‘ವರದ’ ಸಿನಿಮಾ ಹೊಡೆದಾಟ ದೃಶ್ಯ ಚಿತ್ರೀಕರಣ ವೇಳೆ ಗಾಯಗೊಂಡ ‘ಮರಿ ಟೈಗರ್’

ಮಂಗಳವಾರ, ಏಪ್ರಿಲ್ 23, 2019
25 °C

‘ವರದ’ ಸಿನಿಮಾ ಹೊಡೆದಾಟ ದೃಶ್ಯ ಚಿತ್ರೀಕರಣ ವೇಳೆ ಗಾಯಗೊಂಡ ‘ಮರಿ ಟೈಗರ್’

Published:
Updated:

ಬೆಂಗಳೂರು: ನಟ ‘ಮರಿ ಟೈಗರ್’ ವಿನೋದ್‌ ಪ್ರಭಾಕರ್‌ ಮಾಗಡಿ ರಸ್ತೆಯಲ್ಲಿ ನಡೆಯುತ್ತಿರುವ ‘ವರದ’ ಸಿನಿಮಾದ ಹೊಡೆದಾಟದ ದೃಶ್ಯವೊಂದರ ಚಿತ್ರೀಕರಣದ ವೇಳೆ ಬುಧವಾರ ಆಯತಪ್ಪಿ ಬಿದ್ದು ಗಾಯಗೊಂಡಿದ್ದಾರೆ.

ಅಭಿಮಾನಿಗಳು ಆತಂಕಪಡುವಷ್ಟು ವಿನೋದ್‌ಗೆ ತೀವ್ರ ಸ್ವರೂಪದ ಗಾಯಗಳೇನು ಆಗಿಲ್ಲ. ನಾಗರಬಾವಿಯ ಎಎಚ್‌ಎ ಆರ್ಥೊಕೇರ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ. ವೈದ್ಯರು 5 ವಾರಗಳ ವಿಶ್ರಾಂತಿ ಸೂಚಿಸಿದ್ದಾರೆ. ಎಡಗಾಲಿನ ಮಂಡಿ ಚಿಪ್ಪಿನಲ್ಲಿ ಸಣ್ಣದಾಗಿ ಮೂಳೆ ಬಿರುಕು (ಏರ್‌ಲೈನ್‌ ಕ್ರಾಕ್‌) ಬಿಟ್ಟಿರುವುದರಿಂದ ವಿಶ್ರಾಂತಿ ಪಡೆಯಲೇಬೇಕಾಗಿದೆ ಎಂದು ವಿನೋದ್‌ ಕುಟುಂಬದ ಆಪ್ತ ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.

ಬುಧವಾರ ಬೆಳಿಗ್ಗೆ ಐವರು ಫೈಟರ್‌ಗಳೊಂದಿಗೆ ಹೊಡೆದಾಟದ ದೃಶ್ಯದಲ್ಲಿ ಪಾಲ್ಗೊಂಡಿದ್ದರು. ಫೈಟ್‌ ಮಾಸ್ಟರ್‌ ವಿಕ್ರಮ್‌ ನೇತೃತ್ವದಲ್ಲಿ ಕಿಕ್‌ ಮಾಡುವಾಗ ಆಯತಪ್ಪಿ ಬೆಡ್‌ ಮೇಲೆ ಬಿದ್ದರು. ಆಗ ಕಾಲು ಟ್ವಿಸ್ಟ್‌ ಆಗಿ, ನೋವು ಕಾಣಿಸಿಕೊಂಡಿತು.

ವಿನೋದ್‌ ಪ್ರಭಾಕರ್‌ ನಟನೆಯ ಆ್ಯಕ್ಸನ್ ಕಮ್‌ ಲವ್‌ ಸಿನಿಮಾ ‘ರಗಡ್‌’ ಕಳೆದ ವಾರವಷ್ಟೇ ಬಿಡುಗಡೆಯಾಗಿದೆ. ದೇಹವನ್ನು ಹುರಿಗೊಳಿಸಿ 8 ಪ್ಯಾಕ್‌ ಮಾಡಿಕೊಂಡಿರುವುದು ಚಿತ್ರರಸಿಕರ ಗಮನ ಸೆಳೆದಿದೆ. ಈ ಚಿತ್ರ ರಾಜ್ಯದಾದ್ಯಂತ ಯಶಸ್ವಿ ಪ್ರದರ್ಶನ ಕಾಣುತ್ತಿದ್ದು, ಮಂಗಳವಾರಷ್ಟೇ ಸುದ್ದಿಗೋಷ್ಠಿಯಲ್ಲಿ ಚಿತ್ರ ತಂಡದೊಂದಿಗೆ ನಟ ಸಂಭ್ರಮ ಹಂಚಿಕೊಂಡಿದ್ದರು.

ಮಾಗಡಿ ರಸ್ತೆಯಲ್ಲಿ ಮಂಗಳವಾರ ಫೈಟ್‌ ದೃಶ್ಯಕ್ಕೆ ರೋಪ್‌ ಶಾಟ್‌ ಚಿತ್ರೀಕರಿಸಿಕೊಳ್ಳುವಾಗ ಮುಂಗೈಗೆ ಸಣ್ಣ ಪ್ರಮಾಣದಲ್ಲಿ ತರಚು ಗಾಯ ಆಗಿರುವುದಾಗಿ ವಿನೋದ್‌ ಸುದ್ದಿಗೋಷ್ಠಿಯಲ್ಲಿ ಹೇಳಿದ್ದರು.

ಮೇಲುಕೋಟೆ, ಮೈಸೂರು ಭಾಗದಲ್ಲಿ ಚಿತ್ರೀಕರಣ ಮುಗಿಸಿ, ಕಳೆದ ಎರಡು ದಿನಗಳಿಂದ ಮಾಗಡಿ ರಸ್ತೆಯಲ್ಲಿ ಚಿತ್ರೀಕರಣದಲ್ಲಿ ಭಾಗಿಯಾಗಿದ್ದರು. ಒಂದು ದಿನವೂ ಬಿಡುವುದಿಲ್ಲದೆ ಚಿತ್ರೀಕರಣ ಸಾಗಿತ್ತು. ಚಿತ್ರತಂಡ ಇದೇ 15ರವರೆಗೆ ಚಿತ್ರೀಕರಣದ ಯೋಜನೆ ಹಾಕಿಕೊಂಡಿತ್ತು. ವರದ ಸಿನಿಮಾ ಮುಗಿದ ತಕ್ಷಣ ಮತ್ತೆ ಮೂರು ಸಿನಿಮಾಗಳಲ್ಲಿ ವಿನೋದ್‌ ತೊಡಗಿಕೊಳ್ಳಬೇಕಿತ್ತು. ಈಗ ನಮ್ಮನ್ನು ನಂಬಿಕೊಂಡಿದ್ದವರಿಗೆ ಮತ್ತು ಸಹ ಕಲಾವಿದರಿಗೆ ತೊಂದರೆಯಾಗಿಬಿಟ್ಟಿದೆ. ಅಲ್ಲದೆ, ಜಿಮ್‌ನಲ್ಲಿ ದೇಹ ಹುರಿಗೊಳಿಸಲು (ಬಾಡಿ ವರ್ಕೌಟ್‌) ಸಾಧ್ಯವಾಗದಂತಾಗಿದೆ ಎಂದು ನಟ ಬೇಸರ ತೋಡಿಕೊಂಡಿರುವುದಾಗಿ ಕುಟುಂಬದ ಆಪ್ತ ಮೂಲಗಳು ತಿಳಿಸಿವೆ.

 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 1

  Sad
 • 0

  Frustrated
 • 0

  Angry

Comments:

0 comments

Write the first review for this !