ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಸ್ಟಲ್‌ವುಡ್‌: ಒಂದೇ ದಿನ ಎರಡು ಸಿನಿಮಾ ತೆರೆಗೆ!

ತುಳು ಚಿತ್ರರಂಗದಲ್ಲಿ ನಡೆಯುತ್ತಿದೆ ಅನಾರೋಗ್ಯಕರ ಸ್ಪರ್ಧೆ
Last Updated 29 ಡಿಸೆಂಬರ್ 2021, 5:51 IST
ಅಕ್ಷರ ಗಾತ್ರ

ಮಂಗಳೂರು: ತುಳು ಸಿನಿಮಾಗಳಿಗೆ ಬಂಡವಾಳ ಹಾಕುವುದೇ ದೊಡ್ಡ ಸಾಹಸ. ಕರಾವಳಿಯ ಸೀಮಿತ ಮಾರುಕಟ್ಟೆಯಲ್ಲಿ ಚಿತ್ರವನ್ನು ಗೆಲ್ಲಿಸುವುದು ಹಾಗಿರಲಿ, ಹಾಕಿದ ಬಂಡವಾಳವನ್ನಾದರೂ ವಾಪಸ್‌ ಪಡೆಯಲು ನಿರ್ಮಾಪಕರು ಹೆಣಗಾಡುತ್ತಾರೆ. ಹೀಗಿದ್ದರೂ ತುಳು ಸಿನಿಮಾ ಕ್ಷೇತ್ರದಲ್ಲಿ ಅನಾರೋಗ್ಯಕರ ಸ್ಪರ್ಧೆ ಮಾತ್ರ ನಿಂತಿಲ್ಲ.

ತುಳು ಚಿತ್ರರಂಗದ ಆರಂಭಿಕ 39 ವರ್ಷಗಳಲ್ಲಿ (2010ರ ತನಕ) ಕೇವಲ 38 ಸಿನಿಮಾಗಳು ತೆರೆಗೆ ಬಂದಿವೆ. ನಂತರದ 11 ವರ್ಷಗಳಲ್ಲಿ ಬರೋಬ್ಬರಿ 81 ಚಿತ್ರಗಳು ಬೆಳ್ಳಿತೆರೆಗೆ ಪ್ರವೇಶಿಸಿವೆ. ವರ್ಷಕ್ಕೊಂದರಂತೆ ತೆರೆಗೆ ಬರುತ್ತಿದ್ದ ತುಳುಚಿತ್ರಈಚಿನ ಕೆಲ ವರ್ಷಗಳಲ್ಲಿ ತಿಂಗಳಿಗೊಂದರಂತೆ ಬಿಡುಗಡೆಗೊಂಡು ಇತರ ಚಿತ್ರರಂಗಕ್ಕಿಂತ ಕೋಸ್ಟಲ್‌ವುಡ್‌ ಕಮ್ಮಿಯಿಲ್ಲ ಎಂಬುದನ್ನು ನಿರೂಪಿಸಿದೆ. ಈ ಮಧ್ಯೆ ಚಿತ್ರ ಬಿಡುಗಡೆ ವಿಚಾರದಲ್ಲಿನ ಕೆಟ್ಟ ಪೈಪೋಟಿಯು ಹಲವು ನಿರ್ಮಾಪಕರ ಕೈಸುಡುವಂತೆ ಮಾಡಿದೆ.

ವಾರಕ್ಕೊಂದೇ ತುಳು ಸಿನಿಮಾ ತೆರೆಗೆ ಬಂದರೂ ಗೆಲ್ಲಿಸುವುದು ಕಷ್ಟವಿರುವಾಗ, ಕೋಸ್ಟಲ್‌ವುಡ್‌ನ ಎರಡು ಸಿನಿಮಾ ಒಂದೇ ದಿನ ಬಿಡುಗಡೆಯಾದರೆ ಹೇಗಾಗಬಹುದು. ಇಂತಹ ಅನಾರೋಗ್ಯಕರ ಬೆಳವಣಿಗೆಗೆ ತುಳು ಚಿತ್ರರಂಗ ಈಗಾಗಲೇಎರಡು ಬಾರಿ ಸಾಕ್ಷಿಯಾಗಿದೆ.

2018ರ ಮಾರ್ಚ್‌ 23ರಂದು ಕಿಶೋರ್ ಮೂಡುಬಿದಿರೆ ನಿರ್ದೇಶನದ ‘ಅಪ್ಪೆ ಟೀಚರ್‌’ ಮತ್ತು ಪ್ರಜ್ವಲ್‌ ಕುಮಾರ್‌ ಅತ್ತಾವರ ನಿರ್ದೇಶನದ ‘ತೊಟ್ಟಿಲ್‌’ ಒಂದೇ ದಿನ ಬಿಡುಗಡೆಗೊಂಡಿದ್ದವು. 6 ತಿಂಗಳ ಬಳಿಕ ಅದೇ ವರ್ಷ ಸೆ.21ರಂದು ದೇವದಾಸ್‌ ಕಾಪಿಕಾಡ್‌ ನಿರ್ದೇಶನದ ‘ಏರಾ ಉಲ್ಲೆರ್‌ಗೆ’ ಮತ್ತು ಮಯೂರ್‌ ಆರ್‌. ಶೆಟ್ಟಿ ನಿರ್ದೇಶನದ ‘ಮೈ ನೇಮ್‌ ಈಸ್‌ ಅಣ್ಣಪ್ಪ’ ಕೂಡ ಒಂದೇ ದಿನ ಬಿಡುಗಡೆಯಾಗಿದ್ದವು. ಈ ಬೆಳವಣಿಗೆಯಿಂದ ನಾಲ್ಕೂ ಚಿತ್ರಗಳ ನಿರ್ಮಾಪಕರು ನಷ್ಟ ಅನುಭವಿಸಬೇಕಾಯಿತು.

ಇದೀಗ ಮತ್ತೊಂದು ಸುತ್ತಿನ ಸ್ಪರ್ಧೆಗೆ ಸಿದ್ಧತೆ ನಡೆಯುತ್ತಿದೆ. ರಾಹುಲ್‌ ಅಮೀನ್‌ ಅವರ ಚೊಚ್ಚಲ ನಿರ್ದೇಶನದ ‘ರಾಜ್‌ ಸೌಂಡ್ಸ್‌ ಅಂಡ್‌ ಲೈಟ್ಸ್’ ಮತ್ತು ಇಸ್ಮಾಯಿಲ್‌ ಮೂಡುಶೆಡ್ಡೆ ಅವರ ‘ಭೋಜರಾಜ ಎಂಬಿಬಿಎಸ್‌’ ಸಿನಿಮಾ ಒಂದೇ ದಿನ ತೆರೆಗೆ ಬರಲು ಸಿದ್ಧತೆ ನಡೆಸಿವೆ. ಎರಡೂ ಚಿತ್ರ ತಂಡಗಳು, 2022ರ ಫೆ.11ರಂದು ತಮ್ಮ ಚಿತ್ರ ಬಿಡುಗಡೆಯಾಗಲಿದೆ ಎಂದು ಘೋಷಿಸಿ, ಪ್ರಚಾರ ಕಾರ್ಯದಲ್ಲಿ ತೊಡಗಿವೆ.

‘ಭೋಜರಾಜ ಎಂಬಿಬಿಎಸ್‌’ ಮತ್ತು ‘ರಾಜ್‌ ಸೌಂಡ್ಸ್‌ ಅಂಡ್‌ ಲೈಟ್ಸ್’ ಚಿತ್ರತಂಡದ ಜತೆಗೆ ಈಗಾಗಲೇ ಮಾತುಕತೆ ಮಾಡಿದ್ದೇವೆ. ಬೇರೆ ಬೇರೆ ದಿನ ಚಿತ್ರ ಬಿಡುಗಡೆ ಮಾಡುವಂತೆ ಮನವಿ ಮಾಡಲಾಗಿದೆ. ಯಾವ ಸಿನಿಮಾ ಮೊದಲು ಸೆನ್ಸಾರ್‌ ಆಗಿದೆಯೋ ಆ ಚಿತ್ರಕ್ಕೆ ಮೊದಲ ಆದ್ಯತೆ ನೀಡುವ ನಿಯಮವಿದೆ. ಈ ಕುರಿತು ಪರಿಶೀಲನೆಗಾಗಿ ಸಮಿತಿಯೊಂದನ್ನು ರಚಿಸಲಾಗುವುದು’ ಎಂದು ಹೇಳುತ್ತಾರೆ ತುಳು ಚಿತ್ರ ನಿರ್ಮಾಪಕರ ಸಂಘದ ಅಧ್ಯಕ್ಷ ರಾಜೇಶ ಬ್ರಹ್ಮಾವರ.

‘ಎರಡು ವಾರಗಳ ಅಂತರ ಕಾಪಾಡಿ’

ಕೋಸ್ಟಲ್‌ವುಡ್‌ನಲ್ಲಿ ವರ್ಷಕ್ಕೆ ಸರಾಸರಿ 12ರಿಂದ 15 ಚಿತ್ರಗಳು ತೆರೆಗೆ ಬರುವ ಕಾರಣ ಕನಿಷ್ಠ ಮೂರು ವಾರಗಳ ಅಂತರ ಕಾಯ್ದುಕೊಂಡು ಚಿತ್ರ ಬಿಡುಗಡೆ ಮಾಡುವ ನಿಯಮ ರೂಪಿಸಲಾಗಿತ್ತು. ಕೋವಿಡ್‌ ಲಾಕ್‌ಡೌನ್‌ ಕಾರಣಕ್ಕೆ 18ಕ್ಕೂ ಅಧಿಕ ಸಿನಿಮಾಗಳು ಬಿಡುಗಡೆಗೆ ಬಾಕಿ ಇರುವ ಕಾರಣ ಚಿತ್ರಗಳ ನಡುವಿನ ಅಂತರವನ್ನು ಎರಡು ವಾರಕ್ಕೆ ಇಳಿಸಲಾಗಿದೆ. ತುಳು ಚಿತ್ರಕ್ಕೆ ಬಂಡವಾಳ ಹಾಕುವವರ ಸಂಖ್ಯೆ ಕಡಿಮೆ ಇರುವಾಗ ಸೀಮಿತ ಮಾರುಕಟ್ಟೆಯಲ್ಲಿ ಎಲ್ಲರೂ ಹೊಂದಾಣಿಕೆ ಮಾಡಿಕೊಂಡಿ ಮುನ್ನಡೆಯಬೇಕು. ಕೋವಿಡ್‌ನಿಂದ ಎಲ್ಲಾ ನಿರ್ಮಾಪಕರಿಗೆ ಕಷ್ಟವಾಗಿದೆ. ಈ ರೀತಿ ಸ್ಪರ್ಧೆ ಮಾಡುವುದರಿಂದ ಯಾರಿಗೂ ಪ್ರಯೋಜನವಾಗುವುದಿಲ್ಲ’ ಎನ್ನುತ್ತಾರೆ ರಾಜೇಶ್‌ ಬ್ರಹ್ಮಾವರ.

‘ಆರೋಗ್ಯಕರ ಬೆಳವಣಿಗೆಯಲ್ಲ’

‘ತುಳು ಭಾಷೆಯ ಮೇಲಿನ ಅಭಿಮಾನದಿಂದ ‘ಏರೆಗಾವುಯೆ ಕಿರಿಕಿರಿ’ ನಿರ್ದೇಶನ ಮಾಡಿದ್ದೇನೆ. ಕಳೆದ ಶುಕ್ರವಾರ ಬಿಡುಗಡೆಯಾದ ನಮ್ಮ ಸಿನಿಮಾಕ್ಕೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಬರುತ್ತಿದೆ. ಈ ಮಧ್ಯೆ ಡಿ.31ರಂದು ‘ಸೋಡಾ ಸರ್ಬತ್‌’ ಚಿತ್ರ ಬಿಡುಗಡೆ ಮಾಡಲಾಗುತ್ತದೆ. ಇದು ಆರೋಗ್ಯಕರ ಬೆಳವಣಿಗೆಯಲ್ಲ’ ಎಂದು ಬೇಸರ ವ್ಯಕ್ತಪಡಿಸುತ್ತಾರೆ ರಾಮ್‌ ಶೆಟ್ಟಿ.

(ಪ್ರತಿಕ್ರಿಯಿಸಿ–9513322936, editormng@prajavani.co.in)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT