ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿನಿಮಾ ವಿಮರ್ಶೆ: ಏನೆಲ್ಲಾ ಉಂಟು; ಇದು ‘ಹದಿನೇಳೆಂಟು’

Last Updated 28 ಜನವರಿ 2023, 19:30 IST
ಅಕ್ಷರ ಗಾತ್ರ

‘ನೋಡಿ, ಇದು ಕನ್ನಡ ಸಿನಿಮಾ’ ಎಂದು ಕನ್ನಡಿಗರು ಆರ್ದ್ರ ಗರ್ವದಿಂದ ಹೇಳಬಹುದಾದ ಈ ಸಿನಿಮಾ ‘ಪ್ಯಾನ್‌ ಇಂಡಿಯಾ’ ಲೇಬಲ್ಲನ್ನು ಅಂಟಿಸಿಕೊಂಡಿಲ್ಲ. ಕೋಟಿ ಕೋಟಿ ಗಳಿಕೆ ದಾಖಲೆಯ ಗರಿಯನ್ನೂ ಹೊಂದಿಲ್ಲ. ಇಂದಲ್ಲಾ ನಾಳೆ ಈ ಸಿನಿಮಾ ತೆರೆಕಾಣುತ್ತದೆಂದು ಹೇಳುವುದೂ ಕಷ್ಟ. ಸದ್ಯಕ್ಕೆ ಚಿತ್ರೋತ್ಸವಗಳ ಸಂಚಾರದಲ್ಲಿರುವ ಈ ಚಲನಚಿತ್ರದ ಹೆಸರು, ‘ಹದಿನೇಳೆಂಟು’.

ಗಣಿತದ ಸಮಸ್ಯೆಯೊಂದರಂತೆ ಕಾಣಿಸುವ ಶೀರ್ಷಿಕೆಯ ‘ಹದಿನೇಳೆಂಟು’ ಸಾಮಾಜಿಕ ಗಣಿತದ ಸಿಕ್ಕುಗಳ ಬಗ್ಗೆ ಮಾತನಾಡುತ್ತದೆ. ಯಾವ ಸಿಕ್ಕನ್ನೂ ಬಿಡಿಸುವುದು ಅಥವಾ ಪರಿಹಾರದ ಸಾಧ್ಯತೆ ಸೂಚಿಸುವುದು ಸಿನಿಮಾದ ಉದ್ದೇಶವಲ್ಲ. ಸಿನಿಮಾ ಕಾಣಿಸುವ ಸಿಕ್ಕುಗಳಲ್ಲಿ, ಸಿನಿಮಾ ನೋಡುವ ನಾವು ಯಾವುದಾದರೊಂದು ಬಗೆಯಲ್ಲಿ ಸಿಲುಕಿಕೊಂಡಿದ್ದೇವೆಯೇ ಎನ್ನುವ ಜಿಜ್ಞಾಸೆಯನ್ನು ಹುಟ್ಟುಹಾಕುವುದು ನಿರ್ದೇಶಕರ ಉದ್ದೇಶ ಇರುವಂತಿದೆ.

ದೀಪಾ ಮತ್ತು ಹರಿ ಎನ್ನುವ ಎರಡನೇ ಪಿಯುಸಿ ವಿದ್ಯಾರ್ಥಿಗಳ ಭಾನಗಡಿಯೊಂದಿಗೆ ಸಿನಿಮಾ ತೆರೆದುಕೊಳ್ಳುತ್ತದೆ. ಕಾಲೇಜಿನ ಕೋಣೆಯೊಂದರಲ್ಲಿ ದೀಪಾ–ಹರಿ ತಮ್ಮ ಖಾಸಗಿ ಕ್ಷಣಗಳನ್ನು ಮೊಬೈಲ್‌ನಲ್ಲಿ ಚಿತ್ರೀಕರಿಸಿಕೊಳ್ಳುತ್ತಾರೆ. ಆ ವಿಡಿಯೊ ವೈರಲ್‌ ಆಗುವುದರೊಂದಿಗೆ ಸಮಸ್ಯೆ ಶುರುವಾಗುತ್ತದೆ. ಇಬ್ಬರ ಹಣೆಬರಹ ನಿರ್ಧರಿಸಲು ರೂಪುಗೊಳ್ಳುವ ಕಾಲೇಜಿನ ಆಂತರಿಕ ಸಮಿತಿ, ಬುದ್ಧಿವಂತ ವಿದ್ಯಾರ್ಥಿಯಾದ ಹರಿಯನ್ನು ಉಳಿಸಿಕೊಳ್ಳಲು ಹಾಗೂ ಕಲಿಕೆಯಲ್ಲಿ ಅಷ್ಟೇನೂ ಜಾಣೆಯಲ್ಲದ ದೀಪಾಳನ್ನು ಕಾಲೇಜಿನಿಂದ ಹೊರಹಾಕಲು ನಿರ್ಧರಿಸುತ್ತದೆ. ಈ ಮೊದಲು ಬೇರೆ ಬೇರೆ ಸಂದರ್ಭಗಳಲ್ಲಿ ದೀಪಾ ತೋರಿದ ಒರಟು ವರ್ತನೆ ಈಗ ಅವಳಿಗೆ ಮುಳುವಾಗಿದೆ. ಸಮಸ್ಯೆ ಎದುರಾಗುವುದು ಇಲ್ಲಿಯೇ. ಸಮಿತಿಯ ಸದಸ್ಯರಲ್ಲಿ ಒಬ್ಬರು– ದೈಹಿಕ ಶಿಕ್ಷಕ ಅಬ್ದುಲ್ಲಾ– ಜಾತಿಯ ಪ್ರಶ್ನೆ ಎತ್ತುತ್ತಾರೆ. ದೀಪಾ ದಲಿತ ಹುಡುಗಿ. ಹರಿ ಬ್ರಾಹ್ಮಣ ಸಮುದಾಯದವನು. ಸಮಿತಿಯ ಸದಸ್ಯರಲ್ಲಿ ತನ್ನನ್ನುಳಿದು ಉಳಿದವರೆಲ್ಲರೂ ಮೇಲ್ವರ್ಗಕ್ಕೆ ಸೇರಿದವರು ಎನ್ನುವ ಸಂಗತಿಯನ್ನೂ ಅಬ್ದುಲ್ಲಾ ಸಭೆಯ ಗಮನಕ್ಕೆ ತರುತ್ತಾರೆ. ಕಾಲೇಜಿನ ಪ್ರತಿಷ್ಠೆಯ ಹಟದಿಂದಾಗಿ ಜಾತಿಯ ಪ್ರಶ್ನೆ ಕೋರ್ಟಿಗೆ ವರ್ಗಾವಣೆಯಾಗುತ್ತದೆ. ಇಡೀ ಘಟನೆ, ವಿದ್ಯಾರ್ಥಿಗಳು, ಅವರ ಕುಟುಂಬ ಮತ್ತು ಕಾಲೇಜಿನ ಆಡಳಿತ ಮಂಡಳಿಯ ಕೈಮೀರಿ, ಕಾನೂನು ಸಂಘರ್ಷವಾಗಿ ಬದಲಾಗುತ್ತದೆ.

ಹದಿಹರೆಯದ ವಿದ್ಯಾರ್ಥಿಗಳ ಕೆಲವು ಕ್ಷಣಗಳ ಮೈಮರೆವೆ ಏನೆಲ್ಲ ಅನಾಹುತಗಳಿಗೆ ಕಾರಣವಾಗಬಲ್ಲದು ಎನ್ನುವುದನ್ನು ಬಹು ಸೂಕ್ಷ್ಮವಾಗಿ ಪರಿಶೀಲಿಸುವ ‘ಹದಿನೇಳೆಂಟು’ ಸಿನಿಮಾವನ್ನು ನೈತಿಕಪಠ್ಯದ ರೂಪದಲ್ಲಿ ನೋಡಲಿಕ್ಕೆ ಸಾಧ್ಯವಿದೆ. ಆದರೆ, ಅಂಥ ಸಾಧ್ಯತೆಗಳನ್ನು ಸ್ವತಃ ಸಿನಿಮಾ ನಿರಾಕರಿಸುತ್ತದೆ. ಕಥಾನಾಯಕಿ ದೀಪಾಳಿಗೆ ತನ್ನ ಬದುಕು ಕುಸಿಯುತ್ತಿದ್ದರೂ ಯಾವ ಕ್ಷಣದಲ್ಲೂ ತನ್ನ ಲೈಂಗಿಕಸಾಹಸ ಅನೈತಿಕವೆಂದು ಅನ್ನಿಸುವುದಿಲ್ಲ. ಅದರ ಬಗ್ಗೆ ಅವಳಿಗೆ ವಿಷಾದವೂ ಇಲ್ಲ, ಪಶ್ಚಾತ್ತಾಪವೂ ಇಲ್ಲ. ಅವಳ ಪ್ರಶ್ನೆಗಳು ಸರಳ ಹಾಗೂ ನೇರ. ಇಂಥ ಘಟನೆಗಳು ಕಾಲೇಜಿನಲ್ಲಿ ಈ ಮೊದಲೂ ನಡೆದಿವೆ. ಆಗ ಯಾಕೆ ಕ್ರಮ ಕೈಗೊಂಡಿಲ್ಲ? ಈ ಘಟನೆಯಲ್ಲಿ ಇಬ್ಬರೂ ಭಾಗಿಯಾಗಿದ್ದರೂ, ಹರಿಯ ಬಗ್ಗೆ ಮಾತ್ರ ಯಾಕೆ ಸಹಾನುಭೂತಿ? ಈ ಪ್ರಶ್ನೆಗಳ ಜೊತೆಗೆ, ಜಾತಿಯ ಕಾರಣದಿಂದಾಗಿ ಕಾಲೇಜಿನ ಆಡಳಿತ ಮಂಡಳಿ ತನ್ನನ್ನು ನಿಕೃಷ್ಟವಾಗಿ ನಡೆಸಿಕೊಳ್ಳುತ್ತಿದೆ ಎನ್ನುವ ಭಾವನೆಯೂ ದೀಪಾಳಿಗಿದೆ.

ದೀಪಾಳಿಗೆ ಆತಂಕವಿರುವುದು, ವೈರಲ್‌ ಆದ ವಿಡಿಯೊ ಕಾರಣದಿಂದಾಗಿ ಸಮಾಜ ತನ್ನನ್ನು ಹೇಗೆ ನೋಡುತ್ತದೆ ಎನ್ನುವುದರ ಬಗ್ಗೆಯಲ್ಲ. ಸುದ್ದಿಯಾದ ಘಟನೆಯಿಂದಾಗಿ ಕಾಲೇಜಿನಿಂದ ಹೊರಬಿದ್ದರೆ, 18 ವರ್ಷದೊಳಗಿನ ರಾಷ್ಟ್ರೀಯ ಫುಟ್‌ಬಾಲ್‌ ತಂಡಕ್ಕೆ ಆಯ್ಕೆಯಾಗುವ ಅವಕಾಶ ತಪ್ಪಿಹೋಗುವ ಹಾಗೂ ಕ್ರೀಡಾ ವಿಭಾಗದಲ್ಲಿ ಎಂಜಿನಿಯರಿಂಗ್‌ ಪ್ರವೇಶ ಕೈತಪ್ಪುವ ಸಾಧ್ಯತೆಗಳು ಅವಳನ್ನು ಕಂಗಾಲಾಗಿಸಿವೆ. ಫುಟ್‌ಬಾಲ್‌ ಹಾಗೂ ಎಂಜಿನಿಯರಿಂಗ್‌ ತನ್ನನ್ನು ಕೊಳೆಗೇರಿಯಿಂದ ಹೊರತರುವ ಬೆಳಕಿಂಡಿಗಳೆಂದು ಅವಳಿಗೆ ತಿಳಿದಿದೆ. ಈಗ ನಡೆದ ಅಚಾತುರ್ಯದಿಂದ ಆ ಬೆಳಕಿಂಡಿಗಳು ಮುಚ್ಚಿಕೊಳ್ಳುತ್ತಿರುವುದು ಅವಳನ್ನು ಅಧೀರಳನ್ನಾಗಿಸಿದೆ. ಹರಿಯೊಂದಿಗಿನ ಸಂಬಂಧದಿಂದಾಗಿ ತನ್ನ ಮದುವೆಗೆ ತೊಂದರೆಯಾಗಬಹುದು ಎನ್ನುವುದರ ಬಗ್ಗೆ ಅವಳು ಒಂದು ಕ್ಷಣವೂ ಯೋಚಿಸುವುದಿಲ್ಲ. ಅವಳು ಯಾರ ಅನುಕಂಪವನ್ನೂ ಬಯಸುತ್ತಿಲ್ಲ; ನ್ಯಾಯಯುತ ಅವಕಾಶವನ್ನಷ್ಟೇ ನಿರೀಕ್ಷಿಸುತ್ತಿದ್ದಾಳೆ. ತನ್ನದು ತಾನೇ ಕಟ್ಟಿಕೊಳ್ಳಬೇಕಾದ ಬದುಕು ಎನ್ನುವ ಸ್ಪಷ್ಟತೆ ಅವಳಿಗಿದೆ. ಆ ಅರಿವು ಅವಳ ವ್ಯಕ್ತಿತ್ವಕ್ಕೆ ವಿಶೇಷವಾದ ಹೊಳಪು ತಂದುಕೊಟ್ಟಿದೆ.

ದೀಪಾಳಿಗೆ ಇರುವ ತೊಡಕುಗಳು ಹರಿಗಿಲ್ಲ. ‘ಸಂಧ್ಯಾವಂದನೆ ಮಾಡುವ ಮಗ ಇಂಥ ಕೆಲಸದಲ್ಲಿ ತೊಡಗುವುದು ಹೇಗೆ ಸಾಧ್ಯ?’ ಎಂದು ಪ್ರಶ್ನಿಸುವ ಅಮ್ಮ ಅವನ ಬೆನ್ನಿಗಿದ್ದಾಳೆ. ತಪ್ಪು ಮಾಡಿದ ಮಗನ ಭವಿಷ್ಯವನ್ನು ವಿದೇಶಕ್ಕೆ ಕಳಿಸಿಯಾದರೂ ರಕ್ಷಿಸಲಿಕ್ಕೆ ಅಪ್ಪ ಬದ್ಧನಾಗಿದ್ದಾನೆ. ತಪ್ಪು ಮಾಡಿದ್ದಾರೆ ಎಂದು ಭಾವಿಸಲಾದ ಇಬ್ಬರನ್ನೂ ಸಮಾನವಾಗಿ ನೋಡಬೇಕಾದ ಕಾಲೇಜಿನ ಆಡಳಿತ ಮಂಡಳಿಗೆ ಹರಿಯ ಬಗ್ಗೆ ಒಳ ಒಲವಿದೆ. ಕುಟುಂಬ, ಕಾಲೇಜು, ಸಮಾಜ, ಪೊಲೀಸ್‌ ವ್ಯವಸ್ಥೆ – ಎಲ್ಲೆಡೆಯೂ ಘಟಿಸಿದ ಅಚಾತುರ್ಯದಲ್ಲಿ ಹೆಣ್ಣಿನ ಪಾತ್ರವೇ ಎದ್ದುಕಾಣುವುದನ್ನು ‘ಹದಿನೇಳೆಂಟು’ ವಾಚ್ಯವಾಗಿಸದೆ ಸೂಚಿಸುತ್ತದೆ.

ಚಿತ್ರದ ಹೆಚ್ಚುಗಾರಿಕೆ ಇರುವುದು, ಚಿತ್ರದಲ್ಲಿ ಯಾರನ್ನೂ ಖಳರನ್ನಾಗಿಸದೆ ಇರುವುದರಲ್ಲಿ ಹಾಗೂ ಘಟನೆಯನ್ನು ನಿರ್ದಿಷ್ಟ ಸಂಗತಿಯೊಂದಕ್ಕೆ ಸೀಮಿತಗೊಳಿಸದೆ, ಅದಕ್ಕೆ ಇರಬಹುದಾದ ಹಲವು ಸಾಧ್ಯತೆಗಳನ್ನು ತಳಕು ಹಾಕುವುದರಲ್ಲಿ. ಅಪ್ಪನನ್ನು ಕಳೆದುಕೊಂಡಿರುವುದು ಹಾಗೂ ಕೊಳಗೇರಿ ಹಿನ್ನೆಲೆಯಿಂದಾಗಿ ದೀಪಾಳ ಬಗ್ಗೆ ಅನುಕಂಪ ಉಂಟಾದರೂ, ಹರಿಯ ಕುಟುಂಬದ ನೋವನ್ನೂ ಸಿನಿಮಾ ಘನತೆಯಿಂದ ಚಿತ್ರಿಸಿದೆ. ದೀಪಾಳ ಕುಟುಂಬದ ಬೆನ್ನಿಗೆ ನಿಲ್ಲುವ ಹೋರಾಟಗಾರ್ತಿ ಹಾಗೂ ವಕೀಲೆ, ಯಾವ ಕ್ಷಣದಲ್ಲೂ ಭಾವೋದ್ವೇಗಕ್ಕೆ ಒಳಗಾಗದೆ ವರ್ತಿಸುವುದು ವಿಶೇಷವಾಗಿದೆ. ಕಾಲೇಜಿನ ಪ್ರಾಂಶುಪಾಲ, ಉಪ ಪ್ರಾಂಶುಪಾಲೆ, ಉಪನ್ಯಾಸಕಿ, ಪೊಲೀಸ್‌ ಅಧಿಕಾರಿ, ಹುಡುಗನ ಪರವಾದ ವಕೀಲ – ಎಲ್ಲರೂ ಯಥಾಸ್ಥಿತಿಯನ್ನು ಕಾಯ್ದುಕೊಳ್ಳಲು ಬಯಸುವ ಸಮಾಜದ ಬಹುಸಂಖ್ಯಾತರ ಮನಸ್ಥಿತಿಯ ಪ್ರತಿನಿಧಿಗಳೇ ಆಗಿದ್ದಾರೆ. ಇವರೆಲ್ಲರ ನಡುವೆ, ‘ನಾನ್‌ ಮುಂದೇನು ಮಾಡ್ಲಿ?’ ಎಂದು ಅಸಹಾಯಕತೆಯಿಂದ ಪ್ರಶ್ನಿಸುವ ದೀಪಾಳ ಅಮ್ಮನ ಪ್ರಶ್ನೆಗೆ ಉತ್ತರಿಸುವವರು ಯಾರು? ನ್ಯಾಯಾಲಯದಲ್ಲಿ, ‘ಹದಿನೆಂಟು’ ಎಂದು ತನ್ನ ವಯಸ್ಸನ್ನು ಒಪ್ಪಿಕೊಳ್ಳುವ ಮೂಲಕ ಸಿನಿಮಾ ಮುಗಿದರೂ, ಅದೊಂದು ಹೇಳಿಕೆ ದೀಪಾಳ ಬದುಕಿನ ಮೇಲೆ ಉಂಟು ಮಾಡಬಹುದಾದ ಪರಿಣಾಮ ಸಹೃದಯರನ್ನು ಖಿನ್ನರನ್ನಾಗಿಸುವಂತಹದ್ದು.

-ಪೃಥ್ವಿ ಕೊಣನೂರು
-ಪೃಥ್ವಿ ಕೊಣನೂರು

‘ಹದಿನೇಳೆಂಟು’ ಸಿನಿಮಾದ ನಿರ್ದೇಶಕ ಪೃಥ್ವಿ ಕೊಣನೂರು, ‘ರೈಲ್ವೆ ಚಿಲ್ಡ್ರನ್‌’ ಹಾಗೂ ‘ಪಿಂಕಿ ಎಲ್ಲಿ?’ ಸಿನಿಮಾಗಳ ಮೂಲಕ ಚಿತ್ರರಸಿಕರಿಗೆ ಪರಿಚಿತರು. ಈ ಮೂರೂ ಸಿನಿಮಾಗಳು ಬೇರೆ ಬೇರೆ ಕಥನಗಳ ನಿರೂಪಣೆಯಾದರೂ, ಈ ಚಿತ್ರಗಳ ನಡುವೆ ಅಂತರ್ಗತ ಸಂಬಂಧ ಇರುವಂತಿದೆ. ಅದು, ಕೊಳೆಗೇರಿಗಳ ಬಗ್ಗೆ, ನಿರ್ಲಕ್ಷಿತ ಸಮುದಾಯಗಳ ಬಗ್ಗೆ ನಿರ್ದೇಶಕರಿಗೆ ಇರುವ ಕಾಳಜಿ. ವರ್ತಮಾನದ ಸುಡುಕೆಂಡದಂಥ ಸಮಸ್ಯೆಗಳನ್ನು ಕಪ್ಪುಬಿಳುಪಾಗಿ ನೋಡಿದೆ, ಅವುಗಳ ಬಹು ಆಯಾಮಗಳನ್ನೂ ಪರಿಶೀಲಿಸುವ ಸಾವಧಾನ ಹಾಗೂ ಪ್ರೌಢಿಮೆ ಪೃಥ್ವಿ ಅವರಲ್ಲಿವೆ. ‘ರೈಲ್ವೆ ಚಿಲ್ಡ್ರನ್‌’ನಲ್ಲಿ ಕೆಲವು ಕ್ಷಣಗಳಷ್ಟೇ ಕಾಣಿಸುವ ಮಕ್ಕಳ ತಾಯಂದಿರು, ‘ಪಿಂಕಿ ಎಲ್ಲಿ?’ ಚಿತ್ರದ ಸಣ್ಣಮ್ಮ ಹಾಗೂ ‘ಹದಿನೇಳೆಂಟು’ ಚಿತ್ರದ ದೀಪಾಳ ತಾಯಿ – ಪಾತ್ರಗಳು ಬದಲಾದರೂ ಇವರುಗಳ ಬದುಕಿನ ಬಣ್ಣಗಳಲ್ಲಿ ವ್ಯತ್ಯಾಸಗಳೇನಿಲ್ಲ. ಸತತವಾಗಿ ಮೂರು ಉತ್ತಮ ಸಿನಿಮಾಗಳನ್ನು ರೂಪಿಸಿರುವ ಪೃಥ್ವಿ, ಹೊಸ ತಲೆಮಾರಿನ ಕನ್ನಡ ಸಿನಿಮಾ ನಿರ್ಮಾತೃಗಳ ಸಾಲಿನಲ್ಲಿ ಅತ್ಯಂತ ಭರವಸೆಯ ನಿರ್ದೇಶಕ.

‘ನನ್ನ ಸಿನಿಮಾಗಳು ಸಮಾಜಕ್ಕೆ ಕನ್ನಡಿಯಾಗಬೇಕು’ ಎನ್ನುವ ಅರ್ಥದ ಮಾತೊಂದನ್ನು ಪೃಥ್ವಿ ಸಂದರ್ಶನವೊಂದರಲ್ಲಿ ಆಡಿದ್ದಾರೆ. ಅವರ ಸಿನಿಮಾಗಳು ಕನ್ನಡಿ ಹಿಡಿಯುವ ಕೃತಿಗಳಷ್ಟೇ ಆಗಿ ರೂಪುಗೊಂಡಿಲ್ಲ; ಯಾವುದೇ ಅತ್ಯುತ್ತಮ ಸೃಜನಶೀಲ ಕಲೆ ಹೊಂದಿರುವ, ಸಮಾಜದ ಆತ್ಮವಿಮರ್ಶೆಗೆ ಪ್ರೇರಣೆಯಾಗುವ ಶಕ್ತಿ ಪೃಥ್ವಿ ಅವರ ಚಲನಚಿತ್ರಗಳಿಗೂ ಇದೆ.

‘ಹದಿನೇಳೆಂಟು’ ಈಗಾಗಲೇ ‘ಬೂಸಾನ್‌ ಅಂತರರಾಷ್ಟ್ರೀಯ ಸಿನಿಮೋತ್ಸವ’ದಲ್ಲಿ ಪ್ರದರ್ಶನ ಕಂಡಿದೆ. 2022ರ ಗೋವಾ ಚಿತ್ರೋತ್ಸವದ ‘ಭಾರತೀಯ ಪನೋರಮಾ’ ವಿಭಾಗದಲ್ಲಿ ಆರಂಭಿಕ ಚಿತ್ರವಾಗಿ ತೆರೆ ಕಂಡಿದೆ. ಚಿತ್ರೋತ್ಸವಗಳ ಪಯಣ ಮುಂದುವರೆದಿದೆ. ಪೃಥ್ವಿ ಅವರ ಸಿನಿಮಾಗಳು ಚಿತ್ರೋತ್ಸವಗಳಿಗೆ ಸೀಮಿತವಾಗಿ ಉಳಿಯಬೇಕಾದ ಕಲಾಕೃತಿಗಳಲ್ಲ. ಅವು ಜನಸಾಮಾನ್ಯರ ನೋಟಕ್ಕೂ ದೊರೆಯಬೇಕು. ದೊಡ್ಡ ಬಂಡವಾಳ ಹಾಗೂ ವ್ಯಾಪಾರ ತಂತ್ರಗಳನ್ನು ನೆಚ್ಚಿಕೊಂಡ ಪೇಟೆಸಾಲಿನಲ್ಲಿ, ಸೃಜನಶೀಲ ಶಕ್ತಿಯನ್ನು ನೆಚ್ಚಿಕೊಂಡ ಪೃಥ್ವಿ ಅಂಥವರ ಸಿನಿಮಾಗಳು ತೆರೆಕಾಣುವುದು ಸುಲಭವಲ್ಲ. ‘ಸಿನಿಮಾ ಸಂಸ್ಕೃತಿ’ಗೆ ನಮ್ಮ ಸಂಪೂರ್ಣ ಬೆಂಬಲ ಎಂದು ಪದೇ ಪದೇ ಹೇಳುವ ಸರ್ಕಾರ, ಕನ್ನಡವನ್ನು ಅಂತರರಾಷ್ಟ್ರೀಯ ವೇದಿಕೆಗಳಲ್ಲಿ ಪ್ರತಿನಿಧಿಸುವವರ ಸಿನಿಮಾಗಳ ಪ್ರದರ್ಶನ ಮಾಡಬಹುದಾದ ಸಣ್ಣ ಸಣ್ಣ ಚಿತ್ರಮಂದಿರಗಳ ವ್ಯವಸ್ಥೆಯನ್ನೇ ಯೋಜಿಸಿಲ್ಲ. ಸರ್ಕಾರಕ್ಕಿಲ್ಲದ ಸೃಜನಶೀಲ ಚಿಂತನೆ ಗಾಂಧಿನಗರಕ್ಕೂ ಚಲನಚಿತ್ರ ವಾಣಿಜ್ಯಮಂಡಳಿಗೂ ಇರಬೇಕೆಂದು ಅಪೇಕ್ಷಿಸುವುದು ದುರಾಸೆ ಆಗಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT