ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿನಿಮಾ ವಿಮರ್ಶೆ| ಧನುಷ್ ನಟನೆಯ‘ಕರ್ಣನ್’: ದಮನಿತರ ಆರ್ತನಾದಕ್ಕೆ ರೂಪಕಗಳ ಚೌಕಟ್ಟು

Last Updated 10 ಏಪ್ರಿಲ್ 2021, 12:04 IST
ಅಕ್ಷರ ಗಾತ್ರ

ಚಿತ್ರ: ಕರ್ಣನ್ (ತಮಿಳು)

ನಿರ್ಮಾಣ: ಕಲೈಪುಲಿ ಎಸ್. ತನು

ನಿರ್ದೇಶನ: ಮಾರಿ ಸೆಲ್ವರಾಜ್

ತಾರಾಗಣ: ಧನುಷ್, ಲಾಲ್ ಪಾಲ್, ನಟರಾಜನ್ ಸುಬ್ರಮಣಿಯಂ, ರಾಜಿಶಾ ವಿಜಯನ್, ಲಕ್ಷ್ಮಿಪ್ರಿಯಾ ಚಂದ್ರಮೌಳಿ, ಯೋಗಿ ಬಾಬು, ಗೌರಿ ಜಿ. ಕಿಶನ್.

------------------

‘ಬೆಂಗಳೂರಿನ ಟ್ರಾಫಿಕ್ ಗಲ್ಲಿಗಳಲ್ಲಿ ಸಿಲುಕಿದ ಟ್ಯಾಕ್ಸಿಯವನು ಪದೇ ಪದೇ ಹೊಡೆಯುವ ಹಾರ್ನ್ ಅವನ ಆರ್ತನಾದ’ ಎಂದು ಸಾಹಿತಿ ಜಯಂತ ಕಾಯ್ಕಿಣಿ ಒಮ್ಮೆ ಹೇಳಿದ್ದರು. ದಲಿತರ ಆರ್ತನಾದವೂ ಅಂತೆಯೇ. ಅವರ ಭಾವನಾ ಏರಿಳಿತಗಳ ‘ಹಾರ್ನ್’ ಅನ್ನು ನಿರ್ದೇಶಕ ಮಾರಿ ಸೆಲ್ವರಾಜ್ ಕಿವಿಗಡಚುವಂತೆ ಹೊಡೆದಿದ್ದಾರೆ.

ಮೂರು ವರ್ಷಗಳ ಹಿಂದೆ ‘ಪರಿಯೇರುಂ ಪೆರುಮಾಳ್’ ತಮಿಳು ಸಿನಿಮಾ ಮೂಲಕ ಸಶಕ್ತ ದಲಿತ ದನಿಯೊಂದನ್ನು ಅವರು ಹೊಮ್ಮಿಸಿದ್ದರು. ‘ಕರ್ಣನ್’ನಲ್ಲಿ ಎದೆಗೆ ನಾಟುವಂಥ ಗಟ್ಟಿ ರೂಪಕಗಳನ್ನು ತೇಲಿಬಿಟ್ಟಿದ್ದಾರೆ.

ಚಿತ್ರ ಶುರುವಾಗುವುದು ಹೀಗೆ: ಡಾಂಬರು ರೋಡಿನ ಮಧ್ಯೆ ಮೂರ್ಛೆ ಬಿದ್ದು, ಕಾಲುಗಳನ್ನು ಆಡಿಸುತ್ತಿರುವ ಬಾಲಕಿಯ ಬಾಯಿಂದ ಜೊಲ್ಲು. ಅವಳು ಒದ್ದಾಡುತ್ತಾ ಬಿದ್ದಿದ್ದರೂ ಎರಡೂ ಬದಿಗಳಲ್ಲಿ ಸರಬರ ಸರಿದುಹೋಗುವ ವಾಹನಗಳು. ಅವುಗಳಲ್ಲಿ ಕುಳಿತ ಯಾವ ಕಣ್ಣುಗಳಿಗೂ ಅವಳು ಬೇಕಾಗುವುದೇ ಇಲ್ಲ.

ಹೋದ ಅವಳ ಜೀವಕ್ಕೆ ನಿರ್ದೇಶಕರು ನೀಡುವುದು ದೈವದ ರೂಪವನ್ನು. ಆ ದೈವವೇ ಚಿತ್ರದುದ್ದಕ್ಕೂ ಪ್ರತಿಮೆಯ ಪ್ರವಾಹ.

ಮಹಾಭಾರತದ ಪಾತ್ರಗಳನ್ನು ಸೆಲ್ವರಾಜ್ ಮರುವ್ಯಾಖ್ಯಾನಿಸಿದ್ದಾರೆ. ಈ ಚಿತ್ರದ ಕರ್ಣ, ದುರ್ಯೋಧನ, ದ್ರೌಪದಿ ಎಲ್ಲರ ಹೆಸರುಗಳಲ್ಲಿ ಹಾಗೂ ಅವರ ವಯಸ್ಸು–ವರ್ತನೆಗಳಲ್ಲಿ ಅದನ್ನು ಕಾಣಬಹುದು. ಇಲ್ಲಿನ ಕರ್ಣ ತೇಲಿಬಿಟ್ಟ ಮೀನನ್ನು ಗಾಳಿಯಲ್ಲೇ ಹಾರಿ ಕತ್ತಿಯಿಂದ ಎರಡು ಹೋಳು ಮಾಡುತ್ತಾನೆ. ದ್ರೌಪದಿ ಇಲ್ಲಿ ಅವನ ಪ್ರಿಯತಮೆ. ತನ್ನೂರಿನವರಿಗಾಗಿ ಹುಂಬನಂತೆಯೂ ಕೋಪಿಷ್ಟನಾಗಿಯೂ ಪರಮ ನಿಸ್ವಾರ್ಥಿಯಾಗಿ ಹೋರಾಡುವವ ನಾಯಕ.

ನಾಯಕನು ಬಸ್ಸೇ ನಿಲ್ಲದ ಕುಗ್ರಾಮದವನು. ಅಲ್ಲಿನ ಜನರಿಗೆ ದಿನನಿತ್ಯ ಆಗುವ ಅನಾಹುತಗಳು ಅವನನ್ನು ಕೆರಳಿಸುತ್ತಿವೆ. ಪಕ್ಕದೂರಿನ ಪಾಳೆಗಾರಿಕೆಯ ಮನಃಸ್ಥಿತಿಯವರನ್ನು ಅದಕ್ಕಾಗಿ ಎದುರು ಹಾಕಿಳ್ಳುತ್ತಾನೆ. ತುಂಬು ಗರ್ಭಿಣಿಯ ಪಟ್ಟಣಕ್ಕೆ ಕರೆದೊಯ್ಯಲು ಬಸ್ ನಿಲ್ಲಿಸಲು ಗಂಟೆಗಟ್ಟಲೆ ಅವಳ ಪತಿ ವಿಫಲ ಯತ್ನ ನಡೆಸಿದ್ದನ್ನು ಕಂಡ ಬಾಲಕನೊಬ್ಬ ಖಾಸಗಿ ಬಸ್‌ ಗಾಜಿಗೆ ಕಲ್ಲುಹೊಡೆಯುತ್ತಾನೆ. ಸಿನಿಮಾ ಅಲ್ಲಿಂದ ಹೊರಳುವುದು ದೊಡ್ಡ ಮಜಲಿಗೆ. ದಶಕಗಟ್ಟಲೆ ತುಳಿತಕ್ಕೆ ಒಳಗಾದ ಗ್ರಾಮದವರು ಒಟ್ಟಾಗುತ್ತಾರೆ. ಅವರನ್ನು ಹೊಸಕಿಹಾಕಲು ಎದುರಲ್ಲಿ ಪೊಲೀಸ್ ಪಡೆ. ರಕ್ತಸಿಕ್ತ ದರ್ಶನದ ನಂತರ ಸ್ಮಶಾನಮೌನ. ಅಜ್ಜಿಯೊಬ್ಬಳ ಒತ್ತಾಸೆಯಂತೆ ಒಲ್ಲದ ಮನಸ್ಸಿನಲ್ಲೇ ಕುಣಿಯುವ ನಾಯಕನ ನೀರು ತುಂಬಿದ ಕಣ್ಣುಗಳು ದಾಟಿಸುವುದು ವಿಷಾದವನ್ನು. ಅಷ್ಟು ಹೊತ್ತಿಗಾಗಲೇ ಎದೆಯೊಳಗಿಳಿದ ಅಜ್ಜನ ಪಾತ್ರವೊಂದಕ್ಕೆ ಫೋಟೊ ಫ್ರೇಮ್.

ಸೆಲ್ವರಾಜ್ ಚಿತ್ರಕಥಾ ಬರಹದ ಶಿಲ್ಪ ಗಟ್ಟಿಯಾದದ್ದು. ಸಿಆರ್‌ಪಿಎಫ್ ಆಯ್ಕೆಗಾಗಿ ಓಡಿ, ಗುರಿ ಮುಟ್ಟಿ, ಸುಸ್ತಾಗಿ ನೆಲಕ್ಕೊರಗುವ ನಾಯಕನಿಂದ ಅವರು ಕ್ಯಾಮೆರಾವನ್ನು ಇನ್ನೊಂದು ಕಡೆಗೆ ತಿರುಗಿಸುತ್ತಾರೆ. ಕ್ಷಣಾರ್ಧದಲ್ಲಿ ಗುರಿ ತಪ್ಪಿಸಿಕೊಂಡ ಮತ್ತೊಬ್ಬ ಕಪ್ಪುಹುಡುಗ ಅವಕಾಶಕ್ಕಾಗಿ ಅಧಿಕಾರಿಯ ಕಾಲು ಹಿಡಿಯುವುದರ ಚಿತ್ರಣ. ಅದನ್ನು ಕಂಡ ನಾಯಕನ ಕಣ್ಣಾಲಿಗಳಲ್ಲಿ ಪ್ರಶ್ನೆ. ಹೀಗೆ ಕಥನದ ಪ್ರತಿ ಕದಲಿಕೆಯಲ್ಲೂ ಅವರು ನಾಯಕನನ್ನು ಸಮಾಜದ ಭಾಗವಾಗಿಸುತ್ತಾ, ಅವನ ಕೋಪವನ್ನು ಬೇಗುದಿಯಾಗಿಸುತ್ತಾ ಹೋಗಿದ್ದಾರೆ.

ಧನುಷ್ ಪಾತ್ರವೇ ತಾವಾಗಿದ್ದು, ಎಲ್ಲೂ ತಮ್ಮ ಇಮೇಜನ್ನು ಉಜ್ಜಿಕೊಂಡಿಲ್ಲ. ಹಲವು ಛಾಯೆಗಳ ಪಾತ್ರದಲ್ಲಿ ಅವರ ಆಂಗಿಕ ಅಭಿನಯ ಬಹಳ ಸಹಜವೂ ಉತ್ಕಟವಾದದ್ದೂ ಆಗಿದೆ. ಅಜ್ಜನ ಪಾತ್ರದಲ್ಲಿ ಲಾಲ್ ಪಾಲ್ ಅವರದ್ದು ಕಾಡುವ ಅಭಿನಯ. ಮೊದಲ ಚಿತ್ರದಲ್ಲೇ ದ್ರೌಪದಿಯಾಗಿ ರಾಜಿಶಾ ಇಷ್ಟವಾಗುತ್ತಾರೆ. ಅಕ್ಕನ ಪಾತ್ರದಲ್ಲಿ ಲಕ್ಷ್ಮಿಪ್ರಿಯಾ, ಪೊಲೀಸ್ ಅಧಿಕಾರಿಯಾಗಿ ನಟರಾಜನ್ ಕೂಡ ಗಮನಾರ್ಹ.

ಪ್ರತಿಮೆಗಳ ಸೃಷ್ಟಿಗಾಗಿ ಕ್ಯಾಮೆರಾ ಕಣ್ಣು ತೆರೆದಿರುವ ಸಿನಿಮಾಟೊಗ್ರಫರ್ ತೇಣಿ ಈಶ್ವರ್, ಆರ್ತನಾದದ ಔಚಿತ್ಯ ಅರಿತ ಸ್ವರ ಸಂಯೋಜಕ ಸಂತೋಷ್ ನಾರಾಯಣ್ ಕೆಲಸ ಗಮನಾರ್ಹ.

ಕತ್ತೆಯ ಕಾಲುಗಳಿಗೆ ಕಟ್ಟಿದ ದಾರವನ್ನು ನಾಯಕ ಕಿತ್ತೆಸೆಯುವುದು, ಕಪ್ಪು ಕುದುರೆಯನ್ನು ಕೊನೆಯಲ್ಲಿ ಏರಿ ಖಡ್ಗ ಹಿಡಿಯುವುದು, ಜನರ ಕದಲಿಕೆಗಳಿಗೆ ತಕ್ಕಂತೆ ಜಾಗ ಖಾಲಿ ಮಾಡುವ ಹಂದಿಗಳು, ಆತಂಕ ಬುಡಕ್ಕೆ ಬಂದದ್ದೇ ಒಟ್ಟಾದಂತೆ ಕನಲುವ ನಾಯಿಗಳು, ಕೋಳಿಪಿಳ್ಳೆ ಹೊತ್ತೊಯ್ಯುವ ರಣಹದ್ದು, ತಲೆಯೇ ಇಲ್ಲದ ಪ್ರತಿಮೆ–ಭಿತ್ತಿಚಿತ್ರ, ಪೊಲೀಸ್‌ ಠಾಣೆಯಲ್ಲಿ ಹೊಡೆದಾಟದ ವೇಳೆ ಅತ್ತಿತ್ತ ಆಡಿ ಕೊನೆಗೂ ತನ್ನ ಸ್ಥಾನದಲ್ಲಿ ಮರಳಿ ನಿಲ್ಲುವ ಅಂಬೇಡ್ಕರ್ ಪಟ... ಇವೆಲ್ಲವೂ ಸಿನಿಮಾದ ದೃಶ್ಯವಂತಿಕೆಯನ್ನು ಹೆಚ್ಚುಮಾಡಿರುವ ರೂಪಕಗಳು.

ದಮನಕಾರಿ ಧೋರಣೆ ಎದುರಿಸಲು ಹಿಂಸೆಯೊಂದೇ ದಾರಿಯೇ ಎಂಬ ಸಂಕಟವನ್ನೂ ಈ ಚಿತ್ರ ಉಳಿಸುತ್ತದೆ. ಅದಕ್ಕೆ ನಾಯಕನ ಕಣ್ಣುಗಳೇ ಸಾಕ್ಷಿ. ‘ಕಾ.ಪೇ. ರಣಸಿಂಗಂ’ ಎಂಬ ಇನ್ನೊಂದು ತಮಿಳು ಚಿತ್ರದಲ್ಲಿ ಇದಕ್ಕೆ ತದ್ವಿರುದ್ಧವಾದ ಹೋರಾಟ ಕ್ರಮವನ್ನು ನಾವು ಕಂಡಿದ್ದೆವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT