ಶುಕ್ರವಾರ, ಫೆಬ್ರವರಿ 28, 2020
19 °C

ಟಾಮ್ ಮತ್ತು ಜೆರ್‍ರಿಯ ಕೆಮಿಸ್ಟ್ರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಟಾಮ್‌ ಮತ್ತು ಜೆರ್‍ರಿ ಎಂಬ ಎರಡು ಹೆಸರುಗಳನ್ನು ಕೇಳದವರು ಇಲ್ಲ. ಈ ಹೆಸರುಗಳನ್ನು ಕೇಳದವರು ತುಸು ಅದೃಷ್ಟಹೀನರು ಎಂದೂ ಹೇಳಬಹುದು! ಚೇಷ್ಟೆ, ಕಿತ್ತಾಟಗಳ ಮೂಲಕ ಪುಟಾಣಿಗಳಿಗೆ ಭರ್ಜರಿ ಮನರಂಜನೆ ನೀಡುತ್ತ ಬಂದಿರುವ ಕಾರ್ಟೂನ್‌ ಲೋಕದ ಈ ಎರಡು ಅಜರಾಮರ ಪಾತ್ರಗಳು ಸಿನಿಮಾ ಲೋಕದಲ್ಲಿ ಕಾಣಿಸಿಕೊಂಡರೆ?!

ಮೊದಲ ಬಾರಿಗೆ ಸಿನಿಮಾ ನಿರ್ದೇಶನಕ್ಕೆ ಕೈಹಾಕಿರುವ ರಾಘವ್ ವಿನಯ್ ಶಿವಗಂಗೆ ಅವರು ತಮ್ಮ ಚಿತ್ರಕ್ಕೆ ‘ಟಾಮ್‌ & ಜೆರ್‍ರಿ’ ಎಂಬ ಹೆಸರಿಟ್ಟಿದ್ದಾರೆ. ಇದರಲ್ಲಿ ನಾಯಕನಾಗಿ ನಿಶ್ಚಿತ್ ಕೊರೋಡಿ ಮತ್ತು ನಾಯಕಿಯಾಗಿ ಚೈತ್ರಾ ರಾವ್ ಅಭಿನಯಿಸುತ್ತಿದ್ದಾರೆ.

‘ಇದು ಯುವಕರಿಗೆ ಭರಪೂರ ಮನರಂಜನೆ ನೀಡುವ ಸಿನಿಮಾ. ನಗರದ ಕಥಾವಸ್ತುವನ್ನು ಹೊಂದಿದೆ. ವಾಸ್ತವಕ್ಕೆ ಹತ್ತಿರವಾಗುವ ರೀತಿಯಲ್ಲಿ ಸಿನಿಮಾ ಮೂಡಿಬರಲಿದೆ’ ಎಂದು ತಮ್ಮ ಚಿತ್ರದ ಬಗ್ಗೆ ಹೇಳುತ್ತಾರೆ ರಾಘವ್. ‘ನಾನು ಸೃಷ್ಟಿಸಿದ ನಾಯಕನ ಪಾತ್ರಕ್ಕೆ ನಿಶ್ಚಿತ್ ಅವರೇ ಸೂಕ್ತ ವ್ಯಕ್ತಿ ಎಂದು ಅವರನ್ನು ಆಯ್ಕೆ ಮಾಡಿಕೊಂಡೆ’ ಎನ್ನುತ್ತಾರೆ. ಚೈತ್ರಾ ಅವರನ್ನು ನಾಯಕಿಯಾಗಿ ಆಯ್ಕೆ ಮಾಡಿಕೊಂಡಿದ್ದಕ್ಕೆ ರಾಘವ್ ನೀಡುವ ಕಾರಣ ಹೀಗಿದೆ: ‘ನಾಯಕಿಯು ನಾಯಕನಿಗೆ ಒಂಚೂರೂ ಮ್ಯಾಚ್ ಆಗಬಾರದು. ಹಾಗಾಗಿ ಚೈತ್ರಾ ಅವರನ್ನು ಆಯ್ಕೆ ಮಾಡಿದೆ!’

ಚಿತ್ರದಲ್ಲಿ ನಾಯಕ ಮತ್ತು ನಾಯಕಿ ಸದಾ ಕಿತ್ತಾಡಿಕೊಂಡರೂ ಒಟ್ಟಿಗೆ ಇರುತ್ತಾರಂತೆ. ಅದೇ ಕಾರಣಕ್ಕೇ ಚಿತ್ರದ ಶೀರ್ಷಿಕೆ ‘ಟಾಮ್‌ & ಜೆರ್‍ರಿ’ ಎಂದಾಗಿರಬಹುದು.

ತನ್ನನ್ನು ಯಾರಾದರೂ ಗುರಾಯಿಸಿದರೆ ಅವರಿಗೆ ಎರಡು ಬಾರಿಸುವ ಸ್ವಭಾವ ನಾಯಕನದ್ದು. ಆದರೆ ನಾಯಕಿಯದ್ದು ಇದಕ್ಕೆ ತದ್ವಿರುದ್ಧ ಸ್ವಭಾವ. ಗುರಾಯಿಸುವವರನ್ನು ಕಂಡು ಸ್ಮೈಲ್‌ ಕೊಡುತ್ತಾಳೆ ಆಕೆ.

ನಿಶ್ಚಿತ್ ಅವರಿಗೆ ‘ಗಂಟುಮೂಟೆ’ ಸಿನಿಮಾ ಪೂರ್ಣಗೊಂಡ ನಂತರ ಸಿಕ್ಕ ಅವಕಾಶ ಈ ಸಿನಿಮಾ. ‘ಗಂಟುಮೂಟೆ’ ಚಿತ್ರದಲ್ಲಿ ಪ್ರೌಢಶಾಲೆಯ ವಿದ್ಯಾರ್ಥಿಯಾಗಿ ಕಾಣಿಸಿಕೊಂಡಿದ್ದರು. ‘ನಾನು ಇದರಲ್ಲಿ ವಿಭಿನ್ನವಾಗಿ ಕಾಣಿಸಿಕೊಳ್ಳಲಿದ್ದೇನೆ’ ಎಂದರು ಚೈತ್ರಾ.

ಮ್ಯಾಥ್ಯೂಸ್ ಮನು ಅವರು ಈ ಚಿತ್ರಕ್ಕೆ ಸಂಗೀತ ನೀಡಲಿದ್ದಾರೆ. ಉದ್ಯಮಿ ರಾಜು ಶೇರಿಗಾರ್ ಅವರು ಚಿತ್ರಕ್ಕೆ ಹಣ ಹೂಡಿದ್ದಾರೆ. ಛಾಯಾಗ್ರಹಣದ ಹೊಣೆಯನ್ನು ಸಂಕೇತ್ ಅವರು ಹೊತ್ತಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)