ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಂದು ಗಂಟೆಯ ಕಥೆ ಚಿತ್ರ ವಿಮರ್ಶೆ: ಗಂಭೀರ ಎಳೆಗೆ ತೆಳುಹಾಸ್ಯ ಲೇಪ

Last Updated 19 ಮಾರ್ಚ್ 2021, 10:24 IST
ಅಕ್ಷರ ಗಾತ್ರ

ಚಿತ್ರ: ಒಂದು ಗಂಟೆಯ ಕಥೆ (ಕನ್ನಡ)

ನಿರ್ಮಾಣ: ಕಶ್ಯಪ್ ದಾಕೋಜು

ನಿರ್ದೇಶನ: ದ್ವಾರ್ಕಿ ರಾಘವ

ತಾರಾಗಣ: ಅಜಯ್‌ ರಾಜ್‌, ಶನಾಯಾ ಕಾಟ್ವೆ, ಪ್ರಕಾಶ್ ತುಮ್ಮಿನಾಡ್, ಚಿದಾನಂದ್, ಯಶವಂತ ಸರದೇಶಪಾಂಡೆ, ಸಿಲ್ಲಿ ಲಲ್ಲಿ ಆನಂದ್, ಪ್ರಶಾಂತ್ ಸಿದ್ಧಿ, ಸ್ವಾತಿ ಶರ್ಮ.

ಗಂಭೀರವಾದ ವಸ್ತುವನ್ನು ಹಾಸ್ಯದ ಭಿತ್ತಿಗೆ ಒಗ್ಗಿಸಿ ಚಿತ್ರಕಥೆ ಬರೆಯುವುದು ದೊಡ್ಡ ಸವಾಲು. ಅದರಲ್ಲೂ ಹೆಣ್ಣುಮಕ್ಕಳ ಮನೋನಂದನದ ಸೂಕ್ಷ್ಮ ಸಂಗತಿಗಳನ್ನು ತೆರೆಮೇಲೆ ತರುವುದು ಹಗ್ಗದ ಮೇಲಿನ ನಡಿಗೆಯಂತೆ. ಅದನ್ನು ಯಾವ ಪ್ರಕಾರದ ಚಿತ್ರವಾಗಿ ಗ್ರಹಿಸುತ್ತೇವೆ ಎನ್ನುವುದು ಸಂವೇದನೆಯ ಅಭಿವ್ಯಕ್ತಿ, ಪರಿಣಾಮ ಎರಡೂ ದೃಷ್ಟಿಯಿಂದ ಮುಖ್ಯವಾಗುತ್ತದೆ.

ನಿರ್ದೇಶಕ ದ್ವಾರ್ಕಿ ರಾಘವ ‘ಮತ್ತೆ ಮುಂಗಾರು’ ತರಹದ ಕಾಡುವ ಕಥೆಯನ್ನು ಈ ಹಿಂದೆ ಗಟ್ಟಿ ಸಿನಿಮಾ ರೂಪದಲ್ಲಿ ಕಟ್ಟಿಕೊಟ್ಟಿದ್ದವರು. ಎಂಟು ವರ್ಷಗಳ ನಂತರ ಅವರ ಪುನರ್‌ಪ್ರವೇಶ ಹೇಗಿರಬಹುದು ಎಂಬ ಕುತೂಹಲವಿತ್ತು. ಈ ಚಿತ್ರ ಆ ನಿರೀಕ್ಷೆಯ ಭಾರದಲ್ಲಿ ಕುಸಿದಿದೆ. ಅವರು ಅತಿ ಸೂಕ್ಷ್ಮವಾದ ಸಮಸ್ಯೆಯೊಂದನ್ನು ಹೇಳಲು ಹಾಸ್ಯದ ದಾರಿಯನ್ನು ಆಯ್ಕೆ ಮಾಡಿಕೊಂಡಿರುವುದೇ ಇದಕ್ಕೆ ಕಾರಣ. ಈ ವಸ್ತುವನ್ನು ಸಿನಿಮೀಯ ತರ್ಕ ಬಿಟ್ಟು ಜೀರ್ಣಿಸಿಕೊಳ್ಳುವುದು ಕಷ್ಟ.

ಕನ್ನಡದ ಮಟ್ಟಿಗೆ ‘ವಯಸ್ಕರರ ಹಾಸ್ಯ’ ಎನ್ನುವ ಪ್ರಕಾರ ವಿರಳಾತಿವಿರಳ. ಕಾಶಿನಾಥ್ ಚಿತ್ರಗಳಲ್ಲಿ ಅಂತಹ ಪಲುಕುಗಳನ್ನು ಕಂಡಿದ್ದೆವು. ಗಣೇಶ್ ನಾಯಕರಾಗಿದ್ದ ‘ಝೂಮ್’ ಚಿತ್ರದ ಮೂಲಕ ನಿರ್ದೇಶಕ ಪ್ರಶಾಂತ್ ರಾಜ್ ಅಂತಹ ಕಚಗುಳಿ ಇಡುವಲ್ಲಿ ಯಶಸ್ವಿಯಾಗಿದ್ದರು. ಧಾರಾವಾಹಿಯ ಒಟ್ಟಂದಕ್ಕೆ ಒಗ್ಗುವ ರೀತಿಯ ಚಿತ್ರಕಥೆಯನ್ನೇ ಹಿಂಜಿ ದ್ವಾರ್ಕಿ ರಾಘವ ಸಿನಿಮಾ ಆಗಿಸಿದ್ದಾರೆ.

ನಾಲ್ಕು ವರ್ಷ ಪ್ರೀತಿಸಿದ ನಾಯಕ ಇನ್ನೊಂದು ಮದುವೆಯಾಗಲು ಪ್ರೇಯಸಿಗೆ ಕೈಕೊಡುತ್ತಾನೆ. ಅಲ್ಲಿಂದ ಶುರುವಾಗುವ ಕಥೆ, ಆಮೇಲೆ ಅವನ ಬಹುಮುಖ್ಯವಾದ ಅಂಗವನ್ನೇ ಅವಳು ಹಾರಿಸಿಕೊಂಡು ಹೋಗುವುದರೊಂದಿಗೆ ಕುತೂಹಲದ ಪರದೆಯನ್ನು ಸರಿಸುತ್ತದೆ. ಆ ಅಂಗ ಯಾವುದು? ಅದರ ಸುತ್ತ ವೈದ್ಯಕೀಯ ಕ್ಷೇತ್ರದವರು, ರಾಜಕಾರಣಿಗಳು, ವೈದ್ಯರು ಹೇಗೆಲ್ಲ ಚರ್ಚೆ ನಡೆಸುತ್ತಾರೆ ಎನ್ನುವುದನ್ನು ಹಾಸ್ಯದ ಕವಚ ತೊಡಿಸಿ ನಿರ್ದೇಶಕರು ಹೇಳಿದ್ದಾರೆ. ಕೊನೆಯಲ್ಲಿ ಬೋಧನೆಯ ಬಿಂದುವಿಗೆ ತಂದು ನಿಲ್ಲಿಸಿ, ಸಣ್ಣ ವಿಷಾದದ ಛಾಯೆಯನ್ನು ಉಳಿಸುತ್ತಾರೆ.

ಅಜಯ್‌ ರಾಜ್‌ ಇಂತಹುದೊಂದು ಪಾತ್ರವನ್ನು ಒಪ್ಪಿಕೊಂಡು ಚೆನ್ನಾಗಿಯೇ ನಿರ್ವಹಿಸಿದ್ದಾರೆ. ನಾಯಕಿ ಶನಾಯಾ ಅವರ ಅಭಿನಯವೂ ಚೆನ್ನಾಗಿದೆ. ಪ್ರಕಾಶ್ ತುಮ್ಮಿನಾಡ್, ಯಶವಂತ ಸರದೇಶಪಾಂಡೆ, ಪ್ರಶಾಂತ್ ಸಿದ್ಧಿ, ಸಿಲ್ಲಿ ಲಲ್ಲಿ ಆನಂದ್ ಇವರೆಲ್ಲರ ಹಾಸ್ಯದ ಟೈಮಿಂಗ್, ಸಂಭಾಷಣೆಗೆ ಕಚಗುಳಿ ಇಡುವ ಶಕ್ತಿಯೇನೋ ಇದೆ. ಆದರೆ, ನಿರ್ದೇಶಕರು ಆಯ್ಕೆ ಮಾಡಿಕೊಂಡಿರುವ ವಸ್ತುವನ್ನು ಈ ಮಾದರಿಯಲ್ಲಿ ಇಟ್ಟಿರುವುದು ಸರಿಯೇ ಎನ್ನುವುದು ಗಂಭೀರ ಪ್ರಶ್ನೆ. ಆಸಕ್ತಿಕರವಾಗಿದ್ದೂ ಒನ್‌ಲೈನರ್ ತೆಳುವಾಗಿದ್ದಲ್ಲಿ ಅದನ್ನು ಹಿಂಜುವುದು ಕಷ್ಟ ಎನ್ನುವುದಕ್ಕೆ ಈ ಚಿತ್ರ ಉದಾಹರಣೆಯಾಗಿಯೂ ಉಳಿಯುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT