ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಂಡೆ ಮಹಾಕಾಳಿ ದೇವಸ್ಥಾನದಲ್ಲಿ ಸೆಟ್ಟೇರಿದ ‘ವೇಷʼ

Last Updated 19 ಜನವರಿ 2021, 11:57 IST
ಅಕ್ಷರ ಗಾತ್ರ

ಹಂಸಿನಿ ಕ್ರಿಯೇಷನ್ಸ್ ಲಾಂಛನದಲ್ಲಿ ನಿರ್ಮಾಣವಾಗುತ್ತಿರುವ ಹೊಸ ಸಿನಿಮಾ ‘ವೇಷ’ಕ್ಕೆ ಇತ್ತೀಚೆಗೆ ಗವಿಪುರಂ ಗುಟ್ಟಳ್ಳಿಯಲ್ಲಿರುವ ಬಂಡೆ ಮಾಹಾಕಾಳಿ ದೇವಸ್ಥಾನದಲ್ಲಿ ಮುಹೂರ್ತ ನೆರವೇರಿಸಲಾಯಿತು. ಕಾರ್ಯಕ್ರಮಕ್ಕೆ ವಿನೋದ್ ಪ್ರಭಾಕರ್ ಮುಖ್ಯ ಅತಿಥಿಯಾಗಿ ಆಗಮಿಸಿ ಹೊಸ ತಂಡಕ್ಕೆ ಬೆನ್ನು ತಟ್ಟಿದರು.

ಈಗಾಗಲೇ ಉಡುಂಬಾ, ಗೂಳಿಹಟ್ಟಿ ಚಿತ್ರ ಸೇರಿ ಹಲವು ಸಿನಿಮಾಗಳ ನಿರ್ದೇಶನ ವಿಭಾಗದಲ್ಲಿ ಕೆಲಸ ಮಾಡಿದ ಅನುಭವಿ ಪವನ್ ಕೃಷ್ಣ ‘ವೇಷ’ ಚಿತ್ರಕ್ಕೆ ನಿರ್ದೇಶನ ಮಾಡುತ್ತಿದ್ದಾರೆ. ನಿರ್ಮಾಪಕ, ನಾಯಕ ಆಗಿರುವವರು ರಘು.
ನಿರ್ದೇಶಕ ಪವನ್ ಕೃಷ್ಣ ಮಾತನಾಡಿ, ‘ಮಾಸ್, ಕಾಮಿಡಿ, ಸೆಂಟಿಮೆಂಟ್ ಮತ್ತು ಸಸ್ಪೆನ್ಸ್ ಹೀಗೆ ಈ ನಾಲ್ಕು ಅಂಶಗಳನ್ನು ಸೇರಿಸಿಕೊಂಡೇ ‘ವೇಷ’ ಚಿತ್ರ ಮೂಡಿಬರಲಿದೆ. ಜೀವನದಲ್ಲಿ ಪ್ರತಿಯೊಬ್ಬರೂ ಒಂದೊಂದು ವೇಷ ಹಾಕಿರುತ್ತಾರೆ. ಇಲ್ಲಿ ಎಲ್ಲರಿಗೂ ಒಂದೊಂದು ವೇಷವಿದೆ. ಅದನ್ನು ಹಾಕಿದ ಉದ್ದೇಶ ಏನು ಎಂಬುದನ್ನು ಸಿನಿಮಾದಲ್ಲಿಯೇ ನೋಡಿ’ ಎಂದರು.

ಜ. 27ರಿಂದ ಚಿತ್ರೀಕರಣಕ್ಕೆ ಚಾಲನೆ ಸಿಗಲಿದೆ. ಉಡುಪಿ, ಚಿಕ್ಕಮಗಳೂರು, ಕುಂದಾಪುರ ಸೇರಿ ಹಲವೆಡೆ ಚಿತ್ರೀಕರಣ ಮಾಡಿಕೊಳ್ಳಲಿದೆ ತಂಡ. ಒಟ್ಟಾರೆ 40 ದಿನಗಳ ಒಂದೇ ಶೆಡ್ಯೂಲ್‌ನಲ್ಲಿ ಚಿತ್ರವನ್ನು ಮುಗಿಸಿಕೊಳ್ಳುವುದು ನಿರ್ಮಾಪಕರ ಯೋಜನೆ.

ಈ ಚಿತ್ರದಲ್ಲಿ ತಾಯಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ, ಕಿರುತೆರೆ ಮತ್ತು ಬೆಳ್ಳಿತೆರೆಯ ನಟಿ ವಾಣಿಶ್ರೀ. ಯುವ ತಂಡದ ಜತೆಗೆ ಕೆಲಸ ಮಾಡುತ್ತಿರುವುದಕ್ಕೆ ಅವರಿಗೂ ಖುಷಿ ಇದೆ.
ರಘು ಮಾತನಾಡಿ, ‘ಮೂಲತಃ ನಾನು ರಂಗಭೂಮಿ ಹಿನ್ನೆಲೆಯಿಂದ ಬಂದವನು. ನಾಟಕ ಬರೆದು ಅಭಿನಯಿಸಿದ್ದೇನೆ. ಇತ್ತೀಚಿನ ಕೆಲ ವರ್ಷ ರಂಗಭೂಮಿಯಿಂದಲೂ ದೂರ ಉಳಿದಿದ್ದೆ. ಇದೀಗ ಸಿನಿಮಾ ಮೂಲಕ ಆಗಮಿಸುತ್ತಿದ್ದೇವೆ. ಒಂದು ಹೊಸ ರೀತಿಯ ಕತೆಯೊಂದಿಗೆ ಆಗಮಿಸುತ್ತಿದ್ದೇವೆ’ ಎಂದರು.

ಇನ್ನು ಮಂಜು ಪಾವಗಡ ಈ ಚಿತ್ರದಲ್ಲಿ ಶಿಕ್ಷಕನ ಪಾತ್ರದಲ್ಲಿದ್ದಾರೆ. ಜಯ್ ಶೆಟ್ಟಿ ಪ್ರಮುಖ ಪಾತ್ರ ನಿಭಾಯಿಸುತ್ತಿದ್ದಾರೆ. ಸೌಖ್ಯ ಗೌಡ ಮತ್ತು ನಿಧಿ ಮಾರೋಲಿ ನಾಯಕಿಯರಾಗಿದ್ದು, ಸಾಂಪ್ರದಾಯಿಕ ಗೆಟಪ್‌ನಲ್ಲಿ ಈ ಸಿನಿಮಾದಲ್ಲಿ ಅವರು ಕಾಣಿಸಿಕೊಳ್ಳಲಿದ್ದಾರೆ. ಅದೇ ರೀತಿ ನಾಯಕಿಯ ತಂಗಿಯ ಪಾತ್ರದಲ್ಲಿ ನೇಹಾ ಗೌಡ ಆಯ್ಕೆಯಾಗಿದ್ದಾರೆ.

ಚಿತ್ರದಲ್ಲಿ ಒಟ್ಟು 3 ಹಾಡುಗಳಿವೆ. ಕಿರಿಕ್ ಹುಡುಗ ಕೀರ್ತನ್ ಶೆಟ್ಟಿ ಕ್ರಿಯೇಟಿವ್ ಹೆಡ್ ಆಗಿದ್ದಾರೆ. ಉತ್ತಮ್ ಸಾರಂಗ್ ಸಂಗೀತ, ಸುರೇಂದ್ರ ಪಣಿಯೂರ್ ಛಾಯಾಗ್ರಹಣ, ಸನತ್ ಉಪ್ಪುಂದ ಸಂಕಲನ, ಸಹ ನಿರ್ದೇಶನ ಮತ್ತು ಸಂಭಾಷಣೆ ಪವನ್ ಕುಮಾರ್, ಜಾಗ್ವಾರ್ ಸಣ್ಣಪ್ಪ ಸಾಹಸ, ಪಿ. ರಾಮ್ ನೃತ್ಯ ನಿರ್ದೇಶನ, ಸಾಹಿತ್ಯ ಮನೀಷ್ ಮೋಯ್ಲಿ ಬರೆಯುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT