ಮಂಗಳವಾರ, 3 ಅಕ್ಟೋಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Jawan Movie Review: ಉಪಕತೆಗಳ ಮನರಂಜನೆಯ ಮೆರವಣಿಗೆ

Published 7 ಸೆಪ್ಟೆಂಬರ್ 2023, 11:42 IST
Last Updated 7 ಸೆಪ್ಟೆಂಬರ್ 2023, 11:42 IST
ಅಕ್ಷರ ಗಾತ್ರ

ಚಿತ್ರ: ಜವಾನ್ (ಹಿಂದಿ)

ನಿರ್ಮಾಣ: ಗೌರಿ ಖಾನ್

ನಿರ್ದೇಶನ: ಅಟ್ಲಿ

ತಾರಾಗಣ: ಶಾರುಖ್ ಖಾನ್, ವಿಜಯ್ ಸೇತುಪತಿ, ನಯನತಾರಾ, ದೀಪಿಕಾ ಪಡುಕೋಣೆ, ಪ್ರಿಯಾಮಣಿ, ಸಾನ್ಯಾ ಮಲ್ಹೋತ್ರ, ಸುನಿಲ್ ಗ್ರೋವರ್, ರಿದ್ಧಿ ಡೋಗ್ರಾ, ಗಿರಿಜಾ ಓಕ್

ಇನ್ನೇನು ಸಿನಿಮಾ ಮುಗಿಯುವ ಕೆಲವು ನಿಮಿಷಗಳ ಮೊದಲು ಶಾರುಖ್ ಖಾನ್ ಎದುರು ಆಜಾನುಬಾಹು ವ್ಯಕ್ತಿ ಹೊಡೆಯಲು ನಿಲ್ಲುತ್ತಾನೆ. ಅವನ ಉದರ ಭಾಗದವರೆಗಿನ ಎತ್ತರದ ಶಾರುಖ್ ತಕ್ಷಣವೇ ‘ಓಹೋ...ಬಾಹುಬಲಿ?’ ಎಂಬ ಅಚ್ಚರಿಯ ಉದ್ಗಾರ ಹೊರಡಿಸುತ್ತಾರೆ. ಆತ ಮೇಲಕ್ಕೆತ್ತಿ ಬಿಸಾಡುತ್ತಾನೆ. ಪುಟಿದೇಳುವ ಶಾರುಖ್, ಅವನನ್ನೂ ಒಂದು ಡಬ್ಬದೊಳಕ್ಕೆ ಒದ್ದು ಹಾಕುತ್ತಾರೆ. ಇಡೀ ಬಾಲಿವುಡ್‌ನ ಗತಿಗೆ ಅಡ್ಡಗಾಲು ಹಾಕಿದ್ದೇ ತೆಲುಗಿನ ‘ಬಾಹುಬಲಿ’ ಸಿನಿಮಾ. ಅದಾದ ಮೇಲೆ ಹಿಂದಿ ಚಿತ್ರರಂಗ ತೆವಳತೊಡಗಿದ್ದು ಗೊತ್ತೇ ಇದೆ. ಈಗ ‘ಬಾಹುಬಲಿ’ಗಳ ಎದುರು ಸೆಟೆದೆದ್ದು ನಿಲ್ಲುತ್ತೇನೆಂಬ ಆಶಾವಾದವನ್ನು ಶಾರುಖ್ ಈ ದೃಶ್ಯದಲ್ಲಿ ಅಭಿವ್ಯಕ್ತಿಸಿದ್ದು ವ್ಯಂಗ್ಯ ಬೆರೆತ ಧಾಟಿಯಲ್ಲಿ.

‘ಜವಾನ್’ ನಿರ್ದೇಶಕ ತಮಿಳಿನ ಅಟ್ಲಿ. ನಾಯಕಿಯರಲ್ಲಿ ಒಬ್ಬರು ನಯನತಾರಾ. ಖಳನಾಯಕನ ಪಾತ್ರಧಾರಿ ವಿಜಯ್ ಸೇತುಪತಿ. ಸ್ವರ ಸಂಯೋಜನೆ ಮಾಡಿರುವುದು ಅನಿರುದ್ಧ್ ರವಿಚಂದರ್. ‘ಮರ್ಸೆಲ್’, ‘ಬಿಗಿಲ್’ ತಮಿಳು ಸಿನಿಮಾಗಳ ಛಾಯಾಚಿತ್ರಗ್ರಹಣ ಮಾಡಿದ್ದ ಜಿ.ಕೆ. ವಿಷ್ಣು ಇದರಲ್ಲೂ ಕೆಲಸ ಮಾಡಿದ್ದಾರೆ. ಇವರೆಲ್ಲರ ಜತೆಗೆ ಶಾರುಖ್ ಖಾನ್ ಹಾಗೂ ಅರ್ಧ ಡಜನ್ ಹೆಣ್ಣುಮಕ್ಕಳು. ಅವರಲ್ಲಿ ಪ್ರಿಯಾಮಣಿ ಬೆಂಗಳೂರಿನ ನೀರು ಕುಡಿದವರು. ಹೀಗಾಗಿ ಇದು ಉತ್ತರ–ದಕ್ಷಿಣ ಧ್ರುವೀಕರಣದ ದೊಡ್ಡ ಸಿನಿಮಾ.

ಅಟ್ಲಿ ಒಂದೂವರೆ ದಶಕದ ಹಿಂದೆ ನಿರ್ದೇಶಕ ಶಂಕರ್ ಗರಡಿಯಲ್ಲಿ ಕೆಲಸ ಮಾಡಿದವರು. ಕೇಂದ್ರಪಾತ್ರಕ್ಕೆ ಹಲವು ಮುಖಗಳನ್ನು ದಕ್ಕಿಸಿಕೊಟ್ಟು, ಚಿತ್ರಕಥೆ ಬರೆದರೆ ಅದು ಪ್ರೇಕ್ಷಕರನ್ನು ಕುತೂಹಲದ ಕಡಲಲ್ಲಿ ಮುಳುಗಿಸಬಲ್ಲದು ಎನ್ನುವುದು ಶಂಕರ್ ಅನುಸರಿಸುತ್ತಿದ್ದ ತಂತ್ರ. ಇದನ್ನೇ ಅಟ್ಲಿ ಕಣ್ಣಿಗೊತ್ತಿಕೊಂಡಿದ್ದಾರೆ. ‘ಬಿಗಿಲ್‌’ ತಮಿಳು ಸಿನಿಮಾದಲ್ಲಿ ವಿಜಯ್ ದ್ವಿಪಾತ್ರಗಳನ್ನು ಕಂಡಿದ್ದೆವು. ‘ಜವಾನ್‌’ನಲ್ಲೂ ಶಾರುಖ್‌ ದ್ವಿಪಾತ್ರದಲ್ಲಿದ್ದಾರೆ. ಆ ಪಾತ್ರಗಳಿಗೂ ಭಿನ್ನ ಗೆಟಪ್‌ಗಳು. ಒಂದೊಂದಕ್ಕೂ ಸಕಾರಣ; ಭಿನ್ನ ಕತೆ. ಎಲ್ಲಕ್ಕೂ ಮಜಬೂತಾದ ‘ಕಮರ್ಷಿಯಲ್ ಸೂತ್ರ’. ಹಾಸ್ಯಕ್ಕೆಂದು ಪ್ರತ್ಯೇಕ ಪಾತ್ರಗಳು ಸಿನಿಮಾದಲ್ಲಿ ಇಲ್ಲದೇ ಇದ್ದರೂ ಅಲ್ಲಲ್ಲಿ ಮುಖ್ಯಪಾತ್ರವೇ ಕಚಗುಳಿ ಇಡುವ ಬರವಣಿಗೆಯನ್ನೂ ಗಮನಿಸಬೇಕು.

ಆಜಾದ್ ಒಬ್ಬ ಜೈಲರ್. ಅಲ್ಲಿನ ನಿರ್ದಿಷ್ಟ ಸೆಲ್‌ನಲ್ಲಿ ಇರುವ ಮಹಿಳೆಯರ ಪಡೆಯೊಂದನ್ನು ಅವನು ತಯಾರು ಮಾಡಿದ್ದಾನೆ. ಸಾಲ ತೀರಿಸಲಾಗದ ರೈತರ ಕಣ್ಣೀರು ಒರೆಸಲು, ಸರ್ಕಾರಿ ಆಸ್ಪತ್ರೆಯ ಅವ್ಯವಸ್ಥೆ ಸರಿಪಡಿಸಲು, ಸೇನೆಯಲ್ಲಿನ ಶಸ್ತ್ರಾಸ್ತ್ರ ಹಗರಣಕ್ಕೆ ಇತಿಶ್ರೀ ಹಾಡಲು ಅವನು ಅತಿ ದುಬಾರಿ ತಂತ್ರಗಳನ್ನು ಹೆಣೆಯುತ್ತಾನೆ. ಅವನ್ನೆಲ್ಲ ಅನುಷ್ಠಾನಕ್ಕೆ ತರಲು ಹಣ ಹೇಗೆ ಹೊಂದಿಸುತ್ತಾನೆ ಎನ್ನುವ ತರ್ಕದ ಗೊಡವೆಗೆ ನಿರ್ದೇಶಕರು ಹೋಗುವುದಿಲ್ಲ. ಆ ತಂತ್ರಗಳು ಕೊಡುವ ಮನರಂಜನೆಯನ್ನಷ್ಟೆ ಮೇಲೆತ್ತಿ ಹಿಡಿಯುತ್ತಾರೆ.

ನಾಯಕನಿಗೆ ಅಟ್ಲಿ ‘ಬಿಲ್ಡಪ್’ ಕೊಡುವುದು ಉಪಕತೆಗಳಿಂದ ಹಾಗೂ ಅಂತಹ ಕತೆಗಳಲ್ಲಿ ಮಿಕವಾದ ಹೆಣ್ಣುಪಾತ್ರಗಳಿಂದ. ನಾಯಕನಿಗೆ ಇದಿರಾಗಿ ನಿಲ್ಲುವುದೂ ಒಬ್ಬ ಹೆಣ್ಣು ಪೊಲೀಸ್. ಕೃಷಿ, ಆರೋಗ್ಯ ವ್ಯವಸ್ಥೆ, ಸೇನಾಪಡೆಗಳಲ್ಲಿನ ಹಳವಂಡಗಳು, ಭ್ರಷ್ಟ ರಾಜಕಾರಣಿಗಳು... ಎಲ್ಲವನ್ನೂ ಒಬ್ಬ ನಾಯಕನ ರಾಬಿನ್‌ಹುಡ್‌ ಮಾಡಲು ಪರಿಕರಗಳಾಗಿ ಅವರು ಪರಿವರ್ತಿಸಿದ್ದಾರೆ. ಆದರೆ, ಇಂತಹ ಒಂದು ‘ಸಿನಿಮೀಯ ಟ್ರೀಟ್‌ಮೆಂಟ್‌’ ಪುನರಾವರ್ತಿತವೆನ್ನುವುದೂ ಸತ್ಯ. ಹಳೆಯ ಬಾಟಲಿಗೆ ಬೇರೆ ಮದ್ಯ ಸುರಿದ ಹಾಗೆ. ಈ ಸಲ ಮದ್ಯ ಕೂಡ ಹಳೆಯದೇ. ಯಾಕೆಂದರೆ, ಶಾರುಖ್‌ ಅವರಿಗೀಗ ಐವತ್ತೇಳು ವರ್ಷ. ಈ ಓಲ್ಡ್‌ ವೈನ್ ದೇಹಭಾಷೆಯಲ್ಲೀಗಲೂ ಲಾಲಿತ್ಯವಿದೆ. ಮುಷ್ಟಿ ಬಿಗಿ ಮಾಡಿದರೆ ನರಗಳು ಉಬ್ಬುತ್ತವೆ.

ಅಭಿನಯದಲ್ಲಿ ವಿಜಯ್ ಸೇತುಪತಿ ಎಲ್ಲರಿಗಿಂತ ಮೇಲೆ. ಅವರ ಹಿಂದಿ ಕೂಡ ಮನರಂಜನೆಯ ಹೊಸ ಬಗೆ. ನಯನತಾರಾ ಈಗಲೂ ನಯನ ಮನೋಹರ. ದೀಪಿಕಾ ಎಂಬ ಭಾವದೀವಿಗೆ ಕಾಣುವುದು ತುಸು ಹೊತ್ತಷ್ಟೆ. ಪ್ರಿಯಾಮಣಿ ಅವರಿಗೆ ದೀರ್ಘಾವಧಿಯ ನಂತರ ಮುಖ್ಯ ಪಾತ್ರ ದೊರೆತಿದೆ. ಅನಿರುದ್ಧ್ ರವಿಚಂದರ್ ಸಂಗೀತದ ‘ಬಿಲ್ಡಪ್ ಚಾಳಿ’ ಇಲ್ಲೂ ಇದೆ.

ಪೇರಿಸಿಟ್ಟ ಉಪಕತೆಗಳ ಮೇಲೆ ನಿಲ್ಲುವ ಶಾರುಖ್ ಖಾನ್ ಡೈಲಾಗ್‌ಬಾಜಿ ಒಂದು ಕಡೆ. ದಕ್ಷಿಣ ಭಾರತದ ಕಮರ್ಷಿಯಲ್ ಸಿನಿಮಾದ ಆತ್ಮ ಇನ್ನೊಂದು ಕಡೆ. ಹಿಂದಿ ಚಿತ್ರರಂಗದ ಹೃದಯಕ್ಕೆ ದಕ್ಷಿಣ ಭಾರತದ ನಿರ್ದೇಶಕರೀಗ ಬೇರೆ ಬಡಿತವನ್ನು ಕೊಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT