ಗುರುವಾರ , ಏಪ್ರಿಲ್ 22, 2021
22 °C

‘ಯುವರತ್ನ’ ಟಾಲಿವುಡ್‌ಗೆ; ಪುನೀತ್‌ಗೆ ಬಲು ಖುಷಿ

ಕೆ.ಎಂ. ಸಂತೋಷ್‌ಕುಮಾರ್‌‌ Updated:

ಅಕ್ಷರ ಗಾತ್ರ : | |

Prajavani

‘ಪವರ್‌ ಸ್ಟಾರ್‌’ ಪುನೀತ್‌ ರಾಜ್‌ಕುಮಾರ್‌ ಅವರ ನಟನೆಯ ಬಹುನಿರೀಕ್ಷೆಯ ‘ಯುವರತ್ನ’ ಮತ್ತು ‘ಜೇಮ್ಸ್‌’ ಚಿತ್ರಗಳನ್ನು ಕಣ್ತುಂಬಿಕೊಳ್ಳಲು ಸಿನಿಪ್ರಿಯರು ಕಾತರದಿಂದ ಎದುರು ನೋಡುತ್ತಿದ್ದಾರೆ. ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ ಈ ಎರಡು ಚಿತ್ರಗಳು ಬಹುತೇಕ ಈ ವರ್ಷವೇ ತೆರೆಗೆ ಬರುತ್ತಿದ್ದವು. ಕೋವಿಡ್‌–19 ಲಾಕ್‌ಡೌನ್‌ ಎಲ್ಲವನ್ನೂ ತಲೆಕೆಳಗು ಮಾಡಿಬಿಟ್ಟಿತು. ಪುನೀತ್‌ ‘ಯುವರತ್ನ’ ಚಿತ್ರ ಪೂರ್ಣಗೊಳಿಸಿದ್ದು, ಈಗ ‘ಜೇಮ್ಸ್‌’ ಕೈಗೆತ್ತಿಕೊಂಡಿದ್ದಾರೆ. ಈ ಚಿತ್ರದ ಚಿತ್ರೀಕರಣ ಲಾಕ್‌ಡೌನ್‌ ತೆರವಾದ ನಂತರ ಆರಂಭವಾಗಿದ್ದು, ಈಗ ಭರದಿಂದ ಚಿತ್ರೀಕರಣ ನಡೆಯುತ್ತಿದೆ. ಇನ್ನು 2021ರಲ್ಲಿ ಪುನೀತ್‌ ಅವರ ಹೊಸ ಚಿತ್ರವೊಂದು ಸೆಟ್ಟೇರುತ್ತಿದೆ.

2021ರ ಏಪ್ರಿಲ್‌ನಲ್ಲಿ ಹೊಂಬಾಳೆ ಫಿಲಂಸ್‌ ಬ್ಯಾನರ್‌ನಡಿ ಮತ್ತು ಯುವರತ್ನದ ನಿರ್ದೇಶಕ ಸಂತೋಷ್ ಆನಂದ್‌ ರಾಮ್‌ ಅವರ ನಿರ್ದೇಶನದಲ್ಲಿಯೇ ಮತ್ತೊಂದು ಕೌಟುಂಬಿಕ ಮನರಂಜನೆಯ ಕಮರ್ಶಿಯಲ್‌ ಚಿತ್ರವನ್ನು ಕೈಗೆತ್ತಿಕೊಳ್ಳುತ್ತಿದ್ದಾರೆ.

ಬಳ್ಳಾರಿ ಜಿಲ್ಲೆಯ ಹೊಸಪೇಟೆ ಸುತ್ತಮುತ್ತ ‘ಜೇಮ್ಸ್’ ಚಿತ್ರದ ಚಿತ್ರೀಕರಣ ಮುಗಿಸಿಕೊಂಡು, ಈಗ ರಾಜಧಾನಿ ಬೆಂಗಳೂರಿನಲ್ಲಿ ನಡೆಯುತ್ತಿರುವ ಚಿತ್ರೀಕರಣದಲ್ಲಿ ಪುನೀತ್‌ ಪಾಲ್ಗೊಂಡಿದ್ದಾರೆ. ಚಿತ್ರೀಕರಣದ ಬಿಡುವಿನ ವೇಳೆಯಲ್ಲಿ ‘ಪ್ರಜಾಪ್ಲಸ್‌’ಗೆ ನೀಡಿದ ಸಂದರ್ಶನದಲ್ಲಿ ಹಲವು ಸಂಗತಿಗಳನ್ನು ಅವರು ಹಂಚಿಕೊಂಡಿದ್ದಾರೆ.

‘ಯುವರತ್ನ’ ಬಿಡುಗಡೆಯನ್ನು ಸಿನಿಪ್ರಿಯರು ಯಾವಾಗ ನಿರೀಕ್ಷಿಸಬಹುದು ಎಂದಾಗ, ‘ಈ ಸಿನಿಮಾ ಈ ವರ್ಷವೇ ಬಿಡುಗಡೆಯಾಗಬೇಕಿತ್ತು. ಕೋವಿಡ್‌–19 ಲಾಕ್‌ಡೌನ್‌ನಿಂದಾಗಿ ಬಿಡುಗಡೆಯಲ್ಲಿ ವ್ಯತ್ಯಯವಾಗಿರುವುದು ಎಲ್ಲರಿಗೂ ಗೊತ್ತೇ ಇದೆ. ಎರಡು ಹಾಡುಗಳು ಚಿತ್ರೀಕರಣಕ್ಕೆ ಬಾಕಿ ಉಳಿದಿದ್ದವು. ಒಂದು ತಿಂಗಳ ಹಿಂದೆಯಷ್ಟೇ ಈ ಎರಡು ಹಾಡುಗಳ ಚಿತ್ರೀಕರಣವೂ ಮುಗಿದಿದೆ. ಚಿತ್ರೋದ್ಯಮದ ಚಟುವಟಿಕೆಗಳು ಸಹಜ ಸ್ಥಿತಿಗೆ ಮರಳಿದ ನಂತರ ಈ ಚಿತ್ರ ಬಿಡುಗಡೆಯಾಗಲಿದೆ. ಇಂಥದ್ದೇ ದಿನ ತೆರೆಕಾಣಲಿದೆ ಎಂದು ಹೇಳುವ ಪರಿಸ್ಥಿತಿ ಈಗ ಇಲ್ಲ. ನಿರ್ಮಾಪಕರು ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಿದ್ದಾರೆ’ ಎಂದು ಪುನೀತ್‌ ಮಾತು ಆರಂಭಿಸಿದರು.

‘ಲಾಕ್‌ಡೌನ್‌ ನಂತರ ಎಲ್ಲಾ ವ್ಯಾಪಾರಗಳು ಚಿಗುರಿಕೊಳ್ಳುತ್ತಿರುವಂತೆ ಚಿತ್ರೋದ್ಯಮದ ವ್ಯವಹಾರಗಳು ಚಿಗುರಲಿವೆ ಎನ್ನುವ ನಿರೀಕ್ಷೆಯೊಂದಿಗೆ ನಾವು ಚಿತ್ರದ ಚಟುವಟಿಕೆಗಳನ್ನು ಶುರು ಮಾಡಿದ್ದೇವೆ. ಮಂಸೋರೆ ನಿರ್ದೇಶನದ ಲಾಕ್‌ಡೌನ್‌ ನಂತರ ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ಮೊದಲ ಚಿತ್ರ ‘ಆ್ಯಕ್ಟ್‌ 1978’ ಚೆನ್ನಾಗಿ ಪ್ರದರ್ಶನ ಕಾಣುತ್ತಿರುವುದು ಒಳ್ಳೆಯ ಸಂಗತಿ. ಈಗ ಎಲ್ಲರ ನಿರೀಕ್ಷೆಗಳು ಸಹಜವಾಗಿಯೇ ಗರಿಗೆದರುತ್ತಿವೆ. ಸಿನಿಮಾಗಳು ಹೆಚ್ಚಾಗಿ ಚಿತ್ರಮಂದಿರಗಳಲ್ಲೇ ಬಿಡುಗಡೆಯಾಗಬೇಕೆನ್ನುವುದು ನನ್ನ ಆಶಯವೂ ಆಗಿದೆ’ ಎನ್ನಲು ಅವರು ಮರೆಯಲಿಲ್ಲ.

‘ಯುವರತ್ನ’ ಟಾಲಿವುಡ್‌ಗೆ ಲಗ್ಗೆ ಇಡುತ್ತಿರುವ ಬಗ್ಗೆ ಪ್ರಶ್ನಿಸಿದಾಗ ‘ತೆಲುಗಿನಲ್ಲೂ ಈ ಚಿತ್ರ ಬಿಡುಗಡೆಯಾಗುತ್ತಿರುವುದು ತುಂಬಾ ಸಂತೋಷದ ವಿಚಾರ. ನಮ್ಮ ಚಿತ್ರಗಳಿಗೆ ತೆಲುಗು ಚಿತ್ರರಂಗದಲ್ಲಿ ಮೊದಲಿನಿಂದಲೂ ಬೆಂಬಲ, ಪ್ರೋತ್ಸಾಹ ಇದ್ದೇ ಇದೆ. ಈಗ ಅದರಲ್ಲೂ ಯುವರತ್ನ ನೇರವಾಗಿ ಬಿಡುಗಡೆಯಾಗುತ್ತಿರುವುದು ಇನ್ನಷ್ಟು ಖುಷಿ ನೀಡಿದೆ. ಚಿತ್ರದ ನಿರ್ಮಾಪಕ ಮತ್ತು ನಿರ್ದೇಶಕರು ಈ ಚಿತ್ರವನ್ನು ತೆಲುಗಿಗೂ ಕೊಂಡೊಯ್ಯುವ ನಿರ್ಧಾರ ಮಾಡಿದರು. ನಮ್ಮ ಕನ್ನಡ ಚಿತ್ರಗಳು ಬೇರೆಯ ಚಿತ್ರರಂಗಗಳಲ್ಲೂ ಮಾರುಕಟ್ಟೆ ಕಂಡುಕೊಳ್ಳಬೇಕು. ಆ ನಿಟ್ಟಿನಲ್ಲಿ ಇವೆಲ್ಲವೂ ಒಳ್ಳೆಯ ಬೆಳವಣಿಯಾಗಿದ್ದು, ನಮ್ಮ ಪ್ರಯತ್ನಗಳು ಸಾಗಿವೆ. ನೋಡೋಣ ಮುಂದೆ ಏನಾಗುತ್ತದೆಯೋ’ ಎಂದು ಮಾತು ವಿಸ್ತರಿಸಿದರು.

ನಮ್ಮ ಪಿಆರ್‌ಕೆ ಪ್ರೊಡಕ್ಷನ್ನಿನಡಿ ನಿರ್ಮಿಸಿರುವ ಫ್ರೆಂಚ್‌ ಬಿರ್ಯಾನಿ ಮತ್ತು ಲಾ ಸಿನಿಮಾಗಳನ್ನು ಲಾಕ್‌ಡೌನ್‌ ಅವಧಿಯಲ್ಲಿ ಚಿತ್ರಮಂದಿರಗಳು ಸ್ಥಗಿತಗೊಂಡಿದ್ದರಿಂದ ನಾವು ಒಟಿಟಿಯಲ್ಲೇ ಬಿಡುಗಡೆ ಮಾಡಿದ್ದೆವು. ಸಿನಿಪ್ರಿಯರು ಈ ಎರಡು ಚಿತ್ರಗಳನ್ನು ಪ್ರೀತಿಯಿಂದ ಸ್ವಾಗತಿಸಿ, ಪ್ರೋತ್ಸಾಹಿಸಿದರು. ಲಾಕ್‌ಡೌನ್‌ ಅವಧಿಯಲ್ಲಿ ಆಗಿರುವ ಅತ್ಯುತ್ತಮ ಕೆಲಸವೆಂದರೆ ಇದೊಂದೇ ಕೆಲಸ ಎಂದ ಪುನೀತ್‌, ಪಿಆರ್‌ಕೆ ಪ್ರೊಡಕ್ಷನ್‌ನಡಿ ‘ಫ್ಯಾಮಿಲಿ ಪ್ಯಾಕ್‌’ ಚಿತ್ರದ ನಿರ್ಮಾಣ ಕೆಲಸಗಳು ಶುರುವಾಗಿರುವುದನ್ನು ಹೇಳಿದರು.

‘ಜೇಮ್ಸ್‌’ ಚಿತ್ರದ ಬಗ್ಗೆ ಮಾತು ಹೊರಳಿದಾಗ, ‘ಇದೊಂದು ಕಮರ್ಶಿಯಲ್‌ ಸಿನಿಮಾ. ಕನ್ನಡ ಸಿನಿಪ್ರಿಯರಿಗೆ ಇಷ್ಟವಾಗುವಂತೆ ಪಾತ್ರವನ್ನು ಚೇತನ್‌ಕುಮಾರ್‌ ಹೆಣೆದಿದ್ದಾರೆ. ಚಿತ್ರೀಕರಣ ಭರದಿಂದ ನಡೆಯುತ್ತಿದೆ. ಶ್ರೀಕಾಂತ್‌, ಅನುಪ್ರಭಾಕರ್‌ ಅವರು ನಮ್ಮ ತಂಡ ಕೂಡಿಕೊಂಡಿದ್ದಾರೆ’ ಎನ್ನುವ ಮಾತು ಸೇರಿಸಿದರು. ಸತ್ಯ ಪ್ರಕಾಶ್‌ ನಿರ್ದೇಶನದಡಿ ನಿಮ್ಮ ಚಿತ್ರ ಯಾವಾಗ ಶುರುವಾಗಲಿದೆ ಎಂದಾಗ, ಅದಿನ್ನೂ ಅಂತಿಮಗೊಂಡಿಲ್ಲ. ಮಾತುಕತೆಯ ಹಂತದಲ್ಲಿದೆ ಎಂದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು