ಬೆಂಗಳೂರು: ಆರಾಮಾಗಿ ಇದ್ದೀನಿ.. ಏನೂ ಚಿಂತಿಸಬೇಕಾಗಿಲ್ಲ.. ನಿಮ್ಮೆಲ್ಲರ ಕಾಳಜಿಗೆ ಧನ್ಯವಾದಗಳು.. ಹೀಗೆಂದು ಹೇಳಿರುವ ಪುನೀತ್ ರಾಜ್‌ಕುಮಾರ್ ಅವರ ಫೇಸ್‌ಬುಕ್ ಪೋಸ್ಟ್ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಚಂದನವನದ ಪವರ್‌ಸ್ಟಾರ್ ಖ್ಯಾತಿಯ ನಟ ಪುನೀತ್ ರಾಜ್‌ಕುಮಾರ್ ಇಹಲೋಕ ತ್ಯಜಿಸಿ ಏಳು ತಿಂಗಳಾದರೂ, ಅಭಿಮಾನಿಗಳು ಅವರ ಹೆಸರಿನಲ್ಲಿ ವಿವಿಧ ಕಾರ್ಯಕ್ರಮ ನಡೆಸುವ ಮೂಲಕ ಅಪ್ಪು ನೆನಪನ್ನು ಹಸಿರಾಗಿರಿಸಿದ್ದಾರೆ.
ಹೊಸಪೇಟೆಯಲ್ಲಿ ನಡೆದ ಪುನೀತ್ ರಾಜ್‌ಕುಮಾರ್ ಪುತ್ಥಳಿ ಅನಾವರಣ ಕಾರ್ಯಕ್ರಮವೇ ಇದಕ್ಕೆ ಮತ್ತೊಂದು ಸಾಕ್ಷಿಯಾಗಿದೆ.
ಇದೇ ಸಂದರ್ಭದಲ್ಲಿ ಪುನೀತ್ ರಾಜ್‌ಕುಮಾರ್ ಅವರ ನಾಲ್ಕು ವರ್ಷಗಳ ಹಿಂದಿನ ಫೇಸ್‌ಬುಕ್ ಪೋಸ್ಟ್ ಒಂದು ವೈರಲ್ ಆಗಿದೆ.
2018ರ ಜೂನ್ 7ರಂದು ಪುನೀತ್ ರಾಜ್‌ಕುಮಾರ್ ಅವರ ಕಾರು ಅಪಘಾತವಾಗಿತ್ತು. ಆ ಸಂದರ್ಭದಲ್ಲಿ ಅಭಿಮಾನಿಗಳು ಅಪ್ಪುವಿನ ಕುರಿತು ಆತಂಕಕ್ಕೆ ಒಳಗಾಗಿರುವಾಗ, ಫೇಸ್‌ಬುಕ್ ಮೂಲಕ ಪುನೀತ್ ತಾನು ಕ್ಷೇಮವಾಗಿರುವ ಬಗ್ಗೆ ಪೋಸ್ಟ್ ಮಾಡಿದ್ದರು.
ನಾಲ್ಕು ವರ್ಷದ ಹಿಂದೆ ಇದೇ ದಿನ ನಡೆದಿದ್ದ ಘಟನೆಯನ್ನು ನೆನಪಿಸಿಕೊಂಡಿರುವ ಅಪ್ಪು ಅಭಿಮಾನಿಗಳು, ಈ ಮಾತನ್ನು ನೀವು 29ರ ಅಕ್ಟೋಬರ್ 2021ರ ಸಂಜೆ ಹೇಳಬೇಕಿತ್ತು. ನಿಮ್ಮನ್ನು ಮಿಸ್ ಮಾಡಿಕೊಳ್ಳುತ್ತಿದ್ದೇವೆ, ಮತ್ತೆ ಹುಟ್ಟಿ ಬನ್ನಿ ಎಂದು ಕಾಮೆಂಟ್ ಮೂಲಕ ಕೇಳಿಕೊಳ್ಳುತ್ತಿದ್ದಾರೆ.
2021ರ ಅಕ್ಟೋಬರ್ 29ರಂದು ಅಪ್ಪು ಹೃದಯಾಘಾತಕ್ಕೆ ಒಳಗಾಗಿ ನಿಧನರಾಗಿದ್ದರು.