ಮಂಗಳವಾರ, 16 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಲಾಲ್ ಸಿಂಗ್ ಚಡ್ಡಾ ಸಿನಿಮಾ ವಿಮರ್ಶೆ: ದೊಡ್ಡ ಕಾಲಕ್ಷೇಪ, ಮನುಷ್ಯತ್ವದ ಓಟ

Last Updated 11 ಆಗಸ್ಟ್ 2022, 11:41 IST
ಅಕ್ಷರ ಗಾತ್ರ

ಚಿತ್ರ: ಲಾಲ್ ಸಿಂಗ್ ಚಡ್ಡಾ (ಹಿಂದಿ)

ನಿರ್ಮಾಣ: ಆಮೀರ್ ಖಾನ್, ಕಿರಣ್ ರಾವ್, ವಯಾಕಾಂ 18 ಸ್ಟುಡಿಯೋಸ್

ನಿರ್ದೇಶನ: ಅದ್ವೈತ್ ಚಂದನ್

ತಾರಾಗಣ: ಆಮೀರ್ ಖಾನ್, ಕರೀನಾ ಕಪೂರ್, ನಾಗ ಚೈತನ್ಯ, ಮಾನವ್ ವಿಜ್, ಮೋನಾ ಸಿಂಗ್

***

ಪುಕ್ಕವೊಂದು ಗಾಳಿಯಾಡಿದತ್ತ ತೇಲುತ್ತಾ ಕಥೆಯನೊರೆದು ಸಾಗಿತು.

ಪುಕ್ಕಕ್ಕೆ ತಾನೆಲ್ಲಿಗೆ ಸಾಗಬೇಕೆಂಬ ನಿಶ್ಚಿತತೆ ಇಲ್ಲ. ಅದು ಬಂದು ಸೇರುವುದು ಅದರಂಥದ್ದೇ ಜಾಯಮಾನದ ನಾಯಕ ಕುಳಿತ ರೈಲಿನ ಸೀಟಿಗೆ. ಆ ಗರಿಯನ್ನು ಪುಸ್ತಕದ ಪುಟಗಳ ನಡುವೆ ಸೇರಿಸುವ ನಾಯಕ, ನಿಸ್ಸಂಕೋಚವಾಗಿ ತನ್ನ ಬದುಕಿನ ಪುಟಗಳ ಕಥೆಗಳನ್ನು ರೈಲು ಬೋಗಿಯಲ್ಲಿ ಕುಳಿತವರಿಗೆ ಒಂದೊಂದಾಗಿ ಹೇಳತೊಡಗುತ್ತಾನೆ. ಕಥೆ ಹೇಳಿ ಮುಗಿದ ಮೇಲೆ ಪುಸ್ತಕದಿಂದ ಗರಿ ಜಾರಿ ಕೆಳಗೆ ಬೀಳುತ್ತದೆ. ಅದು ಹಾರುವುದು ಇನ್ನೆಲ್ಲಿಗೋ...ಆ ಗರಿಯೇ ಇಡೀ ತೆರೆಯ ಆವರಿಸಿಕೊಳ್ಳುವುದರ ಮೂಲಕ ಕಥೆ ಅಂತ್ಯಗೊಂಡು, ಮನದಿ ಉಳಿದ ಪ್ರಶ್ನೆಗಳು ಆರಂಭವೊಂದನ್ನು ಮೂಡಿಸುತ್ತವೆ.

ಎರಿಕ್ ರೋತ್ ಚಿತ್ರಕಥೆ ಬರೆದಿದ್ದ ‘ಫಾರೆಸ್ಟ್ ಗಂಪ್’ 1994ರಲ್ಲಿ ತೆರೆಕಂಡ ಅಮೆರಿಕನ್ ಚಿತ್ರ. ಅದಕ್ಕೆ ಅಕಾಡೆಮಿ ಪ್ರಶಸ್ತಿ ಒಲಿದಿತ್ತು. ಅದರ ಕಥಾನಾಯಕನ ಪಾತ್ರ ಮಾಡಿದ್ದವರು ಟಾಮ್ ಹಂಕ್ಸ್‌. ಆಮಿರ್‌ ಖಾನ್ ಆಂಗಿಕ ಅಭಿನಯದಲ್ಲಿ ಅವರ ಋಣಭಾರ ಇದೆಯಾದರೂ, ಆಡುವ ಪಂಜಾಬಿ ಮಾತುಗಳು ಈ ಮಣ್ಣಿನವು. ಅಮೆರಿಕದಲ್ಲಿ ಎಂದೋ ಹೇಳಿದ ಕಥೆಯನ್ನು ಅತುಲ್ ಕುಲಕರ್ಣಿ ಭಾರತದ ’ಟೆಂಪ್ಲೇಟ್‌‘ ಮೇಲೆ ತಂದು ಇತಿಹಾಸದ ಘಟನೆಗಳ ಕಾಲಕ್ಷೇಪದೊಟ್ಟಿಗೆ ಬೆಸೆದು, ಈ ಕಾಲಕ್ಕೆ ಒಗ್ಗಿಸಿರುವ ಪರಿ ಕುತೂಹಲಕಾರಿ.

ನಾಯಕನ ಐಕ್ಯು ಕಡಿಮೆ. ಬಾಲ್ಯದಲ್ಲಿಯೇ ತಂದೆಯನ್ನು ಕಳೆದುಕೊಂಡವನು. ಗಟ್ಟಿಗಿತ್ತಿ ತಾಯಿ ಇವನನ್ನು, ಇವನ ವ್ಯಕ್ತಿತ್ವವನ್ನು ಮೇಲೆತ್ತುತ್ತಾಳೆ. ಶಾಲಾ ಸಹಪಾಠಿ ಹುಡುಗಿ ಇವನಿಗೆ ಮನೋಬಲ ತುಂಬುತ್ತಾಳೆ. ಬಾಲ್ಯದಿಂದಲೆ ಇವನು ಪದೇಪದೇ ಅವಳಿಗೆ, ‘ನನ್ನನ್ನು ಮದುವೆಯಾಗುವೆಯಾ’ ಎಂದು ಆಮಂತ್ರಣ ನೀಡುತ್ತಲೇ ಇರುತ್ತಾನೆ. ಅವಳೆಂದರೆ ಇವನಿಗೆ ಪ್ರಾಣ. ಒಲವು. ಅವಳಿಗೆ ನೋವುಣಿಸಿದವರಿಗೆ ಇವನು ಮುಖಮೂತಿ ನೋಡದೆ ಕೊಡುತ್ತಾನೆ. ಧರ್ಮ ಮೀರಿ ಮದುವೆಯಾದ ದಂಪತಿಗೆ ಹುಟ್ಟಿದ ಅವಳು ಬಡತನದ ಮಿಕ. ಶ್ರೀಮಂತಿಕೆಯನ್ನು ಹುಡುಕಿ ತನ್ನದೆ ಪಥದಲ್ಲಿ ಹೊರಡುವಾಕೆ. ಅವಳ ಬದುಕಿನ ತುಂಬೆಲ್ಲ ಬರೀ ಸಿಕ್ಕುಗಳು.

ಇವನಿಗೆ ಗೊತ್ತಿಲ್ಲ, ಗುರಿ ಇಲ್ಲ. ಅವ್ವ ತೋರಿದ್ದೇ ದಾರಿ. ಅಪ್ಪ, ತಾತನಂತೆ ಸೇನೆಗೆ ಸೇರುತ್ತಾನೆ. ಕೊಲ್ಲುವುದು ಇವನಿಗೆ ಇಷ್ಟವಿಲ್ಲವಾದರೂ ಮೇಲಧಿಕಾರಿಯ ಆದೇಶ ಪರಿಪಾಲಕ. ಇಂಥವನು ಯುದ್ಧದಲ್ಲಿ ಐವರ ಪ್ರಾಣ ಉಳಿಸುತ್ತಾನೆ. ಪ್ರಾಣ ಸ್ನೇಹಿತನನ್ನೇ ಕಳೆದುಕೊಳ್ಳುತ್ತಾನೆ. ಪ್ರಾಣ ಉಳಿಸಿದವರಲ್ಲಿ ಒಬ್ಬ ಶತ್ರು ಪಾಳಯದವನು ಎನ್ನುವುದು ಚಿತ್ರಕಥೆಯ ಪ್ರಮುಖ ಬಿಂದು. ಕಥೆ ಇಷ್ಟೆ ಅಲ್ಲ.

ಆಗಿನ ಪ್ರಧಾನಿ ಇಂದಿರಾ ಗಾಂಧಿಯ ಕಾಲಘಟ್ಟದಿಂದ ಈಗಿನ ಪ್ರಧಾನಿ ಮೋದಿ ಕಾಲದವರೆಗೆ ಬೇರೆ ಬೇರೆ ದಿನಮಾನಗಳನ್ನು, ವ್ಯಾಕುಲಗಳನ್ನು, ಸಂಘರ್ಷಗಳನ್ನು ಒಳಗೊಳ್ಳುವ ಈ ಚಿತ್ರಕಥಾನಕವು ಯಾವ ಘಟನಾವಳಿಯನ್ನೂ ಪಾತ್ರಗಳ ಮೂಲಕ ಹೆಚ್ಚು ವಿಮರ್ಶಿಸಲು ಹೋಗುವುದಿಲ್ಲ. ಜಾತಿ–ಧರ್ಮದ ಎಲ್ಲ ಸಂಘರ್ಷಗಳನ್ನು ‘ಮಲೇರಿಯಾ’ ಎಂದಷ್ಟೆ ನಾಯಕನ ತಾಯಿ ಮಗನಿಗೆ ಹೇಳುತ್ತಿರುತ್ತಾಳೆ. ಹಾಗೆನ್ನುವ ಮೂಲಕ ಉಳಿದೆಲ್ಲ ವಿಶ್ಲೇಷಣೆಯನ್ನೂ ನೋಡುಗರ ಪಾಲಿಗೇ ನಿರ್ದೇಶಕರು ಬಿಟ್ಟುಬಿಡುತ್ತಾರೆ. ತಲೆಮೇಲೆ ಹೊಡೆಯುವಂತಹ ಸತ್ಯವನ್ನೂ ಉಪಪಠ್ಯಗಳ ಮೂಲಕ ನವಿರಾಗಿ ಹೇಳಿ ಸುಮ್ಮನಾಗಿಬಿಡಬೇಕಾದ ಕಾಲ ಇದಲ್ಲವೆ ಎಂದು ಇಡೀ ಚಿತ್ರ ನಮ್ಮನ್ನೇ ಪ್ರಶ್ನಿಸುವಷ್ಟು ಮೌನ ಇಡುಕಿರಿದಿದೆ.

‘ಫಾರೆಸ್ಟ್‌ ಗಂಪ್‌’ಗೆ ಇರುವ ಹಾಸ್ಯ ಲಕ್ಷಣದ ತುಲನೆಯಲ್ಲಿ ‘ಲಾಲ್ ಸಿಂಗ್‌..’ ಕೆಳಗೆ ಇಳಿಯುತ್ತದೆ. ಆದರೆ, ಅದು ಕಟ್ಟಿಕೊಡುವ ಭಾರತೀಯ ಮಾನವತೆಯು ಪ್ರಸ್ತುತ ಸನ್ನಿವೇಶದಲ್ಲಿ ತುಂಬಾ ಮುಖ್ಯ.

ಮೂಲಚಿತ್ರದ ಕಥಾನಾಯಕನ ಆಂಗಿಕ ಭಾವವನ್ನು ಕಡಪಡೆದ ನಂತರವೂ ಆಮೀರ್‌ ಖಾನ್ ಇಡೀ ಚಿತ್ರವನ್ನು ಜೀವಿಸಿದ್ದಾರೆ. ಮಾತಿನ ನಡುವೆ ‘ಹೂಂ’ ಎನ್ನುವುದು, ಕಥನ ಕುತೂಹಲದ ನಡುವೆ ಬಿಡುವ ನಿಟ್ಟುಸಿರು, ಅನೇಕ ಸಂದರ್ಭಗಳಲ್ಲಿ ರೆಪ್ಪೆ ಬಡಿಯದ ಅವರ ಕಣ್ಣುಗಳು, ಸಿಹಿತಿನಿಸಿದ ಡಬ್ಬದಲ್ಲಿ ಜೋಡಿಸಿಟ್ಟ ಗೋಲ್‌ಗಪ್ಪ ದಾಟಿಸುವ ವಿಷಯಗಳು ಒಂದೆರಡಲ್ಲ. ಕರೀನಾ ಕಪೂರ್ ಪಾತ್ರ ಕೂಡ ತೂಕದ್ದು. ಚಿತ್ರದ ಬಹುಮುಖ್ಯ ಪಾತ್ರವನ್ನು ಮಾನವ್ ವಿಜ್ ಅನುಭವಿಸಿದ್ದಾರೆ. ನಾಗ ಚೈತನ್ಯ ಪಾತ್ರವು ‘ಕಾಮಿಕ್ ರಿಲೀಫ್‌’ ಎನಿಸಿದರೂ ಚಿತ್ರದುದ್ದಕ್ಕೂ ಚಾಚಿಕೊಳ್ಳುವ ಆ ಪಾತ್ರದ ಪ್ರಭಾವ ಗಾಢವಾದುದು. ಶಾರುಖ್ ಖಾನ್ ಕೂಡ ಒಂದೇ ಒಂದು ದೃಶ್ಯದಲ್ಲಿ ಅವರೇ ಆಗಿ ನಟಿಸಿರುವುದು ಹಾಸ್ಯದ ಇನ್ನೊಂದು ಝಲಕ್. ಡಾನ್ ಬರ್ಗೆಸ್ ಸಿನಿಮಾಟೊಗ್ರಫಿ ಭಾರತದ ಹಲವು ಪ್ರದೇಶಗಳನ್ನು ಮನುಷ್ಯನ ಉಸಿರಿನೊಟ್ಟಿಗೆ ಹಿಡಿದು ಕೊಟ್ಟಿರುವುದು ಉಲ್ಲೇಖನೀಯ. ಅಲನ್ ಸಿಲ್ವೆಸ್ತ್ರಿ ಸಂಗೀತವೂ ಔಚಿತ್ಯಪೂರ್ಣ.

ಮಾನವೀಯತೆಗಾಗಿ ಹಂಬಲಿಸುತ್ತಾ ವ್ಯಾಕುಲಗಳಿಂದ ಸದಾ ಓಡಬೇಕಾದ ಅನಿವಾರ್ಯ ನಾಯಕನದ್ದು. ಅವನು ಒಂದೇ ಉಸಿರಿನಲ್ಲಿ ಸುಮ್ಮನೆ ಓಡುವುದು ಹೊಸಕಾಲದ ರೂಪಕವೂ ಹೌದು. ಅನೇಕರ ವ್ಯಾಕುಲವೂ ಹೌದು. ನೋಡುಗನೊಟ್ಟಿಗೆ ಹೀಗೆ ಚಿತ್ರ ಸಂಭಾಷಿಸುತ್ತಲೆ ಕಣ್ಣಂಚಲ್ಲಿ ತಂದಿಕ್ಕುವ ನೀರು ಈ ರೀಮೇಕ್ ಚಿತ್ರವನ್ನು ಕೂಡ ನಮ್ಮದಾಗಿಸುತ್ತದೆ.

ಇದನ್ನೂ ಓದಿ...

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT