ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ತ್ರಿಕೋನ’ ಸಿನಿಮಾ ವಿಮರ್ಶೆ: ಕಾಲನ ಕೈಯಲ್ಲಿ ‘ತ್ರಿಕೋನ’

Last Updated 8 ಏಪ್ರಿಲ್ 2022, 9:17 IST
ಅಕ್ಷರ ಗಾತ್ರ

ಚಿತ್ರ: ತ್ರಿಕೋನ (ಕನ್ನಡ)

ಚಿತ್ರಕಥೆ/ನಿರ್ಮಾಣ: ರಾಜಶೇಖರ್‌

ನಿರ್ದೇಶನ: ಚಂದ್ರಕಾಂತ

ತಾರಾಗಣ: ಸುರೇಶ್ ಹೆಬ್ಳೀಕರ್, ಲಕ್ಷ್ಮೀ, ಅಚ್ಯುತ್‌ ಕುಮಾರ್‌, ಸುಧಾರಾಣಿ, ಸಾಧುಕೋಕಿಲ, ರಾಜ್‌ ವೀರ್‌, ಬಿ.ಮಾರುತೇಶ್‌

ಕಾಲನ ಪರೀಕ್ಷೆಯಲ್ಲಿ ತಾಳ್ಮೆ, ಅಹಂ ಹಾಗೂ ಶಕ್ತಿ ಸಿಲುಕಿದಾಗ ಆಗುವ ಪರಿಣಾಮವೇನು? ಇದು ಚಂದ್ರಕಾಂತ ನಿರ್ದೇಶನದ ‘ತ್ರಿಕೋನ’ ಸಿನಿಮಾದ ಒನ್‌ಲೈನ್‌ ಸ್ಟೋರಿ. ಆದರೆ, ಈ ಸಿನಿಮಾವನ್ನು ಅರ್ಥಮಾಡಿಕೊಳ್ಳಲು ಬೆಂಗಳೂರಿನಿಂದ ಮಂಗಳೂರುವರೆಗಿನ ಪ್ರಯಾಸದ ಪ್ರಯಾಣ ಮಾಡಬೇಕು. ಇಲ್ಲಿ ಹಾಸನದವರೆಗಿನ ಪ್ರಯಾಣ ಚತುಷ್ಪಥದಲ್ಲಿ ಹಾಯಾಗಿರುವ ಪಯಣ. ಮುಂದೆ...‘ಯಾಕಪ್ಪಾ ಈ ರಸ್ತೆಯಲ್ಲಿ ಬಂದ್ವಿ’ ಎಂದು ಮರುಗುವ ಪಯಣ.

ಇದನ್ನು ಉಲ್ಲೇಖಿಸಲು ‘ತ್ರಿಕೋನ’ ಕಥೆಯೇ ಕಾರಣ. ಮಂಗಳೂರಿನಲ್ಲಿ ಕೋಟ್ಯಂತರ ರೂಪಾಯಿ ಸಾಲ ಮಾಡಿ ಕಟ್ಟಿರುವ ತನ್ನ ಹೋಟೆಲ್‌ ಜಪ್ತಿಯಾಗುವುದನ್ನು ತಡೆಯಲು ತೆರಳುವ ಇಳಿವಯಸ್ಸಿನ ನಟರಾಜ–ಪಾರ್ವತಿ(ಸುರೇಶ್ ಹೆಬ್ಳೀಕರ್–ಲಕ್ಷ್ಮೀ)ದಂಪತಿ, ಇದೇ ಹೋಟೆಲ್‌ನಲ್ಲಿ ರಜೆ ಕಳೆಯಲು ಹೋಗುವ ಕೋದಂಡರಾಮ–ಸೀತಾ(ಅಚ್ಯುತ್‌ ಕುಮಾರ್‌–ಸುಧಾರಾಣಿ) ಕುಟುಂಬ ಹಾಗೂ ನಟರಾಜ ಒಡೆತನದ ಹೋಟೆಲ್‌ ಖರೀದಿಸಲು ಹೊರಟ ಯುವ ಉದ್ಯಮಿ ತ್ರಿವಿಕ್ರಮ(ರಾಜ್‌ ವೀರ್‌). ಬೆಂಗಳೂರಿನಿಂದ ಹೊರಡುವ ಈ ಎಲ್ಲರ ಪಯಣ ಹಾಸನ ಮೂಲಕವಾಗಿ ಮಂಗಳೂರಿಗೆ ಸಾಗುತ್ತದೆ. ನಟರಾಜ ಎಂಬ ಪಾತ್ರಕ್ಕೆ ತಾಳ್ಮೆ ಹೆಚ್ಚು. ಕೋದಂಡರಾಮನಿಗೆ ಮಾತು ಮಾತಿಗೂ ಪಿತ್ತ ನೆತ್ತಿಗೇರುವ ಕೋಪ, ಅಹಂ. ತ್ರಿವಿಕ್ರಮನಿಗೆ ತನ್ನ ಶಕ್ತಿಯೇ ಸಾಮರ್ಥ್ಯ. ಇವರ ಈ ಪ್ರಯಾಣಕ್ಕೆ ಕಾಲ–ಯಮ(ಬಿ.ಮಾರುತೇಶ್‌) ಅಡ್ಡಿಯಾಗುತ್ತಾನೆ. ಇದು ಮಧ್ಯಂತರ. ತಾಳ್ಮೆ, ಅಹಂ ಹಾಗೂ ಶಕ್ತಿಯ ಮುಂದೆ ಸಮಸ್ಯೆ ಎಂಬುವುದು ಕಾಲನಾಗಿ ಎದುರಾದಾಗ ಜನರು ಹೇಗೆ ವರ್ತಿಸುತ್ತಾರೆ, ಇದರ ಪರಿಣಾವೇನು ಎನ್ನುವುದು ಮುಂದಿನ ಕಥೆ.

ಈ ಹಿಂದೆ ಹೇಳಿದಂತೆ ಮೊದಲಾರ್ಧದದ ಪಯಣ ಸುಖಕರ. ಸ್ಕ್ರೀನ್‌ಪ್ಲೇ ಕಥೆಯ ಬಗ್ಗೆ ಕುತೂಹಲ ಹೆಚ್ಚಿಸುತ್ತದೆ. ಜೊತೆಗೆ ಪೊಲೀಸ್‌ ಅಧಿಕಾರಿ ಸಾಂಗ್ಲಿಯಾನ ಪಾತ್ರದಲ್ಲಿ ಸಾಧುಕೋಕಿಲ ಎಂದಿನಂತೆ ನಗುವಿನ ರಸದೌತಣ ಬಡಿಸುತ್ತಾರೆ. ಈ ಎರಡು ಅಂಶಗಳಷ್ಟೇ ಮೊದಲಾರ್ಧದಲ್ಲಿ ಪ್ರೇಕ್ಷಕರನ್ನು ಹಿಡಿದಿಡುತ್ತವೆ.ನಟರಾಜ–ಪಾರ್ವತಿಯ ಪ್ರೀತಿಯ ಮಾತುಕತೆ, ರಾಮ–ಸೀತಾ ಜಗಳವೂ ತೆರೆ ತುಂಬುತ್ತವೆ. ಸಿನಿಮಾ 125 ನಿಮಿಷವಷ್ಟೇ ಇದ್ದರೂ, ದ್ವಿತೀಯಾರ್ಧ ಪ್ರೇಕ್ಷಕನ ತಾಳ್ಮೆ ಪರೀಕ್ಷಿಸುತ್ತದೆ. ಕಾಲ್ಪನಿಕವಾದ ಕಾಲನ ಪಾತ್ರ ತೆರೆಯ ಮೇಲೆ ತರ್ಕಕ್ಕೆ ಸಿಗದೆ ಓಡುತ್ತದೆ. ಕಾಲ–ತ್ರಿವಿಕ್ರಮನ ನಡುವೆ ನಡೆಯುವ ಸಾಹಸ ದೃಶ್ಯ ಪ್ರೇಕ್ಷಕನಿಗೆ ಸುಸ್ತೆನಿಸಿಬಿಡುತ್ತದೆ. ಕಾಲನ ಮುಂದೆ ತಾಳ್ಮೆಯೇ ಗೆಲ್ಲುತ್ತದೆ ಎನ್ನುವುದನ್ನಷ್ಟೇ ಹೇಳಲು ಹೊರಟ ನಿರ್ದೇಶಕರು, ಕಾಲ್ಪನಿಕವಾಗಿ ಕಟ್ಟಿಕೊಡಬೇಕಿದ್ದ ಕಾಲನ ಪಾತ್ರ ಹಾಗೂ ದೃಶ್ಯಗಳಿಗೆ ಜೀವ ತುಂಬಿ ಎಡವಿದ್ದಾರೆ. ಡ್ರೋನ್‌ನಲ್ಲಿ ಚಿತ್ರೀಕರಿಸಿದ ದೃಶ್ಯಗಳೇ ಚಿತ್ರವನ್ನು ತುಂಬಿವೆ. ಚಿತ್ರಕಥೆಯ ಪ್ರಯೋಗವು ಉಲ್ಲೇಖಾರ್ಹವಾದರೂ, ದ್ವಿತೀಯಾರ್ಧದ ಚಿತ್ರಕಥೆಯಲ್ಲಿ ಹಲವು ಲೋಪಗಳು ಎದ್ದುಕಾಣುತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT