ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಣಿ @125

Last Updated 26 ಜನವರಿ 2023, 23:30 IST
ಅಕ್ಷರ ಗಾತ್ರ

ಇವರೇ ಲಕ್ಷ್ಮೀನಾರಾಯಣ! ಹೀಗೆಂದರೆ ತಕ್ಷಣಕ್ಕೆ ಇವರ್‍ಯಾರು ಎಂದು ಪತ್ತೆ ಹಚ್ಚುವುದು ಕಷ್ಟ. ಅದೇ ‘ತಬಲಾ ನಾಣಿ’ ಎಂದರೆ ‘ಓಹ್‌ ಅವ್ರಾ!’ ಎನ್ನುವ ಉತ್ತರ ಸಿಗುತ್ತದೆ. ‘ಲಕ್ಷ್ಮೀನಾರಾಯಣ’, ‘ನಾರಾಯಣ’ನಾಗಿ, ‘ನಾಣಿ’ಯಾಗಿ ಕೊನೆಗೆ ‘ತಬಲಾ ನಾಣಿ’ಯಾಗಿ ಹೆಜ್ಜೆ ಇಡುತ್ತಾ 125ನೇ ಸಿನಿಮಾ ಹೊಸ್ತಿಲು ದಾಟಿದ್ದಾರೆ. ಅವರ ನಟನೆಯ ‘ಆರ್‌ ಸಿ ಬ್ರದರ್ಸ್‌’ ಸಿನಿಮಾ ಬಿಡುಗಡೆಯಾಗಿದ್ದು, ಈ ಹೊತ್ತಿನಲ್ಲಿ ತಮ್ಮ ಸಿನಿಪಯಣವನ್ನು ನೆನಪಿಸಿಕೊಳ್ಳುತ್ತಾ ನಾಣಿಯವರು ಸಾಗಿದ್ದು ಹೀಗೆ...

ವಿ.ಎನ್‌.ಅಶ್ವಥ್‌ ಅವರು ಬರೆದ ‘ಶ್ರೀ ಕೃಷ್ಣ ಸಂಧಾನ’ದಲ್ಲಿ ಒಂದು ಪುಟ್ಟ ಪಾತ್ರವನ್ನು ನಾನು ಮಾಡಿದ್ದೆ. ಕಲಾಕ್ಷೇತ್ರದಲ್ಲಿ ನಡೆದ ಈ ನಾಟಕದಲ್ಲಿನ ನನ್ನ ಪಾತ್ರವನ್ನು ಗುರುತಿಸಿ ನಾಗಾಭರಣ ಅವರು ಕಿರುತೆರೆಗೆ ಆಹ್ವಾನಿಸಿದರು. ‘ಸಂಕ್ರಾಂತಿ’ ನನ್ನ ಮೊದಲ ಧಾರಾವಾಹಿ. ಇಲ್ಲಿಂದ ‘ಗೋಧೂಳಿ’ ಎಂಬ ಧಾರಾವಾಹಿಯತ್ತ ಪಯಣ ಸಾಗಿತು. ಇಲ್ಲಿಂದ ಸೇರಿದ್ದು ನೇರವಾಗಿ ಗುರುಪ್ರಸಾದ್‌ ಅವರ ‘ಮಠ’ಕ್ಕೆ. ನಾನು ಈ ಚಿತ್ರದಲ್ಲಿ ಮುಸ್ಲಿಂ ವ್ಯಕ್ತಿಯ ಪಾತ್ರ ಮಾಡಬೇಕಿತ್ತು. ಆದರೆ ಕುಡುಕನ ಪಾತ್ರವನ್ನೇ ನೀವು ಮಾಡಿ ಎಂದರು. ಮೊದಲ ಸಿನಿಮಾದಲ್ಲೇ ಸಂಭಾಷಣೆಯ ಕಾರ್ಯದಲ್ಲೂ ನನ್ನನ್ನು ಗುರುಪ್ರಸಾದ್‌ ಅವರು ತೊಡಗಿಸಿಕೊಂಡರು. ‘ಎದ್ದೇಳು ಮಂಜುನಾಥ’ ಸಿನಿಮಾದಲ್ಲೂ ನಾನು ಸಂಭಾಷಣೆ ಬರೆದೆ. ಇದೀಗ 138ನೇ ಸಿನಿಮಾದಲ್ಲಿ ನಟಿಸುತ್ತಿದ್ದೇನೆ.

ನನ್ನ ಮೊದಲ ಗುರು ಎಂ.ನಾರಾಯಣದಾಸ್‌. ಅವರ ಜೊತೆ ಹರಿಕಥೆಗಳಲ್ಲಿ ಸುಮಾರು ಆರು ವರ್ಷಗಳ ಕಾಲ ತಬಲಾ ನುಡಿಸಿದೆ. ಹರಿಕಥೆಗಳನ್ನು ಕೇಳಿ, ಅವರ ಮಾತುಗಳನ್ನು ಆಲಿಸುತ್ತಲೇ ನಾನು ಸಂಭಾಷಣೆ ಬರೆಯುವ ಸಾಮರ್ಥ್ಯವನ್ನೂ ಪಡೆದೆ ಎನ್ನಬಹುದು. ನನ್ನ ಬರವಣಿಗೆಗಳಲ್ಲಿ ಗುರುಗಳ ಮಾತಿನ ವಿಚಾರಗಳು ಇವೆ. ಸುಮಾರು 15 ಸಿನಿಮಾಗಳಿಗೆ ಸ್ವತಂತ್ರವಾಗಿ ಸಂಭಾಷಣೆ ಬರೆದಿದ್ದೇನೆ. ವಿಚಾರಗಳನ್ನು ಸೂಚ್ಯವಾಗಿ ಹೇಳುವ ಕಲೆಯನ್ನು ನಿರ್ದೇಶಕ ಗುರುಪ್ರಸಾದ್‌ ಅವರಿಂದ ಕಲಿತೆ. ನನ್ನ ಎರಡನೇ ಗುರು ಜಿ.ವಿ. ಅತ್ರಿ. ಅವರ ತಂಡದಲ್ಲಿ ನಾನು ತಬಲಾ ನುಡಿಸುತ್ತ, ಮ್ಯಾನೇಜರ್‌ ಕೂಡಾ ಆಗಿದ್ದೆ. ಮೂರನೇ ಗುರು ಡೈರೆಕ್ಟರ್‌ ಗುರುಪ್ರಸಾದ್‌.

‘ಗೋಧೂಳಿ’ ಧಾರಾವಾಹಿಯಲ್ಲಿ ‘ಭಾಗ್ಯದ ಲಕ್ಷ್ಮಿ ಬಾರಮ್ಮ’ ಭಜನೆಯನ್ನು ಮುಸ್ಲಿಂ ಹಾಡಿದರೆ ಹೇಗೆ ಹಾಡುತ್ತಾರೆ ಎನ್ನುವುದನ್ನು ನಾನು ಪರಿಕಲ್ಪಿಸಿದ್ದೆ. ಇದನ್ನು ನಂತರ ಹಲವರು ಬಳಸಿಕೊಂಡರು. ‘ಮಠ’ ಹಾಗೂ ‘ಎದ್ದೇಳು ಮಂಜುನಾಥ’ ನನ್ನ ಸಿನಿಬದುಕಿಗೆ ದೊಡ್ಡ ತಿರುವು ತಂದುಕೊಟ್ಟಿತು. ನಾಣಿ ಯಾರು ಎನ್ನುವುದು ಕನ್ನಡಿಗರಿಗೆ ಗೊತ್ತಾಗಿದ್ದೇ ಈ ಎರಡು ಸಿನಿಮಾಗಳಿಂದ. ‘ಕೆಮಿಸ್ಟ್ರಿ ಆಫ್‌ ಕರಿಯಪ್ಪ’ ನನ್ನ ಸಿನಿ ಬದುಕಿಗೆ ಮರುಜನ್ಮ ನೀಡಿದ ಸಿನಿಮಾ. ಇದು ಬಿಡುಗಡೆಯಾಗದ ಬಳಿಕ ಮಧ್ಯಮ ವರ್ಗದ ಕಥೆಯುಳ್ಳ ಹಲವು ಸಿನಿಮಾ ಆಫರ್‌ಗಳು ಬಂದವು. ಗೂಳಿ ಎಷ್ಟೇ ದೊಡ್ಡದಾಗಿರಲಿ ಅಂಬಾರಿ ಹೊರಲು ಸಾಧ್ಯವಿಲ್ಲ. ಆನೆಯೇ ಅಂಬಾರಿ ಹೊರಬೇಕು. ಎಲ್ಲ ಕೆಲಸಕ್ಕೂ ಎಲ್ಲರೂ ಒಗ್ಗಿಕೊಳ್ಳಲು ಸಾಧ್ಯವಿಲ್ಲ. ಹೀಗೆ ಪಾತ್ರವೊಂದಕ್ಕೆ ಕಲಾವಿದನೊಬ್ಬ ಹೊಂದಿಕೆ ಆಗುವುದಿದ್ದರೆ ಅವನೇ ಹೀರೊ..ಸಿನಿಮಾವೊಂದರಲ್ಲಿ ಅದು ತಂದೆಯ ಪಾತ್ರಧಾರಿಯೇ ಆಗಿರಬಹುದು..

ಶರಣ್‌ ಅವರ ಜೊತೆ 9 ಸಿನಿಮಾ ಮಾಡಿದೆ. ಈ ಪೈಕಿ ಏಳು ಸಿನಿಮಾಗಳು ಸೂಪರ್‌ಹಿಟ್‌ ಆದವು. ಈ ಸಿನಿಮಾ ಹೆಜ್ಜೆಗಳ ಜೊತೆಗೆ ‘ಹಾಸ್ಯ ರಂಜಿನಿ’ ಎಂಬ ತಂಡವೊಂದನ್ನು ಕಟ್ಟಿಕೊಂಡಿದ್ದೇನೆ. ಈ ತಂಡದಲ್ಲಿನ ನಾಲ್ಕೈದು ಜನ ನಿರ್ದೇಶಕರು ಆಗಿದ್ದಾರೆ. ಮಗಳು ನಟಿಯಾಗಿ ಹೆಜ್ಜೆ ಇಟ್ಟಿದ್ದಾಳೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT