ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾರೋ ಮಾಡುವ ತಪ್ಪಿಗೆ ಇಡೀ ಚಿತ್ರರಂಗಕ್ಕೆ ಕಳಂಕ ಅಂಟಿಸಬೇಡಿ: ಫಿಲ್ಮ್ ಚೇಂಬರ್ ಮನವಿ

Last Updated 2 ಸೆಪ್ಟೆಂಬರ್ 2020, 12:18 IST
ಅಕ್ಷರ ಗಾತ್ರ

ಬೆಂಗಳೂರು: ‘ಕನ್ನಡ ಚಿತ್ರರಂಗಈಗಾಗಲೇ ಆರು ತಿಂಗಳಿನಿಂದ ಸಂಕಷ್ಟದಲ್ಲಿದೆ.ಯಾರೋ ಕೆಲವರು ಮಾಡುವ ತಪ್ಪಿಗೆ ಇಡೀ ಚಿತ್ರರಂಗಕ್ಕೆ ಕಳಂಕ ಅಂಟಿಸುವ ಕೆಲಸವನ್ನು ಯಾರೂ ಮಾಡಬಾರದು’ ಎಂದು ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಡಿ.ಆರ್‌. ಜೈರಾಜ್ ಮನವಿ ಮಾಡಿದ್ದಾರೆ.

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸ್ಯಾಂಡಲ್‍ವುಡ್‌ನಲ್ಲಿ ಡ್ರಗ್ಸ್‌ ಮಾಫಿಯಾ ಇರುವ ಸುದ್ದಿಯನ್ನು ಕಳೆದ ಕೆಲವು ದಿನಗಳಿಂದ ಮಾಧ್ಯಮಗಳಲ್ಲಿ ನೋಡಿ ಮನಸ್ಸಿಗೆ ನೋವಾಗಿದೆ. ಇನ್ನು ನಿರ್ಮಾಪಕ ಇಂದ್ರಜಿತ್ ಲಂಕೇಶ್ ಆರೋಪಗಳ ಬಗ್ಗೆ ನಮಗೆ ಮಾಹಿತಿ ಇಲ್ಲ. ಮಂಡಳಿಯ ಸಕ್ರಿಯ ಸದಸ್ಯರಾಗಿರುವ ಅವರು ಮಂಡಳಿಗೆ ಮೊದಲೇ ಮಾಹಿತಿ ಕೊಟ್ಟಿದ್ದರೆ ಸಂಬಂಧಿಸಿದವರನ್ನು ಕರೆಸಿ ವಿಚಾರಣೆ ನಡೆಸಿ, ಅವರ ವಿರುದ್ಧ ಶಿಸ್ತುಕ್ರಮ ತೆಗೆದುಕೊಳ್ಳಬಹುದಿತ್ತು’ ಎಂದು ಹೇಳಿದರು.

‘ಚಿತ್ರರಂಗದ ಪುನಶ್ಚೇತನಕ್ಕೆ ಮುಖ್ಯಮಂತ್ರಿಯವರನ್ನು ಭೇಟಿ ಮಾಡಿ, ಆರ್ಥಿಕ ಪ್ಯಾಕೇಜ್‌ ಕೇಳಿದ್ದೆವು. ಜತೆಗೆ ಚಿತ್ರಮಂದಿರಗಳ ಬಾಗಿಲು ತೆರೆಸಲು ಅನುಮತಿ ಪಡೆಯುವ ನಿಟ್ಟಿನಲ್ಲಿ ಪ್ರಯತ್ನ ನಡೆಸುತ್ತಿದ್ದೆವು. ಹಾಗಾಗಿನಮ್ಮ ಗಮನವೆಲ್ಲ ಆ ಕಡೆಯೇ ಇತ್ತು.ಸ್ಯಾಂಡಲ್‌ವುಡ್‌ ಡ್ರಗ್ಸ್‌ ಮಾಫಿಯಾ ಆರೋಪದಬಗ್ಗೆ ನಾವು ಮೌನ ವಹಿಸಿಲ್ಲ’ ಎಂದು ಪ್ರಶ್ನೆಯೊಂದಕ್ಕೆ ಜೈರಾಜ್‌ ಉತ್ತರಿಸಿದರು.

ಮಂಡಳಿಯ ಮಾಜಿ ಅಧ್ಯಕ್ಷ ಸಾ.ರಾ.ಗೋವಿಂದು, ‘ನಾನು 40 ವರ್ಷಗಳಿಂದ ಚಿತ್ರೋದ್ಯಮದಲ್ಲಿ ಕೆಲಸ ಮಾಡುತ್ತಿದ್ದೇನೆ. ಇಂದ್ರಜಿತ್ ಲಂಕೇಶ್ ಹೇಳಿಕೆಯಿಂದ ನಮಗೂ ಆಘಾತವಾಗಿದೆ.ಚಿತ್ರರಂಗಕ್ಕೆತೆವಲಿಗೆ ಬಂದಂತಹ ಕೆಲವು ಕಲಾವಿದರು ಈ ಡ್ರಗ್ಸ್ ಮಾಫಿಯಾದಲ್ಲಿ ಇರಬಹುದು. ತನಿಖಾ ಸಂಸ್ಥೆಗಳು ಅಂತಹವರ ವಿರುದ್ಧ ಕ್ರಮ ತೆಗೆದುಕೊಳ್ಳಲಿ’ ಎಂದರು.

‘ಇಂದ್ರಜಿತ್ ಲಂಕೇಶ್ ನಮ್ಮ ಬಳಿ ಬರದೇ ನೇರವಾಗಿ ಮಾಧ್ಯಮಗಳ ಮುಂದೆ ಹೋಗಿದ್ದಾರೆ. ಇಂದ್ರಜಿತ್‌ ಆರೋಪ ಸಾಬೀತು ಮಾಡದಿದ್ದರೆ ಅವರು ಆರೋಪಿಯ ಸ್ಥಾನದಲ್ಲಿ ನಿಲ್ಲಲಿದ್ದು, ಕೋರ್ಟ್‌ ಕೂಡ ಅವರಿಗೆ ಛೀಮಾರಿ ಹಾಕಬಹುದು’ ಎಂದು ಹೇಳಿದರು.

‘ಚಿತ್ರರಂಗಕ್ಕೂ ವಕೀಲ ಪ್ರಶಾಂತ್ ಸಂಬರಗಿಯವರಿಗೆ ಯಾವುದೇ ಸಂಬಂಧವಿಲ್ಲ. ಅವರುಚಿತ್ರೋದ್ಯಮಕ್ಕೆ ಸಂಬಂಧಿಸಿದವರಲ್ಲ. ಅವರು ಯಾವುದೇ ಸಿನಿಮಾ ಕೆಲಸಗಳಲ್ಲೂ ತೊಡಗಿಸಿಕೊಂಡಿಲ್ಲ. ಸಾಮಾಜಿಕ ಕಳಕಳಿಯಿಂದಷ್ಟೇ ಡ್ರಗ್ಸ್ ಮಾಫಿಯಾ ಬಗ್ಗೆ ಮಾಹಿತಿ ನೀಡುತ್ತಿದ್ದಾರೆ’ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ನೋವಿನಲ್ಲಿರುವವರಿಗೆ ಮತ್ತಷ್ಟು ನೋವು ಕೊಡಬೇಡಿ: ದೊಡ್ಡಣ್ಣ

‘ನಾವು ಅಕ್ಕ-ತಂಗಿಯರ ಜೊತೆ ಹುಟ್ಟಿದ್ದೇವೆ. ನಮಗೂ ಮಕ್ಕಳಿವೆ. ಆ ಮಗು ನೋವಿನಲ್ಲಿದೆ. ಪತಿಯ ಕಳೇಬರಕ್ಕೆ ಮುತ್ತು ಕೊಟ್ಟಿದ್ದನ್ನು ಇಡೀ ರಾಜ್ಯ ನೋಡಿದೆ.ಆ ಮಗು ಹೊಟ್ಟೆಯಲ್ಲಿ ಕಂದಮ್ಮನನ್ನು ಹೊತ್ತುಕೊಂಡಿದೆ.ಈಗ ಆ ಮಗುವಿಗೆಇಂತಹ ನೋವು ಕೊಟ್ಟರೆ ಹೇಗೆ? ಎಪ್ಪತ್ತು ವರ್ಷದ ನಾಗರಿಕನಾಗಿ ಇಂತಹ ಆರೋಪಗಳನ್ನು ಕೇಳಿ ಮನಸ್ಸಿಗೆ ಕಷ್ಟ ಆಯಿತು’ ಎಂದು ಹಿರಿಯ ನಟ ದೊಡ್ಡಣ್ಣ ಭಾವುಕರಾದರು.

ನಟ ಚಿರಂಜೀವಿ ಸರ್ಜಾ ಸಾವಿನ ಸಂಬಂಧ ಇಂದ್ರಜಿತ್‌ ಲಂಕೇಶ್‌ ಮಾಡಿದ ಆರೋಪಕ್ಕೆ ದೊಡ್ಡಣ್ಣ ಈ ರೀತಿ ಪ್ರತಿಕ್ರಿಯಿಸಿದರು.

‘ನಮ್ಮ ಕಾಲದಲ್ಲಿ ಮಾದಕ ವಸ್ತುಗಳ ವ್ಯಸನ ಅಂಟಿಸಿಕೊಂಡ ಕಲಾವಿದರು ಇರಲಿಲ್ಲ.ಇತ್ತೀಚಿನ ಪೀಳಿಗೆಯಲ್ಲಿ ಅಂತಹವರು ಬಂದಿದ್ದರೆ ಅದು ನಮಗೆ ಗೊತ್ತಿಲ್ಲ’ ಎಂದು ಹೇಳಿದರು.

‘ನಮ್ಮ ತಾಯಾಣೆಗೂ ಇಂಡಸ್ಟ್ರಿಯಲ್ಲಿ ಡ್ರಗ್ಸ್ ಮಾಫಿಯಾ ಇಲ್ಲ.ಡ್ರಗ್ಸ್ ಮಾಫಿಯಾ ಇದೆ ಎನ್ನುವುದು ನಮಗೆ ಗೊತ್ತಿಲ್ಲ. ಅದು ಯಾವ ರೀತಿ ಇರುತ್ತದೆ ಎನ್ನುವುದು ಪ್ರಮಾಣವಾಗಿಯೂ ಗೊತ್ತಿಲ್ಲ. ಒಂದು ವೇಳೆ ಅಂತಹ ದಂಧೆ ನಡೆಸುವ ವ್ಯಕ್ತಿಗಳಿದ್ದರೆ ಅವರಿಗೆ ಖಂಡಿತ ಶಿಕ್ಷೆ ಆಗಲೇಬೇಕು. ಎಷ್ಟೇ ಕೂಡಿ ಕಳೆದು ಗುಣಾಕಾರ, ಭಾಗಾಕಾರ ಲೆಕ್ಕ ಹಾಕಿದರೂ ತಪ್ಪಿತಸ್ಥರಿಗೆ ಶಿಕ್ಷೆ ಆಗಿಯೇ ಆಗುತ್ತದೆ’ ಎಂದರು.

‘ಡ್ರಗ್ಸ್‌ ಮಾಫಿಯಾದ ಇರುವ ಬಗ್ಗೆ ಆರೋಪ ಮಾಡಿರುವ ನಿರ್ದೇಶಕರು, ಸಿಸಿಬಿ ಪೊಲೀಸರನ್ನು ಭೇಟಿ ಮಾಡಿ ದಾಖಲೆ ಕೊಟ್ಟಿದ್ದೇನೆ ಅಂತ ಹೇಳಿರೋದನ್ನ ಮಾಧ್ಯ ಮಗಳಲ್ಲಿ ನೋಡಿದ್ದೇನೆ. ದಾಖಲೆ ನೋಡಿ ಪೊಲೀಸ್ ಅಧಿಕಾರಿಗಳೇ ಬೆಚ್ಚಿ ಬಿದಿದ್ದಾರೆ ಎಂದು ಹೇಳಿದ್ದಾರೆ. ಪ್ರಕರಣ ತನಿಖಾ ಹಂತದಲ್ಲಿದೆ. ಪೊಲೀಸರು ಎಲ್ಲವನ್ನು ಹುಡುಕಿ ತೆಗೆದು, ಬಯಲು ಮಾಡಲಿದ್ದಾರೆ. ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕೆನ್ನುವುದು ನಮ್ಮ ಆಸೆ’ ಎಂದರು.

‘ಡೋಂಟ್‌ ಕಿಲ್‌ ದಿ ಮೆಸೆಂಜರ್‌’

‘ಸ್ಯಾಂಡಲ್‌ವುಡ್‌ಗೆ ಅಂಟಿಕೊಂಡಿರುವ ಡ್ರಗ್ಸ್ ಮಾಫಿಯಾ ವಿಚಾರದಲ್ಲಿ ನಾನು ಪೊಲೀಸರಿಗೆ ಪಾರಿವಾಳದಂತೆ ಮಾಹಿತಿ ನೀಡಿದ್ದೇನೆ. ‘ಡೋಂಟ್‌ ಕಿಲ್‌ ದಿ ಮೆಸೆಂಜರ್‌’.ಗುರುವಾರ ಮತ್ತೆ ಪೊಲೀಸ್‌ ಜಂಟಿ ಆಯುಕ್ತರನ್ನು ಭೇಟಿ ಮಾಡುತ್ತಿದ್ದೇನೆ. ಅವರು ಕೇಳುವ ಪ್ರಶ್ನೆಗಳಿಗೆ ಉತ್ತರ ಕೊಡುವೆ’ ಎಂದು ನಿರ್ದೇಶಕ ಇಂದ್ರಜಿತ್‌ ಲಂಕೇಶ್‌ ಹೇಳಿದ್ದಾರೆ.

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯು ಅವರ ಸದಸ್ಯತ್ವದ ಬಗ್ಗೆ ಪ್ರಶ್ನಿಸಿರುವ ಸಂಬಂಧ ಪ್ರತಿಕ್ರಿಯಿಸಿರುವ ಅವರು, ‘ನಾನು ಒಬ್ಬ ಮೆಸೆಂಜರ್ ಅಷ್ಟೇ. ಕೆಲವೇ ಕೆಲವರಿಂದ ಕನ್ನಡ ಚಿತ್ರರಂಗದ ಹೆಸರು ಹಾಳಾಗುತ್ತಿದೆ. ನಾನು ನೀಡಿರುವ ಹೇಳಿಕೆ ಮತ್ತು ನೀಡಿರುವ ದಾಖಲೆಗೆ ಬದ್ಧವಾಗಿದ್ದೇನೆ. ಪೊಲೀಸರು ತನಿಖೆ ಮಾಡುತ್ತಿದ್ದಾರೆ. ಕನ್ನಡ ಚಲನಚಿತ್ರರಂಗದ ಹಿತಕ್ಕಾಗಿ ನನ್ನ ವೈಯಕ್ತಿಕ ಕೆಲಸಗಳನ್ನು ಬದಿಗಿಟ್ಟು ಪೊಲೀಸ್‌ ತನಿಖೆಗೆ ಅಗತ್ಯ ಮಾಹಿತಿ ಒದಗಿಸುತ್ತಿದ್ದೇನೆ’ ಎಂದು ಹೇಳಿದ್ದಾರೆ.

‘ಹನಿಟ್ರ್ಯಾಪ್‌ ಪ್ರಕರಣಗಳಲ್ಲಿ ಕೆಲವು ನಟಿಯರು ಸಿಲುಕಿದ್ದಾರೆ ಮತ್ತು ಕೆಲವು ನಟರು ಡ್ರಗ್ಸ್‌ ಜಾಲದಲ್ಲಿ ಇದ್ದಾರೆ ಎಂದಾಗ ವಾಣಿಜ್ಯ ಮಂಡಳಿ ಕ್ರಮ ತೆಗೆದುಕೊಳ್ಳಬೇಕಿತ್ತು. ವಾಣಿಜ್ಯ ಮಂಡಳಿ ಆ ಕೆಲಸ ಮಾಡದಿದ್ದಾಗ ನಾನೂ ಮಾಧ್ಯಮದಲ್ಲಿರುವವನಾಗಿ ಡ್ರಗ್ಸ್‌ ಮಾಫಿಯಾದ ವಿರುದ್ಧದ ಹೋರಾಟಕ್ಕೆ ಮಾಧ್ಯಮಗಳ ಸಹಕಾರ ಪಡೆದುಕೊಂಡಿದ್ದೇನೆ’ ಎಂದು ಅವರು ಹೇಳಿದ್ದಾರೆ.

‘ಡ್ರಗ್ಸ್‌ ದಂಧೆ ವಿರುದ್ಧ ಕಾನೂನು ರೀತಿಯಲ್ಲಿ ಕ್ರಮ ಆಗಿ, ಚಿತ್ರರಂಗಕ್ಕೆ ಒಳ್ಳೆಯದಾದರೆ ಅದೇ ನನಗೆ ದೊಡ್ಡ ಸಂತೋಷ. ಮುಂದಾದರೂ ಅಂತಹ ಕಳಂಕ ಚಿತ್ರರಂಗಕ್ಕೆ ಬಾರದಂತೆ ನೋಡಿಕೊಳ್ಳಲಿ’ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT