ಶುಕ್ರವಾರ, ಜುಲೈ 30, 2021
28 °C

ಉಪ್ಪು ಹೆಚ್ಚಾದ ‘ಉಪ್ಪಿಟ್ಟು’ | 'ಲಾ' ಸಿನಿಮಾ ವಿಮರ್ಶೆ

ವಿಶಾಖ ಎನ್. Updated:

ಅಕ್ಷರ ಗಾತ್ರ : | |

ಚಿತ್ರ: ಲಾ (ಕನ್ನಡ), ನಿರ್ದೇಶನ: ರಘು ಸಮರ್ಥ್, ತಾರಾಗಣ: ರಾಗಿಣಿ ಪ್ರಜ್ವಲ್, ಹೆಬ್ಬಾಳೆ ಕೃಷ್ಣ, ಅಚ್ಯುತಕುಮಾರ್, ರಾಜೇಶ್‌ ನಟರಂಗ, ಅವಿನಾಶ್, ಸಿರಿ ಪ್ರಹ್ಲಾದ್‌, ಮಂಡ್ಯ ರಮೇಶ್, ‘ಮುಖ್ಯಮಂತ್ರಿ’ ಚಂದ್ರು.

 

ಅಪರಾಧದ ಕಥಾವಸ್ತುವನ್ನು ಕಣ್ಣುಗೊತ್ತಿಕೊಳ್ಳುವುದು ಚಿತ್ರರಂಗದ ಲಾಗಾಯ್ತಿನ ಜಾಯಮಾನ. ಸೆಡವು, ಕುತೂಹಲ, ಕ್ರೋಧ ಒಳಗೊಂಡ ಕತ್ತಲ ಬದುಕಿನ ಅನಾವರಣ ಕಥನ ಕುತೂಹಲಕ್ಕೆ ಸಿದ್ಧಹೂರಣ. ‘ತಲ್ವಾರ್‌’ ಹಿಂದಿ ಸಿನಿಮಾದ ಅತ್ಯಾಚಾರ–ಕೊಲೆ ಪ್ರಕರಣದ ವಿಚಾರಣೆಯ ಕುದಿಬಿಂದುವಿನಂಥ ನಿರೂಪಣೆಯ ಸಿನಿಮಾ ಆಗಲೀ, ತಣ್ಣಗೆ ನೋಡಿಸಿಕೊಳ್ಳುತ್ತಲೇ ಚಕ್ಕನೆ ಅಚ್ಚರಿಯೊಂದನ್ನು ಎಸೆಯುವ ‘ಬದ್ಲಾ’ ತರಹದ ಹಿಂದಿ ಚಿತ್ರವಾಗಲೀ ಅದೇ ಉದ್ದೇಶದ ಈಚಿನ ವರ್ಷಗಳ ಉದಾಹರಣೆಗಳು.

ರಘು ಸಮರ್ಥ್‌ ನಿರ್ದೇಶನದ ‘ಲಾ’ ಕೂಡ ಅಪರಾಧ, ಸೇಡು, ಕೋರ್ಟ್‌ ಡ್ರಾಮಾ ಇರುವ ಪ್ರಭೇದದ ಸಿನಿಮಾ. ಚಿತ್ರದ ವಸ್ತುವೇನೋ ತೂಕದ್ದು. ಆದರೆ, ಮೊದಲ ಮುಕ್ಕಾಲು ತಾಸು ಅದು ಕಣ್ಣುಗಳನ್ನು ಕೀಲಿಸಿ ನೋಡಲು ಪ್ರೇರಿಸುವುದೇ ಇಲ್ಲ. ಎರಡನೇ ಭಾಗಕ್ಕಷ್ಟೇ ಕುತೂಹಲಗಳ ಒರತೆ ಇರಲಿ ಎಂದು ಭಾವಿಸಿರುವುದೇ ಶಿಲ್ಪಕ್ಕೆ ಚ್ಯುತಿ ತಂದಿದೆ.

ಸಿನಿಮಾ ಪ್ರಾರಂಭವಾಗುವುದು ಸಾಮೂಹಿಕ ಅತ್ಯಾಚಾರಕ್ಕೆ ತಾನು ಒಳಗಾದೆ ಎಂದು ಸುಂದರ ಯುವತಿಯೊಬ್ಬಳು ಪೊಲೀಸ್‌ ಠಾಣೆಗೆ ಧೈರ್ಯವಾಗಿ ನುಗ್ಗಿ ಹೇಳುವುದರೊಂದಿಗೆ. ಅಲ್ಲಿನ ಪೊಲೀಸರನ್ನು ‘ಕ್ಯಾರಿಕೇಚರ್‌’ಗಳಂತೆ ಚಿತ್ರಿಸಿ, ಕಚಗುಳಿ ಇಡಲೇಬೇಕೆಂಬ ಮಾತುಗಳನ್ನು ಅವರ ಬಾಯಿಗೆ ಬಲವಂತವಾಗಿ ತುರುಕಿರುವುದು ಎದ್ದುಕಾಣುವ ಪ್ರಮಾದ.

ಚಿತ್ರಕಥಾ ಬರವಣಿಗೆ ದುರ್ಬಲವಾಗಿರುವುದಕ್ಕೆ ಅರ್ಧದಷ್ಟು ಸಿನಿಮಾ ಸಾಕ್ಷಿಯಾಗಿ ಉಳಿದುಬಿಡುತ್ತದೆ. ಗಂಭೀರ ಪಾತ್ರಗಳ ನಡುವೆ ಐಲುಪೈಲಾಗಿ ಮಾತನಾಡುವ ಒಂದೊಂದು ಆಕೃತಿಯನ್ನು ಸೃಷ್ಟಿಸಿರುವುದು (ತನಿಖಾಧಿಕಾರಿಯ ಸಹಾಯಕ, ನ್ಯಾಯಮೂರ್ತಿಯ ಬದಿಯಲ್ಲಿ ನಿಲ್ಲುವ ವ್ಯಕ್ತಿ, ನಾಯಕಿಯ ಸ್ನೇಹಿತರಲ್ಲಿ ಒಬ್ಬ... ಹೀಗೆ) ‘ರಿಲೀಫ್‌’ ಆಗಿ ಒದಗಿಬಂದಿಲ್ಲ. ಹಾಡುಗಳಾಗಲೀ, ಹಿನ್ನೆಲೆ ಸಂಗೀತವಾಗಲೀ, ಪ್ರಸಂಗಗಳು ನಡೆಯುವ ಸ್ಥಳಗಳಾಗಲೀ ಕಥಾಭಿತ್ತಿಯ ಪಾತ್ರಗಳಾಗಿ ರೂಪು ತಳೆದಿಲ್ಲ.

ರಾಗಿಣಿ ಪ್ರಜ್ವಲ್ ಮುಖದ ಮೇಲಿನ ಭಾವದ ಗೆರೆಗಳಿಗೂ ಮೇಕಪ್‌ ಮೆತ್ತಿಕೊಂಡಿದೆ. ಹೆಬ್ಬಾಳೆ ಕೃಷ್ಣ ಪಾತ್ರ ಅವರ ಕಂಚಿನ ಕಂಠ ಹಾಗೂ ಹದವರಿತ ಅಭಿನಯದಿಂದ ಕಾಡುತ್ತದೆ. ರಾಜೇಶ್‌ ನಟರಂಗ ನಟನೆಯೂ ಚೌಕಟ್ಟಿಗೆ ಹೊಂದಿಕೊಂಡಿದೆ.

ಹಿಡಿದಿಟ್ಟುಕೊಳ್ಳಬಲ್ಲ ‘ಒನ್‌ಲೈನರ್‌’ ಕೂಡ ಚಿತ್ರಕಥಾ ಕಸುಬುದಾರಿಕೆಯಿಲ್ಲದೆ ಹೇಗೆ ಸೊರಗಬಹುದು ಎನ್ನುವುದಕ್ಕೂ ಈ ಸಿನಿಮಾ ಅಧ್ಯಯನಯೋಗ್ಯ ಪರಿಕರವಾಗಿದೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು