ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

'ಅಸುರನ್' ದಮನಿತರ ಪ್ರತಿರೋಧದ ಧ್ವನಿ

Last Updated 23 ಅಕ್ಟೋಬರ್ 2019, 7:54 IST
ಅಕ್ಷರ ಗಾತ್ರ

‘ಹಣ ಮತ್ತು ಭೂಮಿಯನ್ನು ಯಾರು ಬೇಕಾದರೂ ಕಿತ್ತುಕೊಳ್ಳಬಹುದು. ಆದರೆ, ವಿದ್ಯೆಯನ್ನಲ್ಲ. ಮೊದಲು ಶಿಕ್ಷಿತರಾಗಿ’ ಎಂಬ ಅರ್ಥ ಬರುವ ಡಾ.ಬಿ.ಆರ್.ಅಂಬೇಡ್ಕರ್ ಮಾತಿನಂತೆ ತಮಿಳಿನ ‘ಅಸುರನ್‌’ ಸಿನಿಮಾ ಮುಕ್ತಾಯಗೊಳ್ಳುತ್ತದೆ. ಇಡೀ ಸಿನಿಮಾ ಪ್ರತಿರೋಧದ ರಣಕಾಳಗ. ಈ ಎಲ್ಲ ಸಂಕೋಲೆಗಳ ಬಿಡುಗಡೆಗೆ ‘ಶಿಕ್ಷಣವೇ ಅಸ್ತ್ರ’ಎನ್ನುವುದು ಸಿನಿಮಾದ ಗಮನಾರ್ಹ ತಿರುಳು.

‘ಅಸುರನ್‌’ ಪೂಮಣಿ ಅವರ ‘ವೆಕ್ಕೈ’ಕಾದಂಬರಿ ಆಧಾರಿತ ಸಿನಿಮಾ. 60 ಮತ್ತು70 ದಶಕದಲ್ಲಿ ತಮಿಳುನಾಡಿನ ತಿರುನಲ್ವೇಲಿ ಸುತ್ತಮುತ್ತ ನಡೆಯುವ ಕಥೆ. ಇದು ವಡ್ಕೂರ್ (ಉತ್ತರದವರು) ಮತ್ತು ತೇಕ್ಕೂರ್ (ದಕ್ಷಿಣದವರು) ನಡುವಿನ ಭೂಮಿ ಮತ್ತು ಜಾತಿ ಹಿನ್ನೆಲೆಯ ಸಂಘರ್ಷದ ಕಥೆ. ಚಿತ್ರದ ನಾಯಕ ಸಿವಸಾಮಿ (ಧನುಷ್‌) ಎಂಬ ಅಸುರ ದಕ್ಷಿಣದವನು ಎನ್ನುವುದು ಸಾಂಕೇತಿಕ.

ದೇಶದಲ್ಲಿ 'ಉಳುವವನೆ ನೆಲದೊಡೆಯ ಕಾಯ್ದೆ' ಜಾರಿಯಾದಾಗ ಅದನ್ನು ಪಡೆಯಲು ಯತ್ನಿಸುವ ಸಿವಸಾಮಿ ಮತ್ತು ಅವರ ಪರಿವಾರಕ್ಕೆ ಹೋರಾಟವೇ ಆಸ್ತ್ರ. ಆದರೆ, ಕೊಲೆಯೊಂದರ ಮೂಲಕ ಫ್ಯೂಡಲ್‌ ವ್ಯವಸ್ಥೆ ಈ ಹೋರಾಟವನ್ನು ಹತ್ತಿಕ್ಕುತ್ತದೆ. ಸಿವಸಾಮಿ ಪ್ರೇಯಸಿ ಮಾರಿಯಮ್ಮ (ಅಮ್ಮು ಅಭಿರಾಮಿ) ಧರಿಸುವ ‘ಚಪ್ಪಲಿ’ ಬಡವರ ಆತ್ಮಾಭಿಮಾನದ ಸಂಕೇತ. ಆದರೆ, ಇದನ್ನು ಸಹಿಸದ ಮೇಲ್ಜಾತಿ ಕುಳಗಳು ಅವಮಾನಗೊಳಿಸಿ ಅಟ್ಟಹಾಸ ಮರೆಯುತ್ತಾರೆ.

ಈ ಕೌರ್ಯಕ್ಕೆ ಮುನ್ನುಡಿ ಬರುವುದೇ ರೈಸ್‌ ಮಿಲ್‌ ಮಾಲೀಕ ವಿಶ್ವನಾಥನ್‌ ಮತ್ತು ಅವರ ಸಹಚರರು. ಕಳ್ಳಭಟ್ಟಿ ಕಾಯಿಸುವ ಸಿವಸಾಮಿ ಪರಿವಾರದವರು ವಾಸವಾಗಿದ್ದ ಸೋಗೆ ಗುಡಿಸಲಿಗಳಿಗೆ ಕಿಚ್ಚು ಇಡುವ ಖಳರು, ಮುಗ್ಧ ಬಡಜನರನ್ನು ಸಜೀವ ದಹನಗೊಳಿಸುತ್ತಾರೆ. ಸಿಡಿದೇಳುವ ಯುವಕ ಸಿವಸಾಮಿ, ಮಚ್ಚು ಝಳಪಳಿಸಿ ಕೊಲೆಗಾರರನ್ನು ಅಟ್ಟಾಡಿಸಿ ಕೊಲ್ಲುತ್ತಾನೆ. ಚಿಮ್ಮಿದ ರಕ್ತ ನೋಡುಗನಿಗೂ ತಾಕುತ್ತದೆ. ಆಯಾಸ, ದಣಿವು, ಹಿಂಸೆ, ದಿಗಿಲು, ರೋಮಾಂಚನ ಮತ್ತು ಹೇಳಿಕೊಳ್ಳಲಾಗದ ಮೌನ ಆವರಿಸುತ್ತದೆ.

ಕೊಲೆ ಆರೋಪಿ ಸಿವಸಾಮಿ ಮತ್ತೊಂದು ಊರಿಗೆ ಪಲಾಯನ ಆಗುತ್ತಾನೆ. ಅಲ್ಲಿ ಪಚ್ಚಿಯಮ್ಮಳನ್ನು(ಮಂಜು ವಾರಿಯರ್‌) ಮದುವೆ ಆಗಿ ಸಂಸಾರ ಹೂಡುತ್ತಾನೆ. ಮೂವರು ಮಕ್ಕಳ ಆ ಬಡ ಕುಟುಂಬಕ್ಕೆ ಆ ಊರಿನಲ್ಲೂ ಎಲ್ಲೇ ಮೀರಿದ ದೌರ್ಜನ್ಯ. ಜಮೀನಿನ ವಿಷಯವಾಗಿ ವಡಕ್ಕೂರು ನರಸಿಂಹನ್ ದರ್ಪ ತೋರುತ್ತಾನೆ. ಸಿವಸಾಮಿ ಹಿರಿಮಗ ಮುರಗನ್‌ (ತೀಜಯ್ ಅರುಣಾಸಲಂ) ಕುಡಿಮೀಸೆ ಯುವಕ. ಸ್ವಾಭಿಮಾನಿ, ಕೋಪಿಷ್ಟ. ನರಸಿಂಹನ್‌ ಅಹಂ ತಣಿಸಲು ಚಪ್ಪಲಿಯಿಂದ ಹೊಡೆದು ಅವಮಾನಗೊಳಿಸುತ್ತಾನೆ. ಪ್ರತೀಕಾರವಾಗಿ ಹೃದಯವಿದ್ರಾವಕವಾಗಿ ಮುರಗನ್ ಹತ್ಯೆ ನಡೆದು, ಮತ್ತೊಂದು ರಕ್ತಚರಿತ್ರೆ ಆರಂಭಗೊಳ್ಳುತ್ತದೆ.

ಸಿವಸಾಮಿ ಕಿರಿಯ ಪುತ್ರ ಚಿದಂಬರಂಗೆ (ಕೆನ್‌ ಕರುಣಾಸ್) ತಂದೆಗಿಂತ ಅಣ್ಣ ಮುರಗನ್‌ನೇ ಹೀರೋ. ಇಳಿ ವಯಸ್ಸಿನ ಅಸಹಾಯಕ ತಂದೆಯನ್ನು ಕೆಣಕುವ, ಹೀಯಾಳಿಸುವ ಈ ಹದಿನಾರರ ಪೋರ, ಅಣ್ಣನ ಕೊಲೆಗೆ ಕಾರಣನಾದ ನರಸಿಂಹನ್‌ನನ್ನು ಹೊಂಚು ಹಾಕಿ ಕೊಲ್ಲುತ್ತಾನೆ. ಕಾಡಿಂದ ಕಾಡಿಗೆ ಅಲೆಯುವ ಈ ಕುಟುಂಬದ್ದು ಅರಣ್ಯರೋದನ.

ಕೊನೆಗೆ; ಮಗ ಮಾಡಿದ ಕೊಲೆ ಆರೋಪ ಹೊರುವ ಸಿವಸಾಮಿ, ಚಿದಂಬರಂಗೆ ಶಿಕ್ಷಣ ಮಹತ್ವದ ಹಿತಮಾತು ಹೇಳಿ ಜೈಲು ಪಾಲಾಗುತ್ತಾನೆ. ಇದು ಕೇವಲ ಒಂದು ಸಿನಿಮಾ ಅಲ್ಲ. ಗ್ರಾಮೀಣ ಭಾರತ ದರ್ಶನ. ಸೋಗೆ ಗುಡಿಸಲು, ಬಡವರ ಬವಣೆ, ತಮಿಳು ಆಡುಭಾಷೆ ಪರಿಸರದ ಇಂಚಿಂಚೂ ದೃಶ್ಯ ಮನಸ್ಸಿಗೆ ನಾಟುವಂತೆ ನಿರ್ದೇಶಕ ವೇಟ್ರಿ ಮಾರನ್‌ ಚಿತ್ರದ ಕ್ಯಾನ್ವಾಸ್‌ ಅನ್ನು ಸುಂದರಗೊಳಿಸಿದ್ದಾರೆ. ಇದರಲ್ಲಿ ದಮನಿತರ ಸಂವೇದನೆ ಮಿಳಿತಗೊಂಡಿದೆ. ಇತಿಹಾಸದ ಕಾಲಗರ್ಭದಲ್ಲಿ ಸಂಘರ್ಷದ ಬಲಿಪಶುಗಳು ಇವರೇ ಎನ್ನುವುದನ್ನು ಸಿನಿಮಾ ಸೂಚ್ಯವಾಗಿ ಕಟ್ಟಿಕೊಡುತ್ತದೆ.

37ವರ್ಷದ ಧನುಷ್‌, 60ವರ್ಷದ ಕಥಾ ನಾಯಕ ಸಿವಸಾಮಿ ಪಾತ್ರದ ಮನೋಜ್ಞ ಅಭಿನಯವೇ ಸಿನಿಮಾದ ಜೀವಾಳ. ಈ ಕಲ್ಟ್‌ ಸಿನಿಮಾದ ಪ್ರಯೋಗಶೀಲತೆಗೆ ಅವರು ಅರ್ಪಿಸಿಕೊಂಡಿದ್ದಾರೆ. ಪಚ್ಚಿಯಾಮ್ಮಾಳ್‌ ಆಗಿ ಮಂಜು ವಾರಿಯಾರ್ ಸಹಜ ಅಭಿನಯ ಸಿನಿಮಾದ ನೇಟಿವಿಟಿಗೆ ಹೊಂದಿಕೊಳ್ಳುತ್ತದೆ. ಬಡವರ ಪರ ವಕೀಲನ ಪಾತ್ರದಲ್ಲಿ ಪ್ರಕಾಶ್‌ ರಾಜ್ ಅವರದ್ದು ಮಾಗಿದ ಅಭಿನಯ. ಇನ್ನು ಪಸುಪತಿ ಅಭಿಯನಕ್ಕೆ ಅವರೇ ಸಾಟಿ.

ಜಿ.ವಿ.ಪ್ರಕಾಶ್‌ ಕುಮಾರ್ ಅವರ ಜನಪದ ಶೈಲಿ ಮಿಶ್ರಿತ ಸಂಗೀತ ಗುಂಗೀ ಹುಳುವಿನಂತೆ ಕಾಡುತ್ತದೆ. ‘ಎಲ್ಲು ವಾಯ ಪೂಕಳಯೇ‘ ಹಿನ್ನೆಲೆ ಗೀತೆ ಮನಸ್ಸು ಕದಡಿದರೆ, ಜನಪದ ಶೈಲಿಯ ಕಥಾರಿಪೂವಳಾಗಿ ಹಾಡು ಸಿನಿಮಾದ ಒಟ್ಟು ಅಂದಕ್ಕೆ ಪೂರಕವಾಗಿದೆ. ಪೊಲ್ಲಾದವನ್, ಆಡುಕುಳಂ ಸಿನಿಮಾಗಳ ನಂತರ ವೇಟ್ರಿಮಾರನ್ ಮತ್ತು ಧನುಷ್ ಜೋಡಿ ‘ಅಸುರನ್’ ಚಿತ್ರದ ಮೂಲಕ ಮತ್ತೊಮ್ಮೆ ಭಾರತೀಯ ಚಿತ್ರರಂಗದ ಗಮನ ಸೆಳೆದಿದ್ದಾರೆ.

'ಅಸುರನ್' ಚಿತ್ರದ ದೃಶ್ಯ
'ಅಸುರನ್' ಚಿತ್ರದ ದೃಶ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT