ಸೋಮವಾರ, ಸೆಪ್ಟೆಂಬರ್ 20, 2021
23 °C

ಮೋಹನ್‌ಲಾಲ್‌ ಚಿತ್ರಕ್ಕೂ ತ್ರಿಷಾ ಗುಡ್‌ಬೈ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಾಲಿವುಡ್‌ನ ಎವರ್‌ಗ್ರೀನ್ ಚೆಲುವೆ ತ್ರಿಷಾ ಕೃಷ್ಣನ್‌, ‘ಮೆಗಾಸ್ಟಾರ್’ ಚಿರಂಜೀವಿ ಅಭಿನಯದ ತೆಲುಗಿನ ‘ಆಚಾರ್ಯ’ ಸಿನಿಮಾದಿಂದ ಹೊರ ನಡೆದಿದ್ದು ಹಳೆಯ ಸುದ್ದಿ. ಸೃಜನಾತ್ಮಕ ವ್ಯತ್ಯಾಸದಿಂದ ತಾವು ಹೊರನಡೆದಿದ್ದಾಗಿ ಆಕೆ ಸಾಮಾಜಿಕ ಜಾಲತಾಣದಲ್ಲಿ ಸ್ಪಷ್ಟಪಡಿಸಿದ್ದು ಉಂಟು. ಈಗ ಮಾಲಿವುಡ್‌ನ ನಟ ಮೋಹನ್‌ಲಾಲ್‌ ಅಭಿನಯದ ‘ರಾಮ್’ ಚಿತ್ರದಿಂದಲೂ ಆಕೆ ಹೊರ ನಡೆದಿರುವುದು ಸುದ್ದಿಯಾಗಿದೆ. ‌

‘ಆಚಾರ್ಯ’ ಚಿತ್ರ ನಿರ್ದೇಶಿಸುತ್ತಿರುವುದು ಕೊರಟಾಲ ಶಿವ. ರಾಮ್‌ಚರಣ್ ಇದಕ್ಕೆ ಬಂಡವಾಳ ಹೂಡಿದ್ದಾರೆ. ಚಿತ್ರತಂಡ ಹಾಗೂ ತ್ರಿಷಾ ನಡುವೆ ಕೆಲವೊಂದು ವಿಷಯದಲ್ಲಿ ಹೊಂದಾಣಿಕೆಯಾಗಿರಲಿಲ್ಲ. ಸಾಮಾಜಿಕ ಸಂದೇಶವುಳ್ಳ ಈ ಸಿನಿಮಾದ ನಾಯಕಿನಾಗಿ ‘ಮಗಧೀರ’ ಚಿತ್ರದ ಖ್ಯಾತಿಯ ಕಾಜಲ್ ಅಗರ್‌ವಾಲ್ ಆಯ್ಕೆಯಾಗಿದ್ದಾರೆ.

ಈ ನಡುವೆ ತ್ರಿಷಾ ‘ರಾಮ್‌’ ಚಿತ್ರದಲ್ಲಿ ಮೋಹನ್‌ಲಾಲ್ ಜೊತೆ ನಟಿಸುವುದು ಪಕ್ಕಾ ಆಗಿತ್ತು. ಆದರೆ, ಈ ಸಿನಿಮಾದಿಂದಲೂ ಹೊರ ನಡೆದಿರುವುದು ಆಕೆಯ ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿದೆ. ಈ ಸಿನಿಮಾಕ್ಕೆ ‘ಹಿ ಹ್ಯಾಸ್ ನೊ ಬೌಂಡರೀಸ್‌’ ಎಂಬ ಅಡಿಬರಹವಿದೆ. ‘ದೃಶ್ಯಂ’ ಚಿತ್ರದ ಖ್ಯಾತಿಯ ನಿರ್ದೇಶಕ ಜೀತು ಜೋಸೆಫ್‌  ಇದಕ್ಕೆ ಆ್ಯಕ್ಷನ್ ಕಟ್ ಹೇಳಲಿದ್ದಾರೆ. ರಮೇಶ್ ಪಿ. ಪಿಳೈ ಹಾಗೂ ಸುದರ್ಶನ್‌ ಪಿ. ಪಿಳೈ ಅವರು ಅಭಿಷೇಕ್ ಫಿಲ್ಮ್‌ ಬ್ಯಾನರ್‌ನಡಿ ಇದನ್ನು ನಿರ್ಮಾಣ ಮಾಡಲಿದ್ದಾರೆ.

ಸಿನಿಮಾದ ಮೊದಲ ಹಂತದ ಶೂಟಿಂಗ್‌ನ ವೇಳಾಪಟ್ಟಿಯೂ ಸಿದ್ಧವಾಗಿದ್ದು, ಲಂಡನ್‌ನಲ್ಲಿ ಶೂಟ್‌ ಮಾಡಲು ಚಿತ್ರತಂಡ ನಿರ್ಧರಿಸಿತ್ತು. 

ಈ ನಡುವೆ ಕೊರಾನಾ ಸೋಂಕು ವಿಶ್ವದೆಲ್ಲೆಡೆ ಹರಡಿರುವ ಕಾರಣ ಇನ್ನೂ ಕೆಲವು ತಿಂಗಳ ಕಾಲ ವಿದೇಶದಲ್ಲಿ ಸಿನಿಮಾ ಶೂಟಿಂಗ್‌ಗೆ ಅನುಮತಿ ಸಿಗುವುದು ಅನುಮಾನ. ಆ ಕಾರಣಕ್ಕೆ ನಿರ್ಮಾಪಕರು ಸಿನಿಮಾ ಕೈ ಬಿಟ್ಟಿದ್ದಾರೆ. ಹಾಗಾಗಿ, ತ್ರಿಷಾ ಈ ಚಿತ್ರದಿಂದ ಹೊರ ನಡೆದಿರಬಹುದು ಎಂಬುದು ಸದ್ಯದ ಸುದ್ದಿ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು