ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Netflix | ಪಾಸ್‌ವರ್ಡ್‌ ಹಂಚಿಕೊಳ್ಳುವುದು ಭಾರತದಲ್ಲಿ ಇಂದಿನಿಂದ ಬಂದ್

Published 20 ಜುಲೈ 2023, 7:39 IST
Last Updated 20 ಜುಲೈ 2023, 7:39 IST
ಅಕ್ಷರ ಗಾತ್ರ

ನವದೆಹಲಿ: ಒಬ್ಬರ ನೆಟ್‌ಫ್ಲಿಕ್ಸ್‌ ಐಡಿ ಪಾಸ್‌ವರ್ಡ್‌ನಲ್ಲೇ ಹಲವರು ಒಟಿಟಿ ಮನರಂಜನೆ ಅನುಭವಿಸುವುದನ್ನು ನೆಟ್‌ಫ್ಲಿಕ್ಸ್‌ ಭಾರತದಲ್ಲಿ ಇಂದಿನಿಂದ ಸ್ಥಗಿತಗೊಳಿಸಿದೆ.

ನೆಟ್‌ಫ್ಲಿಕ್ಸ್‌ಗೆ ಭಾರತದಲ್ಲಿ ಸಾಕಷ್ಟು ಜನಪ್ರಿಯತೆ ಲಭ್ಯವಾಗುತ್ತಿದ್ದಂತೆ ಅದರ ಬಳಕೆದಾರರ ಸಂಖ್ಯೆಯೂ ಏರುಮುಖವಾಗಿದೆ. ಅದರಲ್ಲೂ ಸ್ನೇಹಿತರ ಅಥವಾ ಸಂಬಂಧಿಕರ ಖಾತೆಯ ಪಾಸ್‌ವರ್ಡ್ ಅನ್ನೇ ಬಳಸಿ ತಾವೂ ನೆಟ್‌ಫ್ಲಿಕ್ಸ್‌ನಲ್ಲಿ ಪ್ರಸಾರವಾಗುವ ಚಿತ್ರ ಹಾಗೂ ವೆಬ್‌ ಸೀರೀಸ್‌ಗಳ ಮಜವನ್ನು ಸವಿಯುವ ಹಲವರ ಆಸೆಗೆ ನೆಟ್‌ಫ್ಲಿಕ್ಸ್ ತಣ್ಣೀರೆರಚಿದೆ.

ಯಾವುದೇ ಮುನ್ಸೂಚನೆ ನೀಡದೆ ನೆಟ್‌ಫ್ಲಿಕ್ಸ್ ಜಾರಿಗೆ ತಂದಿರುವ ಈ ಕ್ರಮದಿಂದಾಗಿ ಒಟಿಟಿ ವಿಕ್ಷಕರು ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ತನ್ನ ನಿರ್ಧಾರವನ್ನು ಬ್ಲಾಗ್‌ ಮೂಲಕ ಹಂಚಿಕೊಂಡಿರುವ ನೆಟ್‌ಫ್ಲಿಕ್ಸ್, ‘ತಾವು ಮಾತ್ರವಲ್ಲದೆ ಇತರರೊಂದಿಗೂ ನೆಟ್‌ಫ್ಲಿಕ್ಸ್‌ ಹಂಚಿಕೊಂಡ ಗ್ರಾಹಕರಿಗೆ ಇಂದಿನಿಂದ ಇಮೇಲ್‌ ಮೂಲಕ ಸಂದೇಶ ಕಳುಹಿಸಲಾಗುವುದು. ನಿಗದಿತ ಸಾಧನ ಹೊರತುಪಡಿಸಿ ಅದೇ ಖಾತೆಯಿಂದ ಬೇರೆ ಕಡೆ ನೆಟ್‌ಫ್ಲಿಕ್ಸ್‌ ತೆರೆದರೆ ಪ್ರೊಫೈಲ್‌ ವರ್ಗಾವಣೆ ಹಾಗೂ ಬಳಕೆಯ ನಿರ್ವಹಣೆ ಮತ್ತು ಸಾಧನ ಕುರಿತು ಮಾಹಿತಿ ಕೇಳಲಾಗುವುದು’ ಎಂದು ಹೇಳಿದೆ.

‘ನಮ್ಮ ಗ್ರಾಹಕರಿಗೆ ಮನರಂಜನೆಯ ಹಲವು ಅವಕಾಶಗಳಿರುವುದು ನಮಗೂ ಗೊತ್ತಿದೆ. ಹೀಗಾಗಿ ಹೊಸ ಚಿತ್ರಗಳು ಹಾಗೂ ಟಿವಿ ಕಾರ್ಯಕ್ರಮಗಳಿಗಾಗಿ ಸಾಕಷ್ಟು ಹಣವನ್ನು ಖರ್ಚು ಮಾಡುತ್ತಿದ್ದೇವೆ. ವೀಕ್ಷಕರ ಅಭಿರುಚಿ, ಮನಸ್ಸು ಹಾಗೂ ಭಾಷೆಗಳಿಗೆ ತಕ್ಕಂತೆ ವಿಸ್ತೃತ ಆಯ್ಕೆಯನ್ನು ನೀಡುತ್ತಿದ್ದೇವೆ. ಹೀಗಾಗಿ ನೆಟ್‌ಫ್ಲಿಕ್ಸ್ ನೋಡುಗರಿಗೆ ವಿಶೇಷ ಅನುಭೂತಿ ನೀಡುವುದು ನಮ್ಮ ಉದ್ದೇಶ’ ಎಂದಿದೆ.

ನೆಟ್‌ಫ್ಲಿಕ್ಸ್ ಬಳಕೆದಾರರು ಏನು ಮಾಡಬೇಕು?

ನೆಟ್‌ಫ್ಲಿಕ್ಸ್ ಖಾತೆ ಹೊಂದಿರುವವರು ತಮ್ಮ ಖಾತೆಯ ಮೂಲಕ ಯಾರೆಲ್ಲಾ ಲಾಗಿನ್ ಆಗಿದ್ದಾರೆ ಎಂಬುದನ್ನು ಮೊದಲು ಪತ್ತೆ ಮಾಡಬೇಕು. ಇದಕ್ಕಾಗಿ ಸೆಕ್ಯುರಿಟಿ ಅಂಡ್‌ ಪ್ರೈವೆಸಿ ಸೆಟ್ಟಿಂಗ್‌ನಲ್ಲಿರುವ ತಮ್ಮ ಖಾತೆಯನ್ನು ಆಯ್ಕೆ ಮಾಡಿ, ‘ಮ್ಯಾನೇಜ್‌ ಆಕ್ಸೆಸ್‌ ಅಂಡ್ ಡಿವೈಸ್’ ಅನ್ನು ಆಯ್ಕೆ ಮಾಡಬೇಕು.

ಯಾವುದಕ್ಕೆ ಅನುಮತಿ ಇಲ್ಲವೋ ಅದನ್ನು ಸೈನ್‌ಔಟ್ ಮಾಡಬೇಕು. ತಮ್ಮ ಪಾಸ್‌ವರ್ಡ್‌ ಅನ್ನು ಬದಲಿಸಬೇಕು. ಹೀಗಾಗಿಯೂ ಹೊರಗಿನವರು ಒಬ್ಬರ ಖಾತೆಯಿಂದ ನೆಟ್‌ಫ್ಲಿಕ್ಸ್ ಬಳಸಿದರೆ, ಅವರಿಗೇ ಪ್ರೊಫೈಲ್ ವರ್ಗಾವಣೆ ಆಗಲಿದೆ.

ಹಾಗಿದ್ದರೆ ನೆಟ್‌ಫ್ಲಿಕ್ಸ್ ಹೌಸ್‌ಹೋಲ್ಡ್‌ ಆಯ್ಕೆ ಹೇಗೆ?

ಒಂದೇ ಇಂಟರ್‌ನೆಟ್‌ ಸಂಪರ್ಕದಲ್ಲಿರುವ ಟಿವಿಯನ್ನು ಬಳಕೆದಾರರ ಸ್ವತ್ತು ಎಂದು ನೆಟ್‌ಫ್ಲಿಕ್ಸ್ ಪರಿಗಣಿಸುತ್ತದೆ. ಹೀಗಾಗಿ ಅಂಥ ಗ್ರಾಹಕರು ತಮ್ಮ ಟಿವಿ ಮೂಲಕ ನೆಟ್‌ಫ್ಲಿಕ್ಸ್‌ಗೆ ಸೈನ್‌ ಇನ್‌ ಆಗಬೇಕು ಎಂದು ಹೇಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT