ಮಂಗಳವಾರ, ಡಿಸೆಂಬರ್ 7, 2021
19 °C

ಪೈರಸಿ ತಡೆಗೆ ಕಾಯ್ದೆ ತರಲು ಬದ್ಧ: ಗೃಹ ಸಚಿವ ಆರಗ ಜ್ಞಾನೇಂದ್ರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ಪೈರಸಿ ತಡೆಗೆ ಕಾಯ್ದೆ ತರುವ ಅವಶ್ಯಕತೆ ಬಿದ್ದಲ್ಲಿ ಹಿಂದೆ ಮುಂದೆ ನೋಡುವುದಿಲ್ಲ. ಖಂಡಿತವಾಗಿಯೂ ಅದನ್ನು ಜಾರಿಗೆ ತರುತ್ತೇವೆ’ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ.

ಪೈರಸಿ ತಡೆಗೆ ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಹಾಗೂ ಇವುಗಳ ವಿಚಾರಣೆಗೆ ಪ್ರತ್ಯೇಕ ನ್ಯಾಯಾಲಯ ಸ್ಥಾಪಿಸಬೇಕು ಎಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಪ್ರತಿನಿಧಿಗಳು ಗೃಹ ಸಚಿವರಿಗೆ ಮಂಗಳವಾರ ಮನವಿಪತ್ರ ನೀಡಿದರು. ಮನವಿ ಸ್ವೀಕರಿಸಿ ಮಾತನಾಡಿದ ಅವರು, ‘ಆನ್‌ಲೈನ್‌ ಜೂಜಾಟ ನಿಷೇಧಿಸಲು ಮಸೂದೆ ತರಲು ಮುಂದಾದಾಗ ನಮ್ಮ ಮೇಲೆ ಒತ್ತಡ ಬಹಳಷ್ಟಿತ್ತು. ಆದರೂ, ಯಾರನ್ನೂ ಬೀದಿಪಾಲು ಮಾಡಲು ನಾವು ಬಿಡುವುದಿಲ್ಲ ಎಂದು ಇದನ್ನು ಜಾರಿಗೊಳಿಸಿದೆವು. ಹಾಗೆಯೇ ಪೈರಸಿ ತಡೆಯಲು ಕಠಿಣ ಕ್ರಮ ಕೈಗೊಳ್ಳುತ್ತೇವೆ. ಮಲ್ಟಿಪ್ಲೆಕ್ಸ್‌ ಹಾಗೂ ಚಿತ್ರಮಂದಿರಗಳಲ್ಲಿ ಟಿಕೆಟ್‌ ದರ ನಿಯಂತ್ರಣದ ಕುರಿತೂ ಅಧಿಕಾರಿಗಳ ಜೊತೆ ಚರ್ಚಿಸಿ ನಿರ್ಧಾರ ಕೈಗೊಳ್ಳುತ್ತೇವೆ’ ಎಂದರು.

‘ಸಿನಿಮಾ, ಸಾವಿರಾರು ಜನರಿಗೆ ಅನ್ನ ಕೊಡುವ ಉದ್ಯಮ. ಇದು ನಷ್ಟಕ್ಕೆ ಒಳಗಾಗಬಾರದು. ಇದರ ರಕ್ಷಣೆಗೆ ಕಾಯ್ದೆಗಳನ್ನು ತರುತ್ತೇವೆ. ಸರ್ಕಾರ ಈಗಾಗಲೇ ಸೈಬರ್‌ ಅಪರಾಧ ವಿಭಾಗವನ್ನು ಗಟ್ಟಿಗೊಳಿಸಿದ್ದು, ತಜ್ಞರನ್ನೇ ಇಲ್ಲಿ ನೇಮಿಸಿದ್ದೇವೆ. ಅಧಿಕಾರಿಗಳಿಗೆ ಮತ್ತಷ್ಟು ತರಬೇತಿ ನೀಡುವ ನಿಟ್ಟಿನಲ್ಲಿ ಈಗಾಗಲೇ ಗುಜರಾತ್‌ ಸರ್ಕಾರದ ಜೊತೆ ಒಪ್ಪಂದ ಮಾಡಿಕೊಂಡಿದ್ದೇವೆ. ತರಬೇತಿಗಾಗಿ 20 ಅಧಿಕಾರಿಗಳನ್ನು ಅಲ್ಲಿಗೆ ಕಳುಹಿಸಿದ್ದೇವೆ. ಇನ್ಫೊಸಿಸ್‌ ಕೂಡಾ ಈ ನಿಟ್ಟಿನಲ್ಲಿ ಸರ್ಕಾರದ ಜೊತೆ ಕೈಜೋಡಿಸಿದೆ’ ಎಂದರು. 

‘ಸಿನಿಮಾ ಚಿತ್ರೀಕರಣಕ್ಕೂ ಯಾವುದೇ ರೀತಿಯ ತೊಂದರೆ ಆಗದಂತೆ ಕ್ರಮಕೈಗೊಳ್ಳುತ್ತೇನೆ. ಚಿತ್ರೀಕರಣಕ್ಕೆ ಅನುಮತಿ ನೀಡುವ ಪ್ರಕ್ರಿಯೆಯಲ್ಲಿ ಯಾವುದೇ ಕಿರುಕುಳ ಅಥವಾ ತೊಂದರೆ ಆಗಬಾರದು. ಹಣಕಾಸಿನ ವ್ಯವಹಾರ ಇರಬಾರದು. ಈ ಕುರಿತು ಪೊಲೀಸರಿಗೆ ಸೂಚಿಸುತ್ತೇನೆ’ ಎಂದು ಭರವಸೆ ನೀಡಿದರು.

ಮಂಡಳಿಯ ಅಧ್ಯಕ್ಷ ಡಿ.ಆರ್‌.ಜೈರಾಜ್‌, ಉಪಾಧ್ಯಕ್ಷ ಉಮೇಶ್‌ ಬಣಕಾರ್‌, ಕಾರ್ಯದರ್ಶಿ ಎನ್‌.ಎಂ.ಸುರೇಶ್‌, ಮಾಜಿ ಅಧ್ಯಕ್ಷ ಸಾ.ರಾ.ಗೋವಿಂದು ಮತ್ತಿತರರು ಉಪಸ್ಥಿತರಿದ್ದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು