ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆ.ಜಿ.ಎಫ್‌–2 ಸಿನಿಮಾ ವಿಮರ್ಶೆ: ಚಿನ್ನದ ಕಡಲಲ್ಲಿ ರಾಕಿ ‘ದುನಿಯಾ’

Last Updated 14 ಏಪ್ರಿಲ್ 2022, 12:26 IST
ಅಕ್ಷರ ಗಾತ್ರ

ಸಿನಿಮಾ: ಕೆ.ಜಿ.ಎಫ್‌ –ಚ್ಯಾಪ್ಟರ್‌ 2 (ಕನ್ನಡ)
ನಿರ್ದೇಶನ: ಪ್ರಶಾಂತ್‌ ನೀಲ್‌
ನಿರ್ಮಾಣ: ವಿಜಯ್‌ ಕಿರಗಂದೂರು
ತಾರಾಗಣ: ಯಶ್‌, ಶ್ರೀನಿಧಿ ಶೆಟ್ಟಿ, ಸಂಜಯ್‌ ದತ್‌, ರವೀನಾ ಟಂಡನ್‌, ರಾವ್‌ ರಮೇಶ್‌, ಪ್ರಕಾಶ್‌ ರಾಜ್‌, ಮಾಳವಿಕ ಅವಿನಾಶ್‌, ಟಿ.ಎಸ್‌.ನಾಗಾಭರಣ, ಗೋವಿಂದೇ ಗೌಡ, ಅಚ್ಯುತ್‌ ಕುಮಾರ್‌, ಅರ್ಚನಾ ಜೋಯಿಸ್‌, ಅಯ್ಯಪ್ಪ ಪಿ.ಶರ್ಮ, ಬಿ.ಎಸ್‌.ಅವಿನಾಶ್‌

***

‘ಹಾಸಿಗೆ ಇದ್ದಷ್ಟೇ ಯಾಕೆ ಕಾಲು ಚಾಚಬೇಕು? ಹಾಸಿಗೆಯನ್ನೇ ದೊಡ್ಡದು ಮಾಡೋಣ’ ಎನ್ನುವ ನಾಯಕನ ಡೈಲಾಗ್‌ ಕೆ.ಜಿ.ಎಫ್‌ ಸರಣಿಯ ಜೀವಾಮೃತ. ‘ಕ್ಯಾ ಚಾಹಿಯೇರೆ ತುಜೆ’ ಎಂದು ನಾಯಕನನ್ನು ಪ್ರಶ್ನಿಸುವಾಗ ಆತ ನೀಡಿದ ಉತ್ತರ ‘ದುನಿಯಾ’. ಮೊದಲ ಅಧ್ಯಾಯದಲ್ಲಿ ಹೊಡೆದ ಈ ಡೈಲಾಗ್ ಮುಂದಿನ ಅಧ್ಯಾಯಕ್ಕೂ ತಳಹದಿ. ಭಾರತಕ್ಕೇ ‘ಸಿ.ಇ.ಒ’ ಆದ ನಾಯಕ, ಇದೀಗ ಹೊಳೆವ ಸಮುದ್ರದಲ್ಲಿ ಮಲಗಿದ್ದಾನೆ. ಆತ ಮತ್ತೆ ಎದ್ದು ಬರುವುದಕ್ಕೆ ಪ್ರೇಕ್ಷಕರು ತುದಿಗಾಲಲ್ಲಿ ನಿಂತಿದ್ದಾರೆ.

ಕೆ.ಜಿ.ಎಫ್‌ ಎರಡನೇ ಅಧ್ಯಾಯ ಬಿಡುಗಡೆಯಾದ ಗಾತ್ರವೂ ಚಂದನವನದ ತಾಕತ್ತನ್ನು ಪ್ರಪಂಚಕ್ಕೆ ತೋರಿಸಿದೆ. ಹಾಸಿಗೆಯನ್ನೇ ದೊಡ್ಡದು ಮಾಡಿ ವಿಶ್ವದ ಹತ್ತು ಸಾವಿರ ಪರದೆಗಳಲ್ಲಿ ಸೂಟುಬೂಟಿನಲ್ಲಿ ರಾಕಿಭಾಯ್‌ ಪ್ರವೇಶಿಸುವಾಗ ಕ್ಷಣದಲ್ಲೊಮ್ಮೆ ಚಿತ್ರಮಂದಿರವೇ ಉತ್ಸವಕ್ಕೆ ವೇದಿಕೆಯಾಗುತ್ತದೆ. ರಾಜ ಕೃಷ್ಣಪ್ಪ ಭೇರ್ಯನಾಗಿ ಹುಟ್ಟಿದ ನಾಯಕ ಮುಂಬೈಗೆ ಕಾಲಿಟ್ಟು ‘ರಾಕಿ’ಭಾಯ್‌ಯಾಗಿ ಬೆಳೆದು ಕೆ.ಜಿ.ಎಫ್‌ನ ನಾರಾಚಿ ಹೆಬ್ಬಾಗಿಲಿನೊಳಗೆ ನುಗ್ಗಿ ಅಲ್ಲಿನ ಅಧಿಪತಿ ಗರುಡನನ್ನೇ ಹೊಡೆದುರುಳಿಸುವಲ್ಲಿಗೆ ಮೊದಲ ಅಧ್ಯಾಯ ಮುಗಿಯುತ್ತದೆ.

ಮೊದಲ ಅಧ್ಯಾಯದಲ್ಲಿ ‘ಆನಂದ್‌ ಇಂಗಳಗಿ’ಯಾಗಿ ‘ರಾಕಿ ಭಾಯ್‌’ ಕಥೆಯನ್ನು ನಿರೂಪಣೆ ಮಾಡಿದ್ದ ನಟ ಅನಂತನಾಗ್‌ ಎರಡನೇ ಅಧ್ಯಾಯದಲ್ಲಿ ಇಲ್ಲ ಎನ್ನುವುದು ಮೊದಲೇ ಗೊತ್ತಿತ್ತು. ಈ ಸ್ಥಾನವನ್ನು ‘ಪ್ರಕಾಶ್‌ ರಾಜ್‌’ ತುಂಬಲಿದ್ದಾರೆ ಎನ್ನುವ ಮಾಹಿತಿಯೂ ಇತ್ತು. ಆದರೆ ‘ಹೇಗೆ’ ಎನ್ನುವ ಪ್ರಶ್ನೆ ಎಲ್ಲರಲ್ಲೂ ಇತ್ತು. ಈ ಸಂದರ್ಭವನ್ನು ಅತ್ಯಂತ ಚಾಣಾಕ್ಷ ರೀತಿಯಲ್ಲಿ ನಿರ್ದೇಶಕ ಪ್ರಶಾಂತ್‌ ನೀಲ್‌ ನಿಭಾಯಿಸಿದ್ದಾರೆ. ಆನಂದ್‌ ಇಂಗಳಗಿ ಮಗನಾಗಿ (ವಿಜಯೇಂದ್ರ ಇಂಗಳಗಿ) ಪ್ರಕಾಶ್‌ ರಾಜ್‌ ಎರಡನೇ ಅಧ್ಯಾಯದ ಕಥೆ ಮುನ್ನಡೆಸುತ್ತಾರೆ. ಇದು ಮೊದಲ ಗೆಲುವು.

ಚಿನ್ನದ ಸಾಮ್ರಾಜ್ಯ ನಾರಾಚಿಗೆ ಹೊಸ ಅಧಿಪತಿಯಾಗಿ ರಾಕಿ ಬೆಳೆಯಲಾರಂಭಿಸುತ್ತಾನೆ.ತಮ್ಮನ್ನು ಬೇಡಿಯೊಳಗಿಟ್ಟ ಗರುಡನನ್ನು ಹೊಡೆದುರುಳಿಸಿದ ನಾಯಕನೇ ಇಲ್ಲಿ ಜನರಿಗೆ ದೇವರಾಗುತ್ತಾನೆ. ಕಾಲು ಚಾಚಲು ಹಾಸಿಗೆಯನ್ನೇ ದೊಡ್ಡದು ಮಾಡುತ್ತಾನೆ.ಗಣಿಯನ್ನು ವಿಸ್ತರಿಸುತ್ತಾನೆ. ಗರುಡ ಬದುಕಿರುವವರೆಗೂ ಕೆ.ಜಿ.ಎಫ್‌ಗೆ ಕಾಲಿಡುವುದಿಲ್ಲ ಎಂದು ಮಾತು ಕೊಟ್ಟಿದ್ದ ಅಧೀರ ಇದೀಗ ರಾಕಿಯ ಮುಂದಿದ್ದಾನೆ. ಅಧೀರನಾಗಿ ಬಾಲಿವುಡ್‌ ನಟ ಸಂಜಯ್‌ ದತ್‌ ಪ್ರವೇಶ ಭರ್ಜರಿಯಾಗಿದೆ. ಚಿತ್ರದ ಮೊದಲಾರ್ಧ ತೆರೆಯ ತುಂಬಾ ‘ರಾಕಿ’ ‘ಅಧೀರ’ರೇ ತುಂಬಿಕೊಳ್ಳುತ್ತಾರೆ. ಯಶ್‌, ಸಂಜಯ್‌ ದತ್‌ ಡೈಲಾಗ್‌ಗಳು, ದೃಶ್ಯವೈಭವದಿಂದ ಕೂಡಿದ ಮೊದಲಾರ್ಧದ ಕಥೆ ಬಿರುಗಾಳಿಯಂತೆ ಸಾಗುತ್ತದೆ. ಈ ಬಿರುಗಾಳಿಗೆ ರವಿ ಬಸ್ರೂರು ಅವರ ಸಂಗೀತ, ಕಲಾ ನಿರ್ದೇಶಕ ಶಿವಕುಮಾರ್‌ ಅವರ ಕೈಚಳಕವೂ ಓಘ ನೀಡಿದೆ. ಇದು ಎರಡನೇ ಗೆಲುವು.

‘ಸುಲ್ತಾನ’ನಾಗಿ ಬೆಳೆಯುವ ರಾಕಿಗೆ ‘ಅಧೀರ’ನ ಜೊತೆಗೆ ಪ್ರಧಾನಿಯಾಗಿ ಆಯ್ಕೆಯಾಗುವ ‘ರಮಿಕಾ ಸೇನ್‌’(ರವೀನಾ ಟಂಡನ್‌) ಎದುರಾಗುತ್ತಾಳೆ. ಮುಂದೇನಾಗುತ್ತದೆ ಎನ್ನುವಲ್ಲಿಂದ ಎರಡನೇ ಅಧ್ಯಾಯದ ಕಥೆ ಮುಂದುವರಿಯುತ್ತದೆ.

ಸಿ.ಬಿ.ಐ ಅಧಿಕಾರಿ ‘ರಾಘವನ್‌’ ಪಾತ್ರದಲ್ಲಿ ನಟ ರಾವ್‌ ರಮೇಶ್‌ ನಟನೆ ಉಲ್ಲೇಖಾರ್ಹ. ದ್ವಿತೀಯಾರ್ಧದಲ್ಲಿಚಿತ್ರಕಥೆಯು ಬಿರುಗಾಳಿಗೆ ಮತ್ತಷ್ಟು ವೇಗ ನೀಡಿ ಚಂಡಮಾರುತ ಸೃಷ್ಟಿಸಲಿದೆಯೇ ಎಂದು ಕಾದರೆ ನಿರಾಸೆ ಖಚಿತ. ನಾಯಕಿ ಜೊತೆಗಿನ ಹಾಡು ಓಡುವ ಕುದುರೆಯನ್ನು ಮುಗ್ಗರಿಸಿ ಬೀಳುವಂತೆ ಮಾಡಿದೆ. ಮುಂದೆ, ಕಥೆಯು ಮೈಕೊಡವಿ ಏಳುವಷ್ಟರಲ್ಲಿ ‘ರಾಕಿ’ ‘ಅಧೀರ’ನ ಕ್ಲೈಮ್ಯಾಕ್ಸ್‌ ಫೈಟ್‌ ಕೂಡಾ ಅಂತ್ಯವಾಗಿರುತ್ತದೆ. ಇದು ಮೊದಲ ಸೋಲು. ಮೊದಲ ಅಧ್ಯಾಯದ ದ್ವಿತೀಯಾರ್ಧದಲ್ಲಿ ಪ್ರೇಕ್ಷಕರನ್ನು ಹಿಡಿದಿಟ್ಟಿದ್ದ ಸದೃಢ ಕಥೆ ಇಲ್ಲಿ ಗೈರಾಗಿದೆ.

ನಾಯಕ, ಖಳನಾಯಕರಿಗೆ ಅಬ್ಬರದಹಿನ್ನೆಲೆ ಸಂಗೀತದ ಜೊತೆಗೆ ಸೂಜಿ ಬಿದ್ದರೂ ಕೇಳುವ ಮೌನವೂ ಸಂಗೀತ ನಿರ್ದೇಶಕ ರವಿ ಬಸ್ರೂರು ಅವರ ಕೈಚಳಕಕ್ಕೆ ಸಾಕ್ಷ್ಯ. ಅಮ್ಮ–ಮಗನ ಭಾವನಾತ್ಮಕ ದೃಶ್ಯಗಳಿಗೆ ನೀಡಿದ ಸಂಗೀತ ತಂಗಾಳಿಯ ಅನುಭವ. ಮೊದಲ ಅಧ್ಯಾಯದಲ್ಲಿನ ಹಿನ್ನೆಲೆ ಸಂಗೀತಕ್ಕೇ ಸಾಣೆ ಹಿಡಿದಂತೆ ಎರಡನೇ ಅಧ್ಯಾಯಕ್ಕೂ ಸಂಗೀತ ನೀಡಿರುವುದು ಕಥೆಯನ್ನು ಹಿಡಿದಿಡುತ್ತದೆ. ‘ದೊಡ್ಡಮ್ಮ’ನ ಆರ್ಭಟ, ಊಹೆಗೂ ಸಿಲುಕದೆ ಫ್ಯಾನ್‌ ಆದ ಹೆಲಿಕಾಪ್ಟರ್‌, ಗುಂಡಿನ ಮೊರೆತ ಚಿತ್ರದುದ್ದಕ್ಕೂ ಹೆಚ್ಚೆನಿಸಿದರೂ ದೃಶ್ಯವೈಭವದ ಸಾಗರದಲ್ಲಿ ಇದು ನಗಣ್ಯ.ಪ್ಯಾನ್‌ ಇಂಡಿಯಾ ಸಿನಿಮಾಗಳ ಮಟ್ಟಿಗೆ ಚಿತ್ರದ ಮೇಕಿಂಗ್‌ ಅದ್ಭುತವಾಗಿದೆಯಾದರೂ, ಹಾಲಿವುಡ್‌ಗೆ ಹೋಲಿಸಲು ನಿಂತರೆ ಅದು ಉತ್ಪ್ರೇಕ್ಷೆಯಾದೀತು. ಆದರೆ, ಹಾಲಿವುಡ್‌ ಸಿನಿಮಾದಂತೆಯೇ ಕೊನೆಯಲ್ಲಿ ನೀಡಿರುವ ತಿರುವು ದ್ವಿತೀಯಾರ್ಧದ ಹೈಲೈಟ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT