ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಟಿಟಿ ಅನಿವಾರ್ಯ, ತಡೆಯಲು ಸಾಧ್ಯವಿಲ್ಲ: ಶಿವರಾಜ್‌ಕುಮಾರ್ ಅಭಿಪ್ರಾಯ

ಚಿತ್ರರಂಗದಲ್ಲೂ ಬದಲಾವಣೆಯಾಗು ತ್ತಿದ್ದು, ಒಟಿಟಿಗೆ ನಾವು ಅನಿವಾರ್ಯವಾಗಿ ಹೊಂದಿಕೊಳ್ಳಲೇಬೇಕು: ಶಿವರಾಜ್‌ಕುಮಾರ್
Last Updated 15 ಡಿಸೆಂಬರ್ 2022, 4:15 IST
ಅಕ್ಷರ ಗಾತ್ರ

ಹುಬ್ಬಳ್ಳಿ: ‘ನಾವು ಆಧುನಿಕ ಜಗತ್ತಿನಲ್ಲಿದ್ದು, ಬದಲಾವಣೆಯತ್ತ ದಾಪುಗಾಲಿಡುತ್ತಿದ್ದೇವೆ. ಚಿತ್ರ ಬಿಡುಗಡೆಗೆ ಒಟಿಟಿಯೂ ಒಂದು ವೇದಿಕೆಯಾಗಿದ್ದು ಅದನ್ನು ತಡೆಯಲು ಸಾಧ್ಯವಿಲ್ಲ’ ಎಂದು ನಟ ಶಿವರಾಜ್‌ಕುಮಾರ್‌ ಅಭಿಪ್ರಾಯಪಟ್ಟರು.

ಅವರ ಹೊಸಚಿತ್ರ ‘ವೇದ’ ಬಿಡುಗಡೆ ಪೂರ್ವ ಸಮಾರಂಭದ ಹಿನ್ನೆಲೆಯಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಚಿತ್ರರಂಗದಲ್ಲೂ ಬದಲಾವಣೆಯಾಗು ತ್ತಿದ್ದು, ಒಟಿಟಿಗೆ ನಾವು ಅನಿವಾರ್ಯವಾಗಿ ಹೊಂದಿಕೊಳ್ಳಲೇಬೇಕು’ ಎಂದರು.

‘ಇತ್ತೀಚೆಗೆ ಸಿನಿಮಾಗಳ ಪೈರಸಿ ಹೆಚ್ಚುತ್ತಿದ್ದು, ಅದನ್ನು ತಡೆಯಲು ಚಿತ್ರರಂಗ ಸಾಕಷ್ಟು ಕ್ರಮಗಳನ್ನು ಕೈಗೊಳ್ಳುತ್ತಿದೆ. ಅದರ ಸಂಪೂರ್ಣ ತಡೆಗೆ ಸರ್ಕಾರವೂ ಅಗತ್ಯ ಕ್ರಮಕೈಗೊಳ್ಳಬೇಕು. ಹಾಗಾದಾಗ ಮಾತ್ರ ಕಲಾವಿದರು, ನಿರ್ಮಾಪಕರು ಹಾಗೂ ಚಿತ್ರದ ತಾಂತ್ರಿಕ ತಂಡ ನೆಮ್ಮದಿಯ ಬದುಕು ಕಟ್ಟಿಕೊಳ್ಳಲು ಸಾಧ್ಯ. ಯಾವುದೇ ಚಿತ್ರವನ್ನು ಯೋಜನಾಬದ್ಧವಾಗಿ ನಿರ್ಮಿಸಿದರೆ ಯಶಸ್ಸು ಪಡೆಯಬಹುದು. ಕೆಲವೊಮ್ಮೆ ಚಿತ್ರ ನಿರೀಕ್ಷೆ ಮೀರಿ ಯಶಸ್ಸು ಪಡೆಯುತ್ತದೆ. ಅದಕ್ಕೆ ‘ಕಾಂತಾರ’ ಜ್ವಲಂತ ನಿದರ್ಶನವಾಗಿದ್ದು, ನಾನಾ ಭಾಷೆಗಳಲ್ಲಿ ಡಬ್ಬಿಂಗ್‌ ಆಗಿ ಜನಮನ್ನಣೆ ಗಳಿಸಿದೆ’ ಎಂದು ಹೇಳಿದರು.

‘ಕನ್ನಡ ಚಿತ್ರಗಳಿಗೆ ಡಬ್ಬಿಂಗ್‌ ಪೂರಕವಾಗಿದೆ. ಬೇರೆ ಭಾಷೆಗಳಲ್ಲಿ ಚಿತ್ರ ಡಬ್ಬಿಂಗ್ ಮಾಡುವುದರಿಂದ ದೇಶ–ವಿದೇಶಗಳಲ್ಲಿ ಸಿನಿಮಾಪ್ರಿಯರು ಅದನ್ನು ವೀಕ್ಷಿಸುತ್ತಾರೆ. ನಮ್ಮ ಚಿತ್ರ ಜಗತ್ತೇ ನೋಡುತ್ತದೆ ಎಂದರೆ ಕಲಾವಿದರಿಗೆ ಅದು ಹೆಮ್ಮೆಯ ಸಂಗತಿ. ನಾನು ಅಭಿನಯಿಸಿದ ‘ಭಜರಂಗಿ’ ಚಿತ್ರ ಸಹ ಬೇರೆ ಭಾಷೆಗಳಲ್ಲಿ ಡಬ್ಬಿಂಗ್‌ ಆಗಿದ್ದು, ಈಗಲೂ ವೀಕ್ಷಿಸುತ್ತಿದ್ದಾರೆ’ ಎಂದರು.

‘ಪತ್ನಿ ಗೀತಾ ಅವರ ಹೆಸರಿನ ಬ್ಯಾನರ್‌ ಅಡಿ ಮೊದಲ ಹಾಗೂ ನನ್ನ ನಟನೆಯ 125 ನೇ ಚಿತ್ರ ‘ವೇದ’ ನಿರ್ಮಾಣವಾಗಿದ್ದು, ಡಿ.23ರಂದು ರಾಜ್ಯದಾದ್ಯಂತ ಬಿಡುಗಡೆಯಾಗಲಿದೆ. ಪ್ರೀತಿ, ಸಂತೋಷ, ಬದುಕು ಮತ್ತು ನಂಬಿಕೆಯ ಮೌಲ್ಯಗಳನ್ನು ಸಾರುತ್ತ, ಚಿತ್ರ ಮೌನವಾಗಿ ಸಾಗುತ್ತದೆ. ಬೆಂಗಳೂರು, ಮೈಸೂರು ಮತ್ತು ಕೇರಳದಲ್ಲಿ ಚಿತ್ರೀಕರಣವಾಗಿದ್ದು, ಮೂರು ಹಾಡುಗಳಿವೆ’ ಎಂದ ನಟ ಶಿವರಾಜ್‌ಕುಮಾರ್‌, ಮುಂದಿನ ಚಿತ್ರ ಕೆಡಿ(ಕರಟಕ-ದಮನಕ)ಯಲ್ಲಿ ನಟಿಸುತ್ತಿರುವುದಾಗಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT