ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿನಿಮಾ ವಿಮರ್ಶೆ: ಕ್ಷೀಣಿಸಿದ ಸಂಬಂಧಗಳ ಮಧ್ಯೆ ಬದುಕಿನ ಹಣತೆ

Last Updated 11 ಜನವರಿ 2021, 11:38 IST
ಅಕ್ಷರ ಗಾತ್ರ

ಚಿತ್ರ: ಅಮೃತವಾಹಿನಿ

ನಿರ್ದೇಶನ: ಕೆ.ನರೇಂದ್ರಬಾಬು

ನಿರ್ಮಾಣ: ಕೆ.ಸಂಪತ್ ಕುಮಾರ್, ಅಕ್ಷಯ್‌ ರಾವ್

ತಾರಾಗಣ: ಎಚ್‌.ಎಸ್.ವೆಂಕಟೇಶ ಮೂರ್ತಿ, ಶಿವಮೊಗ್ಗ ವೈದ್ಯ, ಸಂತೋಷ್‌ ಕರ್ಕಿ, ಸುಪ್ರಿಯಾ ಎಸ್‌.ರಾವ್, ಮಂಜುನಾಥ್ ಬೂದಾಳ್, ಋತ್ವಿ.

ಬದುಕಿನ ಪರಿಕಲ್ಪನೆಗಳೇ ಬದಲಾಗುತ್ತಿರುವ ಆಧುನಿಕ ಕಾಲಘಟ್ಟದಲ್ಲಿ ಕೌಟುಂಬಿಕ ಸಂಬಂಧಗಳು ಕಳಚಿ ಬೀಳುತ್ತಿವೆ. ಭವಿಷ್ಯದ ಬೆನ್ನತ್ತಿ ಹೊರಟ ಯುವಪೀಳಿಗೆಗೆ ತಮ್ಮ ಬದುಕು ರೂಪಿಸಲು ಬುನಾದಿ ಹಾಕಿದ, ಕನಸಿಗೆ ನೀರೆರೆದ ಪೋಷಕರು ಭಾರ ಎನಿಸಲಾರಂಭಿಸಿದ್ದಾರೆ. ಮುಸ್ಸಂಜೆಯಲ್ಲಿರುವ ಅವರು ಇನ್ನೇನು ಕತ್ತಲಹಾದಿಯ ಕಡೆ ಹೆಜ್ಜೆ ಇಡುವುದು ಖಚಿತ ಎಂದು ಗೊತ್ತಿದ್ದರೂ, ಅವರ ಬಳಿ ಸುಳಿಯದೇ ಬೇರೆ ದಾರಿ ಹುಡುಕಿಕೊಂಡು ದೂರ ನಡೆದು ಬಿಡುತ್ತಾರೆ.

ಕತ್ತಲು ಕಳೆಯಲು ಮಕ್ಕಳು, ಮೊಮ್ಮಕ್ಕಳು ಬೆಳಕಿನ ದೀವಿಗೆಯಾಗುವರು ಎಂಬ ನಿರೀಕ್ಷೆಯ ಹಣತೆ ಹಚ್ಚಿಕೊಂಡ ವೃದ್ಧ ಜೀವಗಳು ತಮ್ಮೊಳಗಿನ ತಳಮಳ, ನೋವು ಅದುಮಿಟ್ಟುಕೊಂಡು ಮುಖದೊಳಗೆ ಬಲವಂತದ ನಗು ತಂದುಕೊಂಡು ಕೊನೆಯ ಕ್ಷಣಗಳನ್ನು ಎದುರು ನೋಡುತ್ತಾರೆ. ಬದುಕಿನ ಇಂತಹ ಚಿತ್ರಣವನ್ನು ಮನಕಲಕುವಂತೆ ಕಟ್ಟಿಕೊಟ್ಟಿದೆ ಕವಿ ಎಚ್‌.ಎಸ್. ವೆಂಕಟೇಶ ಮೂರ್ತಿ ಅವರ ಪ್ರಥಮ ಅಭಿನಯದ ಚಿತ್ರ ಅಮೃತವಾಹಿನಿ. ಎಚ್‌ಎಸ್ವಿ ಭಾವ ಕವಿಯಾದ ಕಾರಣದಿಂದ ನಾಯಕ ಜಿಕೆ (ಗೋಪಾಲ ಕೃಷ್ಣ) ಪಾತ್ರಕ್ಕೆ ಸಹಜತೆಯ ಜೀವ ತುಂಬಿದ್ದಾರೆ.

ಅಂತರ್‌ಜಾತಿ ವಿವಾಹವನ್ನು ಸುಲಭವಾಗಿ ಒಪ್ಪಿಕೊಳ್ಳದ ಸಂಪ್ರದಾಯ ಕುಟುಂಬಗಳ ಮನಸ್ಥಿತಿ. ಅದೇ ಕಾರಣಕ್ಕೆ ಮಗ ವೇಣು (ಸಂತೋಷ್‌ ಕರ್ಕಿ), ಸೊಸೆ ಅಮೂಲ್ಯ (ಸುಪ್ರಿಯಾ ಎಸ್‌.ರಾವ್) ಅವರನ್ನು ನಿರಾಕರಿಸುವುದು, ಪತ್ನಿಯನ್ನು ಕಳೆದುಕೊಂಡ ನಂತರ ಮೊಮ್ಮಗಳು ಅಂಕಿತಾ (ಋತ್ವಿ) ಬಳಿ ಸಾಗುವ ತವಕ, ಅದಕ್ಕಾಗಿಯೇ ಮಗನ ಮನೆಗೆ ಹೋದಾಗ ಸೊಸೆಯ ತಾತ್ಸಾರ, ಅವಮಾನಗಳು, ಮೊಮ್ಮಗಳ ಅಕ್ಕರೆಯ ಸುತ್ತ ಚಿತ್ರದ ಕತೆ ಸಾಗುತ್ತದೆ.

ಜಿಕೆಯನ್ನು ಕಾಡುವ ನಿರಂತರ ಕೆಮ್ಮು ಸೊಸೆಗೆ ಅಪಥ್ಯವೆನಿಸುತ್ತದೆ. ಅದಕ್ಕಾಗಿ ಅಡಿಕೆ ಹಾಳೆಯ ತಟ್ಟೆಯಲ್ಲಿ ಅವರಿಗೆ ಊಟಕ್ಕೆ ಬಡಿಸುವ ಕೀಳುತನಕ್ಕೂ ದಾರಿ ಮಾಡಿಕೊಡುತ್ತದೆ. ಪತ್ನಿಯನ್ನು ವಿರೋಧಿಸದೇ ಪುತ್ರನೂ ಅಸಹಾಯಕನಾಗುತ್ತಾನೆ. ಕೊನೆಗೆ ಜಿಕೆ ಮನೆ ತೊರೆಯುತ್ತಾರೆ. ಇಂತಹ ಸನ್ನಿವೇಶದಲ್ಲಿ ಮಗಳು ಅಂಕಿತಾ ನಡೆ ಅವರ ಕಣ್ಣು ತೆರೆಸುತ್ತದೆ. ಅಜ್ಜನಿಗೆ ಕೊಟ್ಟಿದ್ದ ತಟ್ಟೆಗಳನ್ನು ತೊಳೆದು ಜೋಡಿಸಿಟ್ಟಿದ್ದನ್ನು ಪ್ರಶ್ನಿಸುವ ಪೋಷಕರಿಗೆ ಋತ್ವಿ, ‘ಮುಂದೆ ನಿಮಗೆ ವಯಸ್ಸಾದಾಗ ಬಡಿಸಲು ಬೇಕಾಗುತ್ತದೆ’ ಎನ್ನುವ ಆಕೆಯ ಉತ್ತರ ಚಿತ್ರದ ಪ್ರಮುಖ ತಿರುವು.

ಜಿಕೆ ಪಾತ್ರದ ಜತೆಗೆ ಅವರ ಸ್ನೇಹಿತ ವೆಂಕೋಬರಾವ್ (ಶಿವಮೊಗ್ಗ ವೈದ್ಯ) ಬದುಕಿನ ಚಿತ್ರಣ ಕುಟುಂಬ ವ್ಯವಸ್ಥೆಯ ಮತ್ತೊಂದು ಮುಖವನ್ನು ಅನಾವರಣಗೊಳಿಸುತ್ತದೆ. ಪತ್ನಿ ಕಳೆದುಕೊಂಡ ವೆಂಕೋಬರಾವ್ಮೂವರು ಮಕ್ಕಳಿದ್ದರೂ ಅನುಭವಿಸುವ ಒಂಟಿತನ, ಏಕಾಂಗಿ ಬದುಕಿನಿಂದ ಬೇಸತ್ತು 60ರ ನಂತರವೂ ಮತ್ತೆ ಮದುವೆಯಾಗಲು ಪ್ರಕಟಣೆ ನೀಡುವುದು ವಾಸ್ತವಕ್ಕೆ ಕನ್ನಡಿ ಹಿಡಿಯುತ್ತದೆ.

ಮತ್ತೊಂದು ಕುಟುಂಬದಲ್ಲಿ ಮೊಬೈಲ್‌ ಗೀಳು ಹತ್ತಿಸಿಕೊಂಡ ಪತ್ನಿಯ ವಿವಾಹೇತರ ಪ್ರೇಮ ಪ್ರಸಂಗಗಳು ಯುವಪೀಳಿಗೆ ದಿಕ್ಕು ತಪ್ಪುತ್ತಿರುವ ಸೂಕ್ಷ್ಮತೆಗಳನ್ನು ಅನಾವರಣಗೊಳಿಸುತ್ತವೆ. ವಿವಾಹ ವಿಚ್ಚೇದನಕ್ಕೂ ದಾರಿ ಮಾಡಿಕೊಡುತ್ತದೆ. ಕೊನೆಗೆ ಗೋಪಾಲಕೃಷ್ಣ ಅವರು ಬರೆದ ‘ಅಮೃತವಾಹಿನಿ’ ಪುಸ್ತಕ ಎಲ್ಲರ ಕಣ್ಣು ತೆರೆಸುವ ಮೂಲಕ ‘ಇನ್ನೊಬ್ಬರ ತಪ್ಪು ಗುರುತಿಸುವ ಮೊದಲು ನಮ್ಮನ್ನು ನಾವು ತಿದ್ದಿಕೊಳ್ಳಲು ಪ್ರಯತ್ನಿಸಬೇಕು. ನಾವು ತಪ್ಪು ಹೆಜ್ಜೆ ಇಟ್ಟರೆ ಮುಂದಿನ ಪೀಳಿಗೆಯೂ ಅದೇ ಹಾದಿ ಹಿಡಿಯುತ್ತದೆ’ ಎಂಬ ಸಂದೇಶವನ್ನು ಸಮಾಜಕ್ಕೆ ನೀಡುತ್ತದೆ.

ಪುಸ್ತಕ ಬಿಡುಗಡೆ ಕಾರ್ಯಕ್ರಮ ಸೇರಿದಂತೆ ಹಲವು ದೃಶ್ಯಗಳು ಸಾಕ್ಷ್ಯಚಿತ್ರಗಳಂತೆ ಭಾಸವಾಗುವುದನ್ನು ನಿರ್ದೇಶಕರು ತಪ್ಪಿಸಬಹುದಿತ್ತು. ಒಟ್ಟಾರೆ ಚಿತ್ರ ಕಲಾತ್ಮಕ ಚೌಕಟ್ಟಿನಲ್ಲೇ ಸಾಗುತ್ತದೆ. ರಾಘವೇಂದ್ರ ಪಾಟೀಲರ ಕಾದಂಬರಿಯನ್ನು ಬಿಗಿ ನಿರೂಪಣೆ ಮೂಲಕ ರೂಪಕಗಳೊಂದಿಗೆ ಹೊಡೆದಾಟ, ಬಡಿದಾಟಗಳಿಲ್ಲದೆ, ಕಮರ್ಷಿಯಲ್ ಸಿದ್ಧಸೂತ್ರಗಳಿಂದ ಹೊರತಾದ ಸುಂದರ ಚಿತ್ರ ಕಟ್ಟಿಕೊಡುವಲ್ಲಿ ನಿರ್ದೇಶಕ ಕೆ.ನರೇಂದ್ರಬಾಬು ಸಫಲರಾಗಿದ್ದಾರೆ.

ಎಚ್‌ಎಸ್ವಿ ಜತೆ ಮೇಕಪ್‌ ಇಲ್ಲದೇ ನಟಿಸಿರುವ ವೈದ್ಯ, ಸಂತೋಷ್‌ ಕರ್ಕಿ, ಸುಪ್ರಿಯಾ ಎಸ್‌.ರಾವ್,ಮಂಜುನಾಥ್ ಬೂದಾಳ್ ಅವರು ಪಾತ್ರಕ್ಕೆ ಜೀವ ತುಂಬಿದ್ದಾರೆ. ಉಪಾಸನ ಮೋಹನ್ ಅವರ ಸಂಗೀತ ಇರುವ ಹಾಡುಗಳು ಕೇಳಲು ಹಿತವಾಗಿದೆ. ಗಿರಿಧರ್ ದಿವಾನ್ ಛಾಯಾಗ್ರಹಣ, ಗಿರೀಶ್ ಕುಮಾರ್ ಸಂಕಲನ ಚಿತ್ರವನ್ನು ಚೌಕಟ್ಟಿನಲ್ಲಿಟ್ಟಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT