ಗುರುವಾರ , ಅಕ್ಟೋಬರ್ 22, 2020
27 °C

ಸ್ಪಿನ್‌ ಮಾಂತ್ರಿಕ ಮುತ್ತಯ್ಯ ಮುರಳೀಧರನ್‌ ಬಯೋಪಿಕ್‌ನಲ್ಲಿ ವಿಜಯ್‌ ಸೇತುಪತಿ ನಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಳ್ಳಿತೆರೆಯಲ್ಲಿ ಕ್ರೀಡಾಪಟುಗಳ ಬಯೋಪಿಕ್‌ ನಿರ್ಮಾಣವು ಹೊಸ ಟ್ರೆಂಡ್‌ ಆಗುತ್ತಿರುವುದು ಎಲ್ಲರಿಗೂ ತಿಳಿದಿದೆ. ‘ಮೇರಿ ಕೋಮ್’, ‘ದಂಗಲ್’, ‘ಭಾಗ್ ಮಿಲ್ಕಾ ಭಾಗ್‌’, ‘ಎಂ.ಎಸ್. ದೋನಿ’, ‘ಸಚಿನ್ ತೆಂಡೂಲ್ಕರ್’, ‘ಅಜರ್’, ‘ಸೂರ್ಮಾ’ –ಹೀಗೆ ಕ್ರೀಡಾಪಟುಗಳ ಜೀವನಗಾಥೆಗಳು ಬೆಳ್ಳಿ ಪರದೆ ಆವರಿಸಿ ಪ್ರೇಕ್ಷಕರಿಗೆ ಮೋಡಿ ಮಾಡಿವೆ. ಈಗ ಶ್ರೀಲಂಕಾದ ಖ್ಯಾತ ಕ್ರಿಕೆಟಿಗ ಮುತ್ತಯ್ಯ ಮುರಳೀಧರನ್‌ ಅವರ ಸರದಿ.

ತಮಿಳು ನಿರ್ದೇಶಕ ಎಂ.ಎಸ್‌. ಶ್ರೀಪತಿ ಅವರು ಸ್ಪಿನ್‌ ಮಾಂತ್ರಿಕ ಮುತ್ತಯ್ಯ ಮುರಳೀಧರನ್‌ ಅವರ ಬಯೋಪಿಕ್‌ಗೆ ಆ್ಯಕ್ಷನ್‌ ಕಟ್‌ ಹೇಳಲು ಸಿದ್ಧತೆ ನಡೆಸಿದ್ದಾರೆ. ಅಂದಹಾಗೆ ಪರದೆ ಮೇಲೆ ಮುರಳೀಧರನ್‌ ಪಾತ್ರಕ್ಕೆ ವಿಜಯ್‌ ಸೇತು‍ಪತಿ ಜೀವ ತುಂಬಲಿದ್ದಾರಂತೆ.

ಹಿಂದೆ ಈ ಬಯೋಪಿಕ್‌ನಲ್ಲಿ ನಟಿಸುವುದಾಗಿ ವಿಜಯ್‌ ಸೇತುಪತಿ ಘೋಷಿಸಿದ್ದು ರಾಜಕೀಯ ಬಣ್ಣ ಪಡೆದುಕೊಂಡಿತ್ತು. ವಿಜಯ್‌ ಅವರ ನಿರ್ಧಾರವನ್ನು ಹಲವು ರಾಜಕಾರಣಿಗಳು ವಿರೋಧಿಸಿದ್ದು ಉಂಟು. ಶ್ರೀಲಂಕಾದಲ್ಲಿರುವ ತಮಿಳು ಭಾಷಿಕರಿಗೆ ಗೌರವ ನೀಡುವ ಸಲುವಾಗಿ ಬಯೋಪಿಕ್‌ನಿಂದ ಹಿಂದೆ ಅವರು ಸರಿದಿದ್ದರು. ಈಗ ಮುರಳೀಧರನ್ ಬಯೋಪಿಕ್‌ನಲ್ಲಿ ನಟಿಸಲಿದ್ದಾರೆ ಎಂಬ ಸುದ್ದಿ ಕಾಲಿವುಡ್‌ ಅಂಗಳದಿಂದ ಹೊರಬಿದ್ದಿದೆ.

ಮೂವಿ ಟ್ರೈನ್‌ ಮೋಷನ್‌ ಪಿಕ್ಚರ್‌ ಮತ್ತು ದಾರ್‌ ಮೋಷನ್‌ ಪಿಕ್ಚರ್‌ನಡಿ ಇದಕ್ಕೆ ಬಂಡವಾಳ ಹೂಡಲಾಗುತ್ತಿದೆ. 2021ಕ್ಕೆ ಈ ಸಿನಿಮಾ ಸೆಟ್ಟೇರುವ ನಿರೀಕ್ಷೆಯಿದೆ. ಮುರಳೀಧರನ್‌ ಬಯೋಪಿಕ್‌ ನಿರ್ಮಾಣವು ಅವರ ಅಭಿಮಾನಿಗಳಲ್ಲಿ ಖುಷಿ ಹೆಚ್ಚಿಸಿದೆ. ಕ್ರಿಕೆಟ್‌ ಅಭಿಮಾನಿಗಳೂ ಮೆಚ್ಚುಗೆ ಸೂಚಿಸಿದ್ದಾರೆ. ಆದರೆ, ಮುರಳೀಧರನ್‌ ಅವರ ದೇಹದಾಢ್ಯಕ್ಕೆ ತಕ್ಕಂತೆ ವಿಜಯ್‌ ಸೇತುಪತಿ ಕಸರತ್ತು ನಡೆಸಬೇಕಿದೆ ಎಂಬ ಸಲಹೆಯನ್ನೂ ನೀಡಿದ್ದಾರೆ. 

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು