ಶುಕ್ರವಾರ, ಮೇ 27, 2022
21 °C

ಸಿನಿಮಾ ವಿಮರ್ಶೆ: ‘ಬೌಂಡರಿ’ಯೊಳಗೆ ಪುಟಿಯುವ 83ರ ಮೆಲುಕುಗಳು

ಗಿರೀಶ ದೊಡ್ಡಮನಿ Updated:

ಅಕ್ಷರ ಗಾತ್ರ : | |

Prajavani

ಚಿತ್ರ: 83
ನಿರ್ದೇಶಕ: ಕಬೀರ್ ಖಾನ್ 
ತಾರಾಗಣ: ರಣವೀರ್ ಸಿಂಗ್, ದೀಪಿಕಾ ಪಡುಕೋಣೆ, ಜೀವಾ, ಪಂಕಜ್  ತ್ರಿಪಾಠಿ, ನೀನಾಗುಪ್ತಾ, ಬೋಮನ್ ಇರಾನಿ. 

***

ಭಾರತದ ಕ್ರಿಕೆಟ್‌ ಕ್ಷೇತ್ರವು ಮಗ್ಗಲು ಬದಲಿಸಲು ಕಾರಣವಾಗಿದ್ದು 1983ರ ವಿಶ್ವಕಪ್ ಗೆಲುವು. ಅದರ ರೂವಾರಿ, ಕಪಿಲ್ ದೇವ್. ಆ ವಿಶ್ವಕಪ್ ವಿಜಯದ ಕಥೆಯ ಸಿನಿಮಾ ‘83’ ಈಗ ತೆರೆಕಂಡಿದೆ. ಇದುವರೆಗೆ ಆ ವಿಜಯದ ಕುರಿತು ಬಿಡಿಬಿಡಿಯಾಗಿ ಕೇಳಿಕೊಂಡು ಬಂದಿರುವ ಸಂಗತಿಗಳನ್ನು ಒಟ್ಟುಗೂಡಿಸಿ ನಿರ್ಮಾಣ ಮಾಡಿರುವ ಚಿತ್ರ ಇದು. ಬೌಂಡರಿಯೊಳಗೇ ಇಡೀ ಕಥೆಯನ್ನು ನಿರೂಪಿಸಿದ್ದಾರೆ ನಿರ್ದೇಶಕ ಕಬೀರ್ ಖಾನ್. ಭಾವುಕತೆ ಮತ್ತು ನಾಟಕೀಯ ಅಂಶಗಳಿಲ್ಲ. ಈ ಹಿಂದೆ ಕ್ರೀಡಾಕಥೆಗಳ ಸಿನಿಮಾಗಳಾದ ದಂಗಲ್, ಚಕ್‌ ದೇ ಇಂಡಿಯಾದಂತಹ  ಚಿತ್ರಗಳೊಂದಿಗೆ ಇದನ್ನು ಹೋಲಿಕೆ ಮಾಡುವಂತಿಲ್ಲ.

ವಿಶ್ವಕಪ್ ಟೂರ್ನಿಗಾಗಿ ಇಂಗ್ಲೆಂಡ್‌ಗೆ ತಂಡ ಹೊರಡುವುದರಿಂದ ಆರಂಭವಾಗುವ ಕಥೆ, ಲಾರ್ಡ್ಸ್‌ ಅಂಗಳದ ಅಟ್ಟಣಿಗೆಯಲ್ಲಿ ಕಪಿಲ್ ದೇವ್ ಟ್ರೋಫಿಯನ್ನು ಹಿಡಿದು ಸಂಭ್ರಮಿಸುವ ಕೊನೆಯ ದೃಶ್ಯದವರೆಗೂ ಕ್ರಿಕೆಟ್ ಮಾತ್ರ ವಿಜೃಂಭಿಸುತ್ತದೆ. ‌ಆದರೆ ಸಾಕ್ಷ್ಯಚಿತ್ರವಾಗದಂತೆ ನಿರ್ಮಿಸುವಲ್ಲಿ ತಂಡ ಸಫಲವಾಗಿದೆ.

ಭಾರತದಲ್ಲಿ ಕ್ರಿಕೆಟ್‌ ಧರ್ಮವಾಗಿರದ ಆ ಕಾಲದಲ್ಲಿ ವಿಶ್ವಕಪ್ ಟೂರ್ನಿಗೆ ಹೋಗಲು ತಂಡ ಎದುರಿಸಿದ ಅವಮಾನಗಳು, ಊಟಕ್ಕೆ ದುಡ್ಡಿಲ್ಲದೇ ಪರದಾಡಿದ್ದು, ಒಂದೇ ಕೋಣೆಯಲ್ಲಿ ಮೂರ್ನಾಲ್ಕು ಮಂದಿ ಹೊಂದಾಣಿಕೆ ಮಾಡಿ ಉಳಿದುಕೊಂಡದ್ದನ್ನು ಈ ಕಾಲದ ಕ್ರಿಕೆಟ್‌ನಲ್ಲಿ ಊಹಿಸಲೂ ಸಾಧ್ಯವಿಲ್ಲ. ಅಂದು ದೈತ್ಯಶಕ್ತಿಯಾಗಿದ್ದ ವೆಸ್ಟ್ ಇಂಡೀಸ್, ಉತ್ತಮ ತಂಡವಾಗಿದ್ದ ಜಿಂಬಾಬ್ವೆ ತಂಡಗಳು ಪಾತಾಳ ಕಂಡಿವೆ. ಭಾರತ ಈಗ ಕ್ರಿಕೆಟ್ ಲೋಕದ ‘ದೊಡ್ಡಣ್ಣ’ನಾಗಿ ಬೆಳೆದಿದೆ. ಇಂಡಿಯನ್ ಪ್ರೀಮಿಯರ್ ಲೀಗ್‌ ಕ್ರಿಕೆಟ್‌ನ ಥಳಕು, ಕೋಟಿಗಟ್ಟಲೆ ಹಣದ ಆರ್ಭಟ ನೋಡಿರುವ ನವತರುಣ ಅಭಿಮಾನಿಗಳಿಗೆ ಒಂದು ಕಾಲದ ಕ್ರಿಕೆಟ್ ಹೀಗೂ ಇತ್ತಾ ಎಂದೆನಿಸಬಹುದು. ಅದೇ ಈಗ ಮಧ್ಯವಯಸ್ಸಿನಲ್ಲಿರುವ ಅಭಿಮಾನಿಗಳಿಗೆ ಗತಕಾಲದ ಮೆಲುಕಾಗಿ ಈ ಚಿತ್ರ ಮನದಲ್ಲಿ ಇಳಿಯುತ್ತದೆ. 

ಇಂಗ್ಲೆಂಡ್‌ನಲ್ಲಿ ನಡೆದಿದ್ದ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡವು ‘ಕಪ್ಪುಕುದುರೆ’ಯಾಗಿ ಕಣಕ್ಕಿಳಿದಿತ್ತು. ಇದಕ್ಕೂ ಮುನ್ನ ನಡೆದಿದ್ದ ಎರಡು ವಿಶ್ವಕಪ್‌ ಟೂರ್ನಿಗಳಲ್ಲಿ ಹೀನಾಯವಾಗಿ ಸೋತಿತ್ತು. ಈ ಅವಮಾನದ ಭಾರ ಮತ್ತು ವ್ಯಂಗ್ಯ, ಟೀಕೆಗಳನ್ನು ಎದುರಿಸುತ್ತಲೇ ಇಂಗ್ಲೆಂಡ್‌ಗೆ ಬಂದಿಳಿಯುವ ತಂಡದಲ್ಲಿ, ಇಂಗ್ಲಿಷ್ ಮಾತನಾಡಲು ಪರದಾಡುವ ನಾಯಕ ಕಪಿಲ್ ಮಾತ್ರ ಗೆಲುವಿನ ಕನಸು ಕಾಣುವ ಏಕೈಕ ವ್ಯಕ್ತಿ. ರಣವೀರ್ ಸಿಂಗ್, ಕಪಿಲ್ ಪಾತ್ರದಲ್ಲಿ ಯಶಸ್ವಿಯಾಗಿದ್ದಾರೆ. ತಂಡದ ಮ್ಯಾನೇಜರ್ ಪಂಕಜ್ ತ್ರಿಪಾಠಿ (ಪಿ.ಆರ್. ಮಾನಸಿಂಗ್) ಮತ್ತು ಜೀವಾ (ಕೃಷ್ಣಮಾಚಾರಿ ಶ್ರೀಕಾಂತ್) ಚಿತ್ರಕ್ಕೆ ಜೀವ ತುಂಬಿದ್ದಾರೆ. ಕಪಿಲ್ ಪತ್ನಿಯಾಗಿ ದೀಪಿಕಾ ಪಡುಕೋಣೆ (ರೋಮಿ), ತಾಯಿ ಪಾತ್ರದಲ್ಲಿ ನೀನಾ ಗುಪ್ತಾ ಕಾಣಿಸಿಕೊಂಡಿದ್ದಾರೆ. ಲಾಲಾ ಅಮರನಾಥ್ ಪಾತ್ರವನ್ನು ಸ್ವತಃ ಮೋಹಿಂದರ್ ಅಮರನಾಥ್ ಅಭಿನಯಿಸಿರುವುದು ವಿಶೇಷ.

‘ಮೂವತ್ತಾರು ವರ್ಷಗಳ ಹಿಂದೆ ಸ್ವಾತಂತ್ರ್ಯ ಗಳಿಸಿದೆವು. ಆದರೆ, ಮರ್ಯಾದೆ ಗಳಿಸುವುದು ಇನ್ನೂ ಬಾಕಿ ಇದೆ’ ಎಂದು ಮ್ಯಾನೇಜರ್ ಮಾನ್ ಹೇಳುವ ಮಾತು, ಚಿಕ್ಕ ಬಾಲಕನೊಬ್ಬ ಟೂರ್ನಿ ಆರಂಭಕ್ಕೂ ಮುನ್ನದ ಅಭ್ಯಾಸ ಪಂದ್ಯದಲ್ಲಿ ಕಪಿಲ್ ಹಸ್ತಾಕ್ಷರ ಪಡೆದು ಹೇಳುವ ಮಾತು ಹಾಗೂ ಕಪಿಲ್ ಬಳಗದ ಯಶಸ್ಸನ್ನು ದೇಶದಲ್ಲಿ ಕೋಮುಗಲಭೆ ತಡೆಯುವ ಅಸ್ತ್ರವಾಗಿ ಬಳಸಿಕೊಳ್ಳುವ ಆಗಿನ ಪ್ರಧಾನಿಯ ನಿರ್ಧಾರ ರಾಷ್ಟ್ರೀಯತೆಯನ್ನು ತುಳುಕಿಸುವ ಪ್ರಯತ್ನ ಮಾಡುತ್ತವೆ. 

ಕಪಿಲ್, ಗಾವಸ್ಕರ್, ರೋಜರ್ ಬಿನ್ನಿ, ಕಿರ್ಮಾನಿ ಮತ್ತು ಶ್ರೀಕಾಂತ್ ಈ ಕಾಲದ ಕ್ರಿಕೆಟ್‌ ಅಭಿಮಾನಿಗಳಿಗೂ ಚಿರಪರಿಚಿತರು. ಆದರೆ, ಆಗ ತಂಡದಲ್ಲಿ ಉಳಿದ ಆಟಗಾರರನ್ನು ಬಿಟ್ಟರೆ ಉಳಿದ ಆಟಗಾರರನ್ನು ನವಪೀಳಿಗೆಯ ಪ್ರೇಕ್ಷಕರಿಗೆ ಪರಿಚಯಿಸುವಲ್ಲಿ ನಿರ್ದೇಶಕರು ಯಶಸ್ವಿಯಾಗಿಲ್ಲ. ಕಪಿಲ್ ಬಾಲ್ಯದ ಬಗ್ಗೆಯೂ ಒಂದಿಷ್ಟು ಇರಬೇಕಿತ್ತು ಎಂದು ಕೊನೆಗೆ ಅನಿಸದಿರದು. ಜೂಲಿಯಸ್ ಪೆಕಿಯಮ್ ನೀಡಿರುವ ಹಿನ್ನೆಲೆ ಸಂಗೀತ ಮತ್ತು ಪ್ರೀತಂ ಹಾಡಿರುವ ಹಾಡುಗಳು ಮನದಲ್ಲಿ ಉಳಿಯುತ್ತವೆ. ಚಿತ್ರದ ಕೊನೆಯಲ್ಲಿ ಬಾಲಕ ಸಚಿನ್ ತೆಂಡೂಲ್ಕರ್‌ ಪ್ರವೇಶವು ಮುದ ನೀಡುತ್ತದೆ. ಎರಡು ಗಂಟೆ, 46 ನಿಮಿಷಗಳವರೆಗೆ ಕ್ರಿಕೆಟ್ ಮೈದಾನದಲ್ಲಿ ಕುಳಿತು 1983ರ ವಿಶ್ವಕಪ್ ವಿಜಯದ ಹೈಲೆಟ್ಸ್‌ಗಳನ್ನು ನೋಡಿ ಬಂದ ಅನುಭವ ಸಿಗುವುದು ಖಚಿತ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು