ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Tatsama Tadbhava Movie Review: ಕೊಲೆಯ ಕಾಡದ ಕಥೆ

Published 15 ಸೆಪ್ಟೆಂಬರ್ 2023, 23:30 IST
Last Updated 15 ಸೆಪ್ಟೆಂಬರ್ 2023, 23:30 IST
ಅಕ್ಷರ ಗಾತ್ರ

ಚಿತ್ರ: ತತ್ಸಮ ತದ್ಭವ

ನಿರ್ದೇಶನ: ವಿಶಾಲ್‌ ಅತ್ರೇಯ

ನಿರ್ಮಾಪಕರು: ಪನ್ನಗಭರಣ

ಪಾತ್ರವರ್ಗ: ಮೇಘನಾ ರಾಜ್‌ ಪ್ರಜ್ವಲ್‌ ದೇವರಾಜ್‌ ನಾಗಾಭರಣ ಅರವಿಂದ್‌ ಅಯ್ಯರ್‌ ಮತ್ತಿರರು

****

ಒಂದು ಕಾಲಕ್ಕೆ ರೇಡಿಯೊ ಸಿನಿಮಾಗಳು ಬಹಳ ಪ್ರಸಿದ್ಧಿ ಪಡೆದಿದ್ದವು. ಏನೋ ಕೆಲಸ ಮಾಡುತ್ತ ಸಿನಿಮಾ ಕೇಳುವುದು ಒಂದು ರೀತಿ ಮಜವಾದ ಅನುಭವ ನೀಡುತ್ತಿತ್ತು. ಬಹಳಷ್ಟು ದೃಶ್ಯಗಳಲ್ಲಿ ಅಂಥದ್ದೇ ಅನುಭವ ನೀಡುವ ಚಿತ್ರ ‘ತತ್ಸಮ–ತದ್ಭವ’. ಒಂದು ಕೊಲೆಯ ಸುತ್ತ ನಡೆಯುವ ಕಥೆ ಒಳಗೊಂಡ ಸಿನಿಮಾ ಇದು. ಆದರೆ ಸಂಭಾಷಣೆಯಲ್ಲಿ, ಕಥೆಯಲ್ಲಿ ಇರುವ ಕುತೂಹಲ ಇಡೀ ಚಿತ್ರದುದ್ದಕ್ಕೂ ದೃಶ್ಯವತ್ತಾಗಿ ಕಾಣಿಸುವುದಿಲ್ಲ. ಎಷ್ಟೋ ದೃಶ್ಯಗಳು ನೋಡುವುದಕ್ಕಿಂತ ಕೇಳಿಸಿಕೊಂಡರೆ ಸಾಕು ಎನ್ನುವ ಅನುಭವ ನೀಡುತ್ತವೆ.

ನಟಿ ಮೇಘನಾ ರಾಜ್‌ ದ್ವಿಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ತನ್ನ ಗಂಡ ಕಾಣೆಯಾಗಿದ್ದಾನೆ ಎಂದು ಪೊಲೀಸ್‌ ಠಾಣೆಗೆ ದೂರು ನೀಡಲು ಆರಿಕ ಬರುತ್ತಾಳೆ ಎಂಬಲ್ಲಿಂದ ಕಥೆ ಪ್ರಾರಂಭವಾಗುತ್ತದೆ. ಈ ಆರಿಕಾ ಪಾತ್ರಧಾರಿ ಮೇಘನಾ. ಪ್ರಜ್ವಲ್‌ ದೇವರಾಜ್‌ ಆ ಠಾಣೆಯ ಇನ್‌ಸ್ಪೆಕ್ಟರ್‌ ಅರವಿಂದ್‌ ಅಶ್ವತ್ಥಾಮನ ಪಾತ್ರದಲ್ಲಿದ್ದಾರೆ. ಸಸ್ಪೆನ್ಸ್‌ ಥ್ರಿಲ್ಲರ್‌ನ  ಕಥೆಯ ಅರ್ಧದಷ್ಟು ಭಾಗ ಪೊಲೀಸ್‌ ಠಾಣೆಯ ವಿಚಾರಣೆಯಲ್ಲಿಯೇ ಕಳೆದುಹೋದರೆ, ಇನ್ನರ್ಧ ಆರಿಕ ಮನೆಯಲ್ಲಿ ನಡೆಯುತ್ತದೆ. ಸಿನಿಮಾದುದ್ದಕ್ಕೂ ಅತಿಯಾದ ಕ್ಲೋಸಪ್‌ ಶಾಟ್‌ಗಳು ಧಾರಾವಾಹಿಯ ಅನುಭವ ನೀಡಿ ದೃಶ್ಯಗಳ ತೀವ್ರತೆಗೆ ಭಂಗ ತರುತ್ತವೆ.

ಅಶ್ವತ್ಥಾಮ ಮಾಮೂಲಿ ಇನ್‌ಸ್ಪೆಕ್ಟರ್‌ ಅಲ್ಲ. ಪ್ರಕರಣಗಳನ್ನು ಅಡುಗೆಯೊಂದಿಗೆ ಹೋಲಿಸುತ್ತಾ, ತನಿಖೆ ನಡೆಸುವ ಈತ ಕೆಲ ಇಂಗ್ಲಿಷ್‌ ಸಿನಿಮಾಗಳ ಇನ್‌ಸ್ಪೆಕ್ಟರ್‌ ಪಾತ್ರವನ್ನು ನೆನಪಿಸುತ್ತಾನೆ. ಆತನ ಅಡುಗೆಮನೆಯ ಸೆಟಪ್‌ ಕೂಡ ಇದಕ್ಕೆ ಇಂಬುನೀಡುತ್ತದೆ. ಇಂತಹ ಚಾಣಾಕ್ಷ ಇನ್‌ಸ್ಪೆಕ್ಟರ್‌ಗೆ ಆರಿಕ ಗಂಡನ ನಾಪತ್ತೆ ಕಗ್ಗಂಟಿನ ಪ್ರಕರಣವಾಗುತ್ತದೆ. ಅದನ್ನು ಹೇಗೆ ಬಗೆಹರಿಸುತ್ತಾನೆ, ನಿಜವಾದ ಕೊಲೆಗಾರ ಯಾರು ಎಂಬುದೇ ಚಿತ್ರದ ಕಥೆ.

ಸಾಮಾನ್ಯವಾದ ಕಥೆಯನ್ನು ಚಿತ್ರಕಥೆಯಲ್ಲಿ ರೋಚಕವಾಗಿಸುವ ಯತ್ನ ಮಾಡಿದ್ದಾರೆ ನಿರ್ದೇಶಕ ವಿಶಾಲ್‌ ಅತ್ರೇಯ. ಆದರೆ ದೃಶ್ಯಗಳ ಕಟ್ಟು ಆ ರೋಚಕ ಅನುಭವ ನೀಡುವಂತಿಲ್ಲ. ಸಾಕಷ್ಟು ಕಡೆ ಲಾಜಿಕ್‌ ಕಳೆದುಹೋಗಿ, ಕಥೆಯನ್ನು ಸಮರ್ಥಿಸಲು ಸನ್ನಿವೇಶಗಳನ್ನು ತುರುಕಿದಂತೆ ಭಾಸವಾಗುತ್ತದೆ. ‘ಸಿಂಗಲ್‌ ರೂಂ ಡ್ರಾಮಾ’ದಂತಹ ಕಥಾವಸ್ತುವಿದು. ನುರಿತ ಪಾತ್ರವರ್ಗದೊಂದಿಗೆ, ಇರುವ ಇತಿಮಿತಿಗಳಲ್ಲೇ ಪ್ರೇಕ್ಷಕನಿಗೆ ರೋಚಕ ಅನುಭವ ನೀಡುವ ಅವಕಾಶ ನಿರ್ದೇಶಕರಿಗಿತ್ತು. 

ಒಂದು ವಿರಾಮದ ಬಳಿಕ ಮತ್ತೆ ನಟನೆಗೆ ಮರಳಿರುವ ಮೇಘನಾ ಪಾತ್ರಕ್ಕೆ ಒಗ್ಗಿಕೊಳ್ಳಲು ಸಿನಿಮಾ ವಿರಾಮದವರೆಗೂ ಸಮಯ ತೆಗೆದುಕೊಳ್ಳುತ್ತಾರೆ. ತಂಗಿ ಅಕಿರಾ ಪಾತ್ರದಲ್ಲಿ ಕಾಣಿಸಿಕೊಳ್ಳುವ ಹೊತ್ತಿಗೆ ಮೇಘನಾ ನಟನೆ ಲಯ ಕಂಡುಕೊಳ್ಳುತ್ತದೆ. ಅಕಿರಾಳ ಬಾಯ್‌ಫ್ರೆಂಡ್‌ ಮಾಥ್ಯೂ ಆಗಿ ಅರವಿಂದ್‌ ಅಯ್ಯರ್‌ ನೆನಪಿನಲ್ಲಿ ಉಳಿಯುತ್ತಾರೆ. ಯಾವುದೇ ಹೊಡಿಬಡಿ ದೃಶ್ಯಗಳಿಲ್ಲದೆ, ಕುಣಿತವಿಲ್ಲದೆ ಇನ್‌ಸ್ಪೆಕ್ಟರ್‌ ಆಗಿ ಪ್ರಜ್ವಲ್‌ ದೇವರಾಜ್‌ ಬಹಳ ಇಷ್ಟವಾಗುತ್ತಾರೆ. 

ವಾಸುಕಿ ವೈಭವ್‌ ದೃಶ್ಯಗಳಿಗೆ ಪೂರಕವಾದ ಸಂಗೀತ ನೀಡಿದ್ದಾರೆ. ಆದರೆ ಚಿತ್ರದಲ್ಲಿರುವ ಎರಡೇ ಎರಡು ಹಾಡುಗಳು ಕೂಡ ಥಿಯೇಟರ್‌ನಿಂದ ಹೊರಬರುವ ಹೊತ್ತಿಗೆ ಮರೆತುಹೋಗಿರುತ್ತವೆ. ‘ಒಲೆ ಹಚ್ಚಲಾ’ ಎಂಬ ಇನ್‌ಸ್ಪೆಕ್ಟರ್‌ ಮಾತು ಕೊನೆವರೆಗೂ ನೆನಪಿನಲ್ಲಿ ಉಳಿಯುತ್ತದೆ. ಸಂಭಾಷಣೆ ಹಿತಮಿತವಾಗಿದ್ದು, ಎರಡು–ಮೂರು ಕಡೆ ಸಹಜವಾಗಿ ನಗು ತರಿಸುತ್ತದೆ. ಕ್ಲೈಮ್ಯಾಕ್ಸ್‌ ಗೊಂದಲದ ಗೂಡಾಗಿದೆ. ‘ಈ ಸಿನಿಮಾ ಬುದ್ಧಿವಂತರಿಗೆ ಮಾತ್ರ!’ ಎಂಬ ರೀತಿಯ ಕ್ಲೈಮ್ಯಾಕ್ಸ್‌. ಚಿತ್ರದ ಶೀರ್ಷಿಕೆ ‘ತತ್ಸವ–ತದ್ಬವ’ಕ್ಕೆ ಅರ್ಥ ನೀಡುವ ಕ್ಲೈಮ್ಯಾಕ್ಸ್‌ ಕೂಡ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT