ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿನಿಮಾ ಶೀರ್ಷಿಕೆಯಾಗಿ 'ಉರೀಗೌಡ ನಂಜೇಗೌಡ' ನೋಂದಣಿ ಮಾಡಿದ ಮುನಿರತ್ನ

Last Updated 17 ಮಾರ್ಚ್ 2023, 13:50 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಹೆಚ್ಚು ಸದ್ದು ಮಾಡಿರುವ ‘ಉರೀಗೌಡ– ನಂಜೇಗೌಡ’ ಹೆಸರುಗಳನ್ನು ಸಚಿವ ಮುನಿರತ್ನ ಸಿನಿಮಾ ಶೀರ್ಷಿಕೆಯಾಗಿ ನೋಂದಾಯಿಸಿದ್ದಾರೆ.

ತಮ್ಮ ಸಿನಿಮಾ ಸಂಸ್ಥೆ ವೃಷಭಾದ್ರಿ ಪ್ರೊಡಕ್ಷನ್ಸ್‌ ಬ್ಯಾನರ್‌ ಅಡಿಯಲ್ಲಿ ಈ ಶೀರ್ಷಿಕೆಯನ್ನು ನೋಂದಾಯಿಸಲಾಗಿದೆ. ಉರೀಗೌಡ–ನಂಜೇಗೌಡ ಅಥವಾ ನಂಜೇಗೌಡ–ಉರೀಗೌಡ ಎಂಬ ಹೆಸರನ್ನೂ ಇಡುವ ಆಯ್ಕೆಯನ್ನೂ ತಮ್ಮ ನೋಂದಣಿ ಪತ್ರದಲ್ಲಿ ಸೂಚಿಸಿದ್ದಾರೆ.

ರಾಜ್ಯ ರಾಜಕಾರಣದಲ್ಲಿ ಈ ಹೆಸರುಗಳು ಹೆಚ್ಚು ಸದ್ದು ಹಾಗೂ ವಿವಾದ ಸೃಷ್ಟಿಸಿವೆ. ಕಾರ್ಯಕ್ರಮವೊಂದರಲ್ಲಿ ಸಚಿವ ಡಾ.ಸಿ.ಎನ್‌. ಅಶ್ವತ್ಥನಾರಾಯಣ ಅವರು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯ ಅವರನ್ನು ಟೀಕಿಸುವ ಭರದಲ್ಲಿ ಟಿಪ್ಪು ಸುಲ್ತಾನ್‌ಗೆ ಉರೀಗೌಡ –ನಂಜೇಗೌಡರು ಬುದ್ಧಿ ಕಲಿಸಿದ ರೀತಿಯಲ್ಲೇ ಮತದಾರರು ನಡೆದುಕೊಳ್ಳಬೇಕು ಎಂದು ಕಟು ಶಬ್ದಗಳಲ್ಲಿ ಹೇಳಿದ್ದರು.

ಅಶ್ವತ್ಥನಾರಾಯಣ ಅವರ ಮಾತು ತೀವ್ರ ವಿವಾದ ಪಡೆಯಿತು. ಮುಂದೆ ಟಿಪ್ಪು ಸುಲ್ತಾನ್‌ನನ್ನು ಸಾಯಿಸಿದ್ದು ಉರಿಗೌಡ ನಂಜೇಗೌಡರು ಎಂದು ಬಿಜೆಪಿ ಪ್ರತಿಪಾದಿಸುತ್ತಾ ಬಂದಿತು. ಇತ್ತ ಕಾಂಗ್ರೆಸ್‌– ಜೆಡಿಎಸ್‌ ಈ ಮಾತನ್ನು ತೀವ್ರವಾಗಿ ವಿರೋಧಿಸಿದವು. ಈ ವಿವಾದಕ್ಕೆ ತುಪ್ಪ ಸುರಿಯುವಂತೆ ಇತ್ತೀಚೆಗೆ ಬೆಂಗಳೂರು –ಮೈಸೂರು 6 ಪಥಗಳ ರಾಷ್ಟ್ರೀಯ ಹೆದ್ದಾರಿಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಉದ್ಘಾಟಿಸುವ ದಿನದಂದು ಮಂಡ್ಯದ ಫ್ಯಾಕ್ಟರಿ ವೃತ್ತದ ಬಳಿ ಉರಿಗೌಡ ಮತ್ತು ದೊಡ್ಡನಂಜೇಗೌಡ ಹೆಸರಿನ ಮಹಾದ್ವಾರವನ್ನು ನಿರ್ಮಿಸಲಾಗಿತ್ತು. ಆದರೆ, ಈ ವ್ಯಕ್ತಿಗಳ ಬಗ್ಗೆ ಯಾರಿಗೂ ಕೂಡಾ ಸ್ಪಷ್ಟತೆ ಇರಲಿಲ್ಲ.

ಈ ನಡುವೆ ಮುನಿರತ್ನ ಶೀರ್ಷಿಕೆ ನೋಂದಾಯಿಸಿ, ಇದನ್ನು ಚಾರಿತ್ರಿಕ ಸಿನಿಮಾ ಎಂದು ಘೋಷಿಸಿದ್ದಾರೆ. ನಿರ್ದೇಶಕರು, ತಂತ್ರಜ್ಞರ ಹೆಸರು ಉಲ್ಲೇಖಿಸಿಲ್ಲ.

ಈ ಶೀರ್ಷಿಕೆ ನೋಂದಣಿಯಾಗುತ್ತಿದ್ದಂತೆಯೇ ಜೆಡಿಎಸ್‌ ನಾಯಕ ಎಚ್‌.ಡಿ.ಕುಮಾರಸ್ವಾಮಿ ತೀವ್ರ ಕಿಡಿಕಾರಿದ್ದಾರೆ.

‘ಸಚಿವ ಮುನಿರತ್ನ ಅವರು ಸಿನಿಮಾ ಮಾಡಿದರೆ ಸಿ.ಟಿ. ರವಿ ಕಥೆ ಬರೆದರೆ, ಸಚಿವ ಅಶ್ವತ್ಥನಾರಾಯಣ ಚಿತ್ರಕಥೆ ಬರೆಯುತ್ತಾರೆಯೇ’ ಎಂದು ವ್ಯಂಗ್ಯವಾಡಿದ್ದಾರೆ.

‘ಅವರು ( ಸಿ.ಟಿ.ರವಿ, ಅಶ್ವತ್ಥನಾರಾಯಣ) ಬರೆದರೂ ಬರೆಯಬಹುದು. ಏಕೆಂದರೆ, ಇವರಿಬ್ಬರೂ ಕುಲದ್ರೋಹಿಗಳಷ್ಟೇ ಅಲ್ಲ, ಒಕ್ಕಲು ಸಂಕುಲದ ವಿನಾಶಕರು’ ಎಂದು ಆಕ್ರೋಶ ಹೊರಹಾಕಿದ್ದಾರೆ.

‘ಕುದಿಯುತ್ತಿರುವ ಒಕ್ಕಲಿಗರ ನೋವಿನ ಮೇಲೆ ಮಾರಣಾಂತಿಕ ಬರೆ ಎಳೆಯುವಂತಿದೆ ಮುನಿರತ್ನರ ಈ ದುರಹಂಕಾರ. ರಾಜ್ಯ ಬಿಜೆಪಿ ಸೃಷ್ಟಿಸಿದ ಕಿರಾತಕ ಸುಳ್ಳನ್ನೇ ಸಿನಿಮಾ ಮಾಡಿ ಒಕ್ಕಲಿಗರನ್ನು ಇತಿಹಾಸದಲ್ಲಿ ಶಾಶ್ವತವಾಗಿ ಖಳನಾಯಕರನ್ನಾಗಿ ಚಿತ್ರಿಸುವುದೇ ಅವರ ದುರುದ್ದೇಶ. ಈ ದ್ರೋಹವನ್ನು ಒಕ್ಕಲಿಗರು ಸಹಿಸುವ ಪ್ರಶ್ನೆಯೇ ಇಲ್ಲ. ಈ ಮುನಿರತ್ನ ಅವರಿಗೂ ಮಂಡ್ಯದ ಒಕ್ಕಲಿಗರಿಗೂ ಸಂಬಂಧವೇನು? ಒಕ್ಕಲಿಗ ಕುಲದಲ್ಲೇ ಹುಟ್ಟಿ ಒಕ್ಕಲು ಸಂಕುಲಕ್ಕೆ ಟಿಪ್ಪು ಕೊಲೆಯ ಕೊಳೆ ಮೆತ್ತಿಸಲು ಹೊರಟಿರುವ ಒಕ್ಕಲು ಕುಲದ ಈ ಇಬ್ಬರು ನಿಜವಾದ ಖಳನಾಯಕರನ್ನು ಒಕ್ಕಲಿಗರೆಂದೂ ಕ್ಷಮಿಸರು. ಇದೆಲ್ಲವೂ ಒಕ್ಕಲಿಗರನ್ನು ರಾಜಕೀಯವಾಗಿ ಮುಗಿಸಿಬಿಡುವ ಬಿಜೆಪಿಯ ರಾಕ್ಷಸ ಬುದ್ಧಿಯ ಒಳ ಉದ್ದೇಶ ಅಲ್ಲದೆ ಮತ್ತೇನೂ ಅಲ್ಲ’ ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT