ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಂಗಶಂಕರ"ಕ್ಕೆ ಹದಿನೈದು!

Last Updated 25 ಅಕ್ಟೋಬರ್ 2019, 19:30 IST
ಅಕ್ಷರ ಗಾತ್ರ

ರಂಗಶಂಕರದಲ್ಲಿ ನಾಟಕವೆಂದರೆ ಹೆಮ್ಮೆ
ಸಾಮಾನ್ಯವಾಗಿ ಜನಪ್ರಿಯ ನಟರು, ನಿರ್ದೇಶಕರಿದ್ದರೆ ಮಾತ್ರ ಪ್ರೇಕ್ಷಕರು ಬರುತ್ತಾರೆಂಬ ನಂಬಿಕೆಯನ್ನು ಹುಸಿ ಮಾಡಿದ ತಾಣ. ರಂಗಶಂಕರದಲ್ಲಿರುವ ಶಿಸ್ತು ನನಗೆ ಅಚ್ಚುಮೆಚ್ಚು. ಇಂದಿಗೂ ಅದು ಮನೆಯ ಹಾಗೆ. ಅಲ್ಲಿ ನಾಟಕ ಮಾಡುವುದು ಎಂದರೆ ಹೆಮ್ಮೆಯ ಜತೆ ಖುಷಿ.ನನ್ನ ಮೊದಲ ನಾಟಕ ‘ಗಾಂಧಿ ಬಂದ’ 2010ರಲ್ಲಿ ರಂಗಶಂಕರದಲ್ಲಿ ಪ್ರದರ್ಶನಗೊಂಡಿತು. ನಮ್ಮ ತಂಡ ‘ ರಂಗಮಂಟಪ’ ಆಗ ಹೊಸತು. ಆದರೆ, ರಂಗಶಂಕರದ ಪ್ರೇಕ್ಷಕರು ನಮಗೆ ಒಳ್ಳೆಯ ಪ್ರೋತ್ಸಾಹ ನೀಡಿದ್ದರು.ಅಲ್ಲಿಂದ ರಂಗಶಂಕರದ ಜತೆ ಭಾವಾನಾತ್ಮಕ ಸಂಬಂಧ ಶುರುವಾಯಿತು.


-ಚಂಪಾ ಶೆಟ್ಟಿ, ರಂಗನಿರ್ದೇಶಕಿ‌

ಹವ್ಯಾಸಿ ರಂಗಭೂಮಿಗೆ ದೊಡ್ಡ ಕೊಡುಗೆ
ರಂಗಶಂಕರದಲ್ಲಿ ‘ಸಮುದಾಯ’ ತಂಡದಿಂದ ಮಾಡಿದ ಮೊದಲ ನಾಟಕ ‘ಪ‍ಂಪ ಭಾರತ’. ರಂಗಶಂಕರದ 1000ನೇ ಪ್ರದರ್ಶನವೂ ಇದೇ ನಾಟಕವಾಗಿತ್ತು ಅನ್ನುವುದು ಖುಷಿ. ಕನ್ನಡದ ಹಾಗೆಯೇ ಬೇರೆ ಭಾಷೆಗಳ ಮತ್ತು ಬೇರೆ ದೇಶಗಳ ನಾಟಕಗಳನ್ನು ನೋಡುವ ಅತ್ಯಪೂರ್ವ ಅವಕಾಶವನ್ನು ಒದಗಿಸಿದೆ. ಹವ್ಯಾಸಿ ರಂಗಭೂಮಿಗೆ ರಂಗಶಂಕರ ನೀಡುತ್ತಿರುವ ಕೊಡುಗೆ ದೊಡ್ಡದು.

ಇದೊಂದು ಸಾಂಸ್ಕೃತಿಕ ಕೇಂದ್ರ. ನಾಟಕಕ್ಕೆ ಸಂಬಂಧಪಟ್ಟಂತೆ ಹಾಗೂ ಸಾಂಸ್ಕೃತಿಕ ತಲ್ಲಣಗಳನ್ನು ಬಗ್ಗೆ ಚರ್ಚೆ ಮಾಡಲು ಇರುವ ಜಾಗ. ಬೆಂಗಳೂರಿನ ರಂಗಭೂಮಿ ಜತೆಗೆ ಕರ್ನಾಟಕದ ರಂಗಭೂಮಿಯ ಒಡನಾಟವೂ ರಂಗಶಂಕರದೊಂದಿಗೆ ಹೆಚ್ಚಾಗಬೇಕು. ಕಲಬುರ್ಗಿ, ರಾಯಚೂರು, ದಾವಣಗೆರೆ, ಶಿವಮೊಗ್ಗ ಹೀಗೆ ಬೇರೆ ಬೇರೆ ರಂಗತಂಡಗಳ ಪ್ರದರ್ಶನವೂ ನಿಯಮಿತವಾಗಿ ನಡೆಯಬೇಕು. ‘ಯುವ ರಂಗೋತ್ಸವ’, ಹೊಸನಿರ್ದೇಶಕರಿಗೆ ರಂಗತರಬೇತಿ ನೀಡುವ ಕಾರ್ಯ ನಡೆಸುತ್ತಿದೆ. ಇದರ ಜತೆ ಈ ಕೆಲಸವೂ ಆಗಬೇಕು.


-ಶಶಿಧರ ಬಾರಿಘಾಟ್, ರಂಗನಿರ್ದೇಶಕ

ಗೆಳೆತನದ ಬಯಲು
ನಾನೊಮ್ಮೆ ಪಾಂಡಿಚೆರಿಗೆ ಹೋಗಿದ್ದೆ. ಅಲ್ಲಿ ಒಂದು ರಂಗಮಂದಿರ ಕಂಡ ಕೂಡಲೆ ನೇರ ಒಳಗೆ ನುಗ್ಗಿದ್ದೆ! ಅಲ್ಲಿನ ಥಿಯೇಟರ್ ಚಟುವಟಿಕೆಗಳ ಬಗ್ಗೆ ತಿಳಿಯುವುದು ನನ್ನ ಉದ್ದೇಶವಾಗಿತ್ತು. ಅಲ್ಲಿದ್ದ ರಂಗಕರ್ಮಿಗಳೊಂದಿಗೆ ಮಾತನಾಡುತ್ತಿದ್ದಾಗ ಅವರೊಂದು ಮಾತು ಹೇಳಿದರು, 'ಇಲ್ಲಿ ಥಿಯೇಟರ್ ಇದೆ ಮೇಡಂ, ಆದರೆ ನಿಮ್ಮಲ್ಲಿ ಇದ್ದಂತೆ ಇಲ್ಲಿ 'ಥಿಯೇಟರ್ ಸ್ಪೇಸ್' ಇಲ್ಲ'. ಕಲಾಕ್ಷೇತ್ರ ಮತ್ತು ರಂಗಶಂಕರ ಅಂತಹ ಥಿಯೇಟರ್ ಸ್ಪೇಸ್‌ಗಳು. ಮಹಾನಗರದ ಒಂಟಿತನ ಕಾಡಿದಾಗೆಲ್ಲಾ ಓಡಿಹೋಗಿ ಸೇರಿಕೊಳ್ಳುವ ಗೆಳೆತನದ ಬಯಲು. ಇಲ್ಲಿ ನಾನು ಜಗತ್ತಿನ ರಂಗಭೂಮಿಯನ್ನು ಸವಿದಿದ್ದೇನೆ.


-ಸಂಧ್ಯಾರಾಣಿ, ಲೇಖಕಿ

ಸ್ನೇಹ ಬೆಸೆಯುವ ಕೊಂಡಿ
ರಂಗಶಂಕರನಾಟಕ ಪ್ರದರ್ಶನದ ಸ್ಥಳವಷ್ಟೆ ಅಲ್ಲ, ಸ್ನೇಹಯುತ ಮನಸ್ಸುಗಳನ್ನು ಬೆಸೆಯುವ ಕೊಂಡಿ. ಅಲ್ಲಿಂದ ಕಲಿತಿದ್ದು ಬಹಳಷ್ಟಿದೆ. ನನ್ನ ಗೆಳತಿಯೊಬ್ಬಳು ಅಲ್ಲಿಗೆ ಹೋಗಿಯೇ ಪುಸ್ತಕ ಬರೀತಾಳೆ. ನನ್ನ ಮಕ್ಕಳು ಅಲ್ಲಿ ಹೋಗಿ ಪುಸ್ತಕ ಓದುತ್ತಾರೆ.ಟೀ, ಕಾಫಿ ಕುಡಿಯುತ್ತ ಊರ ಕತೆಯನ್ನು ಹರಟುತ್ತೀವಿ.

-ರಶ್ಮಿ, ರಂಗ ಸಂಘಟಕಿ

***

‘ಬಿಖರೇ ಬಿಂಬ’ ಪ್ರದರ್ಶನ
ಅಕ್ಟೋಬರ್‌ 27ಕ್ಕೆ ರಂಗಶಂಕರಕ್ಕೆ ಹದಿನೈದು ವರ್ಷ ತುಂಬುತ್ತದೆ. ಇದರಪ್ರಯುಕ್ತ ಗಿರೀಶ್‌ ಕಾರ್ನಾಡ್‌ ರಚಿಸಿ, ನಿರ್ದೇಶಿಸಿದ್ದ ‘ಬಿಖರೇ ಬಿಂಬ’ ಪ್ರದರ್ಶನಗೊಳ್ಳಲಿದ್ದು, ಇದರಲ್ಲಿ ಅರುಂಧತಿ ನಾಗ್‌ ನಟಿಸುತ್ತಿದ್ದಾರೆ. ಆ ದಿನ ಎರಡು ಪ್ರದರ್ಶನಗಳು ನಡೆಯಲಿವೆ.

ಈ ಬಗ್ಗೆ ‘ಮೆಟ್ರೊ’ದೊಂದಿಗೆ ಮಾತನಾಡಿದ ಅರುಂಧತಿ ನಾಗ್‌, ‘ ರಂಗಶಂಕರ ಇನ್ನು ತುಂಬ ಕೆಲಸ ಮಾಡೊದಿದೆ. ನಮ್ಮ ಬಡಾವಣೆಯಲ್ಲಿ ಎಷ್ಟೊ ಜನರಿಗೆ ರಂಗಶಂಕರದಲ್ಲಿ ನಾಟಕ ನಡೆಯುತ್ತೆ ಅನ್ನೊ ವಿಚಾರನೇ ಗೊತ್ತಿಲ್ಲ. ಸಾಗಬೇಕಾದ ಹಾದಿ ಬಹುದೊಡ್ಡದಿದೆ’ ಎಂದು ತಿಳಿಸಿದರು.

ಅರುಂಧತಿ ನಾಗ್‌
ಅರುಂಧತಿ ನಾಗ್‌

ರಂಗಶಂಕರಕ್ಕೆ ಸದಾ ಸಲಹೆ ಸೂಚನೆಗಳನ್ನು ಕೊಡುತ್ತಿದ್ದ ಗಿರೀಶ್‌ ಕಾರ್ನಾಡ್‌ ಅವರ ಅನುಪಸ್ಥಿತಿ ಕಾಡುತ್ತಿದೆ. ಅವರು ಆಲದ ಮರ. ಇದ್ದಾಗ, ನಿತ್ಯ ಕರೆ ಮಾಡದಿದ್ದರೂ ಖಾತ್ರಿ ಇತ್ತು. ಏನೇ ಗೊಂದಲಗಳಿದ್ದರೂ ಕೇಳಬಹುದು ಅಂತ’ ಎಂದು ಹೇಳಿದರು.

ಮಕ್ಕಳಿಗಾಗಿ ನಾಟಕ ಮಾಡಬೇಕು. ಮಕ್ಕಳಲ್ಲಿ ರಂಗಸಂವೇದನೆಯನ್ನು ಹುಟ್ಟುಹಾಕಬೇಕು. ಈಗಿನ ಮಕ್ಕಳೆಲ್ಲ ವಾಟ್ಸ್‌ ಆ್ಯಪ್‌, ಮೊಬೈಲ್‌ ಪೋನ್‌, ಐಯೋನೆಕ್ಸ್‌ನಲ್ಲಿ ಮುಳುಗಿದ್ದಾರೆ. ಸರ್ಕಾರಿ ಶಾಲೆಯ ಮಕ್ಕಳನ್ನು ರಂಗಶಂಕರಕ್ಕೆ ತರಬೇಕು ಎಂದು ಮುಂದಿನ ಕನಸುಗಳನ್ನು ಹಂಚಿಕೊಂಡರು.

ಆಸ್ಟ್ರಿಯಾದಿಂದ ನಿರ್ದೇಶಕರನ್ನು ಕರೆಸಿ ಮಕ್ಕಳಿಗಾಗಿ ನಾಟಕ ಮಾಡಿಸಿದ್ದೀವಿ. ‘ಗುಮ್ಮ ಬಂದ ಗುಮ್ಮ’ ‘ಸುಂಯ್‌ ಟಪ್‌’, ‘ಓಲ್‌ ಮ್ಯಾನ್‌ ಇನ್‌ ದಿ ಸೀ’ ಹೀಗೆ ಹಲವು ಮಕ್ಕಳ ನಾಟಕಗಳು ನಡೆಯುತ್ತಿವೆ. ಬೇರೆ ದೇಶಗಳಿಂದ, ಬೇರೆ ವಿಚಾರಗಳಿಗೆ ನಮ್ಮ ಮಕ್ಕಳು ತೆರೆದುಕೊಳ್ಳಬೇಕು’ ಎನ್ನುತ್ತಾರೆ ಅವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT