ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

PV Web Exclusive : ಕಲಬುರ್ಗಿ ರಂಗಾಯಣ; ತಾಳ ತಪ್ಪಿದ್ದು ಎಲ್ಲಿ?

Last Updated 21 ಸೆಪ್ಟೆಂಬರ್ 2020, 19:30 IST
ಅಕ್ಷರ ಗಾತ್ರ

ರಂಗ ಚಟುವಟಿಕೆಗಳ ವಿಸ್ತರಣೆ ಹಾಗೂ ವಿಕೇಂದ್ರೀಕರಣದ ಭಾಗವಾಗಿ ‘ಕಲಬುರ್ಗಿ ರಂಗಾಯಣ’ ಸ್ಥಾಪನೆಯಾಗಿ ಆರು ವರ್ಷಗಳಾಗುತ್ತಿವೆ. ಇದು ಚಟುವಟಿಕೆಗಳಿಗಿಂತ ಹೆಚ್ಚು ವಿವಾದಗಳಿಂದಲೇ ಸುದ್ದಿಯಾಗಿದ್ದು ಹೆಚ್ಚು.ಆರಂಭದಲ್ಲಿಯೇ ತಪ್ಪಿದ ತಾಳ ಇನ್ನೂ ಲಯಕ್ಕೆ ಬರುತ್ತಿಲ್ಲ!

ಮೈಸೂರಲ್ಲಿ ಮಾತ್ರ ರಂಗಾಯಣ ಇತ್ತು. ರಾಜ್ಯದ ಪ್ರತಿ ಕಂದಾಯ ವಿಭಾಗಗಳಿಗೆ ಒಂದೊಂದು ರಂಗಾಯಣ ಘಟಕಗಳು ಇರಲಿ ಎಂಬ ಕಾರಣಕ್ಕೆ ಕಲಬುರ್ಗಿಯಲ್ಲೂ ರಂಗಾಯಣ ಸ್ಥಾಪಿಸಲಾಯಿತು. ರಾಜ್ಯದಲ್ಲಿ ಈಗ ಮೈಸೂರು, ಕಲಬುರ್ಗಿ, ಧಾರವಾಡ, ಶಿವಮೊಗ್ಗಗಳಲ್ಲಿ ರಂಗಾಯಣಗಳು ಇವೆ.

2014ರಲ್ಲಿ ಸ್ಥಾಪನೆಯಾದ ಕಲಬುರ್ಗಿ ರಂಗಾಯಣಕ್ಕೆ ಆರಂಭದಲ್ಲಿಯೇ ‘ವಿವಾದಗಳು ಮುತ್ತಿಕೊಂಡವು‘. ನಿರ್ದೆಶಕ ಆರ್‌.ಕೆ. ಹುಡಗಿ–ಕಲಾವಿದರ ಮಧ್ಯದ ಸಂಘರ್ಷ ತಾರಕಕ್ಕೇರಿ ಪೊಲೀಸ್‌ ಠಾಣೆ ಮೆಟ್ಟಿಲೇರಿತು. ರಂಗ ಚಟುವಟಿಕೆ ನಡೆಯಬೇಕಾದ ಸ್ಥಳದಲ್ಲಿ ಧಿಕ್ಕಾರದ ಘೋಷಣೆಗಳು ಮೊಳಗಿದವು. ಪರ–ವಿರೋಧ ಹೋರಾಟಕ್ಕೂ ಇದು ಕಾರಣವಾಯಿತು. ‘ರಂಗ ಸಮಾಜ’ ಬಂಡೆದ್ದ ನಂತರ ರಾಜ್ಯ ಸರ್ಕಾರ ಪ್ರಥಮ ನಿರ್ದೇಶಕರನ್ನು ವಜಾ ಮಾಡಿತು.

ಆ ನಂತರಮಹೇಶ ಪಾಟೀಲ ಅವರನ್ನುನಿರ್ದೇಶಕರನ್ನಾಗಿ ನೇಮಿಸಲಾಯಿತು. ಆರಂಭದಲ್ಲಿ ಹುಮ್ಮಸ್ಸಿನಿಂದಲೇ ಅವರು ಯೋಜನೆಗಳನ್ನು ರೂಪಿಸಿದರಾದರೂ ಸರ್ಕಾರಿ ವ್ಯವಸ್ಥೆಗೆ ‘ಹೊಂದಿಕೊಂಡು’ ಕೆಲಸ ಮಾಡಲು ಆಗಲಿಲ್ಲ. ಅವರ ಬಹುತೇಕ ಯೋಜನೆಗಳು ಕೈಗೂಡಲಿಲ್ಲ. ‘ಚೌಕಟ್ಟು ಮೀರಿದ್ದಾರೆ’ ಎಂಬ ಕಾರಣಕ್ಕೆಚಟುವಟಿಕೆಗಳಿಗೆ ತಡೆಯೊಡ್ಡಲಾಯಿತು. ಅಷ್ಟೊತ್ತಿಗಾಗಲೇ ಬಿಜೆಪಿ ಸರ್ಕಾರ ರಚನೆಯಾಯಿತು. ಹಿಂದಿನ ಸರ್ಕಾರದ ಎಲ್ಲ ನೇಮಕಗಳನ್ನು ರದ್ದುಗೊಳಿಸಿದ್ದರಿಂದ ಈ ನಿರ್ದೇಶಕರೂ ‘ವಜಾ’ ಶಿಕ್ಷೆಗೆ ಗುರಿಯಾಗಬೇಕಾಯಿತು!

ಮೂರನೇ ನಿರ್ದೇಶಕರಾಗಿ ಪ್ರಭಾಕರ ಜೋಶಿ ನೇಮಕಗೊಂಡರು. ಇನ್ನೇನು ಚಟುವಟಿಕೆ ಆರಂಭಿಸಬೇಕು ಎನ್ನುವಷ್ಟರಲ್ಲಿ ಕೊರೊನಾ ಹಾವಳಿ ಆರಂಭಗೊಂಡಿತು. ರಂಗಾಯಣದ ಮೇಲೆ ಮತ್ತೆ ಕಾರ್ಮೋಡ ಕವಿಯಿತು.

ಕಲಬುರ್ಗಿಯ ಸೇಡಂ–ಶಹಾಬಾದ್‌ ವರ್ತುಲ ರಸ್ತೆಯಲ್ಲಿರುವ ಡಾ.ಸಿದ್ದಯ್ಯ ಪುರಾಣಿಕ ಸುವರ್ಣ ಸಾಂಸ್ಕೃತಿಕ ಸಮುಚ್ಚಯದಲ್ಲಿ ಕಲಬುರ್ಗಿ ರಂಗಾಯಣ ಕಾರ್ಯನಿರ್ವಹಿಸುತ್ತಿದೆ. ಕಟ್ಟಡ–ಸಭಾಂಗಣದ ಸಮಸ್ಯೆ ಇಲ್ಲ.

‘ಅಗತ್ಯ ಪರಿಕರ, ರಂಗ ಸಜ್ಜಿಕೆ ಹೊಂದುವ, ಸ್ವಂತ ರಂಗ ತಂಡ ಕಟ್ಟಿಕೊಂಡು ಸಂಚಾರಿ ನಾಟಕ ಪ್ರದರ್ಶನ ನೀಡುವ ಕೆಲಸ ಇನ್ನೂ ಆಗಿಯೇ ಇಲ್ಲ. ಸರ್ಕಾರ ಪ್ರತಿ ವರ್ಷ ಈ ರಂಗಾಯಣಕ್ಕೆ ₹ 1 ಕೋಟಿ ಅನುದಾನ ನೀಡುತ್ತಿದ್ದು, ಅದು ಈ ವರೆಗೆ ಪೂರ್ಣಪ್ರಮಾಣದಲ್ಲಿ ಬಳಕೆಯಾಗದ ಕಾರಣ ಲ್ಯಾಪ್ಸ್‌ ಆಗಿದ್ದೇ ಹೆಚ್ಚು. ಸರ್ಕಾರ ಕೊಟ್ಟರೂ ಅದನ್ನು ಬಳಸಿಕೊಳ್ಳಲಾಗದ ಸ್ಥಿತಿಯಲ್ಲಿದೆ ಈ ರಂಗಾಯಣ’ ಎಂದು ಹಳಹಳಿಸುತ್ತಾರೆ ರಂಗಾಸಕ್ತರು.

ಕಲಾವಿದರಿಗೆ ಸಿಗದ ಮನ್ನಣೆ

ರಂಗಾಯಣಕ್ಕೆ ಕಲಾವಿದರೇ ಜೀವಾಳ. ಆದರೆ, ಕಲಬುರ್ಗಿ ರಂಗಾಯಣದಲ್ಲಿ ಅವರಿಗೆ ಈ ವರೆಗೂ ಸಿಗಬೇಕಾದ ಮನ್ನಣೆ ಸಿಕ್ಕೇ ಇಲ್ಲ ಎಂಬುದು ಬಹುಪಾಲು ರಂಗಕರ್ಮಿಗಳು ಹೇಳುವ ಮಾತು.

12 ಜನ ನಟ–ನಟಿಯರು ಹಾಗೂ ಮೂವರು ತಂತ್ರಜ್ಞರು ಸೇರಿ 15 ಜನರನ್ನು ಮೂರು ವರ್ಷಗಳ ಅವಧಿಗಾಗಿ ಗುತ್ತಿಗೆ ಆಧಾರದ ಮೇಲೆ ನೇಮಿಸಿಕೊಳ್ಳಲಾಗುತ್ತಿದೆ. ಇವರಿಗೆ ಪ್ರತಿ ತಿಂಗಳು ಮೊದಲ ವರ್ಷ ₹ 12 ಸಾವಿರ, ಎರಡನೇ ವರ್ಷ ₹ 14 ಸಾವಿರ ಹಾಗೂ ಮೂರನೇ ವರ್ಷ ₹ 16 ಸಾವಿರ ಗೌರವಧನ ನೀಡಲಾಗುತ್ತಿದೆ. ಅಚ್ಚರಿಯ ಸಂಗತಿ ಎಂದರೆ, ರಂಗಾಯಣದಲ್ಲಿ ಸದ್ಯ ಒಂಬತ್ತು ಸಿಬ್ಬಂದಿ ಇದ್ದಾರೆ. ಇವರನ್ನು ಹೊರಗುತ್ತಿಗೆ ಆಧಾರದ ಮೇಲೆ ನೇಮಿಸಿಕೊಳ್ಳಲಾಗಿದೆ. ಆದರೆ, ಸದ್ಯ ಇಲ್ಲಿ ಕಲಾವಿದರೇ ಇಲ್ಲ! ಕಲಾವಿದರಿಗೆ ನೀಡುವ ಸಂಭಾವನೆಗಿಂತ ಸಿಬ್ಬಂದಿ ವೇತನವೇ ಹೆಚ್ಚು ಎಂಬುದು ಇನ್ನೊಂದು ‘ವಿಶೇಷ’.

‘ರಂಗ ಚಟುವಟಿಕೆಗಳೇ ನಡೆದಿಲ್ಲ. ಹೀಗಾಗಿ ಗೌರವಧನ ಹೆಚ್ಚಿಸುವುದಿಲ್ಲ’ ಎಂದು ಹಿಂದಿನ ಅವಧಿಯ ಕಲಾವಿದರಿಗೆ ಹೆಚ್ಚುವರಿ ಗೌರವ ಧನವನ್ನೂ ನೀಡಿಲಿಲ್ಲ. ‘ಚಟುವಟಿಕೆ ನಡೆಯದಿರುವುದಕ್ಕೆ ನಮ್ಮನ್ನು ಏಕೆ ಹೊಣೆ ಮಾಡುತ್ತೀರಿ? ನಮಗೆ ಸಿಗಬೇಕಾದ ಸಂಭಾವನೆ ಕೊಡಿ’ ಎಂಬಅವರ ಅಳಲನ್ನು ಕೇಳಿಸಿಕೊಳ್ಳುವವರೂ ಇರಲಿಲ್ಲ.

‘ಬಯಲು ರಂಗ ಮಂದಿರ ನಿರ್ಮಾಣ’

‘ನಾನು ನಿರ್ದೇಶಕನಾಗಿ ಅಧಿಕಾರ ವಹಿಸಿಕೊಂಡಾಗ ಐವರು ಕಲಾವಿದರು ಮಾತ್ರ ಇದ್ದರು. ಚಟುವಟಿಕೆ ನಡೆದಿಲ್ಲ ಎಂಬ ಕಾರಣಕ್ಕೆ ಹಿಂದಿನ ಕಲಾವಿದರ ಹೆಚ್ಚುವರಿ ಗೌರವಧನ ತಡೆಹಿಡಿಯಲಾಗಿತ್ತು. ಚಟುವಟಿಕೆ ನಡೆಯದಿರುವುದಕ್ಕೆ ಕಲಾವಿದರನ್ನು ಹೊಣೆ ಮಾಡುವುದು ಬೇಡ ಎಂಬ ಕಾರಣಕ್ಕೆ ಅವರನ್ನು ಕರೆಯಿಸಿ ಬಾಕಿ ಗೌರವಧನ ಪಾವತಿಸಿದ್ದೇವೆ’ ಎನ್ನುವುದು ಕಲಬುರ್ಗಿ ರಂಗಾಯಣ ನಿರ್ದೇಶಕ ಪ್ರಭಾಕರ ಜೋಶಿ ಅವರ ಸಮಜಾಯಿಷಿ.

‘ಗೌರವ ಸಂಭಾವನೆ ನೀಡಿ ಸ್ಥಳೀಯ ಕಲಾವಿದರನ್ನು ಬಳಸಿಕೊಳ್ಳಲು ಅವಕಾಶ ಇದೆ. ಐದು ಜನ ಕಲಾವಿದರು ಇದ್ದರೂ ಸ್ಥಳೀಯ ಹವ್ಯಾಸಿ ಕಲಾವಿದರನ್ನು ಬಳಸಿಕೊಂಡು ‘ಹುಕುಂ ಪತ್ರ’ ಎಂಬ ನಾಟಕ ತಂಡ ಕಟ್ಟಿದ್ದೆವು. ಕಲಬುರ್ಗಿಯಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸಮಯದಲ್ಲಿ ನಾಟಕೋತ್ಸವ ನಡೆಸಿದೆವು. ಚಟುವಟಿಕೆಗೆ ಚಾಲನೆಗೊಳ್ಳುವ ಹೊತ್ತಿನಲ್ಲೇ ಲಾಕ್‌ಡೌನ್‌ ಘೋಷಣೆಯಾಯಿತು. ಈಗ ಮತ್ತೆ ಚಟುವಟಿಕೆ ಆರಂಭಿಸಿದ್ದೇವೆ’ ಎನ್ನುತ್ತಾರೆ ಅವರು.

‘ಮೂರು ವರ್ಷದ ಅವಧಿಗಾಗಿ ಈಗ 15 ಜನ ಕಲಾವಿದರ ಆಯ್ಕೆ ಪ್ರಕ್ರಿಯೆ ನಡೆದಿದ್ದು, ಆಯ್ಕೆ ಪಟ್ಟಿ ಪ್ರಕಟವಾಗಲಿದೆ. ಎರಡು ತಿಂಗಳು ತರಬೇತಿ ನೀಡಿ 2021ರ ಜನವರಿ ವೇಳೆಗೆ ಸ್ವಂತ ಸಂಚಾರಿ ನಾಟಕ ತಂಡ ಕಟ್ಟಿ ನಾಟಕ ಪ್ರದರ್ಶನ ಆರಂಭಿಸಲಿದ್ದೇವೆ’ ಎಂದು ಅವರು ಹೇಳುತ್ತಾರೆ.

‘ಕಲಬುರ್ಗಿ ರಂಗಾಯಣದ ಆವರಣದಲ್ಲಿಯೇ ಬಯಲು ರಂಗ ಮಂದಿರ ನಿರ್ಮಿಸಲು ಉದ್ದೇಶಿಸಲಾಗಿದೆ. ಅಗತ್ಯ ರಂಗ ಪರಿಕರ ಖರೀದಿಸಲಿದ್ದೇವೆ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಕಲಬುರ್ಗಿ ರಂಗಾಯಣದ ಮೂಲ ಉದ್ದೇಶ ಈಡೇರಿಸುವಂತೆ ಕೆಲಸ ಮಾಡುತ್ತೇನೆ’ ಎಂದು ಅವರು ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT