ಗುರುವಾರ , ಜುಲೈ 29, 2021
25 °C
ಸುಶಾಂತ್ ರಜಪೂತ್ ಸಿಂಗ್ ಆತ್ಮಹತ್ಯೆ

ಧೋನಿ ಪಾತ್ರಕ್ಕೆ ಜೀವ ತುಂಬಿದವ ಜೀವ ಬಿಟ್ಟಾಗ...

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ಛಿಛ್ಛೊರೆ ‘ – 2019ರಲ್ಲಿ ತೆರೆಕಂಡ ಹಿಂದಿ ಚಲನಚಿತ್ರ. ಈ ಸಿನಿಮಾದ ನಾಯಕ ಅನಿರುದ್ಧ ಪಾಠಕ್. ಈ ನಾಯಕನ ಮಗ ರಾಘವ್‌ಗೆ ‘ಐಐಟಿ‘ಯಲ್ಲಿ ಎಂಜಿನಿಯರಿಂಗ್ ಓದುವ ಕನಸು. ಆದರೆ ಅದು ಈಡೇರದಿದ್ದಾಗ ಖಿನ್ನತೆಗೆ ಜಾರಿ ಆತ್ಮಹತ್ಯೆಗೆ ಮುಂದಾಗುತ್ತಾನೆ. ಐಸಿಯುನಲ್ಲಿದ್ದ ಮಗನಿಗೆ ಧೈರ್ಯ ತುಂಬುವ ಅನಿರುದ್ಧ, ತಮ್ಮ ಕಾಲೇಜು ದಿನಗಳಲ್ಲಿ ‘ಸೋಲು‘ಗಳ ಎದುರಿಸಿದ ಕತೆ ಹೇಳುತ್ತಾನೆ. ತನ್ನ ಬದುಕಿನ ಎಲ್ಲ ‘ಕ್ಷಣ‘ಗಳನ್ನು ಹೇಳುತ್ತ ಮಗನನ್ನು ಉಳಿಸಿಕೊಳ್ಳಲು ಪ್ರಯತ್ನಿಸುತ್ತಾನೆ. ಒಟ್ಟಾರೆ ಯಾವುದೇ ಸಮಸ್ಯೆಗೆ ಆತ್ಮಹತ್ಯೆ ಪರಿಹಾರವಲ್ಲ ಎನ್ನವುದು ಚಿತ್ರದ ಸಾರಾಂಶ.

ಈ ಸಿನಿಮಾದಲ್ಲಿ ತಂದೆ ಅನಿರುದ್ಧನ ಪಾತ್ರಧಾರಿಯೇ ಭಾನುವಾರ ಆತ್ಮಹತ್ಯೆ ಮಾಡಿಕೊಂಡ ಬಾಲಿವುಡ್‌ ನಟ ಸುಶಾಂತ್‌ ಸಿಂಗ್‌ ರಜಪೂತ್‌. ಆ ಸಿನಿಮಾದಲ್ಲಿ ಮಗನನ್ನು ಖಿನ್ನತೆಯಿಂದ ಹೊರಗೆ ಬರುವಂತೆ ಪ್ರಯತ್ನಿಸುವ ‘ಅನ್ನಿ‘ (ಸುಶಾಂತ್‌), ‘ಆತ್ಮಹತ್ಯೆ ಪರಿಹಾರ‘ವಲ್ಲ ಎಂದು ತೆರೆಯ ಮೇಲೆ ಹೇಳಿದ್ದು. ಈಗ ನಿಜ ಜೀವನದಲ್ಲಿ ಅವರೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ‘ಎಂ.ಎಸ್.ಧೋನಿ – ಎ ಅನ್‌ ಟೋಲ್ಡ್‌ ಸ್ಟೋರಿ‘ಯಲ್ಲಿ ಸ್ಪೂರ್ತಿದಾಯಕ ಧೋನಿ ಪಾತ್ರಕ್ಕೆ ಜೀವ ತುಂಬಿದ ಸುಶಾಂತ್, ಇವತ್ತು ತಾನೇ ಜೀವ ಕಳೆದುಕೊಂಡಿದ್ದಾರೆ. 

ಬಾಲಿವುಡ್‌ ನಟ ಸುಶಾಂತ್ ಸಿಂಗ್ ರಜಪೂತ್ (34), 2013–14ರಲ್ಲಿ ಮೊದಲಿಗೆ ಅಭಿಷೇಕ್ ಕಪೂರ್ ಅವರ ‘ಕಾಯ್‌ ಪೂ ಚೇ‘ ಚಿತ್ರದ ಮೂಲಕ ಸಿನಿಮಾ ಕ್ಷೇತ್ರ ಪ್ರವೇಶಿಸಿದ್ದರೂ, ಅವರು ಪ್ಯಾನ್ ಇಂಡಿಯಾಕ್ಕೆ ಪರಿಚಯವಾಗಿದ್ದೇ 2016ರಲ್ಲಿ ಬಿಡುಗಡೆಯಾದ ‘ಎಂ.ಎಸ್‌.ಧೋನಿ– ಎ ಅನ್‌ ಟೋಲ್ಡ್‌ ಸ್ಟೋರಿ‘ ಸಿನಿಮಾದ ಮೂಲಕ. ಇದು ಭಾರತೀಯ ಕ್ರಿಕೆಟ್‌ ತಂಡದ ನಾಯಕನಾಗಿದ್ದ ಮಹೇಂದ್ರ ಸಿಂಗ್ ಧೋನಿ ಜೀವನ ಕತೆ ಆಧಾರಿತ ಚಿತ್ರ. ಈ ಸಿನಿಮಾದಲ್ಲಿ ಧೋನಿ ಪಾತ್ರಕ್ಕೆ ಸುಶಾಂತ್ ಜೀವ ತುಂಬಿದ್ದರು. 
ಚಿತ್ರ ಗೆದ್ದಿತು. ಈ ಸ್ಪುರದ್ರೂಪಿ ಯುವಕ ಸುಶಾಂತ್‌ಗೂ ‘ನೇಮು–ಫೇಮು‘ ಎರಡೂ ಬಂತು. ಈ ಸಿನಿಮಾದ ಅನೇಕ ದೃಶ್ಯದ ತುಣುಕುಗಳು ಈಗಲೂ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗಿವೆ. ಅಷ್ಟರಮಟ್ಟಿಗೆ ಸಿನಿಮಾ ಗೆದ್ದಿತು. ಹೀಗೆ ಆರು ವರ್ಷಗಳ ಸಿನಿ ಪಯಣದಲ್ಲಿ ಸುಶಾಂತ್ 11 ಚಿತ್ರಗಳಲ್ಲಿ ಹೀರೊ ಆಗಿಯೇ ನಟಿಸಿದರು. ಶ್ರದ್ಧಾಕಪೂರ್ ಜೊತೆ ನಟಿಸಿದ ‘ಚಿಚೋರೆ‘ ಚಿತ್ರವೇ ಅವರ ಕೊನೆಯ ಸಿನಿಮಾ.

ಬಿಹಾರದಿಂದ ಬಾಲಿವುಡ್‌ವರೆಗೆ..
ಬಿಹಾರದ ಪೂರ್ನಿಯಾ ಜಿಲ್ಲೆಯ ಸುಶಾಂತ್ ಸಿಂಗ್, ಜನಿಸಿದ್ದು 21 ಜನವರಿ 1986ರಲ್ಲಿ. 2002ರಲ್ಲಿ ಸುಶಾಂತ್ ತಾಯಿ ಮತ್ತು ಅವರ ಸಹೋದರಿ ಮೀತು ಸಿಂಗ್ ಸಾವನ್ನಪ್ಪಿದ್ದರು. ಆ ನಂತರ ಅವರ ಕುಟುಂಬ ಬಿಹಾರ ಬಿಟ್ಟು ದೆಹಲಿಗೆ ಬಂದಿತು. ಪಟ್ನಾದಲ್ಲಿ ಹೈಸ್ಕೂಲ್, ದೆಹಲಿಯಲ್ಲಿ ಕಾಲೇಜು ವಿದ್ಯಾಭ್ಯಾಸ ಪೂರೈಸಿದರು. ಮೆಕಾನಿಕಲ್ ಎಂಜಿನಿಯರಿಂಗ್‌ ಪದವಿಗೆ ಸೇರಿದರಾದರೂ, ನಟನೆ, ಡಾನ್ಸ್‌ನತ್ತ ಒಲವು ಬೆಳೆಸಿಕೊಂಡ ಮೇಲೆ, ವಿದ್ಯಾಭ್ಯಾಸವನ್ನೂ ಅರ್ಧಕ್ಕೆ ಮೊಟಕುಗೊಳಿಸಿದರು. ನಂತರ ಕಿರುತೆರೆ–ಡಾನ್ಸ್ ಶೋ ಮತ್ತು ಬಾಲಿವುಡ್‌ನ ಬೆಳ್ಳಿ ತೆರೆಯ ಮೇಲೆ ಮಿಂಚಲು ಆರಂಭಿಸಿದರು.

ನೃತ್ಯ, ನಟನೆ ಸೇರಿದಂತೆ ಕಲಾಕ್ಷೇತ್ರದ ಹಲವು ಪ್ರಕಾರಗಳಲ್ಲಿ ಪರಿಣತಿ ಪಡೆದಿದ್ದ ಸುಶಾಂತ್, ಧಾರಾವಾಹಿಗಳ ಮೂಲಕವೇ ಖ್ಯಾತಿ ಪಡೆದಿದ್ದರು. ಪ್ರಶಸ್ತಿ ಪುರಸ್ಕೃತ ‘ಪವಿತ್ರ ರಿಸ್ತಾ‘ ಹಿಂದಿ ಧಾರಾವಾಹಿಯಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ಆ ಮೂಲಕವೇ ಕಿರುತೆರೆ ವೀಕ್ಷಕರಲ್ಲಿ ಮನೆ ಮಾತಾಗಿದ್ದರು. ಈ ಖ್ಯಾತಿಯೇ ಅವರನ್ನು ಬಾಲಿವುಡ್‌ ಸಿನಿಮಾ ಅಂಗಳಕ್ಕೆ ಕೈ ಹಿಡಿದು ಕರೆದೊಯ್ದಿತ್ತು.

ಕ್ರಿಕೆಟ್‌ ಮತ್ತು ಸುಶಾಂತ್‌
ಸುಶಾಂತ್ ಅಭಿನಯಿಸಿದ ಮೊದಲಚಿತ್ರ ‘ಕಾಯ್ ಪೊ ಚೆ‘ ನಲ್ಲಿ ಕ್ರಿಕೆಟ್ ಪ್ರಧಾನ ವಿಷಯವಾಗಿತ್ತು. ಅವರಿಗೆ ಹೆಸರು ತಂದುಕೊಟ್ಟ ಚಿತ್ರ ‘ಎಂ.ಎಸ್‌.ಧೋನಿ– ದಿ ಅನ್ ಟೋಲ್ಡ್ ಸ್ಟೋರಿ‘ ಸಿನಿಮಾ ಕೂಡ ಕ್ರಿಕೆಟ್ ಕತೆ ಆಧಾರಿತ ಚಿತ್ರವಾಗಿತ್ತು.

‘ಕಾಯ್‌ ಪೊ ಚೆ’ ಚಿತ್ರದ ಮೂಲಕ ಬಾಲಿವುಡ್ ಅಂಗಳಕ್ಕೆ ಹೆಜ್ಜೆ ಇಟ್ಟ ಸುಶಾಂತ್, ಈ ಸಿನಿಮಾದಲ್ಲಿ ಉತ್ತಮ ನಟನೆಗಾಗಿ ‘ಫಿಲ್ಮಫೇರ್‌‘ ಅವಾರ್ಡ್‌ಗೆ ನಾಮನಿರ್ದೇಶನಗೊಂಡಿದ್ದರು. ‘ಎಂ.ಎಸ್‌.ಧೋನಿ‘ ಚಿತ್ರ ಕೂಡ ಫಿಲಂಫೇರ್‌ನ ಉತ್ತಮ ನಾಯಕನಟ ವಿಭಾಗಕ್ಕೆ ನಾಮನಿರ್ದೇಶನಗೊಂಡಿತ್ತು. ಡಿಡೆಕ್ಟಿವ್‌ ಭೂಮಕೇಶ್‌ ಭಕ್ಷಿ(2015), ಎಂಎಸ್ ಧೋನಿ ದಿ ಅನ್ ಟೋಲ್ಡ್ ಸ್ಟೋರಿ(2016), ಛಿಛ್ಛೊರೆ (2019) – ಇವು ಅವರಿಗೆ ಜನಪ್ರಿಯತೆ ತಂದುಕೊಟ್ಟ ಸಿನಿಮಾಗಳು.

‘ಕಿಸ್ ದೇಶ್ ಮೇ ಹೇ ಮೇರಾ ದಿಲ್, ಪವಿತ್ರ ರಿಸ್ತಾ ಸೀರಿಯಲ್ ಗಳಲ್ಲಿ ಮಿಂಚಿದ್ದ ಅವರು, ‘ಝರಾ ನಚ್ಕೆ ದಿಖಾ, ಝಲಕ್ ದಿಖ್ ಲಾಜಾ 4‘ ಡಾನ್ಸ್ ರಿಯಾಲಿಟಿ ಶೋನಲ್ಲಿ ‘ಕುಣಿದು‘ ಅಭಿಮಾನಿಗಳ ಹೃದಯಗೆದ್ದಿದ್ದರು.

ಸಾಮಾಜಿಕ ಕಾರ್ಯಗಳಿಗೂ ಸೈ
ಸಿನಿಮಾ ರಂಗದ ಜತೆಗೆ ಸಾಮಾಜಿಕ ಕಾರ್ಯಗಳಲ್ಲೂ ತೊಡಗಿಸಿಕೊಂಡಿದ್ದರು ಸುಶಾಂತ್ ಸಿಂಗ್‌. ಇತ್ತೀಚೆಗೆ ಸರ್ಕಾರದ ನೀತಿ ಆಯೋಗದ ಮಹಿಳಾ ಸಬಲೀಕರಣ ಪ್ರಚಾರ ಕಾರ್ಯಕ್ರಮದಲ್ಲೂ ಪಾಲ್ಗೊಂಡಿದ್ದರು. ಅಷ್ಟೇ ಅಲ್ಲ ವೈಯಕ್ತಿಕವಾಗಿಯೂ 'ಸುಶಾಂತ್‌4ಎಜುಕೇಷನ್‘ ಎಂಬ ಕಾರ್ಯಕ್ರಮದ ಮೂಲಕ ಬಡ ವಿದ್ಯಾರ್ಥಿಗಳ ಶಿಕ್ಷಣಕ್ಕೆ ನೆರವಾಗುತ್ತಿದ್ದರು.

ಸಹನಟಿ ಅಂಕಿತಾ ಲೋಖಂಡೆ ಜೊತೆ ಸಹಜೀವನ ನಡೆಸಿದ್ದ ಸುಶಾಂತ್ 2016ರಲ್ಲಿ ಈ ಬಂಧನ ಕಡೆದುಕೊಂಡಿದ್ದರು . ಇತ್ತೀಚೆಗಷ್ಟೇ ಅವರ ಮಾಜಿ ಮ್ಯಾನೇಜರ್ ದಿಶಾ ಸಾಲಿಯನ್ ಕೂಡ ಶಂಕಾಸ್ಪದವಾಗಿ ಸಾವನ್ನಪ್ಪಿದ್ದರು. ಅದು ಅವರನ್ನು ಬಹಳ ಬಾಧಿಸಿತ್ತು. ಸುಶಾಂತ್, ಖಿನ್ನತೆಯಿಂದ ಬಳಲುತ್ತಿದ್ದರು ಎಂಬ ಸುದ್ದಿ ಇತ್ತು. ಅದಕ್ಕಾಗಿಯೇ ಚಿಕಿತ್ಸೆಯನ್ನೂ ಪಡೆಯುತ್ತಿದ್ದರು ಎಂದು ಹೇಳಲಾಗುತ್ತಿತ್ತು.

ಸಣ್ಣ ವಯಸ್ಸಿನಲ್ಲಿ, ಕಡಿಮೆ ಅವಧಿಯಲ್ಲೇ ಚಿತ್ರರಂಗದಲ್ಲಿ ಮಿಂಚುತ್ತಿದ್ದ ಸುಶಾಂತ್ ಅರಳಿ ಬೆಳಗುವ ಮುನ್ನವೇ ಅಕಾಲಿಕವಾಗಿ ಜೀವನದ ಪಯಣ ಮುಗಿಸಿದ್ದಾರೆ.

(ಮಾಹಿತಿ: ವಿವಿಧ ಮೂಲಗಳಿಂದ)

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು