುಮಲತಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ನಾನೇ ಗೆಲ್ಲುತ್ತೇನೆ ಎನ್ನುವ ಅತಿಯಾದ ಆತ್ಮವಿಶ್ವಾಸ ಇಲ್ಲ. ಇಷ್ಟೇ ಮತಗಳ ಅಂತರದಿಂದ ಜಯಿಸುತ್ತೇನೆ ಎಂದು ಹೇಳಲಾರೆ. ಆದರೆ, ನನ್ನ ಪರವಾಗಿ ಪಾಸಿಟಿವ್‌ ಅಲೆಯಿದೆ. ಚುನಾವಣಾ ಪ್ರಚಾರ ಮತ್ತು ಮತದಾನದ ದಿನದಂದು ಆ ಸುಳಿವು ನನಗೆ ಸಿಕ್ಕಿದೆ. ಜನರ ಪ್ರತಿಕ್ರಿಯೆ ನೋಡಿದರೆ ಗೆಲ್ಲುವ ವಿಶ್ವಾಸವಿದೆ’ ಎಂದು ಮಂಡ್ಯ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಷ್‌ ಹೇಳಿದರು.

ನಗರದಲ್ಲಿ ಮಂಗಳವಾರ ನಡೆದ ‘ಡಾಟರ್‌ ಆಫ್‌ ಪಾರ್ವತಮ್ಮ’ ಚಿತ್ರದ ಟ್ರೇಲರ್ ಮತ್ತು ಆಡಿಯೊ ಬಿಡುಗಡೆಯ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

‘ಫಲಿತಾಂಶದ ಬಗ್ಗೆ ನಾವು ಯಾವುದೇ ಸಮೀಕ್ಷೆ ನಡೆಸಿಲ್ಲ. ಚುನಾವಣೋತ್ತರ ಸಮೀಕ್ಷೆಗಳ ಮೇಲೆ ನನಗೆ ನಂಬಿಕೆ ಇಲ್ಲ. ಪ್ರತಿದಿನವೂ ಒಂದೊಂದು ಸಮೀಕ್ಷಾ ವರದಿ ಪ್ರಕಟವಾಗುತ್ತಿದೆ. ಅದರ ಬಗ್ಗೆ ನಾನು ತಲೆಕೆಡಿಸಿಕೊಳ್ಳುವುದಿಲ್ಲ. ಮಂಡ್ಯದ ಮತದಾರರ ಮೇಲೆ ನನಗೆ ಭರವಸೆ ಇದೆ. ಜನರ ಅಭಿಪ್ರಾಯವನ್ನು ಕ್ರೋಡೀಕರಿಸಲಾಗಿದೆ. ಫಲಿತಾಂಶ ನನ್ನ ಪರವಾಗಿಯೇ ಬರುವ ನಂಬಿಕೆಯಿದೆ’ ಎಂದು ಹೇಳಿದರು.

‘ಅಂಬರೀಷ್‌ ಅವರು ಚುನಾವಣಾ ಫಲಿತಾಂಶದ ಬಗ್ಗೆ ತಲೆಕೆಡಿಸಿಕೊಳ್ಳುತ್ತಿರಲಿಲ್ಲ. ಫಲಿತಾಂಶದ ದಿನದಂದು ಅವರು ಕೂಲ್‌ ಆಗಿಯೇ ಇರುತ್ತಿದ್ದರು. ನನಗೆ ಮಾತ್ರ ಒತ್ತಡ ಇರುತ್ತಿತ್ತು. ಈಗ ನನಗೆ ಯಾವುದೇ ಒತ್ತಡ ಇಲ್ಲ. ಕೂಲ್‌ ಆಗಿಯೇ ಇದ್ದೇನೆ’ ಎಂದು ಸ್ಪಷ್ಟಪಡಿಸಿದರು.

‘ಮಂಡ್ಯದಲ್ಲಿ ಜೆಡಿಎಸ್‌ ಮತ್ತು ಕಾಂಗ್ರೆಸ್‌ ಮೈತ್ರಿ ಫಲ ಕೊಟ್ಟಿಲ್ಲ. ಅದರಲ್ಲಿ ರಹಸ್ಯ ಉಳಿದಿಲ್ಲ. ಆ ಪಕ್ಷದ ಕಾರ್ಯಕರ್ತರು ನನಗೆ ನೇರವಾಗಿಯೇ ಬೆಂಬಲ ನೀಡಿದ್ದಾರೆ. ಆ ಪಕ್ಷಗಳ ಮುಖಂಡರ ನಡುವಿನ ವಾಕ್ಸಮರದ ಬಗ್ಗೆ ನಾನು ಪ್ರತಿಕ್ರಿಯಿಸುವುದಿಲ್ಲ. ಪ್ರತಿಯೊಬ್ಬರಿಗೂ ಖಾಸಗಿ ಬದುಕು ಇರುತ್ತದೆ. ಹೋಟೆಲ್‌ನಲ್ಲಿ ನಡೆದ ಹುಟ್ಟುಹಬ್ಬದ ಕಾರ್ಯಕ್ರಮಕ್ಕೆ ನಾನೂ ಹೋಗಿದ್ದೆ. ಅಲ್ಲಿಗೆ ಕಾಂಗ್ರೆಸ್‌ ನಾಯಕರು ಬಂದಿದ್ದರು. ಇದಕ್ಕೆ ಬಣ್ಣ ಹಚ್ಚುವುದು ಸರಿಯಲ್ಲ’ ಎಂದು ಹೇಳಿದರು.

‘ಮಂಡ್ಯದಲ್ಲಿ ನಮ್ಮ ಜಮೀನು ಇದೆ. ಅಲ್ಲಿಯೇ ಮನೆ ಕಟ್ಟುವ ಆಲೋಚನೆಯೂ ಇದೆ. ನಾನು ಸೈದ್ಧಾಂತಿಕ ಹಿನ್ನೆಲೆ ಇಟ್ಟುಕೊಂಡು ರಾಜಕಾರಣ ಮಾಡುವುದಿಲ್ಲ. ಮಂಡ್ಯದ ಅಭಿವೃದ್ಧಿಯೇ ನನ್ನ ಮೊದಲ ಆದ್ಯತೆ’ ಎಂದರು. 

‘ಈ ತಿಂಗಳಿನಲ್ಲಿಯೇ ‘ಅಂತ’ ಚಿತ್ರ ಮತ್ತೆ ಬಿಡುಗಡೆಯಾಗುತ್ತಿದೆ. ‘ಡಾಟರ್‌ ಆಫ್‌ ಪಾರ್ವತಮ್ಮ ಮತ್ತು ಅಭಿಷೇಕ್‌ ನಟನೆಯ ‘ಅಮರ್’ ಚಿತ್ರವೂ ತೆರೆಕಾಣುತ್ತಿದೆ. ಹಾಗಾಗಿ, ಈ ತಿಂಗಳು ನನಗೆ ವಿಶೇಷವಾಗಿದೆ’ ಎಂದು ಹೇಳಿದರು.

‘ಮೇ 23ರ ಫಲಿತಾಂಶದ ಬಳಿಕ ಅಂಬರೀಷ್‌ ಅವರ ಹುಟ್ಟುಹಬ್ಬದ ಆಚರಣೆಗೆ ಬಗ್ಗೆ ಅಂತಿಮ ನಿರ್ಧಾರಕೈಗೊಳ್ಳಲಾಗುವುದು ಎಂದ ಅವರು, ‘ಜೋಡೆತ್ತು’, ‘ಎಲ್ಲಿದ್ದೀಯಪ್ಪಾ...’ ಸಿನಿಮಾ ನಿರ್ಮಾಣ ಮಾಡುವವರಿಗೆ ಒಳ್ಳೆಯದಾಗಲಿ’ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು