ಮಂಗಳವಾರ, ಆಗಸ್ಟ್ 3, 2021
21 °C

ಕಾಳಿಯಾಗಿ ಆರ್ಭಟಿಸುತ್ತಿದ್ದಾರೆ ಸೂಪರ್ ಸ್ಟಾರ್ ‘ರಜನಿಕಾಂತ್’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಈ ಸಂಕ್ರಾಂತಿಗೆ ತೆರೆಕಾಣಲಿರುವ ಪ್ರಮುಖ ಚಿತ್ರಗಳಲ್ಲಿ ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ಪೆಟ್ಟಾ ಕೂಡ ಒಂದು. ಈಗಾಗಲೇ ಚಿತ್ರದ ಟ್ರೈಲರ್‌ ಬಿಡುಗಡೆಯಾಗಿದ್ದು, ರಜನಿಕಾಂತ್ ಅವರ ಆ್ಯಕ್ಷನ್ ಮತ್ತು ಸ್ಟೈಲ್ ಟ್ರೈಲರ್‌ ತುಂಬಾ ಆವರಿಸಿಕೊಂಡಿವೆ. 

ಈಚೆಗೆ ತೆರೆಕಂಡ ಕಬಾಲಿ, ಕಾಲಾ ಚಿತ್ರಗಳಲ್ಲಿ ತಮ್ಮ ವಯಸ್ಸಿಗೆ ಸರಿಹೊಂದುವ ಪಾತ್ರಗಳನ್ನು ಮಾಡಿದ್ದರೆ, ಈ ಚಿತ್ರದಲ್ಲಿ ಅವರ ವೇಷಭೂಷಣ 30 ವರ್ಷದ ಯುವಕನಂತೆ ಇದೆ ಎಂಬ ಕಾಮೆಂಟ್ಸ್‌ ಯೂ ಟ್ಯೂಬ್‌ನಲ್ಲಿ ಹರಿದಾಡುತ್ತಿವೆ.  

ಟ್ರೈಲರ್ ಗಮನಿಸಿದರೆ, ಈ ಚಿತ್ರವೂ ತುಪಾಕಿಗಳ ನಡುವೆ ಸುತ್ತುವ ಗ್ಯಾಂಗ್‌ಸ್ಟರ್ ಕಥೆಯಂತೆ ಭಾಸವಾಗುತ್ತಿದೆ. ಟ್ರೈಲರ್‌ ತುಂಬೆಲ್ಲಾ ರಜಿನಿ ಅವರು ವಿಲನ್‌ಗಳನ್ನು ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಮಾಸ್ ಪ್ರೇಕ್ಷಕರರನ್ನು ರಂಜಿಸುವಂತೆ ಸಂಭಾಷಣೆ ಬರೆಯಲಾಗಿದ್ದು ಗಮನ ಸೆಳೆಯುತ್ತಿವೆ.

ನಟಿ ಸಿಮ್ರನ್‌ ಜೊತೆಗಿನ ಡೈಲಾಗ್ಸ್‌ ರೊಮ್ಯಾನ್ಸ್‌ ಪ್ರತಿಬಿಂಬಿಸಿದರೆ, ತ್ರಿಷಾ ತಮ್ಮ ನಯನಗಳ ಮೂಲಕವೇ ಮಾತನಾಡಿದ್ದಾರೆ. ನಟಿ ಅಕ್ಷ, ರಜಿನಿ ಅವರನ್ನು ‘ಹುಡುಗನಂತೆ ಕಾಣುತ್ತೀರಾ’ ಎಂದು ಹೇಳುವುದು ರಂಜಿಸುತ್ತಿದೆ.

ಕಾಳಿ ಹೆಸರಿನಲ್ಲಿ ರಜಿನಿ ನಟಿಸಿದ್ದು, ಅವರದ್ದು ಹಾಸ್ಟೆಲ್ ವಾರ್ಡ್‌ನ್ ಪಾತ್ರ ಇರಬಹುದು ಎಂಬ ಅನುಮಾನ ಮೂಡುವಂತೆ ಚಿತ್ರತಂಡ ಟ್ರೈಲರ್‌ನಲ್ಲಿ ಸುಳುಹು ನೀಡಿದೆ.

ಖ್ಯಾತ ಬಾಲಿವುಡ್‌ ನಟ ನವಾಜುದ್ದೀನ್‌ ಸಿದ್ದಿಕಿ, ತಮಿಳು ನಟರಾದ ವಿಜಯ್ ಸೇತುಪತಿ, ಶಶಿಕುಮಾರ್‌, ನಟ ಬಾಬಿ ಸಿಂಹ ಚಿತ್ರದ ಪ್ರಮುಖ ತಾರಾಗಣದಲ್ಲಿದ್ದಾರೆ. 

ಕಾರ್ತಿಕ್‌ ಸುಬ್ಬರಾಜು ನಿರ್ದೇಶನದ ಈ ಚಿತ್ರಕ್ಕೆ ಅನಿರುಧ್ ಸಂಗೀತ ನೀಡಿದ್ದಾರೆ. ಖ್ಯಾತ ಸ್ಟಂಟ್ ಮಾಸ್ಟರ್‌ ಪೀಟರ್ ಹೇನ್‌ ಹೋರಾಟ ಸನ್ನಿವೇಶಗಳಲ್ಲಿ ತಮ್ಮ ಛಾಪು ಮೂಡಿಸಿದ್ದಾರೆ. ಸನ್‌ ಪಿಕ್ಚರ್ಸ್ ಸಂಸ್ಥೆ ಹಣ ಸುರಿದಿದೆ.

ಟ್ರೈಲರ್ ಬಿಡುಗಡೆಯಾದ ಒಂದೇ ದಿನದಲ್ಲಿ ಸುಮಾರು 5 ಲಕ್ಷ ಮಂದಿ ವೀಕ್ಷಿಸಿದ್ದರೆ, ಸಮಾರು 3 ಲಕ್ಷ ಮಂದಿ ಲೈಕ್ ಮಾಡಿದ್ದಾರೆ. ಚಿತ್ರ ಜನವರಿ 10ಕ್ಕೆ ತೆರೆಕಾಣಲಿದೆ. ಆದರೆ ಚಿತ್ರದ ತಮಿಳು ಅವತರಣಿಕೆಯ ಟ್ರೈಲರ್ ಮಾತ್ರ ಬಿಡುಗಡೆಯಾಗಿರುವುದರಿಂದ ತೆಲುಗಿನಲ್ಲೂ ಬಿಡುಗಡೆಯಾಗುವ ಬಗ್ಗೆ ಅನುಮಾನಗಳು ಕಾಡುತ್ತಿವೆ.  

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು