ಗುರುವಾರ, 28 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಲಿಂಗತ್ವ ಅಲ್ಪಸಂಖ್ಯಾತ’ಳಾದ ಸುಷ್ಮಿತಾ ಸೇನ್‌: ಗಣೇಶನಿಂದ ಶ್ರೀಗೌರಿಯಾದ ಕಥೆ

Published 7 ಆಗಸ್ಟ್ 2023, 14:36 IST
Last Updated 7 ಆಗಸ್ಟ್ 2023, 14:36 IST
ಅಕ್ಷರ ಗಾತ್ರ

ಮುಂಬೈ: ‘ನಾವು ಚಪ್ಪಾಳೆ ತಟ್ಟುವುದಿಲ್ಲ, ಬದಲಿಗೆ ಚಪ್ಪಾಳೆ ತಟ್ಟಿಸಿಕೊಳ್ಳುತ್ತೇವೆ’ ಎಂಬ ಆತ್ಮವಿಶ್ವಾಸದ ಹೇಳಿಕೆಯನ್ನು ನಟಿ ಸುಷ್ಮಿತಾ ಸೇನ್ ಹೇಳಿಕೆಯುಳ್ಳ ‘ತಾಲಿ‘ ವೆಬ್‌ ಸಿರೀಸ್‌ನ ಟ್ರೈಲರ್ ಬಿಡುಗಡೆಯಾಗಿದೆ.

ಗಣೇಶನಿಂದ ಶ್ರೀಗೌರಿಯಾಗುವವರೆಗಿನ ಕಥೆಯನ್ನು ಎಳೆಎಳೆಯಾಗಿ ಬಿಚ್ಚಿಟ್ಟಿರುವ ಸುಷ್ಮಿತಾ, ಲಿಂಗತ್ವ ಅಲ್ಪಸಂಖ್ಯಾತರಾಗುವ ಬದುಕು ಹಾಗೂ ಬವಣೆಯನ್ನು ಹಂಚಿಕೊಂಡಿದ್ದಾರೆ.

ಜಿಯೊ ಸಿನಿಮಾದಲ್ಲಿ ಪ್ರದರ್ಶನ ಕಾಣಲಿರುವ ‘ತಾಲಿ’ ಎಂಬ ವೆಬ್‌ಸಿರೀಸ್‌ನ ಟ್ರೈಲರ್‌ ಬಿಡುಗಡೆಗೊಂಡಿದ್ದು, ನೈಜ ಪಾತ್ರದಲ್ಲಿ ಸುಷ್ಮಿತಾ ಅಭಿನಯಿಸಿದ್ದಾರೆ. ಶ್ರೀಗೌರಿ ಸಾವಂತ್‌ ಎಂಬ ಪಾತ್ರದಲ್ಲಿ ಬೋಲ್ಡ್‌ ಆಗಿ ಕಾಣಿಸಿಕೊಂಡಿದ್ದಾರೆ. 

‘ತಾನು ತಾಯಿಯಾಗಬೇಕು’ ಎಂಬ ಬಯಕೆಯನ್ನು ಬಹಿರಂಗವಾಗಿ ಹೇಳುವ ಮೂಲಕ ಬಾಲಕ ಗಣೇಶ ತರಗತಿಯಲ್ಲಿ ಅವಮಾನಕ್ಕೊಳಗಾಗುವ ದೃಶ್ಯದೊಂದಿಗೆ ಟ್ರೈಲರ್ ಆರಂಭವಾಗುತ್ತದೆ. ತರಗತಿಯಲ್ಲಾದ ಅವಮಾನದ ಜತೆಗೂ ಬಾಲಕ ಗಣೇಶ ಸಮಾಜದಲ್ಲಿ ತನ್ನ ಸ್ಥಾನವನ್ನು ಹೇಗೆ ಸ್ಥಾಪಿಸಿಕೊಳ್ಳುತ್ತಾನೆ? ನಂತರ ಶ್ರೀಗೌರಿಯಾಗಿ ಹೇಗೆ ಬದಲಾವಣೆ ಆಗುತ್ತದೆ? ಮತ್ತು ಅದು ಎಂಥ ಸನ್ನಿವೇಶಗಳಿಗೆ ಕರೆದುಕೊಂಡು ಹೋಗುತ್ತದೆ ಎಂಬ ಸಂಕ್ಷಿಪ್ತ ರೂಪ ಟ್ರೈಲರ್‌ನಲ್ಲಿದೆ.

ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಇದನ್ನು ಹಂಚಿಕೊಂಡಿರುವ ಸುಷ್ಮಿತಾ ಸೇನ್, ‘ತನ್ನ ಸ್ವಾಭಿಮಾನ, ಸಮ್ಮಾನ ಮತ್ತು ಸ್ವಾತಂತ್ರದ ಕಥೆ ತೆಗೆದುಕೊಂಡು ಗೌರಿ ಬಂದಿದ್ದಾಳೆ’ ಎಂದು ಬರೆದುಕೊಂಡಿದ್ದಾರೆ.

Video | ಜಗವೇ ಅಣಕಿಸಿದರೂ ಅಮ್ಮ ಅಪ್ಪಿದಳು ಹೆಮ್ಮರದಂತೆ: ತೃತೀಯ ಲಿಂಗಿ ನೀತು ಮಾತು

‘ಬೈಗುಳದಿಂದ ಚಪ್ಪಾಳೆವರೆಗಿನ ಪಯಣವಿದು’ ಶರಾದೊಂದಿಗೆ ‘ತಾಲಿ’ಯ ಟೀಸರ್ ಅನ್ನು ಅವರು ಇತ್ತೀಚೆಗೆ ಹಂಚಿಕೊಂಡಿದ್ದರು. ಆ. 15ರಂದು ಈ ಹೊಸ ಸಿರೀಸ್ ಪ್ರಸಾರವಾಗಲಿದೆ. ಕ್ಷಿತಿಜ್ ಪಟವರ್ಧನ್ ಅವರು ಕಥೆ ಬರೆದಿದ್ದಾರೆ. ರವಿ ಜಾಧವ್ ಇದರ ನಿರ್ದೇಶಕರು. ಕಾರ್ತಿಕ್ ಡಿ. ನಿಷಾಂದಾರ್, ಅರ್ಜುನ್ ಸಿಂಗ್ ಬರನ್ ಹಾಗೂ ಆಫೀಫಾ ನಾಡಿಯಾವಾಲಾ ಸೈಯದ್ ಅವರು ಇದರ ನಿರ್ಮಾಪಕರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT